ಎಲೆಕ್ಟ್ರಿಕ್ ವಾಹನಗಳ ಸರಣಿ ಸ್ಫೋಟ: ಗ್ರಾಹಕರು ಏನು ಮಾಡಬೇಕು?

ಮಾರ್ಚ್‌ ತಿಂಗಳಿಂದ ನಿರಂತರವಾಗಿ ಎಲೆಕ್ಟ್ರಿಕ್ ಸ್ಕೂಟರ್‌ಗಳ ಸ್ಫೋಟ ಪ್ರಕರಣಗಳು ವರದಿಯಾಗುತ್ತಲೇ ಇವೆ. ವಾಯುಮಾಲಿನ್ಯ ತಗ್ಗಿಸಲು ಒತ್ತು ನೀಡುವ ಪ್ರಯತ್ನದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಪ್ರೋತ್ಸಾಹಿಸಲಾಗುತ್ತಿದೆ. ಈ ನಡುವೆ ಸ್ಫೋಟಗಳಿಗೆ ನಾಲ್ಕು ಮಂದಿ ಬಲಿಯಾಗಿದ್ದಾರೆ.

ಪೆಟ್ರೋಲ್, ಡೀಸೆಲ್‌ ಬೆಲೆ ಏರಿಕೆಯಿಂದ ತತ್ತರಿಸಿರುವ ಜನ ವಾಯು ಮಾಲಿನ್ಯ ಮುಕ್ತ ವಿದ್ಯುತ್ ಚಾಲಿತ ವಾಹನಗಳನ್ನು (ಇ ವಿ) ಬಳಸಲು ಆರಂಭಿಸಿದ್ದಾರೆ. ಆದರೆ ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿ ಸ್ಫೋಟ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.

ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಪ್ರೋತ್ಸಾಹಿಸುತ್ತಿರುವ ಕೇಂದ್ರ ಸರ್ಕಾರ, 2030ರ ಹೊತ್ತಿಗೆ ಇಂತಹ ದ್ವಿಚಕ್ರ ವಾಹನಗಳ ಬಳಕೆಯ ಪ್ರಮಾಣ ಶೇ. 80ರಷ್ಟಾಗಲಿ ಎಂಬ ಆಶಯ ಹೊಂದಿದೆ. ಪ್ರಸ್ತುತ ಶೇ. 2ರಷ್ಟು ಮಾತ್ರ ಬಳಕೆಯಲ್ಲಿರುವ ವಿದ್ಯುತ್ ಚಾಲಿತ ವಾಹನಗಳ ಸ್ಫೋಟ ಪ್ರಕರಣಗಳು ದೇಶದೆಲ್ಲೆಡೆ ವರದಿಯಾಗಿವೆ. ಇ ವಿ ಗಳು ಏಕೆ ಸ್ಫೋಟಗೊಳ್ಳುತ್ತಿವೆ? ಸರ್ಕಾರ ಕೈಗೊಂಡಿರುವ ಕ್ರಮಗಳೇನು? ಇಲ್ಲಿದೆ ಸಂಕ್ಷಿಪ್ತ ವಿವರ- 

Eedina App

ಹೊತ್ತಿ ಉರಿದ ಎಲೆಕ್ಟ್ರಿಕ್ ಸ್ಕೂಟರ್‌ಗಳು

ʻಪ್ಯೂರ್ ಇ ವಿ ಎಪ್ಲುಟೋʼ ಕಂಪನಿಗೆ ಸೇರಿದ ಎಲೆಕ್ಟ್ರಿಕ್ ಸ್ಕೂಟರ್‌ ಹೊತ್ತಿ ಉರಿದ ಘಟನೆ ಹೈದರಾಬಾದ್‌ನಲ್ಲಿ ಬುಧವಾರ (ಮೇ 11) ನಡೆದಿದೆ.

AV Eye Hospital ad

ಸವಾರರು ವಾಹನ ಚಲಾಯಿಸುತ್ತಿದ್ದಾಗ, ರಸ್ತೆ ನಡುವೆಯೇ ಗಾಡಿ ಕೆಟ್ಟು ನಿಂತಿದೆ. ಏಕೆ ಹೀಗಾಯಿತು ಎಂದು ಪರೀಕ್ಷಿಸುತ್ತಿದ್ದಾಗ ಬ್ಯಾಟರಿಯಿಂದ ಹೊಗೆ ಬರುತ್ತಿರುವುದನ್ನು ಗಮನಿಸಿದ ಚಾಲಕ, ತಕ್ಷಣವೇ ಗಾಡಿಯಿಂದ ದೂರ ಓಡಿದ್ದಾರೆ. ಹಿಂತಿರುಗಿ ನೋಡುವಷ್ಟರಲ್ಲಿಯೇ ಸ್ಕೂಟರ್‌ಗೆ ಬೆಂಕಿ ಆವರಿಸಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಓಲಾ ಸ್ಕೂಟರ್‌ನ ʼರಿವರ್ಸ್ ಮೋಡ್ʼ ಬಳಸುವಾಗ ಸ್ಕೂಟರ್ ವೇಗವಾಗಿ ಹಿಂದಕ್ಕೆ ಚಲಿಸಿ ಇಳಿ ವಯಸ್ಸಿನ ವ್ಯಕ್ತಿಯೊಬ್ಬರು ತೀವ್ರವಾಗಿ ಗಾಯಗೊಂಡಿರುವ ಘಟನೆ ಜೋಧ್‌ಪುರ್‌ನಲ್ಲಿ ನಡೆದಿತ್ತು.

ಸ್ಕೂಟರ್‌ನ ʻರಿವರ್ಸ್‌ ಮೋಡ್‌ʼ ಸಾಫ್ಟ್‌ವೇರ್‌ ವೈಫಲ್ಯದಿಂದ ಈ ಅವಘಡ ಸಂಭವಿಸಿದೆ. ಇಂತಹ ಎರಡು ಘಟನೆಗಳು ಇತ್ತೀಚೆಗೆ ವರದಿಯಾಗಿದ್ದು, ಸಮಸ್ಯೆ ಸರಿಪಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿರುವುದಾಗಿ ಕಂಪನಿ ತಿಳಿಸಿದೆ.

ಚಲಿಸುತ್ತಿದ್ದ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಚಾಲಕ ಗಾಡಿಯಿಂದ ಹಾರಿ ಜೀವ ಉಳಿಸಿಕೊಂಡ ಘಟನೆ ತಮಿಳುನಾಡಿನ ಕೃಷ್ಣಗಿರಿಯಲ್ಲಿ ನಡೆದಿದೆ. ಸತೀಶ್‌ ಕುಮಾರ್‌ ಸ್ಕೂಟರ್‌ ಓಡಿಸುತ್ತಿದ್ದಾಗ ಸೀಟಿನ ಕೆಳಗೆ ಬೆಂಕಿ ಹತ್ತಿಕೊಂಡು ಗಾಡಿಯಿಂದ ಕೆಳಗಿಳಿದಿದ್ದಾರೆ.

ಸ್ಫೋಟದಲ್ಲಿ ಜೀವ ಕಳೆದುಕೊಂಡ ನಾಲ್ಕು ಮಂದಿ

ಎಲೆಕ್ಟ್ರಿಕ್ ಸ್ಕೂಟರ್ ಸ್ಫೋಟ ಪ್ರಕರಣಗಳು ಮೊದಲು ದಾಖಲಾಗಿದ್ದು ಮಾರ್ಚ್ ತಿಂಗಳಲ್ಲಿ. ಮಹಾರಾಷ್ಟ್ರದ ಪುಣೆಯಲ್ಲಿ ರಸ್ತೆ ಬದಿ ನಿಲ್ಲಿಸಲಾಗಿದ್ದ ಓಲಾ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಗಾಡಿ ಹೊತ್ತಿ ಉರಿದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ನಂತರ ಸರಣಿ ಘಟನೆಗಳು ಆಂಧ್ರಪ್ರದೇಶ, ತಮಿಳುನಾಡು, ಉತ್ತರ ಪ್ರದೇಶ ಹಾಗೂ ತೆಲಂಗಾಣದಲ್ಲಿ ವರದಿಯಾದವು. ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ವೃದ್ಧ ಮತ್ತು ಬಾಲಕಿಯೊಬ್ಬಳು ಸೇರಿದಂತೆ ಒಟ್ಟು ನಾಲ್ವರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ.

ತಮಿಳುನಾಡಿನ ವೆಲ್ಲೂರಿನಲ್ಲಿ ಚಾರ್ಜ್‌ಗೆ ಹಾಕಿದ್ದ ಎಲೆಕ್ಟ್ರಿಕ್ ಸ್ಕೂಟರ್ ಬ್ಯಾಟರಿ ಸ್ಫೋಟಗೊಂಡು ತಂದೆ ಮಗಳು  ಉಸಿರುಗಟ್ಟಿ ಸಾವನ್ನಪ್ಪಿದ್ದರು. ವಿಜಯವಾಡದಲ್ಲಿ ಹೊಸದಾಗಿ ಖರೀದಿಸಿದ್ದ ಎಲೆಕ್ಟ್ರಿಕ್ ಬೈಕ್‌ ಬ್ಯಾಟರಿ ಸ್ಫೋಟಗೊಂಡು ಪತಿ ಸಾವನ್ನಪ್ಪಿದ್ದು, ಇಬ್ಬರು ಮಕ್ಕಳು ಸೇರಿದಂತೆ ಪತ್ನಿಯೂ ತೀವ್ರವಾಗಿ ಗಾಯಗೊಂಡಿದ್ದರು.

ಹೈದರಾಬಾದ್‌ನಲ್ಲಿ ವೃದ್ಧರೊಬ್ಬರು ಎಲೆಕ್ಟ್ರಿಕ್ ಸ್ಕೂಟರ್‌ನ ಬ್ಯಾಟರಿ ಸ್ಫೋಟದಿಂದಾಗಿ ಮೃತಪಟ್ಟಿದ್ದರು. ಈ ಘಟನೆಯಲ್ಲಿ ಬೆಂಕಿ ಆರಿಸಲು ಮುಂದಾದ ಅವರ ಇಬ್ಬರು ಮಕ್ಕಳು ಗಾಯಗೊಂಡಿದ್ದರು.

ಬ್ಯಾಟರಿ ಸ್ಫೋಟಕ್ಕೆ ಕಾರಣವೇನು?

ಹೆಚ್ಚುತ್ತಿರುವ ತಾಪಮಾನವೇ ವಿದ್ಯುತ್ ಚಾಲಿತ ವಾಹನಗಳ ಸ್ಫೋಟಕ್ಕೆ ಕಾರಣ ಎಂಬ ಸುಳ್ಳು ವದಂತಿ ಎಲ್ಲೆಡೆ ಕೇಳಿಬರುತ್ತಿದೆ. 

ʻʻಹೆಚ್ಚುತ್ತಿರುವ ತಾಪಮಾನದಿಂದ ಇ ವಿ ಬ್ಯಾಟರಿಗಳು ಸ್ಫೋಟಗೊಳ್ಳುತ್ತಿವೆ ಎಂಬ ಪರಿಕಲ್ಪನೆಯೇ ತಪ್ಪು. ಕಳಪೆ ಉಷ್ಣ ನಿರ್ವಹಣೆಯಿಂದ ಬ್ಯಾಟರಿ ಸ್ಫೋಟಗೊಳ್ಳುತ್ತಿವೆ ಎಂಬ ಅಂಶ ಇತ್ತೀಚಿನ ಸ್ಫೋಟ ಪ್ರಕರಣಗಳಲ್ಲಿ ತಿಳಿದುಬಂದಿದೆ.

ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಬಳಸುವ ಬ್ಯಾಟರಿಗಳನ್ನು ಲಿಥಿಯಂ ಲೋಹದಿಂದ ತಯಾರಿಸಲಾಗುತ್ತದೆ. ಈ ಬ್ಯಾಟರಿಗಳು ಹಗುರವಾಗಿದ್ದು, ಬಳಸಲು ಯೋಗ್ಯವಾಗಿರುತ್ತವೆ. ಹಾಗೆಯೇ ಬೆಂಕಿ ಹೊತ್ತಿಕೊಳ್ಳುವ ಅಪಾಯವೂ ಕಡಿಮೆʼʼ ಎಂದು ಇ ವಿ ತಂತ್ರಜ್ಞಾನ ನವೋದ್ಯಮ ನಡೆಸುತ್ತಿರುವ 'ಎಕ್ಸ್‌ಪೋನೆಂಟ್ ಎನರ್ಜಿ' ತಿಳಿಸಿದೆ.

ʻʻಅನಿಯಂತ್ರಿತ ವಿದ್ಯುತ್ ಪ್ರವಾಹದಿಂದ ಉಂಟಾಗುವ ಶಾರ್ಟ್ ಸರ್ಕ್ಯೂಟ್‌ನಿಂದ ಶೇ. 99ರಷ್ಟು ಬ್ಯಾಟರಿಗಳು ಸ್ಫೋಟಗೊಂಡಿವೆ. ಇಂತಹ ಪ್ರಕರಣಗಳಲ್ಲಿ ಬ್ಯಾಟರಿಯು ಕೋಶಗಳು (ಸೆಲ್ಸ್) 100 ಡಿಗ್ರಿ ಸೆಲ್ಷಿಯಸ್‌ಗಿಂತ ಹೆಚ್ಚು ಬಿಸಿಯಾಗುತ್ತವೆ. ಕಳಪೆ ಗುಣಮಟ್ಟದ ಬ್ಯಾಟರಿ ಕೋಶಗಳ ಬಳಕೆ, ವಿನ್ಯಾಸ ಹಾಗೂ ಅಸಮರ್ಪಕ ಬ್ಯಾಟರಿ ನಿರ್ವಹಣಾ ವ್ಯವಸ್ಥೆಯಿಂದಾಗಿ ಬ್ಯಾಟರಿಗಳು ಶಾರ್ಟ್ ಸರ್ಕ್ಯೂಟ್‌ಗೆ ತುತ್ತಾಗುತ್ತಿವೆʼʼ ಎಂಬುದು ಕಂಪನಿಯ ವಿವರಣೆ.

ʻʻತಯಾರಕರು ಇ ವಿ ಉತ್ಪನ್ನಗಳನ್ನು ತಯಾರಿಸಲು ಕೊಡಬೇಕಾದಷ್ಟು ಸಮಯವನ್ನು ಕೊಡುತ್ತಿಲ್ಲ. ಬ್ಯಾಟರಿಗಳ ಕಾರ್ಯಕ್ಷಮತೆ ಪರೀಕ್ಷಿಸಲು ಸರ್ಕಾರಿ ಸಂಸ್ಥೆಗಳು ಸೂಚಿಸುವ ಪರೀಕ್ಷಾ ಮಾನದಂಡಗಳು ಕೂಡ ಅಸಮರ್ಪಕವಾಗಿ ಇರಬಹುದುʼʼ ಎಂದು ʻಏಥರ್‌ ಎನರ್ಜಿʼ ಎಲೆಕ್ಟ್ರಿಕ್‌ ಸ್ಕೂಟರ್‌ ತಯಾರಿಕಾ ಕಂಪನಿ ತಿಳಿಸಿದೆ.

ಎಲೆಕ್ಟ್ರಿಕ್ ವಾಹನಗಳನ್ನು ಹಿಂಪಡೆದ ಕಂಪನಿಗಳು

ವಿದ್ಯುತ್ ಚಾಲಿತ ವಾಹನಗಳು ಬೆಂಕಿಗೆ ಆಹುತಿಯಾಗುತ್ತಿದ್ದಂತೆ ಎಲೆಕ್ಟ್ರಿಕ್ ಸ್ಕೂಟರ್ ತಯಾರಿಕಾ ಕಂಪನಿಗಳು ತಮ್ಮ ವಾಹನಗಳನ್ನು ಹಿಂಪಡೆಯುವುದಾಗಿ ಘೋಷಿಸಿವೆ.

ಪುಣೆಯಲ್ಲಿ ನಡೆದ ಸ್ಫೋಟ ಪ್ರಕರಣದ ನಂತರ, ʼʼನಾವು ತಯಾರಿಸುತ್ತಿರುವ ಸ್ಕೂಟರ್‌ಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಶೀಲಿಸುತ್ತಿದ್ದೇವೆ. 1,441 ಸ್ಕೂಟರ್‌ಗಳನ್ನು ಸ್ವಯಂಪ್ರೇರಿತವಾಗಿ ಹಿಂಪಡೆಯುತ್ತಿದ್ದೇವೆʼ ಎಂದು ಬೆಂಗಳೂರು ಮೂಲದ ಓಲಾ ಕಂಪನಿಯು ತಿಳಿಸಿದೆ.

ʻಪ್ಯೂರ್ ಇವಿʼ ಕಂಪನಿಯು 2,000 ವಾಹನಗಳನ್ನು ಹಿಂಪಡೆದಿತ್ತು. ಈ ವಾಹನಗಳಲ್ಲಿರುವ ಬ್ಯಾಟರಿಗಳನ್ನು ಸಂಪೂರ್ಣ ಪರಿಶೀಲನೆಗೆ ಒಳಪಡಿಸಲಿದ್ದೇವೆ ಎಂದು ಕಂಪನಿಯು ತಿಳಿಸಿತ್ತು. ಗ್ರಾಹಕರ ಹಿತದೃಷ್ಟಿಯಿಂದ ವಾಹನಗಳ ತಪಾಸಣೆ ನಡೆಸುವಂತೆ ಕಂಪನಿಯು ತನ್ನ 'ಡೀಲರ್‌ಶಿಪ್ ನೆಟ್‌ವರ್ಕ್' ಮೂಲಕ ಮನವಿ ಮಾಡಿತ್ತು.

ಒಕಿನಾವದ ತಮಿಳುನಾಡಿನ ಮಳಿಗೆಯಲ್ಲಿ ಏಪ್ರಿಲ್ 16ರಂದು ಭಾರೀ ಬೆಂಕಿ ಅವಘಡ ಸಂಭವಿಸಿತ್ತು. ಬ್ಯಾಟರಿಗಳು ಸ್ಫೋಟಗೊಂಡ ವರದಿಗಳು ಬಂದ ಹಿನ್ನಲೆಯಲ್ಲಿ ಓಕಿನಾವ 3,215 ವಾಹನಗಳನ್ನು ಹಿಂಪಡೆದಿತ್ತು.

ಇವಿಗಳ ಸುರಕ್ಷತೆಗಾಗಿ ಕರಡು ರಚಿಸಲು ಆಯೋಗ

ಎಲೆಕ್ಟ್ರಿಕ್ ವಾಹನಗಳ ಸುರಕ್ಷತೆಗೆ ಸಂಬಂಧಿಸಿ ಹೆಚ್ಚುತ್ತಿರುವ ಸಮಸ್ಯೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಸರ್ಕಾರವು ವಿದ್ಯುತ್‌ ಚಾಲಿತ ವಾಹನಗಳ ಬ್ಯಾಟರಿಗಳಿಗೆ ಸಂಬಂಧಿಸಿದಂತೆ ಹೊಸ ನೀತಿ ಜಾರಿಗೆ ಮುಂದಾಗಿದೆ.  ನೀತಿಯ ಕರಡು ರಚಿಸಲು ತಜ್ಞರ ಆಯೋಗವನ್ನು ರಚಿಸಿದೆ.

''ಎಲೆಕ್ಟ್ರಿಕ್ ಬ್ಯಾಟರಿಗಳಿಗೆ ಸಂಬಂಧಿಸಿ ನಿರ್ಲಕ್ಷ್ಯ ತೋರಿದ ಕಂಪನಿಗಳಿಗೆ ದಂಡ ವಿಧಿಸಲಾಗುವುದು. ಈ ವಿಷಯದ ಬಗ್ಗೆ ತನಿಖೆಗೆ ರಚಿಸಲಾದ ತಜ್ಞರ ಸಮಿತಿಯ ವರದಿಯನ್ನು ಸ್ವೀಕರಿಸಿ, ನಂತರ ಎಲ್ಲಾ ದೋಷಯುಕ್ತ ಎಲೆಕ್ಟ್ರಿಕ್ ವಾಹನಗಳನ್ನು ಹಿಂಪಡೆಯಲು ಆದೇಶಿಸಲಾಗುವುದು" ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ  ಹೇಳಿದ್ದರು.

ಸ್ಫೋಟಗಳನ್ನು ತಗ್ಗಿಸಲು ಏನು ಮಾಡಬಹುದು?

  1. ವಿದ್ಯುತ್ ಚಾಲಿತ ವಾಹನಗಳನ್ನು ಸ್ವಿಚ್ ಆಫ್ ಮಾಡಿದ ತಕ್ಷಣ ಇವಿ ಬ್ಯಾಟರಿ ಚಾರ್ಜ್ ಮಾಡುವುದನ್ನು ನಿಲ್ಲಿಸಿರಿ. ಏಕೆಂದರೆ ಬ್ಯಾಟರಿಯ ಕೋಶಗಳು ಸ್ವಲ್ಪ ಸಮಯದವರೆಗೆ ಬಿಸಿಯಾಗಿರುತ್ತವೆ. ಬ್ಯಾಟರಿ ತಣ್ಣಗಾದ ನಂತರ ಅದನ್ನು ಚಾರ್ಜ್ ಮಾಡಿ.
  2. ಅಗ್ಗದ ಸ್ಥಳೀಯ ಬ್ಯಾಟರಿ ಬಳಕೆಯಿಂದ ವಿದ್ಯುತ್ ವಾಹನಕ್ಕೆ ಹಾನಿಯಾಗಬಹುದು. ವಾಹನಕ್ಕಾಗಿ ವಿನ್ಯಾಸಗೊಳಿಸಲಾದ ನಿರ್ದಿಷ್ಟ ಬ್ಯಾಟರಿ ಮತ್ತು ಚಾರ್ಜಿಂಗ್ ಕೇಬಲ್ ಅನ್ನು ಮಾತ್ರ ಬಳಸುವುದು ಸೂಕ್ತ.
  3. ಡಿಟ್ಯಾಚೇಬಲ್ ಬ್ಯಾಟರಿಯಾಗಿದ್ದರೆ, ನೇರ ಸೂರ್ಯನ ಬೆಳಕಿನಲ್ಲಿ ಅಥವಾ ಬಿಸಿ ವಾಹನಗಳಲ್ಲಿ ಇರಿಸಬೇಡಿ.

ಏಥರ್‌, ಬಜಾಜ್‌, ಓಲಾ, ಒಕಿನಾವ ಕಂಪನಿಗಳೊಂದಿಗೆ ನೂರಾರು ಸ್ಥಳೀಯ ಬ್ರಾಂಡ್‌ನ ಎಲೆಕ್ಟ್ರಿಕ್‌ ವಾಹನಗಳು ಅಗ್ಗದ ದರದಲ್ಲಿ ಬಿಕರಿಯಾಗುತ್ತಿವೆ. ಸ್ಫೋಟದ ಪ್ರಕರಣಗಳಿಗೆ ಕಳಪೆ ಬ್ಯಾಟರಿಗಳೇ ಕಾರಣ ಎಂದು ತಜ್ಞರು ಹೇಳುತ್ತಾರೆ. ಸ್ಥಳೀಯ ಬ್ರಾಂಡ್‌ಗಳ ವಾಹನಗಳು ಬಳಸುತ್ತಿರುವ ಬ್ಯಾಟರಿಗಳು ಎಷ್ಟು ಸುರಕ್ಷಿತ ಎಂಬ ಮಾತು ಎಲ್ಲೆಡೆ ಕೇಳಿ ಬರುತ್ತಿವೆ. ಈ ಹಿನ್ನೆಲೆಯಲ್ಲಿ ಸರ್ಕಾರಗಳು ಈಗಲಾದರೂ ಎಚ್ಚೆತ್ತುಕೊಂಡು ತ್ವರಿತಗತಿಯಲ್ಲಿ ಕಾರ್ಯೋನ್ಮುಖವಾಗಲಿ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app