
- ತೇಲ್ತುಂಬ್ಡೆ ವಿರುದ್ಧ ಯುಎಪಿಎ ಪ್ರಕರಣ ದಾಖಲಿಸುವ ಅವಶ್ಯಕತೆ ಇತ್ತೇ?
- ಬಾಂಬೆ ಹೈಕೋರ್ಟ್ ಆದೇಶದಲ್ಲಿ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ; ಸುಪ್ರೀಂ
ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಬಂಧಿಯಾಗಿದ್ದ ಮಾಜಿ ಐಐಟಿ ಪ್ರೊಫೆಸರ್ ಮತ್ತು ದಲಿತ ವಿದ್ವಾಂಸ ಪ್ರೊ.ಆನಂದ್ ತೇಲ್ತುಂಬ್ಡೆ ಅವರಿಗೆ ಬಾಂಬೆ ಹೈಕೋರ್ಟ್ ನೀಡಿದ್ದ ಜಾಮೀನು ಆದೇಶವನ್ನು ಸುಪ್ರೀಂಕೋರ್ಟ್ ಶುಕ್ರವಾರ ಎತ್ತಿಹಿಡಿದಿದೆ.
ಈ ಮೂಲಕ, ಅವರ ಜಾಮೀನು ಪ್ರಶ್ನಿಸಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ.
ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಮೂರ್ತಿ(ಸಿಜೆಐ) ಡಿ ವೈ ಚಂದ್ರಚೂಡ್ ನೇತೃತ್ವದ ಪೀಠವು, "ಬಾಂಬೆ ಹೈಕೋರ್ಟ್ ಆದೇಶದಲ್ಲಿ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ" ಎಂದಿದೆ.
"ಆನಂದ್ ತೇಲ್ತುಂಬ್ಡೆ ವಿರುದ್ಧ ಯುಎಪಿಎ ಪ್ರಕರಣ ದಾಖಲಿಸುವ ಅವಶ್ಯಕತೆ ಏನಿತ್ತು? ದಲಿತರನ್ನು ಸಂಘಟಿಸುವ ಐಐಟಿ ಮದ್ರಾಸ್ ಕಾರ್ಯಕ್ರಮವನ್ನು ನಿಷೇಧಿತ ಚಟುವಟಿಕೆಗೆ ಪೂರ್ವಸಿದ್ಧತೆ ಎಂದು ಹೇಗೆ ಭಾವಿಸಿದಿರಿ" ಎಂದು ಸಿಜೆಐ ಚಂದ್ರಚೂಡ್ ಅವರು ಎನ್ಐಎ ಅಧಿಕಾರಿಗಳಿಗೆ ಪ್ರಶ್ನಿಸಿದರು.
ಈ ವೇಳೆ ಪ್ರತಿಕ್ರಿಯಿಸಿದ ಎನ್ಐಎ, "ಬಾಂಬೆ ಹೈಕೋರ್ಟ್ ಮಾಡಿರುವ ಅವಲೋಕನಗಳು ಸುಪ್ರೀಂ ಕೋರ್ಟ್ ಈ ಹಿಂದೆ ನೀಡಿದ್ದ ತೀರ್ಪಿಗೆ ವಿರುದ್ಧವಾಗಿವೆ. ಬಾಂಬೆ ಹೈಕೋರ್ಟ್ ಆದೇಶದಲ್ಲಿನ ಅವಲೋಕನಗಳು ವಿಚಾರಣೆ ಮತ್ತು ತನಿಖೆಯ ಮೇಲೆ ಪ್ರಭಾವ ಬೀರುತ್ತವೆ" ಎಂದಿತು.
"ತೇಲ್ತುಂಬ್ಡೆ ಅವರ ವಿರುದ್ಧದ ಸಾಕ್ಷ್ಯಾಧಾರಗಳನ್ನು ಹೊರತೆಗೆಯಲು ತನಿಖಾ ಸಂಸ್ಥೆಗಳು ಈಗಾಗಲೇ ಬಹಳ ಕಷ್ಟಪಟ್ಟಿವೆ. ಇದೀಗ ಅವರಿಗೆ ಜಾಮೀನು ನೀಡುವುದರಿಂದ ಸಾಕ್ಷ್ಯಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಹೆಚ್ಚಿದೆ" ಎಂದು ಎನ್ಐಎ ವಾದಿಸಿತು.
ನವೆಂಬರ್ 18ರಂದು ಆನಂದ್ ತೇಲ್ತುಂಬ್ಡೆಯವರಿಗೆ ಬಾಂಬೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಇದೇ ವೇಳೆ ಈ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್ ಮೊರೆ ಹೋಗಲು ಎನ್ಐಎಗೆ ಒಂದು ವಾರಗಳ ಕಾಲಾವಕಾಶ ನೀಡಿತ್ತು.
ಏನಿದು ಪ್ರಕರಣ?
"2017ರ ಡಿಸೆಂಬರ್ 31ರಂದು ಮಹಾರಾಷ್ಟ್ರದ ಪುಣೆಯ ಶನಿವಾರವಾಡದಲ್ಲಿ ನಡೆದ ಎಲ್ಗಾರ್ ಪರಿಷತ್ ಸಮಾವೇಶದಲ್ಲಿ ಮಾಡಿದ ಪ್ರಚೋದನಕಾರಿ ಭಾಷಣಗಳು ಮರು ದಿನ ನಗರದ ಹೊರವಲಯದ ಭೀಮಾ-ಕೋರೆಗಾಂವ್ ಯುದ್ಧ ಸ್ಮಾರಕದ ಬಳಿ ನಡೆದ ಹಿಂಸಾಚಾರಕ್ಕೆ ಕಾರಣವಾಯಿತು" ಎಂದು ಪೊಲೀಸರು ಆರೋಪಿಸಿದ್ದರು.
"ಆನಂದ್ ತೇಲ್ತುಂಬ್ಡೆಯವರು ಈ ಸಮ್ಮೇಳನದ ಸಂಚಾಲಕರಾಗಿದ್ದರು. ಪ್ರಧಾನಿ ಹತ್ಯೆ ಮಾಡಲು ಅವರು ಸಂಚು ರೂಪಿಸಿದ್ದರು" ಎಂದೂ ಎನ್ಐಎ ಆರೋಪಿಸಿತ್ತು. "ಪುಣೆ ಪೊಲೀಸರು ಸಮಾವೇಶಕ್ಕೆ ಮಾವೋವಾದಿಗಳ ಬೆಂಬಲವಿದೆ" ಎಂದು ಹೇಳಿದ್ದರು.
ಈ ಸುದ್ದಿ ಓದಿದ್ದೀರಾ?: ವಿಶೇಷ ವಿವಾಹ ಕಾಯ್ದೆ ಬಿಕ್ಕಟ್ಟು | ಕೇಂದ್ರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ ಸಲಿಂಗಿಗಳ ಬೇಡಿಕೆ
"ತೇಲ್ತುಂಬ್ಡೆ ಅವರು ನಿಷೇಧಿತ ಸಿಪಿಐ(ಮಾವೋವಾದಿ) ಸಂಘಟನೆಯ ಸಕ್ರಿಯ ಸದಸ್ಯರಾಗಿದ್ದಾರೆ, ಅದರ ಕಾರ್ಯಸೂಚಿಗಳನ್ನು ಜಾರಿಗೆ ತರಲು ಅವರು ಯತ್ನಿಸುತ್ತಿದ್ದಾರೆ. ಅಲ್ಲದೆ, ನಿಷೇಧಿತ ಸಿಪಿಐ(ಮಾವೋವಾದಿ) ಘಟಕದ ಕಾರ್ಯದರ್ಶಿಯಾಗಿದ್ದ ಅವರ ಸಹೋದರ ಮಿಲಿಂದ್ ಜತೆ ತೇಲ್ತುಂಬ್ಡೆ ಸಂಪರ್ಕದಲ್ಲಿದ್ದರು" ಎಂದು ಎನ್ಐಎ ಆರೋಪಿಸಿತ್ತು.