ಟ್ವಿಟರ್‌ ಖರೀದಿಸಲು ಮುಂದಾದ ಎಲಾನ್‌ ಮಸ್ಕ್‌

  • ಎಲಾನ್‌ ಟ್ವಿಟರ್‌ನ ಶೇ. 9.2 ರಷ್ಟು ಷೇರು ಹೊಂದಿದ್ದಾರೆ
  • ಟ್ವಿಟರ್‌ ಅನ್ನು ಖಾಸಗಿ ಕಂಪನಿಯಾಗಿ ಪರಿವರ್ತಿಸುವ ಅಗತ್ಯವಿದೆ ಎಂದ ಎಲಾನ್‌

ಸಾಮಾಜಿಕ ಮಾಧ್ಯಮಗಳಲ್ಲಿ ಒಂದಾದ ಟ್ವಿಟರ್‌ ಅನ್ನು ಸುಮಾರು 4,100 ಕೋಟಿ ಡಾಲರ್‌ (41 ಬಿಲಿಯನ್‌ ಡಾಲರ್‌) ಖರೀದಿಸಲು ಟೆಸ್ಲಾ ಮುಖ್ಯಸ್ಥ ಎಲಾನ್‌ ಮಸ್ಕ್‌ ಮುಂದಾಗಿದ್ದಾರೆ. ಟ್ವಿಟರ್‌ನ ಶೇ. 9.2 ರಷ್ಟು ಷೇರು ಹೊಂದಿರುವ ಎಲಾನ್‌, ಇದರ ನಿರ್ದೇಶಕ ಮಂಡಳಿ ಸ್ಥಾನವನ್ನು ತಿರಸ್ಕರಿಸಿದ್ದರು.

ಈ ಬಗ್ಗೆ ಟ್ವಿಟರ್‌ನ ಅಧ್ಯಕ್ಷ ಬ್ರೆಟ್‌ ಟೇಲರ್‌ಗೆ ಪತ್ರ ಬರೆದಿರುವ ಎಲಾನ್‌, ʻʻನಾನು ಹೂಡಿಕೆ ಮಾಡುವುದರಿಂದ ಕಂಪನಿಯು ಅಭಿವೃದ್ಧಿ ಹೊಂದುವುದಿಲ್ಲ. ಅಥವಾ ಪ್ರಸ್ತುತ ಈಗಿರುವ ರೂಪದಲ್ಲಿ ಸಾಮಾಜಿಕ ಅಗತ್ಯವನ್ನು ಪೂರೈಸುವುದಿಲ್ಲ ಎಂಬುದು ನನಗೆ ಮನದಟ್ಟಾಗಿದೆ. ಟ್ವಿಟರ್‌ ಅನ್ನು ಖಾಸಗಿ ಕಂಪನಿಯಾಗಿ ಪರಿವರ್ತಿಸುವ ಅಗತ್ಯವಿದೆʼʼ ಎಂದು ತಿಳಿಸಿದ್ದಾರೆ.

ʻʻನಾನೊಂದು ಪ್ರಸ್ತಾಪವನ್ನು ಮುಂದಿಟ್ಟಿದ್ದೇನೆʼʼ ಎಂದು ಟ್ವೀಟ್‌ ಮಾಡಿರುವ ಎಲಾನ್‌, ಲಿಂಕ್‌ ಒಂದನ್ನು ಹಂಚಿಕೊಂಡಿದ್ದಾರೆ.

ಈ ಹೊಸ ಬೆಳವಣಿಗೆಯ ನಂತರ ಟ್ವಿಟರ್‌ನ ಷೇರುಗಳು ಪೂರ್ವ ಮಾರುಕಟ್ಟೆ ವಹಿವಾಟಿನಲ್ಲಿ ಶೇ. 12ಕ್ಕೆ ಜಿಗಿದಿವೆ.

ʻʻನನ್ನ ಪ್ರಸ್ತಾಪವು ನಾನು ಕೊಡುತ್ತಿರುವ ಅತ್ಯುತ್ತಮ ಮತ್ತು ಅಂತಿಮ ಕೊಡುಗೆಯಾಗಿದೆ. ಅದನ್ನು ಸ್ವೀಕರಿಸದಿದ್ದರೆ, ಷೇರುದಾರನ ಸ್ಥಾನದ ಬಗ್ಗೆ ನಾನು ಯೋಚಿಸಬೇಕಾಗುತ್ತದೆʼʼ ಎಂದಿದ್ದಾರೆ.

ಇತ್ತೀಚೆಗಷ್ಟೆ ಟ್ವಿಟರ್‌ನಲ್ಲಿ ಮುಕ್ತ ಅಭಿವ್ಯಕ್ತಿಯ ಬಗ್ಗೆ ಮಾತನಾಡಿದ್ದ ಅವರು, ಮಾರ್ಚ್‌ 25ರಂದು ʻʻಪ್ರಜಾಪ್ರಭುತ್ವ ಸರಿಯಾಗಿ ಕಾರ್ಯನಿರ್ವಹಿಸಲು ವಾಕ್‌ ಸ್ವಾತಂತ್ರ್ಯ ಅತ್ಯಗತ್ಯ. ಟ್ವಿಟರ್‌ ಈ ತತ್ವಕ್ಕೆ ಬದ್ಧವಾಗಿದೆ ಎಂಬುದನ್ನು ನೀವು ನಂಬುತ್ತೀರಾ? ಈ ಸಮೀಕ್ಷೆಯ ಪರಿಣಾಮಗಳು ಮುಖ್ಯವಾಗುತ್ತವೆ. ಎಚ್ಚರಿಕೆಯಿಂದ ಮತ ನೀಡಿʼʼ ಎಂದು ಟ್ವಿಟರ್‌ನಲ್ಲಿ ಅಭಿಪ್ರಾಯ ಸಂಗ್ರಹಿಸಿದ್ದರು.

ಇದನ್ನು ಓದಿದ್ದೀರಾ?: ಎಲಾನ್‌ ಮಸ್ಕ್‌ ಕೈಯಲ್ಲೀಗ ಟ್ವಿಟರ್‌ನ ಶೇ. 9.2ರಷ್ಟು ಪಾಲು

ಅದರ ಬೆನ್ನಲ್ಲೇ ಎಲಾನ್‌, ಟ್ವಿಟರ್‌ನ ಶೇ. 9.2 ರಷ್ಟು ಷೇರನ್ನು ಖರೀದಿಸಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಟ್ರಂಪ್‌ನಂತೆ ಎಲಾನ್‌ ಮಸ್ಕ್‌ ಅವರೂ ಹೊಸ ಸಾಮಾಜಿಕ ಜಾಲತಾಣವೊಂದನ್ನು ಆರಂಭಿಸಲಿದ್ದಾರೆ ಎಂದು ಹರಡಿದ ವದಂತಿಗೆ ಈ ಮೂಲಕ ತೆರೆಬಿದ್ದಿತ್ತು.

ನಿಮಗೆ ಏನು ಅನ್ನಿಸ್ತು?
1 ವೋಟ್