ಟ್ವಿಟರ್‌ ಬಾಟ್‌ಗಳ ನಿಯಂತ್ರಣ: ಎಲಾನ್ ಮಸ್ಕ್‌ ಘೋಷಣೆ

Elon musk
  • ಟ್ವಿಟರ್‌ ಬಿಡ್‌ ಯಶಸ್ವಿಯಾದರೆ ಅಕ್ರಮ ಬಾಟ್‌ಗಳ ನಿಯಂತ್ರಣಕ್ಕೆ ಕ್ರಮ
  • ಟ್ವಿಟರ್ ಮಾಲೀಕರಾಗುವ ಯತ್ನದಲ್ಲಿರುವ ಎಲಾನ್ ಮಸ್ಕ್ ಘೋಷಣೆ

ಟ್ವಿಟರ್ ಸಂಸ್ಥೆಯ ಷೇರುಗಳನ್ನು ಕೊಂಡು ಮಾಲೀಕರಾಗಲು ಹೊರಟಿರುವ ಟೆಸ್ಲಾದ ಸಿಇಒ ಎಲಾನ್‌ ಮಸ್ಕ್‌ ಇದೀಗ ಬಾಟ್‌ಗಳನ್ನು ನಿಯಂತ್ರಿಸುವ ಘೋಷಣೆ ಮಾಡಿ ಮತ್ತೆ ಸುದ್ದಿಯಾಗಿದ್ದಾರೆ.  

ಟ್ವಿಟರ್‌ ಬಾಟ್‌ಗಳನ್ನು (ಒಂದೇ ಸಂದೇಶವನ್ನು ಹಲವು ಬಾರಿ ಟ್ವೀಟ್ ಮಾಡುವ ಯಂತ್ರ) ನಿಯಂತ್ರಿಸಲು ಎಲಾನ್‌ ಮಸ್ಕ್‌ ಯೋಜನೆಯೊಂದನ್ನು ರೂಪಿಸಿದ್ದಾರೆ. "ನಮ್ಮ ಟ್ವಿಟರ್‌ ಬಿಡ್‌ ಯಶಸ್ವಿಯಾದರೆ, ನಾವು ಅಕ್ರಮ ಬಾಟ್‌ಗಳನ್ನು ನಿಯಂತ್ರಿಸುತ್ತೇವೆ ಅಥವಾ ಅವುಗಳನ್ನು ನಾಶಪಡಿಸುತ್ತೇವೆ. ಜನರು ಮಾಡುವ ಟ್ವೀಟ್‌ಗಳು ಮಾತ್ರ ಟ್ವಿಟರ್‌ನಲ್ಲಿ ಕಾಣಸಿಗುವಂತೆ ಮಾಡುತ್ತೇವೆ" ಎಂದು ಎಲಾನ್‌ ಮಸ್ಕ್‌ ಅವರು ಏಪ್ರಿಲ್‌ 22 ರಂದು ತಮ್ಮ ಟ್ವಿಟರ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಕಳೆದ ವಾರ ಎಲಾನ್‌ ಮಸ್ಕ್‌ ಅವರು ಟ್ವಿಟರ್‌ನ ಪ್ರತಿ ಷೇರಿಗೆ 54.20 ಡಾಲರ್‌ ಕೊಟ್ಟು ಖರೀದಿಸುವುದಾಗಿ ಘೋಷಿಸಿದ್ದರು. ಬಳಿಕ ಟ್ವಿಟರ್‌ ಖರೀದಿಗೆ ಬೇಕಾದ 46.5 ಬಿಲಿಯನ್‌ ಡಾಲರ್‌ ನಮ್ಮಲ್ಲಿದೆ ಎಂದೂ ಹೇಳಿದ್ದರು. ಇತ್ತೀಚೆಗೆ ಎಲಾನ್‌ ಮಸ್ಕ್‌ ಅವರು ಯುಎಸ್‌ಎಸ್‌ಇಸಿಗೆ (ಅಮೆರಿಕದ ಷೇರುಗಳು ಮತ್ತು ವಿನಿಮಯ ಸಮತಿ) ದಾಖಲೆಗಳನ್ನು ಸಲ್ಲಿಸಿದ್ದಾರೆ. ಅದರಲ್ಲಿ ಟ್ವಿಟರ್‌ ಖರೀದಿಸುವ ವಿಚಾರ ಪ್ರಸ್ತಾಪ ಮಾಡಿದ್ದಾರೆ. ಮಸ್ಕ್‌ ಅವರು ಈಗಾಗಲೇ ಟ್ವಿಟರ್‌ನ ಶೇ. 9ರಷ್ಟು ಷೇರುಗಳನ್ನು ಹೊಂದಿದ್ದಾರೆ. ಟ್ವಿಟರ್‌ ಆಡಳಿತ ಮಂಡಳಿಯಲ್ಲಿ ಮಸ್ಕ್‌ಗೆ ಸ್ಥಾನ ನೀಡಿದ್ದರೂ, ಅವರು ನಿರಾಕರಿಸಿದ್ದಾರೆ. ಮಸ್ಕ್‌ ಮುಂದಿಟ್ಟ ಕೆಲವು ಸುಧಾರಣಾ ಪ್ರಸ್ತಾಪಗಳನ್ನು ಟ್ವಿಟರ್‌ ಆಡಳಿತ ಮಂಡಳಿ ವಿರೋಧಿಸಿರುವ ಕಾರಣ, ಅವರು ಟ್ವಿಟರ್ ಸಂಸ್ಥೆಯ ಪೂರ್ಣ ಪ್ರಮಾಣದ ಸ್ವಾಧೀನಕ್ಕೆ ಮುಂದಾಗಿದ್ದಾರೆ.

'ಬಾಟ್‌' ಎಂದರೇನು?

ಟ್ವಿಟರ್‌ನಲ್ಲಿ ಸಾಕಷ್ಟು ಬಾಟ್‌ ಖಾತೆಗಳಿವೆ. ಏಕಕಾಲಕ್ಕೆ ಒಂದೇ ಸಂದೇಶವನ್ನು ಹಲವಾರು ಟ್ವಿಟರ್‌ ಖಾತೆಗಳಲ್ಲಿ ಪ್ರಕಟಿಸುವ ಮಷಿನ್‌ಗಳಿಗೆ ಬಾಟ್‌ಗಳು ಎಂದು ಕರೆಯಲಾಗುತ್ತದೆ. ಎಲ್ಲಾ ಬಾಟ್‌ಗಳು ಅಪಾಯಕಾರಿಯಲ್ಲ. ಉತ್ತಮ ಬಾಟ್‌ಗಳನ್ನು ಜನರು ಮನರಂಜನೆ ಹಾಗೂ ಇತರೆ ಉಪಯುಕ್ತ ಮಾಹಿತಿ ಪಡೆಯುವ ಸಲುವಾಗಿ ಅನುಸರಿಸುತ್ತಾರೆ.

ಕೋವಿಡ್‌ ಸಮಯದಲ್ಲಿ ಜನದಟ್ಟಣೆ, ಹವಾಮಾನ ವೈಪರೀತ್ಯಗಳ ಕುರಿತ ಮಾಹಿತಿ ಪಡೆಯಲು ಇವು ಸಹಾಯ ಮಾಡಿದ್ದವು. ಇದೀಗ ಟ್ವಿಟರ್‌ ಕೆಲವು ಬಾಟ್‌ ಖಾತೆಗಳಿಗೆ ವಿಶೇಷ ರಿಯಾಯಿತಿ ಕೊಡಲು ಮುಂದಾಗಿದೆ. ಇದು ಜನರು ಯಾವ ಖಾತೆಗಳನ್ನು ಅನುಸರಿಸಬೇಕು (ಫಾಲೋ), ಯಾವುದನ್ನು ನಂಬಬೇಕೆಂದು ನಿರ್ಧರಿಸಲು ಸಹಾಯ ಮಾಡುತ್ತದೆ ಎಂದೂ ಹೇಳಿದೆ.

ಸುಳ್ಳು ಮಾಹಿತಿ ಹರಡುವ ಬಾಟ್‌ಗಳು

ಆದರೆ ಬಾಟ್‌ಗಳ ಮೂಲಕ ಹರಡುವ ಸುಳ್ಳು ಮಾಹಿತಿ ಬಗ್ಗೆ ಹಲವರು ಕಳವಳ ವ್ಯಕ್ತಪಡಿಸಿದ್ದಾರೆ. ಈ ಹಿಂದೆಯೂ ಇದೇ ರೀತಿ ಸಮಸ್ಯೆಯಿದ್ದು, ಟ್ವಿಟರ್‌ ಅದನ್ನು ಬಗೆಹರಿಸುವ ನಿಟ್ಟಿನಲ್ಲಿ ಕ್ರಮಕೈಗೊಂಡಿತ್ತು. ಆದರೆ, ಮತ್ತೆ ಅದೇ ಸಮಸ್ಯೆ ಪುನರಾವರ್ತನೆಯಾಗಿದೆ. ಪ್ರತಿ ತಿಂಗಳು ಇಂತಹ ಲಕ್ಷಾಂತರ ಬಾಟ್‌ ಖಾತೆಗಳನ್ನು ನಾಶ ಪಡಿಸಲಾಗುತ್ತದೆ ಎಂದು ಟ್ವಿಟರ್‌ ಹೇಳಿದೆ.

ಈ ಬಾಟ್‌ಗಳ ಬಗ್ಗೆ ಎಲಾನ್‌ ಮಸ್ಕ್‌ ಮುಂದಿಟ್ಟ ಅನುಮಾನವನ್ನು ಬಗೆಹರಿಸಲು ಟ್ವಿಟರ್‌ಗೆ ಸಾಧ್ಯವಾಗಿಲ್ಲ. ಹೀಗಾಗಿ ಟ್ವಿಟರ್‌ ತಮ್ಮ ಅಧೀನಕ್ಕೆ ಬಂದರೆ ಇಂಥ ಸಮಸ್ಯೆಗಳನ್ನು ಪರಿಹರಿಸುತ್ತೇನೆ ಎಂದು ಅವರು ಹೇಳಿದ್ದಾರೆ.  

ನಿಮಗೆ ಏನು ಅನ್ನಿಸ್ತು?
0 ವೋಟ್