ಈಶ್ವರಪ್ಪಗೆ ತಪ್ಪದ ಸಂಕಷ್ಟ | ಸಂತೋಷ್‌ ಆತ್ಮಹತ್ಯೆ ಪ್ರಕರಣದ ಬಿ ರಿಪೋರ್ಟ್ ಪ್ರಶ್ನಿಸಿ ಕೋರ್ಟ್​ಗೆ ಅರ್ಜಿ

eshwarappa
  • ಪೊಲೀಸರು ಪ್ರಭಾವಕ್ಕೆ ಒಳಗಾಗಿ ಸರಿಯಾದ ತನಿಖೆ ನಡೆಸಿಲ್ಲ ಎಂದು ಆರೋಪ
  • ಸಂತೋಷ್ ಸಂಬಂಧಿ ಪ್ರಶಾಂತ್ ಪಾಟೀಲ್‌ ಅವರಿಂದ ನ್ಯಾಯಾಲಯಕ್ಕೆ ಅರ್ಜಿ

ಬೆಳಗಾವಿ ಗುತ್ತಿಗೆದಾರ ಸಂತೋಷ್​ ಪಾಟೀಲ್​ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಅವರಿಗೆ ಮತ್ತೆ ಸಂಕಷ್ಟ ಎದುರಾಗಿದೆ.

ಪ್ರಕರಣದಲ್ಲಿ ಪೊಲೀಸರು ಪ್ರಭಾವಕ್ಕೊಳಗಾಗಿ ಸರಿಯಾದ ತನಿಖೆ ನಡೆಸಿಲ್ಲ ಎಂದು ಆರೋಪಿಸಿ ಪೊಲೀಸರು ಸಲ್ಲಿಸಿದ ಬಿ ರಿಪೋರ್ಟ್ ವಿರುದ್ಧ ಮೃತ ಸಂತೋಷ್ ಸೋದರ ಸಂಬಂಧಿ ಪ್ರಶಾಂತ್ ಪಾಟೀಲ್ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಪೊಲೀಸರು ಪೂರ್ವಗ್ರಹ ಪೀಡಿತರಾಗಿ, ಪ್ರಭಾವಕ್ಕೊಳಗಾಗಿ ತನಿಖೆ ನಡೆಸಿದ್ದು, ಪ್ರಕರಣದ ತನಿಖೆಯನ್ನು ಬೇರೊಂದು ತನಿಖಾ ಸಂಸ್ಥೆಗೆ ವಹಿಸುವಂತೆ ಕೋರಿ ಮಂಗಳವಾರ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿದೆ. ಅರ್ಜಿ ಇಂದು ವಿಚಾರಣೆಗೆ ಬರುವ ಸಾಧ್ಯತೆ ಇದೆ.

ಈ ಸುದ್ದಿ ಓದಿದ್ದೀರಾ?: ರಾಜ್ಯದಲ್ಲಿ ದಂಗೆ ಸೃಷ್ಟಿಸಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವ ಭ್ರಮೆಯಲ್ಲಿದೆ: ಎಚ್‌ಡಿಕೆ

ಏನಿದು ಪ್ರಕರಣ?

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ ಸಚಿವರಾಗಿದ್ದ ಕೆ ಎಸ್ ಈಶ್ವರಪ್ಪ ವಿರುದ್ಧ ಕಾಮಗಾರಿ ಬಿಲ್‌ ಪಾವತಿಗೆ ಶೇಕಡಾ 40ರಷ್ಟು ಕಮಿಷನ್‌ ಕೇಳುತ್ತಿದ್ದಾರೆ ಎಂದು ವಾಟ್ಸಾಪ್‌ ಸಂದೇಶ ಕಳಿಸಿ ಗುತ್ತಿಗೆದಾರ ಸಂತೋಷ್‌ ಏಪ್ರಿಲ್‌ 12ರಂದು ಉಡುಪಿಯ ಲಾಡ್ಜ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.

ಈ ಸಂಬಂಧ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಲ್ಲದೆ, ಸಾರ್ವಜನಿಕ ಪ್ರತಿರೋಧ ಹೆಚ್ಚಾದ ಹಿನ್ನೆಲೆಯಲ್ಲಿ ಈಶ್ವರಪ್ಪನವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ರಾಜ್ಯ ಗುತ್ತಿಗೆದಾರರ ಸಂಘ ಬಿಜೆಪಿ ಸರ್ಕಾರದ ವಿರುದ್ಧ ಶೇಕಡಾ 40ರಷ್ಟು ಕಮಿಷನ್‌ ಆರೋಪ ಮಾಡಿ ತನಿಖೆಗೆ ಆಗ್ರಹಿಸಿ ಪ್ರಧಾನಿ ಮೋದಿಯವರಿಗೆ ಪತ್ರ ಬರೆದ ಬೆನ್ನಲ್ಲೇ ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ದೆಹಲಿಗೆ ಹೋಗಿ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವರು ಮತ್ತು ಬಿಜೆಪಿ ಪ್ರಮುಖರನ್ನು ಭೇಟಿಯಾಗಿ ಸಚಿವ ಕೆ ಎಸ್‌ ಈಶ್ವರಪ್ಪ ವಿರುದ್ಧ ಲಿಖಿತ ದೂರು ನೀಡಿದ್ದರು.

"ಕಮಿಷನ್‌ಗಾಗಿ ತಮಗೆ ನೀಡಬೇಕಾದ ಕಾಮಗಾರಿ ಬಿಲ್‌ ಪಾವತಿಸದೆ ಸತಾಯಿಸುತ್ತಿದ್ದು, ಸಾಲ ಮಾಡಿ ಕಾಮಗಾರಿ ವೆಚ್ಚ ಭರಿಸಿರುವುದರಿಂದ, ಸಾಲ ಕೊಟ್ಟವರ ಕಾಟ ಹೆಚ್ಚಾಗಿದೆ. ಸಚಿವರು ಕೂಡಲೇ ಹಣ ಬಿಡುಗಡೆ ಮಾಡದೇ ಹೋದರೆ ಆತ್ಮಹತ್ಯೆ ಮಾಡಿಕೊಳ್ಳುವುದೊಂದೇ ತನಗೆ ಉಳಿದಿರುವ ದಾರಿ" ಎಂದು ಸಂತೋಷ್‌ ಆ ದೂರಿನಲ್ಲಿ ಪ್ರಸ್ತಾಪಿಸಿದ್ದರು. ಆ ದೂರಿನ ಪ್ರತಿ ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು.

ನಿಮಗೆ ಏನು ಅನ್ನಿಸ್ತು?
1 ವೋಟ್