ಕುಟುಂಬದವರಿಂದಲೇ ಹತ್ಯೆ । ಪ್ರತಿ 11 ನಿಮಿಷಕ್ಕೆ ಓರ್ವ ಮಹಿಳೆ ಬಲಿ; ವರದಿ

  • 2021ರಲ್ಲಿ ಒಟ್ಟು 45,000 ಮಂದಿ ಮಹಿಳೆಯರ ಹತ್ಯೆ
  • ಅತಿ ಹೆಚ್ಚು ಹತ್ಯೆ ಪ್ರಕರಣಗಳು ವರದಿಯಾಗಿರುವುದು ಏಷ್ಯಾದಲ್ಲಿ

ಪ್ರತಿ ಗಂಟೆಗೆ ಐದು ಮಂದಿಯಂತೆ 2021ರಲ್ಲಿ ಒಟ್ಟು 45,000 ಮಂದಿ ಮಹಿಳೆಯರು ಕುಟುಂಬದ ಸದಸ್ಯರಿಂದಲೇ ಹತ್ಯೆಗೀಡಾಗಿದ್ದಾರೆ ಎಂದು ವಿಶ್ವಸಂಸ್ಥೆಯ ಸ್ತ್ರೀಹತ್ಯೆಯ ಅಂಕಿಅಂಶಗಳು ಬಹಿರಂಗಪಡಿಸಿವೆ.

ಕಳೆದ ಒಂದು ವರ್ಷದಲ್ಲಿ ವಿಶ್ವದಾದ್ಯಂತ ಸುಮಾರು 81,100 ಮಂದಿ ಹತ್ಯೆಗೀಡಾಗಿದ್ದು, ಅದರಲ್ಲಿ ಶೇ. 56ರಷ್ಟು ಮಹಿಳೆಯರು ಪತಿ, ಸಂಗಾತಿ ಅಥವಾ ಸಂಬಂಧಿಕರಿಂದಲೇ ಕೊಲೆಯಾಗಿದ್ದಾರೆ ಎಂಬುದನ್ನು ಅಂಕಿ ಅಂಶಗಳೇ ಹೇಳುತ್ತಿವೆ.

ವಿಶ್ವಸಂಸ್ಥೆಯ ಮಹಿಳಾ ವಿಭಾಗ ಹಾಗೂ ಡ್ರಗ್ಸ್‌ ಅಂಡ್‌ ಕ್ರೈಮ್‌ ವಿಭಾಗವು ಈ ಅಂಕಿ ಅಂಶಗಳ ಬಗ್ಗೆ ಆತಂಕ ವ್ಯಕ್ತಪಡಿಸಿವೆ. ಈ ಅಂಕಿಅಂಶಗಳು ಮಹಿಳೆಯರು ತಮ್ಮ ಲಿಂಗದ ಕಾರಣದಿಂದಲೇ ಹತ್ಯೆಗೀಡಾಗುತ್ತಿದ್ದಾರೆ. ಮಾಹಿತಿಯ ಕೊರತೆಯಿಂದಾಗಿ, 10 ಮಂದಿಯಲ್ಲಿ ನಾಲ್ವರ ಸಾವನ್ನು ಸ್ತ್ರೀಹತ್ಯೆಯಾಗಿ ಪರಿಗಣಿಸುತ್ತಿಲ್ಲ. ಉಳಿದಂತೆ ಸ್ತ್ರೀಹತ್ಯೆಯ ಅಧಿಕೃತ ಅಂಕಿ ಅಂಶಗಳು ಕಳೆದ ದಶಕಕ್ಕೆ ಹೋಲಿಸಿದಲ್ಲಿ ಹೆಚ್ಚು ಬದಲಾವಣೆ ಕಂಡುಬರುವುದಿಲ್ಲ ಎಂದು ತಿಳಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

ಏಷ್ಯಾದಲ್ಲಿಯೇ ಅತಿಹೆಚ್ಚು ಸ್ತ್ರೀಹತ್ಯೆಗಳು

ಈ ಹತ್ಯೆಗಳಲ್ಲಿ ಅತಿ ಹೆಚ್ಚು ಪ್ರಕರಣಗಳು ವರದಿಯಾಗಿರುವುದು ಏಷ್ಯಾದಲ್ಲಿ. ಕಳೆದ ಒಂದು ವರ್ಷ ಏಷ್ಯಾದಲ್ಲಿ ಸುಮಾರು 17,800 ಮಂದಿ ಮಹಿಳೆಯರು ಮೃತಪಟ್ಟಿದ್ದಾರೆ. ಹಾಗೆಯೇ, ಆಫ್ರಿಕಾದಲ್ಲಿ ಕುಟುಂಬದ ಸದಸ್ಯರಿಂದಲೇ ಮಹಿಳೆಯರು ಮತ್ತು ಹೆಣ್ಣುಮಕ್ಕಳು ಹತ್ಯೆಗೀಡಾಗುವ ಅಪಾಯ ಹೆಚ್ಚಿದೆ ಎಂಬುದನ್ನು ಸಂಶೋಧನೆಯು ವಿವರಿಸುತ್ತದೆ. ಲಿಂಗ ಸಂಬಂಧಿತ ಹತ್ಯೆಗಳ ದರವು ಆಫ್ರಿಕಾದಲ್ಲಿ 1 ಲಕ್ಷ ಮಹಿಳೆಯರಿಗೆ ಶೇ. 2.5ರಷ್ಟಿದೆ. ಅಮೆರಿಕದಲ್ಲಿ ಶೇ. 1.4, ಓಷಿಯಾನಿಯಾದಲ್ಲಿ ಶೇ. 1.2, ಏಷ್ಯಾದಲ್ಲಿ ಶೇ. 0.8 ಹಾಗೂ ಯೂರೋಪ್‌ನಲ್ಲಿ ಈ ದರವು ಶೇ. 0.6ರಷ್ಟಿದೆ.

ಈ ಸುದ್ದಿ ಓದಿದ್ದೀರಾ?: ಹಾಲಿನ ದರ ಹೆಚ್ಚಳ | ಹಾಲು ಉತ್ಪಾದಕರಿಗೆ ಸಿಗುವುದೇ ದರ ಏರಿಕೆಯ ಫಲ; ರೈತ ಮುಖಂಡರು, ಗ್ರಾಹಕರು ಏನಂತಾರೆ?

ಸಂಶೋಧನೆಯ ಪ್ರಕಾರ, 2020ರ ಕೋವಿಡ್‌ ಸಾಂಕ್ರಾಮಿಕದ ಸಮಯದಲ್ಲಿ ಉತ್ತರ ಅಮೆರಿಕ, ಪಶ್ಚಿಮ ಹಾಗೂ ದಕ್ಷಿಣ ಯುರೋಪ್‌ನಲ್ಲಿ ಸ್ತ್ರೀಹತ್ಯೆ ಪ್ರಮಾಣ ಗಮನಾರ್ಹವಾಗಿ ಹೆಚ್ಚಾಗಿದೆ. ಯುರೋಪ್‌ ಮತ್ತು ಅಮೆರಿಕದ 25 ದೇಶಗಳ ದತ್ತಾಂಶಗಳ ಪ್ರಕಾರ, ಬಹುಪಾಲು ಮಹಿಳೆಯರ ಹತ್ಯೆಯು ಪತಿ ಅಥವಾ ಸಂಗಾತಿಯನ್ನು ಹೊರತು ಪಡಿಸಿ, ಕುಟುಂಬದವರಿಂದ ನಡೆದ ಹತ್ಯೆಗಳಾಗಿವೆ.

ಕೌಟುಂಬಿಕ ಹಿಂಸೆ; ಸಂತ್ರಸ್ತೆಯನ್ನೇ ದೂಷಿಸುವ ಮನೋಭಾವ

ವೈವಾಹಿಕ ಅತ್ಯಾಚಾರವನ್ನು ಅನುಮತಿಸುವ ಅಥವಾ ಸಂತ್ರಸ್ತೆಯನ್ನೇ ಮದುವೆಯಾಗುವ ಮೂಲಕ ಅತ್ಯಾಚಾರಿಗಳಿಗೆ ಶಿಕ್ಷೆ ತಪ್ಪಿಸಲು ಅನುಮತಿ ನೀಡುವುದು ಸೇರಿದಂತೆ ವಿಶ್ವದ ಅನೇಕ ದೇಶಗಳಲ್ಲಿ ಲಿಂಗ ತಾರತಮ್ಯವನ್ನುಂಟು ಮಾಡುವಂತಹ ಕಾನೂನುಗಳು ಜಾರಿಯಲ್ಲಿವೆ ಎನ್ನುತ್ತಾರೆ ಸ್ಯಾಂಟಿಯಾಗೊ ಮೂಲದ ಮಹಿಳಾ ಹೋರಾಟಗಾರ್ತಿ ಬಾರ್ಬರಾ ಜಿಮೆನ್ಸ್‌.

ಕೌಟುಂಬಿಕ ಹಿಂಸೆಯನ್ನು ಕುಟುಂಬದ ಖಾಸಗಿ ವಿಷಯ ಎಂದು ಈಗಲೂ ನೋಡಲಾಗುತ್ತದೆ. ಇಂತಹ ಪ್ರಕರಣಗಳನ್ನು ಪೊಲೀಸರು ಮತ್ತು ಪ್ರಾಸಿಕ್ಯೂಟರ್‌ಗಳು ಗಂಭೀರವಾಗಿ ಪರಿಗಣಿಸುವುದಿಲ್ಲ. ಸಂತ್ರಸ್ತೆಯನ್ನೇ ಇದಕ್ಕೆಲ್ಲ ಹೊಣೆ ಮಾಡುವುದು ವ್ಯಾಪಕವಾಗಿದೆ. ಇದು ಮಹಿಳೆಯರು ದೌರ್ಜನ್ಯದ ವಿರುದ್ಧ ಧ್ವನಿ ಎತ್ತುವುದನ್ನು ನಿಯಂತ್ರಿಸುತ್ತದೆ. ಆದ್ದರಿಂದ ಅಪರಾಧಿಗಳು ಶಿಕ್ಷೆಗೊಳಗಾಗದೇ ಮತ್ತಷ್ಟು ದೌರ್ಜನ್ಯ ಎಸಗಲು ಇದು ಕಾರಣವಾಗುತ್ತಿವೆ ಎನ್ನುತ್ತಾರೆ ಅವರು.

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180