ರಷ್ಯಾ ನಾಗರಿಕರ ವೀಸಾ ನಿಷೇಧಕ್ಕೆ ಐರೋಪ್ಯ ಒಕ್ಕೂಟ ನಿರ್ಧಾರ

  • ಉಕ್ರೇನ್‌ ಮೇಲೆ ಆಕ್ರಮಣ ಹೆಚ್ಚಿಸುತ್ತಿರುವ ರಷ್ಯಾ  
  • 165 ದಿನಗಳನ್ನು ಪೂರೈಸಿದ ಉಕ್ರೇನ್‌ ಮೇಲಿನ ಯುದ್ಧ  

ಉಕ್ರೇನ್‌ ಮೇಲೆ ದಾಳಿ ಮಾಡಿದ ಪರಿಣಾಮವಾಗಿ ಈಗಾಗಲೇ ಐರೋಪ್ಯ ಒಕ್ಕೂಟ (ಇಯು) ರಷ್ಯಾದ ಮೇಲೆ ಹಲವು ನಿರ್ಬಂಧಗಳನ್ನು ಕೈಗೊಂಡಿದೆ. ಮುಂದಿನ ಹಂತದ ನಿರ್ಬಂಧದಲ್ಲಿ  ರಷ್ಯಾದ ಎಲ್ಲ ನಾಗರಿಕರಿಗೂ ವೀಸಾ ನಿಷೇದಕ್ಕೆ ಐರೋಪ್ಯ ಒಕ್ಕೂಟ ಚಿಂತನೆ ನಡೆಸಿದೆ ಎಂದು ವರದಿಯಾಗಿದೆ.

ಐರೋಪ್ಯ ಒಕ್ಕೂಟದ ರಾಷ್ಟ್ರಗಳು ಹೇಳುವಂತೆ ರಷ್ಯಾ ನಾಗರಿಕರ ಎಲ್ಲ ವೀಸಾಗಳನ್ನು ತಡೆಯುವುದು ಮತ್ತೊಂದು ಅತ್ಯಂತ ಪರಿಣಾಮಕಾರಿ ನಿರ್ಬಂಧವಾಗಲಿದೆ. ಈ ಕುರಿತು ಈ ತಿಂಗಳ ಕೊನೆಯಲ್ಲಿ ಹೇಗ್‌ನಲ್ಲಿ ನಡೆಯುವ ಐರೋಪ್ಯ ಒಕ್ಕೂಟದ ವಿದೇಶಾಂಗ ಸಚಿವರ ಅನಧಿಕೃತ ಸಭೆಯಲ್ಲಿ ಪ್ರಸ್ತಾವಿಸಲಾಗುವುದು ಎಂದು ಜೆಕ್ ಗಣರಾಜ್ಯದ ವಿದೇಶಾಂಗ ಸಚಿವ ಜಾನ್ ಲಿಪಾವಸ್ಕಿ ಹೇಳಿಕೆ ಉಲ್ಲೇಖಿಸಿ ಎಎಫ್‌ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.

ಉಕ್ರೇನ್ ಯುದ್ಧ ಆರಂಭವಾಗಿ 165 ಕ್ಕೂ ಹೆಚ್ಚಿನ ದಿನಗಳಾಗಿದ್ದು, ಯುದ್ಧ ನಿಲ್ಲಿಸುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ ಎಂದು ಐರೋಪ್ಯ ಒಕ್ಕೂಟ ಆತಂಕ ವ್ಯಕ್ತಪಡಿಸಿದೆ. ಒಂದು ಕಡೆ ಉಕ್ರೇನ್‌ ಮೇಲೆ ಆಕ್ರಮಣವನ್ನು ರಷ್ಯಾ ಹೆಚ್ಚಿಸುತ್ತಲೇ ಬರುತ್ತಿರುವ ಈ ಸಂದರ್ಭದಲ್ಲಿ ರಷ್ಯಾದ ನಾಗರಿಕರಿಗೆ ಸಾಮಾನ್ಯ ರೀತಿಯ ಪ್ರವಾಸಕ್ಕೆ ಆಸ್ಪದ ನೀಡುವ ಕುರಿತ ಮಾತುಕತೆ ಸಾಧ್ಯವಾಗಿಲ್ಲ.

ವೀಸಾ ನಿರ್ಬಂಧ ಕ್ರಮವು ರಷ್ಯಾ ಸಮಾಜಕ್ಕೆ ಬಹಳ ಸ್ಪಷ್ಟ ಮತ್ತು ನೇರ ಸಂದೇಶವನ್ನು ರವಾನಿಸಲಿದೆ. ರಷ್ಯಾದ ಆಡಳಿತದ ಆಕ್ರಮಣಶೀಲತೆ ಮತ್ತು ರಷ್ಯಾಕ್ಕೆ ಯಾವುದೇ ಬೆದರಿಕೆ ಉಂಟುಮಾಡದ ಸ್ವತಂತ್ರ, ಪ್ರಜಾಪ್ರಭುತ್ವ ದೇಶಗಳ ವಿರುದ್ಧ ನಡೆಸುತ್ತಿರುವ ದ್ವೇಷಪೂರಿತ ನಡೆಯನ್ನು ಐರೋಪ್ಯ ಒಕ್ಕೂಟ ಸಹಿಸುವುದಿಲ್ಲ ಎಂಬುದನ್ನು ಇದು ತೋರಿಸಲಿದೆ ಎಂದು ಹೇಳಿದ್ದಾರೆ.

ರಷ್ಯಾವು ಉಕ್ರೇನ್ ಮೇಲೆ ಆಕ್ರಮಣ ನಡೆಸಿದ ಮರುದಿನ, ಅಂದರೆ ಫೆಬ್ರವರಿ 25ರಂದೇ ಸಾಮಾನ್ಯ ರಷ್ಯಾ ನಾಗರಿಕಗೆ ವೀಸಾ ನೀಡುವುದನ್ನು ಜೆಕ್ ಗಣರಾಜ್ಯ ಸ್ಥಗಿತಗೊಳಿಸಿತ್ತು. ಇದರಿಂದಾಗಿ ರಷ್ಯಾ ನಾಗರಿಕರು ಫಿನ್‌ಲ್ಯಾಂಡ್‌ ಮೂಲಕ ಯುರೋಪ್‌ಗೆ ತೆರಳುತ್ತಿದ್ದಾರೆ. ಒಮ್ಮೆ ವೀಸಾ-ಮುಕ್ತ ಶೆಂಗೆನ್ ವಲಯ ಪ್ರವೇಶಿಸಿದರೆ, ರಷ್ಯಾದ (ಗೂಢಚಾರರೂ ಸೇರಿದಂತೆ) ಬಹುತೇಕ ಯುರೋಪ್‌ನಾದ್ಯಂತ ಮುಕ್ತ ಪ್ರಯಾಣ ಮಾಡಬಹುದಾಗಿದೆ.

ಕಳೆದ ವಾರ ರಷ್ಯಾ ನಾಗರಿಕರಿಗೆ ಪ್ರವಾಸಿ ವೀಸಾ ನೀಡುವುದಕ್ಕೆ ಮಿತಿ ವಿಧಿಸುವ ನಿಯಮವನ್ನು ಫಿನ್‌ಲ್ಯಾಂಡ್ ಜಾರಿಗೊಳಿಸಿದೆ. ಈ ಮಧ್ಯೆ, ರಷ್ಯಾ ನಾಗರಿಕಗೆ ವೀಸಾ ನೀಡುವುದನ್ನು ಸ್ಥಗಿತಗೊಳಿಸುವಂತೆ ಎಸ್ತೋನಿಯಾ ಕೂಡ ಐರೋಪ್ಯ ಒಕ್ಕೂಟಕ್ಕೆ ಆಗ್ರಹಿಸಿದೆ.

ಈ ಸುದ್ದಿ ಓದಿದ್ದೀರಾ? ಅಫ್ಘಾನಿಸ್ತಾನದಲ್ಲಿ ಮತ್ತೆ ಬಾಂಬ್ ದಾಳಿ; ತಾಲಿಬಾನ್‌ನ ಗುರು ರಹೀಮುಲ್ಲಾ ಹಕ್ಕಾನಿ ಸಾವು

ʼಯುರೋಪ್ ಭೇಟಿ ನೀಡುವುದು ಒಂದು ಸೌಕರ್ಯವಾಗಿದೆ, ಮಾನವ ಹಕ್ಕಲ್ಲ' ಎಂದು ಎಸ್ತೋನಿಯಾದ ಪ್ರಧಾನಿ ಕಜಾ ಕಲ್ಲಸ್ ಹೇಳಿದ್ದಾರೆ. ರಷ್ಯಾದ ವಿರುದ್ಧ ಐರೋಪ್ಯ ಒಕ್ಕೂಟ ಇದುವರೆಗೆ 6 ಹಂತದ ನಿರ್ಬಂಧ ಜಾರಿಗೊಳಿಸಿದೆ.

`ರಷ್ಯಾ ತಮ್ಮ  ಯುದ್ಧದ ಸಿದ್ಧಾಂತವನ್ನು ಬದಲಿಸುವವರೆಗೆ ಅವರು ತಮ್ಮದೇ ಜಗತ್ತಿನಲ್ಲಿ ಕಾಲಕಳೆಯುವಂತೆ ಮಾಡಬೇಕು. ಪಾಶ್ಚಿಮಾತ್ಯ ದೇಶಗಳು ಎಲ್ಲ ರಷ್ಯಾನ್ ಪ್ರಯಾಣಿಕರ ವಿರುದ್ಧ ನಿರ್ಬಂಧ ಜಾರಿಗೊಳಿಸಬೇಕು' ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಕಳೆದ ವಾರ `ವಾಷಿಂಗ್ಟನ್ ಪೋಸ್ಟ್'ಗೆ ನೀಡಿದ್ದ ಸಂದರ್ಶನದಲ್ಲಿ ಆಗ್ರಹಿಸಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್