
- ಶುಕ್ರವಾರವಷ್ಟೆ ಎಲೆಕ್ಟ್ರಿಕ್ ಗಾಡಿ ಖರೀದಿಸಿದ್ದ ಶಿವಕುಮಾರ್ ಮೃತ್ಯು, ಪತ್ನಿ ಸ್ಥಿತಿ ಗಂಭೀರ
- 1,441 ಸ್ಕೂಟರ್ಗಳನ್ನು ಹಿಂಪಡೆದ ಓಲಾ ಕಂಪನಿ
ಹೊಸ ಎಲೆಕ್ಟ್ರಿಕ್ ಬೈಕ್ನ ಬ್ಯಾಟರಿ ಸ್ಫೋಟಗೊಂಡು ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ವಿಜಯವಾಡದಲ್ಲಿ ಶನಿವಾರ ಮುಂಜಾನೆ ನಡೆದಿದೆ.
ಶುಕ್ರವಾರವಷ್ಟೆ ಎಲೆಕ್ಟ್ರಿಕ್ ಗಾಡಿ ಖರೀದಿಸಿದ್ದ ಶಿವಕುಮಾರ್ (40) ಮೃತಪಟ್ಟಿದ್ದಾರೆ. ಅವರ ಪತ್ನಿಯೂ ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಬ್ಬರು ಮಕ್ಕಳಿಗೂ ಗಾಯಗಳಾಗಿದ್ದು, ಉಸಿರಾಟದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
"ಶಿವಕುಮಾರ್ ರಾತ್ರಿ ಮಲಗುವ ಕೋಣೆಯಲ್ಲಿ ವಾಹನದ ಬ್ಯಾಟರಿಯನ್ನು ಚಾರ್ಜ್ನಲ್ಲಿ ಇರಿಸಿದ್ದರು. ಎಲ್ಲರೂ ಗಾಢ ನಿದ್ದೆಯಲ್ಲಿದ್ದಾಗ, ಮುಂಜಾಗೆ 4ಗಂಟೆ ಸಮಯಕ್ಕೆ ಬ್ಯಾಟರಿ ಇದ್ದಕ್ಕಿದ್ದಂತೆ ಸ್ಫೋಟಗೊಂಡಿದೆ" ಎಂದು ಪೊಲೀಸ್ ಅಧಿಕಾರಿ ವಿ ಜಾನಕಿ ರಾಮಯ್ಯ ಹೇಳಿದರು.
ಸ್ಫೋಟದಿಂದಾಗಿ ಮನೆಯಲ್ಲಿ ಸಣ್ಣ ಬೆಂಕಿ ಕಾಣಿಸಿಕೊಂಡಿದ್ದು, ಹವಾನಿಯಂತ್ರಣ ಯಂತ್ರ ಮತ್ತು ಕೆಲವು ಗೃಹೋಪಯೋಗಿ ವಸ್ತುಗಳು ಸುಟ್ಟು ಹೋಗಿವೆ. ಮನೆಯಿಂದ ಹೊಗೆ ಬರುತ್ತಿರುವುದನ್ನು ಕಂಡ ನೆರೆಹೊರೆಯವರು ಬಾಗಿಲು ಮುರಿದು ಒಳಗೆ ಸಿಲುಕಿದ್ದವರನ್ನು ರಕ್ಷಿಸಿದ್ದಾರೆ. ಆಸ್ಪತ್ರೆಗೆ ಸಾಗಿಸುವ ವೇಳೆ ಶಿವಕುಮಾರ್ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ʻʻಬ್ಯಾಟರಿ ಸ್ಫೋಟಕ್ಕೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಅಗ್ನಿಶಾಮಕ ದಳದ ಸಿಬ್ಬಂದಿ ಕೂಡ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಸ್ಫೋಟಕ್ಕೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಕಾರಣವೇ ಎಂದು ಪರಿಶೀಲಿಸಲು ನಾವು ಎಲೆಕ್ಟ್ರಿಕ್ ವಾಹನ ಕಂಪನಿಯೊಂದಿಗೆ ಮಾತನಾಡಿದ್ದೇವೆ" ಎಂದವರು ವಿವರಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ.
ಮೂರು ದಿನಗಳ ಹಿಂದೆಯಷ್ಟೆ ನೆರೆಯ ತೆಲಂಗಾಣದ ನಿಝಾಮಾಬಾದ್ನಲ್ಲಿ ಎಲೆಕ್ಟ್ರಿಕ್ ಸ್ಕೂಟರ್ನ ಬ್ಯಾಟರಿ ಸ್ಫೋಟಗೊಂಡು 80 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದರು. ಕಳೆದ ತಿಂಗಳು ಮಹಾರಾಷ್ಟ್ರ ಮತ್ತು ತಮಿಳುನಾಡಿನ ಎರಡು ಪ್ರತ್ಯೇಕ ಸ್ಥಳಗಳಲ್ಲಿ ಬ್ಯಾಟರಿ ಸ್ಫೋಟಗೊಂಡ ಘಟನೆ ವರದಿಯಾಗಿದ್ದವು. ಚೆನ್ನೈನಲ್ಲಿ ನಡೆದ ಸ್ಫೋಟದಲ್ಲಿ ತಂದೆ ಮಗಳು ಮೃತಪಟ್ಟಿದ್ದರು.

ಸರಣಿ ಬ್ಯಾಟರಿ ಸ್ಫೋಟ: ಬ್ಯಾಟರಿಗಳ ವಿನಿಮಯಕ್ಕೆ ನೀತಿ ಕರಡು ರಚಿಸಿದ ನೀತಿ ಆಯೋಗ
ಕಳೆದ ಎರಡು ದಿನಗಳ ಹಿಂದೆಯಷ್ಟೆ ನೀತಿ ಆಯೋಗವು ಎಲೆಕ್ಟ್ರಿಕ್ ವಾಹನಗಳಲ್ಲಿ ಬಳಸುವ ಬ್ಯಾಟರಿಗಳ ವಿನಿಮಯಕ್ಕೆ ಸಂಬಂಧಿಸಿ ಹೊಸ ನೀತಿಯ ಕರಡನ್ನು ರಚಿಸಿದೆ. ಬ್ಯಾಟರಿಗಳ ವಿನಿಮಯಕ್ಕೆ ಅನುಕೂಲ ಇರುವ ಎಲೆಕ್ಟ್ರಿಕ್ ವಾಹನಗಳಿಗೆ ಪ್ರೋತ್ಸಾಹಧನ, ಬ್ಯಾಟರಿ ಉತ್ಪಾದನೆಗೆ ಸಬ್ಸಿಡಿ ನೆರವು, ನೂತನ ಬ್ಯಾಟರಿ ಉದ್ಯಮ ಸೇರಿ ಇತರ ಮಾದರಿ ಅಭಿವೃದ್ಧಿ ಇತ್ಯಾದಿ ಪ್ರಸ್ತಾಪಗಳನ್ನು ನೀತಿ ಒಳಗೊಂಡಿದೆ. ಎಲೆಕ್ಟ್ರಿಕ್ ವಾಹನಗಳ ಸುತ್ತಲಿನ ಸುರಕ್ಷತಾ ಸಮಸ್ಯೆಗಳ ಬಗ್ಗೆ ಹೆಚ್ಚುತ್ತಿರುವ ಕಳವಳಗಳ ನಡುವೆ ಸರ್ಕಾರವು ಈ ಬಗ್ಗೆ ನೀತಿ ಜಾರಿ ಮಾಡಲು ಮುಂದಾಗಿದೆ.
ಇದನ್ನು ಓದಿದ್ದೀರಾ?: ಮುಂದುವರಿದ ವಿದ್ಯುತ್ ಚಾಲಿತ ಸ್ಕೂಟರ್ಗಳ ಸ್ಫೋಟ | ಹೈದರಾಬಾದ್ನಲ್ಲಿ ವೃದ್ಧ ಸಾವು
ಇದಲ್ಲದೆ, ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಎಲೆಕ್ಟ್ರಿಕ್ ಬ್ಯಾಟರಿಗಳಿಗೆ ಸಂಬಂಧಿಸಿದಂತೆ ನಿರ್ಲಕ್ಷ್ಯ ತೋರಿದ ಕಂಪೆನಿಗಳಿಗೆ ದಂಡ ವಿಧಿಸಲಾಗುವುದು. ಈ ವಿಷಯದ ಬಗ್ಗೆ ತನಿಖೆ ಮಾಡಲು ರಚಿಸಲಾದ ತಜ್ಞರ ಸಮಿತಿಯ ವರದಿಯನ್ನು ಸ್ವೀಕರಿಸಿ, ನಂತರ ಎಲ್ಲಾ ದೋಷಯುಕ್ತ ಎಲೆಕ್ಟ್ರಿಕ್ ವಾಹನಗಳನ್ನು ಮರು ಪಡೆಯಲು ಆದೇಶಿಸಲಾಗುವುದು ಎಂದು ಹೇಳಿದ್ದರು.
1,441 ಸ್ಕೂಟರ್ಗಳನ್ನು ಹಿಂಪಡೆದ ಓಲಾ
ಕಂಪೆನಿಯ ಎಲೆಕ್ಟ್ರಿಕ್ ಸ್ಕೂಟರ್ ಬೆಂಕಿಗಾಹುತಿಯಾದ ಹಿನ್ನೆಲೆಯಲ್ಲಿ, ತನ್ನ 1441 ಎಲೆಕ್ಟ್ರಿಕ್ ವಾಹನಗಳನ್ನು ಹಿಂಪಡೆಯುತ್ತಿರುವುದಾಗಿ ಓಲಾ ಕಂಪೆನಿ ಭಾನುವಾರ ತಿಳಿಸಿದೆ.
ಈ ನಿರ್ಧಾರವು ಪ್ರತ್ಯೇಕವಾಗಿದ್ದು, ಮಾರ್ಚ್ 26ರಂದು ಪುಣೆಯಲ್ಲಿ ಸಂಭವಿಸಿದ ಬೆಂಕಿ ಘಟನೆಯ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಕಂಪನಿಯು ಹೇಳಿದೆ.
'ನಾವು ನಿರ್ದಿಷ್ಟ ತಂಡ ನಿರ್ಮಿಸುತ್ತಿರುವ ಸ್ಕೂಟರ್ಗಳಲ್ಲಿ ಆಗುತ್ತಿರುವ ಸಮಸ್ಯೆಯನ್ನು ಪರಿಶೀಲಿಸುತ್ತಿದ್ದೇವೆ. ಆದ್ದರಿಂದ 1,441 ಸ್ಕೂಟರ್ಗಳನ್ನು ಸ್ವಯಂಪ್ರೇರಿತವಾಗಿ ಹಿಂಪಡೆಯುತ್ತಿದ್ದೇವೆʼ ಎಂದು ಹೇಳಿಕೆ ನೀಡಿದೆ.

ಇದೇ ರೀತಿ, ʻಪ್ಯೂರ್ ಇವಿʼ ಕಂಪನಿಯು ಇಟ್ರಾನ್ಸ್+ ಮತ್ತು ಇಪ್ಲೂಟೋ 7ಜಿ ಮಾದರಿಗಳ 2,000 ವಾಹನಗಳನ್ನು ಹಿಂಪಡೆಯಲು ನಿರ್ಧರಿಸಿತ್ತು. ಈ ವಾಹನಗಳಲ್ಲಿರುವ ಬ್ಯಾಟರಿಗಳನ್ನು ಸಂಪೂರ್ಣ ಪರಿಶೀಲನೆಗೆ ಒಳಪಡಿಸಲಿದ್ದೇವೆ ಮತ್ತು ಗ್ರಾಹಕರ ಹಿತದೃಷ್ಟಿಯಿಂದ ವಾಹನಗಳ ತಪಾಸಣೆ ನಡೆಸುವಂತೆ ಕಂಪನಿಯು ಎಲ್ಲಾ 'ಡೀಲರ್ಶಿಪ್ ನೆಟ್ವರ್ಕ್' ಮೂಲಕ ಮನವಿ ಮಾಡಿತ್ತು.
ಭಾರತದ ಪ್ರಮುಖ ವಿದ್ಯುತ್ ಚಾಲಿತ ಸ್ಕೂಟರ್ ನಿರ್ಮಾಣ ಕಂಪನಿಯಾದ ಒಕಿನಾವʼದ ತಮಿಳುನಾಡಿನ 'ಶೋರೂಮ್'ನಲ್ಲಿ ಏಪ್ರಿಲ್ 16ರಂದು ಭಾರೀ ಬೆಂಕಿ ಅವಘಡ ಸಂಭವಿಸಿತ್ತು. ಸ್ಕೂಟರ್ನ ಬ್ಯಾಟರಿ ಸ್ಪೋಟಗೊಂಡ ಪರಿಣಾಮ ಈ ಅವಘಡ ಸಂಭವಿಸಿತ್ತು. ದೇಶದ ಬೇರೆ ನಗರಗಳಲ್ಲೂ ತಮ್ಮ ಕಂಪನಿಯ ಸ್ಕೂಟರ್ನ ಬ್ಯಾಟರಿಗಳು ಸ್ಫೋಟಗೊಂಡ ವರದಿಗಳು ಬಂದ ಹಿನ್ನಲೆಯಲ್ಲಿ ಓಕಿನಾವ ಪ್ರೈಸ್ ಪ್ರೋ ಮಾದರಿಯ 3,215 ವಾಹನಗಳನ್ನು ಕಂಪನಿ ಹಿಂಪಡೆದಿತ್ತು.