
- ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಶೇ. 10ರಷ್ಟು ಮೀಸಲಾತಿ
- ಮೀಸಲಾತಿಗೆ ಆರ್ಥಿಕತೆಯೇ ಏಕೈಕ ಆಧಾರವಾಗಿರಬಾರದು
ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ (ಇಡಬ್ಲ್ಯೂಎಸ್) ಶೇಕಡಾ 10ರಷ್ಟು ಮೀಸಲಾತಿ ಒದಗಿಸಿದ ಸಂವಿಧಾನದ (103ನೇ ತಿದ್ದುಪಡಿ) ಕಾಯಿದೆಯ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿದ್ದ ಅರ್ಜಿಗಳ ವಿಚಾರಣೆಯನ್ನು ಸೆಪ್ಟೆಂಬರ್ 13ರಿಂದ ಆರಂಭಿಸಲಾಗುವುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಇಂದು ಅರ್ಜಿಯ ವಿಚಾರಣೆ ನಡೆಸಿದ ಸಿಜೆಐ ಯು ಯು ಲಲಿತ್, ನ್ಯಾಯಮೂರ್ತಿಗಳಾದ ದಿನೇಶ್ ಮಹೇಶ್ವರಿ, ಎಸ್ ರವೀಂದ್ರ ಭಟ್, ಬೇಲಾ ಎಂ ತ್ರಿವೇದಿ ಹಾಗೂ ಜೆ ಬಿ ಪರ್ದಿವಾಲಾ ಅವರನ್ನೊಳಗೊಂಡ ಐವರು ಸದಸ್ಯರ ಸಾಂವಿಧಾನಿಕ ಪೀಠ ಸೆಪ್ಟೆಂಬರ್ 13ರಿಂದ ವಿಚಾರಣೆ ಆರಂಭಿಸಿ ಐದು ದಿನಗಳಲ್ಲಿ ಪೂರ್ಣಗೊಳಿಸಲು ನಿರ್ಧರಿಸಿರುವುದಾಗಿ ತಿಳಿಸಿದೆ.
ಆದರೂ, ಪ್ರಕರಣದ ಸುಗಮ ವಿಚಾರಣೆಗೆ ನಿರ್ದೇಶನ ನೀಡಲು ಸೆಪ್ಟೆಂಬರ್ 8ರಂದು ಮತ್ತೆ ಪ್ರಕರಣವನ್ನು ಪಟ್ಟಿ ಮಾಡುತ್ತೇವೆ ಎಂದು ಸಿಜೆಐ ಲಲಿತ್ ಹೇಳಿದ್ದಾರೆ.
ಮೀಸಲಾತಿಗೆ ಆರ್ಥಿಕತೆಯೇ ಏಕೈಕ ಆಧಾರವಾಗಿರಬಾರದು ಎಂಬ ಕಾರಣಕ್ಕಾಗಿ ಸಂವಿಧಾನದ (103ನೇ ತಿದ್ದುಪಡಿ) ಕಾಯಿದೆ-2019ರ ಸಿಂಧುತ್ವ ಪ್ರಶ್ನಿಸಿ ಜನ್ಹಿತ್ ಅಭಿಯಾನ್ ಮತ್ತು ಸಮಾನತೆಗಾಗಿ ಯುವಜನತೆ(Youth for Equality) ಎಂಬ ಹೆಸರಿನ ಎನ್ಜಿಓಗಳು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಯಿತು.
ಈ ಸುದ್ದಿ ಓದಿದ್ದೀರಾ?: ಪೊಲೀಸರ ದಿಕ್ಕು ತಪ್ಪಿಸುವ ಮಾಸ್ಟರ್ ಮೈಂಡ್ ಸಿದ್ದಿಕಿ ಕಪ್ಪನ್ ಎಂದು ಅಫಿಡವಿಟ್ನಲ್ಲಿ ದಾಖಲಿಸಿದ ಉತ್ತರ ಪ್ರದೇಶ
ಸಂವಿಧಾನದ (103 ನೇ ತಿದ್ದುಪಡಿ) ಕಾಯಿದೆಯು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಹಾಗೂ ಇತರ ಹಿಂದುಳಿದ ವರ್ಗಗಳಿಗೆ ಸೇರದ, ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಶೇಕಡಾ 10ರಷ್ಟು ಮೀಸಲಾತಿ ನೀಡುತ್ತದೆ.
103ನೇ ತಿದ್ದುಪಡಿ ಕಾಯಿದೆಯನ್ನು ಪ್ರಶ್ನಿಸಿದ್ದ ಅರ್ಜಿಯನ್ನು 2020ರ ಆಗಸ್ಟ್ನಲ್ಲಿ ಸುಪ್ರೀಂ ಕೋರ್ಟ್ನ ತ್ರಿಸದಸ್ಯ ಪೀಠವು, ಐವರು ಸದಸ್ಯರ ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಿತ್ತು.