
- 87,000ಕ್ಕೂ ಹೆಚ್ಚು ಸಿಬ್ಬಂದಿಗಳಿರುವ ಮೆಟಾ ಕಂಪನಿ
- ಕೋವಿಡ್ ಕಾಲದಲ್ಲಿ ಹೆಚ್ಚು ಉದ್ಯೋಗಿಗಳ ನೇಮಕ
ವಿಶ್ವದ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ ಟ್ವಿಟರ್ ಸ್ವಾಧೀನಪಡಿಸಿದ ಬೆನ್ನಲ್ಲೇ ಶೇ. 50ರಷ್ಟು ಉದ್ಯೋಗಿಗಳನ್ನು ವಜಾಗೊಳಿಸಿರುವುದು ಚರ್ಚೆಯಲ್ಲಿದೆ. ಈ ʻಸಾಮೂಹಿಕ ವಜಾʼ ಬಗ್ಗೆ ಪರ ವಿರೋದದ ಮಾತುಗಳು ಕೇಳಿಬರುತ್ತಿವೆ. ಇದರ ಹಿಂದೆಯೇ, ಮೆಟಾ ಕಂಪನಿಯು ದೊಡ್ಡ ಪ್ರಮಾಣದಲ್ಲಿ ಉದ್ಯೋಗಿಗಳನ್ನು ವಜಾಗೊಳಿಸಲು ಯೋಜಿಸುತ್ತಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ.
ಸೆಪ್ಟೆಂಬರ್ ಅಂತ್ಯಕ್ಕೆ ಫೇಸ್ಬುಕ್ನ ಮಾತೃ ಸಂಸ್ಥೆ ಮೆಟಾದಲ್ಲಿ 87,000ಕ್ಕೂ ಹೆಚ್ಚು ಸಿಬ್ಬಂದಿಗಳಿರುವ ಬಗ್ಗೆ ವರದಿಯಾಗಿತ್ತು. ಸಾಂಕ್ರಾಮಿಕ ಸಮಯದಲ್ಲಿ ಉದ್ಯಮದ ಕ್ಷಿಪ್ರ ಬೆಳವಣಿಗೆಯ ನಂತರ ಇತ್ತೀಚಿನ ಟೆಕ್ ಉದ್ಯಮಗಳು ಉದ್ಯೋಗ ಕಡಿತಕ್ಕೆ ಮುಂದಾಗಿವೆ. ಈ ಬೆಳವಣಿಗೆ ಸಾವಿರಾರು ಉದ್ಯೋಗಿಗಳ ಮೇಲೆ ಪರಿಣಾಮ ಬೀರುವ ನಿರೀಕ್ಷೆಯಿದೆ.
ಹಲವರ ಪ್ರಕಾರ, ಉದ್ಯೋಗಿಗಳ ವಜಾ ಬಗ್ಗೆ ಮೆಟಾ ಬುಧವಾರ ಪ್ರಕಟಣೆ ಘೋಷಿಸಲು ಯೋಜಿಸಿದೆ. ಈ ವಾರದಿಂದ ಅನಿವಾರ್ಯವಲ್ಲದ ಪ್ರಯಾಣ ರದ್ದುಗೊಳಿಸುವಂತೆ ಕಂಪನಿಯ ಅಧಿಕಾರಿಗಳು ಈಗಾಗಲೇ ಉದ್ಯೋಗಿಗಳಿಗೆ ತಿಳಿಸಿರುವುದಾಗಿ ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ. ಈ ಬಗ್ಗೆ ಪ್ರತಿಕ್ರಿಯಿಸಲು ಮೆಟಾದ ವಕ್ತಾರರು ನಿರಾಕರಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
"ನಮ್ಮ ಹೂಡಿಕೆಗಳನ್ನು ಕಡಿಮೆ ಮಾಡಿ ಹೆಚ್ಚಿನ ಆದ್ಯತೆಯ ಬೆಳವಣಿಗೆಯ ಕ್ಷೇತ್ರಗಳ ಮೇಲೆ ಕೇಂದ್ರೀಕರಿಸುತ್ತೇವೆʼʼ ಎಂದು ಫೇಸ್ಬುಕ್ನ ಮುಖ್ಯ ಕಾರ್ಯನಿರ್ವಾಹಕ (ಸಿಇಒ) ಮಾರ್ಕ್ ಜುಕರ್ಬರ್ಗ್ ಅವರು ಇತ್ತೀಚೆಗೆ ಹೇಳಿಕೆ ನೀಡಿದ್ದರು.
ಈ ಸುದ್ದಿ ಓದಿದ್ದೀರಾ?: ವಂದೇ ಭಾರತ್ | ಪ್ರಾಯೋಗಿಕ ಸಂಚಾರ ಆರಂಭಿಸಿದ ಚೆನ್ನೈ- ಮೈಸೂರು ರೈಲು; 6.5 ತಾಸುಗಳಲ್ಲಿ 504 ಕಿಮೀ ಪ್ರಯಾಣ
"ಕೆಲವು ತಂಡಗಳು ಅರ್ಥಪೂರ್ಣವಾಗಿ ಬೆಳೆಯುತ್ತವೆ. ಆದರೆ, ಇತರ ತಂಡಗಳು ಮುಂದಿನ ವರ್ಷದಲ್ಲಿ ತಟಸ್ಥ ಅಥವಾ ಕುಗ್ಗುತ್ತವೆ. ಒಟ್ಟಾರೆಯಾಗಿ, 2023ರಲ್ಲಿ ಸರಿಸುಮಾರು ಈಗಿನ ಗಾತ್ರದಲ್ಲಿ ಮುಂದುವರಿಯುವುದನ್ನು ನಿರೀಕ್ಷಿಸುತ್ತೇವೆ. ಅಥವಾ ಇಂದು ಇರುವುದಕ್ಕಿಂತಲೂ ಕಂಪನಿ ಸ್ವಲ್ಪ ಚಿಕ್ಕದಾಗಬಹುದು" ಎಂದು ಅವರು ಅಕ್ಟೋಬರ್ 26ರಂದು ಕಂಪನಿಯ ಮೂರನೇ ತ್ರೈಮಾಸಿಕ ಗಳಿಕೆಯ ಬಗ್ಗೆ ವಿವರಿಸುವಾಗ ತಿಳಿಸಿದ್ದರು.
ಇತರ ಟೆಕ್ ದೈತ್ಯರಂತೆ, ಮೆಟಾ ಕೂಡ ಸಾಂಕ್ರಾಮಿಕ ಸಮಯದಲ್ಲಿ ಹೆಚ್ಚಿನ ವ್ಯವಹಾರವನ್ನು ಆನ್ಲೈನ್ಗೆ ಸ್ಥಳಾಂತರಗೊಳಿಸಿತ್ತು. 2020- 21ರಲ್ಲಿ ಸುಮಾರು 27,000ಕ್ಕೂ ಹೆಚ್ಚು ಉದ್ಯೋಗಿಗಳನ್ನು ಮೆಟಾ ನೇಮಿಸಿತ್ತು. ಈ ವರ್ಷದ ಮೊದಲ ಒಂಬತ್ತು ತಿಂಗಳಲ್ಲಿ ಇನ್ನೂ 15,344 ಮಂದಿಯನ್ನು ನೇಮಿಸಿಕೊಂಡಿದೆ.
ಅರ್ಧದಷ್ಟು ನೌಕರರ ವಜಾಗೊಳಿಸಿರುವ ಟ್ವಿಟರ್
ಟ್ವಿಟರ್ ಮುಖ್ಯಸ್ಥರಾಗಿ ಕೆಲಸ ಆರಂಭಿಸಿದ ದಿನದಿಂದಲೇ ಒಂದಿಲ್ಲೊಂದು ಹೊಸ ನಿರ್ಧಾರಗಳನ್ನು ಘೋಷಿಸುತ್ತಲೇ ಬಂದಿರುವ ಎಲಾನ್, ಟ್ವಿಟರ್ ನಿರ್ದೇಶಕ ಮಂಡಳಿಯನ್ನು ವಿಸರ್ಜಿಸಿದರು. ಮಾಜಿ ಸಿಇಓ ಸೇರಿದಂತೆ ನಾಲ್ಕು ಉನ್ನತ ಅಧಿಕಾರಿಗಳನ್ನು ಕೆಲಸದಿಂದ ವಜಾಗೊಳಿಸಿದ್ದರು. ಇದರ ಬೆನ್ನಲ್ಲೇ ನವೆಂಬರ್ 3ರ ತಡರಾತ್ರಿ ಟ್ವಿಟರ್ನ ಉದ್ಯೋಗಿಗಳಿಗೆ ಆಂತರಿಕ ಮೆಮೊ ಇಮೇಲ್ ಮಾಡುವ ಮೂಲಕ ಸಾಮೂಹಿಕ ವಜಾಗೊಳಿಸುವಿಕೆಯ ಕುರಿತು ಮಾಹಿತಿ ನೀಡಿದ್ದರು.
ಇಮೇಲ್ ಮೂಲಕ ಉದ್ಯೋಗಗಳ ವಜಾಕ್ಕೆ ಮುಂದಾಗಿದ್ದ ಎಲಾನ್, 7,500 ಮಂದಿ ಉದ್ಯೋಗಿಗಳಲ್ಲಿ ಸುಮಾರು ಅರ್ಧದಷ್ಟು ನೌಕರರನ್ನು ಕೆಲಸದಿಂದ ವಜಾಗೊಳಿಸಿದ್ದಾರೆ. ಕಂಪನಿಯ ಕಂಪ್ಯೂಟರ್ ಮತ್ತು ಇಮೇಲ್ಗಳಿಗೆ ತಕ್ಷಣದಿಂದಲೇ ಪ್ರವೇಶ ನಿರಾಕರಿಸಲಾಗುವುದು ಎಂದು ಕಂಪನಿ ಹೇಳಿದ್ದು, ಸುಮಾರು ಶೇ. 50ರಷ್ಟು ಉದ್ಯೋಗಿಗಳು ಕಂಪನಿ ಇಮೇಲ್ಗೆ ಲಾಗ್ಇನ್ ಆಗಲು ಸಾಧ್ಯವಾಗಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ.