
- ಕಮ್ಯುನಿಟಿ ಸ್ಟ್ಯಾಂಡರ್ಡ್ ಉಲ್ಲಂಘನೆ ಕಾರಣ ನೀಡಿ ಪೋಸ್ಟ್ ಡಿಲೀಟ್
- ಮೂರು ವರ್ಷಗಳಷ್ಟು ಹಳೆಯ ಪೋಸ್ಟ್ಗಳನ್ನು ನಿರ್ಬಂಧಿಸಿದ ಫೇಸ್ಬುಕ್
ಶುಕ್ರವಾರ ಫೇಸ್ಬುಕ್, ಮಾಧ್ಯಮ ಸಂಸ್ಥೆಯೊಂದರ ಅಧಿಕೃತ ಪೇಜ್ನಲ್ಲಿ ಪ್ರಕಟವಾದ ಪೋಸ್ಟ್ಗಳನ್ನು ನಿರ್ಬಂಧಿಸುವುದರೊಂದಿಗೆ ಆರಂಭವಾದ ವಿದ್ಯಮಾನ ಅಂಬೇಡ್ಕರ್ ಕುರಿತ ಪೋಸ್ಟ್ಗಳನ್ನು ನಿರ್ಬಂಧಿಸುವವರೆಗೆ ಮುಂದುವರೆದು ಬಳಕೆದಾರರಿಂದ ತೀವ್ರ ಆಕ್ರೋಶ ವ್ಯಕ್ತವಾಯಿತು.
ಪೋಸ್ಟ್ಗಳ ನಿರ್ಬಂಧಕ್ಕೆ ಫೇಸ್ಬುಕ್ 'ಕಮ್ಯುನಿಟಿ ಸ್ಟ್ಯಾಂಡರ್ಡ್'ಕಾರಣ ನೀಡಿದ್ದು, ನಿರ್ದಿಷ್ಟ ಕಾರಣವನ್ನು ನೀಡಿಲ್ಲ. ಆದರೆ ನಿರ್ಬಂಧಕ್ಕೆ ಒಳಗಾದ ಪೋಸ್ಟ್ಗಳು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಮತ್ತು ಬಿಜೆಪಿಯ ವಿರುದ್ಧ ಬರೆದ ಸುದ್ದಿ, ವಿಶ್ಲೇಷಣೆ ಹಾಗೂ ವ್ಯಕ್ತಿಗತ ಪೋಸ್ಟ್ಗಳೇ ಆಗಿದ್ದು ಸಾಮಾಜಿಕ ಜಾಲತಾಣ ಸಂಸ್ಥೆಯ ನಡೆಯು ರಾಜಕೀಯ ಪ್ರೇರಿತ ಎಂಬ ಅನುಮಾನಕ್ಕೂ ಕಾರಣವಾಯಿತು.
ಬೆಂಗಳೂರು ಮೂಲದ ಡಿಜಿಟಲ್ ಮಾಧ್ಯಮ ಸಂಸ್ಥೆ ಪ್ರತಿಧ್ವನಿ.ಕಾಮ್ ಸುದ್ದಿ ತಾಣಕ್ಕೆ ಸಂಬಂಧಿಸಿದ ಅಧಿಕೃತ ಫೇಸ್ಬುಕ್ ಪುಟ ಮತ್ತು ಅಲ್ಲಿಂದ ಬೇರೆ ಖಾತೆಗಳಲ್ಲಿ ಶೇರ್ ಮಾಡಲಾದ ಪೋಸ್ಟ್ಗಳನ್ನು ತೆಗೆದು ಹಾಕಲಾಗಿತ್ತು. ಸ್ಪ್ಯಾಮಿಂಗ್ ಕಾರಣ ನೀಡಿ ಈ ಪೋಸ್ಟ್ಗಳನ್ನು ತೆಗೆಯಲಾಗುತ್ತಿದೆ ಎಂದು ಫೇಸ್ಬುಕ್ ನೋಟಿಫಿಕೇಷನ್ ಸೂಚಿಸಿದ್ದವು.

"ಆರಂಭದಲ್ಲಿ ಬಿಜೆಪಿ, ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಕುರಿತ ಪೋಸ್ಟ್ಗಳನ್ನು ತೆಗೆದು ಹಾಕಲಾಗಿತ್ತು. ಆದರೆ ಮಧ್ಯಾಹ್ನದ ಹೊತ್ತಿಗೆ ಪೇಜ್ನ ಎಲ್ಲ ಸುದ್ದಿಗಳನ್ನು ತೆಗೆಯುತ್ತಿರುವುದಾಗಿ ಫೇಸ್ಬುಕ್ ಸೂಚಿಸಿದೆ.

ವಿಡಿಯೋ ಪೋಸ್ಟ್ ಮತ್ತು ಯೂಟ್ಯೂಬ್ ವಿಡಿಯೋ ಲಿಂಕ್ಗಳನ್ನು ತೆಗೆದಿಲ್ಲ. ಆದರೆ ಸುದ್ದಿಗೆ ಸಂಬಂಧಿಸಿದ ಪೋಸ್ಟ್ಗಳನ್ನು ಸಂಪೂರ್ಣವಾಗಿ ತೆಗೆದು ಹಾಕಲಾಗಿದೆ ಎಂದು ಅವರು ತಿಳಿಸಿದರು. ಈ ಹಿಂದೆಯೂ ನಮ್ಮ ಫೇಸ್ಬುಕ್ ಪೇಜನ್ನು ಬ್ಲಾಕ್ ಮಾಡಲಾಗಿತ್ತು ಎಂಬ ಮಾಹಿತಿಯನ್ನೂ ಶಿವಕುಮಾರ್ ನೀಡಿದರು.
ಇದೇ ಸಮಸ್ಯೆ ಎದುರಿಸಿರುವ ಪ್ರತಿಧ್ವನಿ.ಕಾಮ್ನ ಮಾಜಿ ಉದ್ಯೋಗಿ ಫೈಜ್ ಅವರು ಈ ದಿನ.ಕಾಮ್ ಜೊತೆ ಮಾತನಾಡಿ, "ಬಹುತೇಕ ಎಲ್ಲವೂ ವರ್ಷಗಳ ಹಿಂದಿನ ಪೋಸ್ಟುಗಳು. ಅವುಗಳನ್ನು ತೆರವುಗೊಳಿಸುವ ಮುನ್ನ ಸಮರ್ಥನೆಯನ್ನೋ, ಸಮಜಾಯಿಷಿಯನ್ನೋ ಕೇಳುವ ವ್ಯವಧಾನವನ್ನೂ ಫೇಸ್ಬುಕ್ ತೋರಿಲ್ಲ. ಎಲ್ಲವೂ ಏಕಮುಖಿ ಕ್ರಮ, ಏಕಮುಖಿ ತೀರ್ಮಾನ" ಎಂದ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವ್ಯಕ್ತಿಗತ ಖಾತೆಗಳ ಮೇಲೂ ಫೇಸ್ಬುಕ್ ಈ ದಾಳಿ ನಡೆಸಿದೆ ಎಂದು ಟೀಕಸಿರುವ ಖಕಿ ಸಂಜ್ಯೋತಿ ವಿ ಕೆ, ಈ ದಿನ.ಕಾಮ್ನೊಂದಿಗೆ ಮಾತನಾಡಿ, "ಇಂದು ಒಂದೇ ದಿನ ಹತ್ತಾರು ಜನರ ವೈಯಕ್ತಿಕ ಖಾತೆಗಳ ಮೇಲೆ 'ಫೇಸ್ಬುಕ್ ಸಾರ್ಜನಿಕ ನೀತಿ' ಎಂಬ ಅನೂಹ್ಯ, ರಹಸ್ಯಕರ, ಶಂಕಾತ್ಮಕ ಅಸ್ತ್ರ ಬೀಸಿ, ಅವರಿಗೆ ನೋಟೀಸು ಕಳುಹಿಸಿರುವುದು, ಸರ್ಕಾರ ಮತ್ತು ಫೇಸ್ಬುಕ್ನ ಕಾನೂನುಬಾಹಿರ ಅಕ್ರಮ ಸಂಬಂಧವನ್ನು ಜಗ್ಗಾಜಾಹೀರುಗೊಳಿಸಿದಂತಾಗಿದೆ. ಇದು ಸರ್ಕಾರದ ಸರ್ವಾಧಿಕಾರಿ ಧೋರಣೆ, ಅಹಂಕಾರಗಳನ್ನು ಮಾತ್ರವಲ್ಲದೆ, ಅದರ ಅತೀವ ಭಯವನ್ನೂ ಬಹಿರಂಗಗೊಳಿಸಿದೆ" ಎಂದು ಟೀಕಿಸಿದ್ದಾರೆ.
"ಜನದನಿ ದಮನಿಸುವಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಎಫ್ಬಿಯಂತಹ ಸಾಮಾಜಿಕ ಜಾಲತಾಣವನ್ನೂ ಬೆಲೆಗೆ ಕೊಂಡಂತೆ, ಅದರ ನಿಯಮ ನಿರೂಪಕರ ಸ್ಥಾನದಲ್ಲಿ ಸರ್ಕಾರ ತನ್ನ ಭಟ್ಟಂಗಿಗಳನ್ನೇ ಕೂರಿಸಿರುವಂತಿದೆ. ಸರ್ಕಾರದ ವೈಫಲ್ಯ, ಅನೀತಿಗಳನ್ನು ಪ್ರಶ್ನಿಸುವಂತಹ ಸುದ್ದಿ ತಾಣಗಳ ಪೋಸ್ಟ್ಗಳಿಂದ ಹಿಡಿದು, ಜನಸಾಮಾನ್ಯರ ವೈಯಕ್ತಿಕ ವಿಮರ್ಶಾತ್ಮಕ ಪೋಸ್ಟ್ಗಳನ್ನೂ ಅಳಿಸಿ ಹಾಕುವ, ಅಂತಹವರ ಖಾತೆಗಳನ್ನು ತಡೆಹಿಡಿಯುವ ಅಸಹ್ಯಕರ ಮಟ್ಟಕ್ಕೆ ಇಳಿದಿದೆ" ಎಂದಿದ್ದಾರೆ.

ಪ್ರತಿಧ್ವನಿ.ಕಾಮ್ನ ಅಧಿಕೃತ ಫೇಸ್ಬುಕ್ ಪುಟದಿಂದ ಸುದ್ದಿ- ಬರಹಗಳನ್ನು ಹಂಚಿಕೊಂಡ ಎಲ್ಲರಿಗೂ ಈ ಸಮಸ್ಯೆ ಎದುರಾಗಿದೆ. ಹಿರಿಯ ಪತ್ರಕರ್ತ ಶಶಿ ಸಂಪಳ್ಳಿಯವರ ಟೈಮ್ ಲೈನಿನಲ್ಲಿದ್ದ 15 ಪೋಸ್ಟ್ಗಳನ್ನು ತೆಗೆದು ಹಾಕಿದೆ. "ನಾನು ಪತ್ರಕರ್ತನಾಗಿ ಬರೆದ ವರದಿ, ವಿಶ್ಲೇಷಣೆ, ವಿಶೇಷ ವರದಿಗಳನ್ನು ತೆಗೆದು ಹಾಕಿದೆ. ಫೇಸ್ಬುಕ್ನ ಕಮ್ಯುನಿಟಿ ನಿಯಮಗಳ ಚೌಕಟ್ಟು ಮೀರುವಂತಹ, ಹಿಂಸೆಗೆ ಪ್ರಚೋದಿಸುವ, ಅಶ್ಲೀಲದ ಮಾಹಿತಿಗಳನ್ನು ಹಂಚಿಕೊಂಡಿಲ್ಲ. ಮಾಧ್ಯಮದಲ್ಲಿ ಪ್ರಕಟವಾದದ್ದನ್ನೇ ಹಂಚಿಕೊಂಡಿದ್ದೆ. ಆದರೆ ಫೇಸ್ಬುಕ್ ಆ ಪೋಸ್ಟ್ಗಳನ್ನು ತೆಗೆದುಹಾಕಿದೆ. ಬಹುಪಾಲು ಪೋಸ್ಟ್ಗಳು ಬಿಜೆಪಿಗೆ ಸಂಬಂಧಿಸಿದ್ದು ಎಂಬುದು ಗಮನಿಸಬೇಕಾದ ಸಂಗತಿ" ಎಂದು ಅವರು ತಿಳಿಸಿದ್ದಾರೆ.
"ದ್ವೇಷ ಹರಡುವ ಪೋಸ್ಟ್ಗಳ ಮೇಲೆ ಕ್ರಮಕೈಗೊಳ್ಳದ ಫೇಸ್ಬುಕ್, ಆಡಳಿತ ಪಕ್ಷ ಟೀಕಿಸುವ, ಪ್ರಶ್ನಿಸುವ ಪೋಸ್ಟ್ಗಳ ತೆಗೆದು ಹಾಕುತ್ತಿರುವುದು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ನಡೆಯುತ್ತಿರುವ ಬಹುದೊಡ್ಡ ಹಲ್ಲೆ" ಎಂದಿದ್ದಾರೆ.
ಈ ಸುದ್ದಿ ಓದಿದ್ದೀರಾ ? | ಸುದ್ದಿ ವಿವರ | ಪತ್ರಕರ್ತರು, ರಾಜಕಾರಣಿಗಳು ಮತ್ತು ಕಾರ್ಯಕರ್ತರ ಖಾತೆ ರದ್ದತಿ ಆದೇಶ ವಿರುದ್ಧ ಟ್ವಿಟರ್ ಪ್ರತಿರೋಧ
ಲೇಖಕಿ ಅಶ್ವಿನಿ ಬಿ ವಡ್ಡಿನಗದ್ದೆ, "ನಾನು ಪ್ರತಿಧ್ವನಿ.ಕಾಮ್ನ 5 ಪೋಸ್ಟ್ಗಳನ್ನು ಶೇರ್ ಮಾಡಿದ್ದೆ. ಅವೆಲ್ಲವೂ ರಿಪೋರ್ಟ್ ಆಗಿವೆ. ಐದೂ ಸ್ಟೋರಿಗಳು ಬಿಜೆಪಿಗೆ ಸಂಬಂಧಿಸಿದವು! ಜೂನ್ ತಿಂಗಳಲ್ಲಿ ಜಿ7 ಸಮಾವೇಶದಲ್ಲಿ ಭಾರತದಲ್ಲಿ ವಾಕ್ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮುಕ್ತವಾಗಿ ರಕ್ಷಿಸಲು ಪ್ರತಿಜ್ಞೆ ಮಾಡಿದ ಬೆನ್ನಲ್ಲೇ ಇಂತಹ ವಿದ್ಯಮಾನ ನಡೆದಿರುವುದು ವಿಪರ್ಯಾಸ. ಸಾಮಾಜಿಕ ಜಾಲತಾಣಗಳಲ್ಲಿ ಈ ರೀತಿ ನಿರ್ಬಂಧಗಳು ಇನ್ನೆಷ್ಟು ದಿನ ನಡೆಯಲಿವೆ? ಈ ಎಲ್ಲದಕ್ಕೂ ಸರ್ಕಾರ ಉತ್ತರ ಕೊಡುತ್ತದೆಯೇ? ಎಂದು ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಶುಕ್ರವಾರ ಸಂಜೆಯ ಹೊತ್ತಿಗೆ ಅಂಬೇಡ್ಕರ್ ವಿಚಾರಗಳನ್ನು ಒಳಗೊಂಡ ಪೋಸ್ಟ್ಗಳು ಇಂತಹ ನಿರ್ಬಂಧ ಎದುರಿಸಿದ ವರದಿ ಬಂದಿತ್ತು. ಕವಿ, ಸಂಶೋಧಕ ಅರುಣ್ ಜೋಳದ ಕೂಡ್ಲಿಗಿ, ಅಂಬೇಡ್ಕರ್ ಕುರಿತು ಸರಣಿ ಪೋಸ್ಟ್ಗಳನ್ನು ಪ್ರಕಟಿಸಿದ ಬಳಿಕ ಅವರಿಗೂ ಸ್ಪ್ಯಾಮಿಂಗ್ ನೋಟಿಫಿಕೇಷನ್ ಬಂದು ಕೆಲ ಪೋಸ್ಟ್ಗಳನ್ನು ನಿರ್ಬಂಧಿಸಿದೆ.
ಕಮ್ಯುನಿಟಿ ಸ್ಟ್ಯಾಂಡರ್ಡ್ ಆಧರಿಸಿ ಅಸಹಜವಾಗಿ ಲಿಂಕ್ಗಳನ್ನು ಹಂಚಿಕೊಳ್ಳುವುದನ್ನು ಫೇಸ್ಬುಕ್ ನಿಯಂತ್ರಿಸುತ್ತದೆ. ತನ್ನ ವೇದಿಕೆಯನ್ನು ಅತಿರೇಕದ ಬಳಕೆಗೆ ಅವಕಾಶ ಕೊಡುವುದಿಲ್ಲ. ಅಷ್ಟೇ ಅಲ್ಲ, ವಾಣಿಜ್ಯದ ಉದ್ದೇಶಕ್ಕೆ ಬಳಸಿಕೊಳ್ಳುವುದಕ್ಕೂ ಅವಕಾಶಕೊಡುವುದಿಲ್ಲ. ಈ ರೀತಿಯ ಬಳಕೆಯನ್ನು ನಿಯಂತ್ರಿಸಲು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಬಳಸುತ್ತಾ ಬಂದಿರುವ ಫೇಸ್ಬುಕ್, ನಿರ್ದಿಷ್ಟ ಪದ, ನಿರ್ದಿಷ್ಟ ವಿಷಯದ ಪೋಸ್ಟ್ಗಳ ಮೇಲೆ ಪ್ರಯೋಗ ನಡೆಸಿದೆ ಎಂಬ ಗುಮಾನಿಯೂ ವ್ಯಕ್ತವಾಗಿದೆ.
ವ್ಯಾಪಕವಾಗಿ ಚರ್ಚೆಯಾಗುವ ವಿಚಾರಗಳನ್ನು ಸ್ಪ್ಯಾಮಿಂಗ್ ಚೌಕಟ್ಟಿನಲ್ಲಿ ಪರಿಗಣಿಸುವ ಫೇಸ್ಬುಕ್ ಮಾನದಂಡವೇ ಅತಾರ್ಕಿಕವಾಗಿದ್ದು, ಯಾವುದೇ ವಿದ್ಯಮಾನದ ಸುತ್ತ ನಡೆಯಬಹುದಾದ ಚರ್ಚೆಯನ್ನೂ ಈ ಪ್ರಕ್ರಿಯೆ ಮೂಲಕ ನಿಯಂತ್ರಿಸುವ ಸಾಧ್ಯತೆಯೂ ಇರುವುದರಿಂದ, ರಾಜಕೀಯ ಅಸ್ತ್ರವೂ ಆಗಿ ಬಳಕೆಯಾಗುವುದಿಲ್ಲವೆ ಎಂಬ ಪ್ರಶ್ನೆಯನ್ನು ಬಳಕೆದಾರರು ಕೇಳಲಾರಂಭಿಸಿದ್ದಾರೆ.
ಈ ಸಂಬಂಧ ಈ ದಿನ.ಕಾಮ್ ಫೇಸ್ಬುಕ್ ಅನ್ನು ಸಂಪರ್ಕಿಸಿದ್ದು, ಈ ಸುದ್ದಿ ಬರೆಯುವ ಹೊತ್ತಿಗೆ ಯಾವುದೇ ಪ್ರತಿಕ್ರಿಯೆ ಲಭ್ಯವಾಗಿಲ್ಲ.