ಸತ್ಯ ಶೋಧನೆ| ವೈರಲ್ ವಿಡಿಯೋದಲ್ಲಿರುವುದು ಮೃತ ಬಾಲಕ ಇಂದ್ರ ಮೇಘವಾಲ್ ಹೌದೆ?

  • ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದ ವಿಡಿಯೋ
  • ವಿಡಿಯೋದಲ್ಲಿರುವುದು ಹರೀಶ್ ಭೀಲ್ ಎಂಬುದು ದೃಢ

ರಾಜಸ್ಥಾನದಲ್ಲಿ ನೀರಿನ ಮಡಕೆ ಮುಟ್ಟಿದ ಕಾರಣಕ್ಕೆ ದಲಿತ ಬಾಲಕ ಇಂದ್ರ ಮೇಘವಾಲ್ ಹತ್ಯೆಯ ಬಳಿಕ, ಸಾಮಾಜಿಕ ಜಾಲತಾಣಗಳಲ್ಲಿ ಪುಟ್ಟ ಬಾಲಕ ಡ್ಯಾನ್ಸ್‌ ಮಾಡಿರುವ ವಿಡಿಯೋ ಒಂದು ಹರಿದಾಡಿತ್ತು. ವಿಡಿಯೋದಲ್ಲಿ ಇರುವ ಬಾಲಕ ಇಂದ್ರ ಮೇಘವಾಲ್ ಎಂದು ಬಿಂಬಿಸಲಾಗಿತ್ತು.

ಆದರೆ ಇದೀಗ ಆ ವಿಡಿಯೋದ ವಾಸ್ತವಾಂಶಗಳ ಕುರಿತು ಸತ್ಯ ಶೋಧಿಸಲಾಗಿದ್ದು(ಫ್ಯಾಕ್ಟ್‌ ಚೆಕ್), ವಿಡಿಯೋದಲ್ಲಿ ಡ್ಯಾನ್ಸ್‌ ಮಾಡಿರುವ ಬಾಲಕ ಇಂದ್ರ ಮೇಘವಾಲ್ ಅಲ್ಲ; ಅದು ರಾಜಸ್ಥಾನದ ಬಾರ್ಮರ್ ನಿವಾಸಿ ಹರೀಶ್ ಭೀಲ್ ಎಂದು ʼಎಎಫ್‌ಡಬ್ಲ್ಯೂಎʼ ಫ್ಯಾಕ್ಟ್‌ ಚೆಕ್‌ ವರದಿ ಹೇಳಿದೆ ಎಂದು ʼಇಂಡಿಯಾ ಟುಡೇʼ ವರದಿ ಮಾಡಿದೆ.

ರಾಜಸ್ಥಾನದ ಸರಸ್ವತಿ ಮಂದಿರ ಶಾಲೆಯಲ್ಲಿ ಮೇಲ್ಜಾತಿಯವರಿಗೆ ಇಟ್ಟಿದ್ದ ನೀರು ಮುಟ್ಟಿದ ಎಂಬ ಕಾರಣಕ್ಕೆ ದಲಿತ ವಿದ್ಯಾರ್ಥಿ ಇಂದ್ರ ಮೇಘವಾಲ್‌ನ ಮೇಲೆ ಚೈಲ್ ಸಿಂಗ್ ಎಂಬ ಶಿಕ್ಷಕ ಅಮಾನುಷ ಹಲ್ಲೆ ನಡೆಸಿದ್ದ. ಆ ಘಟನೆ ಹೊರಜಗತ್ತಿಗೆ ತಿಳಿಯುತ್ತಲೇ ರಾಜಸ್ಥಾನಿ ಹಾಡಿಗೆ ಪುಟ್ಟ ಹುಡುಗನೊಬ್ಬ ಡ್ಯಾನ್ಸ್‌ ಮಾಡಿರುವ ವಿಡಿಯೋ ವೈರಲ್ ಆಗಿತ್ತು. ವಿಡಿಯೋದಲ್ಲಿದ್ದ ಪೋರನನ್ನು ಇಂದ್ರ ಮೇಘವಾಲ್ ಎನ್ನಲಾಗಿತ್ತು.

ಆದರೆ ಇದೀಗ ವಿಡಿಯೋದಲ್ಲಿರುವ ವಿದ್ಯಾರ್ಥಿ ಇಂದ್ರ ಮೇಘವಾಲ್ ಅಲ್ಲ ಎನ್ನುವ ಸತ್ಯ ಹೊರಬಿದ್ದಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಅನೇಕರು ವಿಡಿಯೋವನ್ನು ಹಂಚಿಕೊಂಡು ಇಂದ್ರ ಮೇಘವಾಲ್ ಬಗ್ಗೆ ಸಂತಾಪ ಸೂಚಿಸಿದ್ದರು. 

ಈ ಸುದ್ದಿ ಓದಿದ್ದೀರಾ? ಕವಿತೆ | ನನ್ನದೆ ಮನೆಕೂಸು ನೀರು ಮುಟ್ಟಿ ಹೆಣವಾಗಿದೆ

ವಿಡಿಯೋದ ಬೆನ್ನತ್ತಿದ ಎಎಫ್‌ಡಬ್ಲ್ಯೂಎ ತನಿಖಾ ತಂಡ

ವೈರಲ್ ವಿಡಿಯೋ ಮತ್ತು ಇಂದ್ರ ಮೇಘವಾಲ್ ಇಬ್ಬರ ಚಿತ್ರಗಳನ್ನು ಹೋಲಿಸಿ ನೋಡಲಾಗಿದೆ. ಹೋಲಿಕೆಯಲ್ಲಿ ಇಬ್ಬರು ವಿಭಿನ್ನವಾಗಿ ಕಂಡಿದ್ದು, ತರುವಾಯ ವೈರಲ್ ಪೋಸ್ಟ್‌ಗಳಲ್ಲಿ ಕಾಮೆಂಟ್‌ಗಳನ್ನು ಪರೀಶಿಲಿಸಲಾಗಿದೆ. ಇದು ಹರೀಶ್ ಎನ್ನುವ ಕಾಮೆಂಟ್‌ ಮೊದಲು ಕಾಣಿಸಿಕೊಂಡಿತು.

ಕಾಮೆಂಟ್‌ ಬೆನ್ನತ್ತಿದ ತನಿಖಾ ತಂಡ, ಕಾಮೆಂಟ್ ಮಾಡಿದವರು ಬಾರ್ಮರ್‌ನ ಜಿಯುಪಿಎಸ್ ಗೋಮ್ರಖ್ ಧಾಮ್ ಶಾಲೆಯ ಶಿಕ್ಷಕ ಟಿಆರ್‌ ಚೇಲಾ ರಾಮ್ ರೈಕಾ ಎಂದು ತಿಳಿದುಬಂದಿದೆ. ಬಳಿಕ ಅವರ ಫೇಸ್‌ಬುಕ್‌ ಖಾತೆಯಲ್ಲಿ ವಿಡಿಯೋಗಳನ್ನು ನೋಡುತ್ತಿರುವಾಗ ಜುಲೈ 30ರಂದು ವೈರಲ್ ಆಗಿರುವ ವಿಡಿಯೋ ಸಿಕ್ಕಿದೆ. “ನೋ ಬ್ಯಾಗ್ ಡೇ” ಸಂದರ್ಭದಲ್ಲಿ ಹರೀಶ್ ಎಂಬ 2ನೇ ತರಗತಿ ವಿದ್ಯಾರ್ಥಿ ಡ್ಯಾನ್ಸ್‌ ಮಾಡಿರುವುದಾಗಿ ತನಿಖಾ ತಂಡ ಕಂಡುಕೊಂಡಿದೆ.

ಎಫ್‌ಡಬ್ಲ್ಯುಎ ವಿಡಿಯೋ ಕುರಿತು ಖಾತ್ರಿಪಡಿಸಿಕೊಳ್ಳಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಗೋಮ್ರಖ್ ಧಾಮ್‌ನ ಮುಖ್ಯ ಶಿಕ್ಷಕ ಗುಣೇಶ ರಾಮ್ ಚೌಧರಿ ಅವರನ್ನು ಸಂಪರ್ಕಿಸಿದ್ದು, ಅವರು ವಿಡಿಯೋದಲ್ಲಿರುವ ಮಗು ತಮ್ಮ ಶಾಲೆಯ ವಿದ್ಯಾರ್ಥಿ ಹರೀಶ್ ಭೀಲ್ ಎಂದು ದೃಢಪಡಿಸಿದ್ದಾರೆ.

ವೈರಲ್ ವಿಡಿಯೋದಲ್ಲಿ ಇರುವ ಬಾಲಕ ತಮ್ಮ ಮಗನಲ್ಲ ಎಂದು ಮೃತ ಇಂದ್ರ ಮೇಘವಾಲ್ ಅವರ ತಂದೆ ದೇವರಾಮ್ ಮೇಘವಾಲ್ ಖಚಿತಪಡಿಸಿರುವುದಾಗಿ ʼಇಂಡಿಯಾ ಟುಡೇʼ ವರದಿ ಮಾಡಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್