
- ಚಲನಚಿತ್ರ ನಿರ್ದೇಶಕ ಪಾ ರಂಜಿತ್ ಧ್ವನಿ ಎತ್ತಿದ ಬಳಿಕ ಸರ್ಕಾರದಿಂದ ನಿರ್ಧಾರ
- ತಾವೇ ಮಲ ಸುರಿದಿದ್ದೇವೆಂದು ಒಪ್ಪಿಕೊಳ್ಳುವಂತೆ ದಲಿತರಿಗೆ ಬೆದರಿಕೆ ಆರೋಪ
ದಲಿತ ಕುಟುಂಬಗಳು ಕುಡಿಯಲು ಬಳಸುವ ನೀರಿನ ಟ್ಯಾಂಕಿಗೆ ಮಾನವ ಮಲ ಸುರಿದು ಕಲುಷಿತಗೊಳಿಸಿದ ಪ್ರಕರಣ ಬೆಳಕಿಗೆ ಬಂದು ಮೂರು ವಾರಗಳ ಬಳಿಕ ತಮಿಳುನಾಡು ಪೊಲೀಸ್ ಮಹಾನಿರ್ದೇಶಕರು (ಡಿಜಿಪಿ) ತನಿಖೆಯನ್ನು ಅಪರಾಧ ವಿಭಾಗ - ಅಪರಾಧ ತನಿಖಾ ಇಲಾಖೆಗೆ (ಸಿಬಿ-ಸಿಐಡಿ) ವರ್ಗಾಯಿಸಿದ್ದಾರೆ.
ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿಗಳು ಸಂತ್ರಸ್ತ ದಲಿತರನ್ನು ತಾವೇ ನೀರಿನ ಟ್ಯಾಂಕ್ಗೆ ಮಲ ಸುರಿದಿದ್ದೇವೆಂದು ಒಪ್ಪಿಕೊಳ್ಳುವಂತೆ ಬೆದರಿಕೆ ಒಡ್ಡುತ್ತಿದ್ದಾರೆಂದು ತಮಿಳಿನ ಖ್ಯಾತ ಚಲನಚಿತ್ರ ನಿರ್ದೇಶಕ ಪಾ ರಂಜಿತ್ ಶನಿವಾರ (ಜ. 14) ಆಕ್ರೋಶ ವ್ಯಕ್ತಪಡಿಸಿದ ಒಂದು ದಿನದ ಬಳಿಕ ಈ ನಿರ್ಧಾರ ಪ್ರಕಟಿಸಲಾಗಿದೆ.
ತಮಿಳುನಾಡಿನ ಪುದುಕೋಟ್ಟೈ ಜಿಲ್ಲೆಯ ಅನ್ನವಸಲ್ ಬ್ಲಾಕ್ನ ವೆಂಗವಯಲ್ ಗ್ರಾಮದಲ್ಲಿ ಡಿಸೆಂಬರ್ 24 ರಂದು ದಲಿತ ಸಮುದಾಯದ ಮಕ್ಕಳು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಮಕ್ಕಳು ಕಲುಷಿತ ನೀರು ಕುಡಿದಿರುವ ಸಾಧ್ಯತೆ ಇದೆ ಎಂದು ವೈದ್ಯರು ತಿಳಿಸಿದ್ದರು. ಬಳಿಕ ಸ್ಥಳೀಯ ನಿವಾಸಿಗಳು ನೀರಿನ ಟ್ಯಾಂಕ್ ಪರಿಶೀಲಿಸಿದಾಗ ಟ್ಯಾಂಕ್ಗೆ ಮಲ ಸುರಿದಿರುವುದು ಕಂಡುಬಂದಿತ್ತು.
ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಜನವರಿ 11 ರಂದು ವಿಧಾನಸಭೆಯಲ್ಲಿ ಘಟನೆಯ ಬಗ್ಗೆ ಮಾತನಾಡಿ, ಇದು ಖಂಡನೀಯ ಮತ್ತು ಅವಮಾನಕರ ಎಂದು ವಿಷಾದ ವ್ಯಕ್ತಪಡಿಸಿದ್ದರು.
ಸರ್ಕಾರದ ನಿರ್ದೇಶನದ ಮೇರೆಗೆ ಪುದುಕ್ಕೊಟ್ಟೈ ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಎಸ್ಪಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿದೆ. ಪೊಲೀಸರು ಗ್ರಾಮದಲ್ಲಿ ಸುಮಾರು 70 ಜನರನ್ನು ವಿಚಾರಣೆ ನಡೆಸಿದ್ದು, ಶೀಘ್ರವೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಮುಖ್ಯಮಂತ್ರಿಗಳು ಹೇಳಿದ್ದರು.
ಈ ಸುದ್ದಿ ಓದಿದ್ದೀರಾ? ತಮಿಳುನಾಡು | ದಲಿತರ ನೀರಿನ ಟ್ಯಾಂಕ್ಗೆ ಮಲ ಸುರಿದ ಪ್ರಕರಣ: ಡಿಎಂಕೆ ಸರ್ಕಾರದ ವಿರುದ್ಧ ಪಾ. ರಂಜಿತ್ ಆಕ್ರೋಶ
ಆದರೆ, ಪೊಲೀಸ್ ಅಧಿಕಾರಿಗಳು ತನಿಖೆ ನೆಪದಲ್ಲಿ ಸಾಕಷ್ಟು ಕಿರುಕುಳ ನೀಡುತ್ತಿದ್ದಾರೆ ಎಂದು ಸಂತ್ರಸ್ತರು ಆರೋಪಿಸಿದ್ದಾರೆ.
ನೀರಿನ ಟ್ಯಾಂಕಿಗೆ ಮಲ ಸುರಿದ ಘಟನೆಗೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ವೆಲ್ಲನೂರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.