ಅತ್ಯಾಚಾರ-ಕೊಲೆ ಶಂಕೆ | ನ್ಯಾಯಕ್ಕಾಗಿ ಒತ್ತಾಯಿಸಿ ಯುವತಿಯ ಶವವನ್ನು 44 ದಿನಗಳ ಕಾಲ ಉಪ್ಪಿನಿಂದ ಸಂರಕ್ಷಿಸಿದ್ದ ತಂದೆ

  • ಮಗಳ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಆರೋಪಿಸಿದ ತಂದೆ
  • ಎರಡನೇ ಬಾರಿ ಶವಪರೀಕ್ಷೆ ನಡೆಸುವಂತೆ ಒತ್ತಾಯಿಸಿ ಶವ ಕೊಳೆಯದಂತೆ ಕಾಪಿಟ್ಟ ಕುಟುಂಬ

ಅತ್ಯಾಚಾರ ನಡೆಸಿ ಕೊಲೆ ಮಾಡಿರುವ ಶಂಕೆಯಿಂದ ಬುಡಕಟ್ಟು ಮಹಿಳೆಯ ಶವವನ್ನು ಆಕೆಯ ತಂದೆ ಸುಮಾರು 44 ದಿನಗಳ ಕಾಲ ಉಪ್ಪಿನಿಂದ ಮುಚ್ಚಿ ಸಂರಕ್ಷಿಸಿಟ್ಟು ಎರಡನೇ ಬಾರಿ ಮಗಳ ಮರಣೋತ್ತರ ಪರೀಕ್ಷೆ ನಡೆಸಬೇಕೆಂದು ಒತ್ತಾಯಿಸಿರುವ ಘಟನೆ ಬೆಳಕಿಗೆ ಬಂದಿದೆ.

ಮಹಾರಾಷ್ಟ್ರದ ನಂದೂರ್‌ಬಾರ್‌ನಲ್ಲಿ ಮಹಿಳೆಯ ಶವವನ್ನು ಉಪ್ಪಿನ ಹಳ್ಳದಲ್ಲಿ ಮುಚ್ಚಿಡಲಾಗಿತ್ತು ಎನ್ನಲಾಗಿದೆ. ಪ್ರಸ್ತುತ 21 ವರ್ಷದ ಮಹಿಳೆಯ ಶವವನ್ನು ಮುಂಬೈನ ಸರ್ಕಾರಿ ಜೆಜೆ ಆಸ್ಪತ್ರೆಗೆ ಗುರುವಾರ ತಂದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

"ಪ್ರಸ್ತುತ ತಜ್ಞ ವೈದ್ಯರ ಸಮಿತಿಯನ್ನು ರಚಿಸಲಾಗುತ್ತಿದ್ದು, ಶುಕ್ರವಾರ ಮರಣೋತ್ತರ ಪರೀಕ್ಷೆಯನ್ನು ನಡೆಸುವ ಸಾಧ್ಯತೆಯಿದೆ. ಈ ಪರೀಕ್ಷೆಯನ್ನು ಸಂಪೂರ್ಣವಾಗಿ ವೀಡಿಯೋ ಮಾಡಲಾಗುವುದು" ಎಂದು ಅವರು ತಿಳಿಸಿದರು.

ಆಗಸ್ಟ್ 1ರಂದು ವಾವಿ ಗ್ರಾಮದಲ್ಲಿ ಮಹಿಳೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಮಹಿಳೆಯ ತಂದೆ ತನ್ನ ಮಗಳ ಮೇಲೆ ನಾಲ್ವರು ಅತ್ಯಾಚಾರವೆಸಗಿದ್ದಾರೆ ಎಂದು ತಿಳಿಸಿರುವುದಾಗಿ ಪೊಲೀಸ್ ಅಧಿಕಾರಿಗಳು ವಿವರಿಸಿದರು.

ಈ ಸುದ್ದಿ ಓದಿದ್ದೀರಾ?: ಸದನ ಸ್ವಾರಸ್ಯ | ಜಾಹೀರಾತು ಕೊಟ್ರೆ ನಿಮ್ಮ ಫೋಟೋ ದೊಡ್ಡದಾಗಿ ಹಾಕಿ, ಮಾಹಿತಿ ಚಿಕ್ಕದಾಗಿ ಹಾಕ್ತಾರೆ: ಸ್ಪೀಕರ್‌ ಕಾಗೇರಿ

ಆಕೆಯ ಸಾವಿನ ನಂತರ, ಜಿಲ್ಲಾ  ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು. ಶವಪರೀಕ್ಷೆಯ ವರದಿಯು ಲೈಂಗಿಕ ದೌರ್ಜನ್ಯ ನಡೆದಿದೆ ಎಂಬುದನ್ನು ತಳ್ಳಿಹಾಕಿತ್ತು. ಬದಲಿಗೆ ಇದೊಂದು ಆತ್ಮಹತ್ಯೆ ಪ್ರಕರಣವನ್ನು ಎಂದು ವರದಿ ನೀಡಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿತ್ತು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಆದರೆ, ʼಪೊಲೀಸರು ಪ್ರಕರಣವನ್ನು ಸರಿಯಾಗಿ ತನಿಖೆ ಮಾಡಿಲ್ಲʼ ಎಂದು ಮೃತ ಮಹಿಳೆಯ ತಂದೆ ಸೇರಿದಂತೆ ಕುಟುಂಬದ ಸದಸ್ಯರು ಆರೋಪಿಸಿದ್ದರು. ಆದ್ದರಿಂದಲೇ, ಅವರು ಶವವನ್ನು ಸುಡುವ ಬದಲು ಸಂರಕ್ಷಿಸಲು ನಿರ್ಧರಿಸಿದ್ದರು ಎಂದು ಅವರು ಹೇಳಿದರು.

ಮಹಿಳೆಯ ಸಾವಿನ ಬಗ್ಗೆ ಸತ್ಯವನ್ನು ಹೊರತರುವ ಸಲುವಾಗಿ ಎರಡನೇ ಮರಣೋತ್ತರ ಪರೀಕ್ಷೆಯನ್ನು ಬಯಸಿದ ಕುಟುಂಬವು ಆಕೆಯ ದೇಹವನ್ನು ಅವರ ಗ್ರಾಮದಲ್ಲಿ ಉಪ್ಪಿನಿಂದ ತುಂಬಿದ ಗುಂಡಿಯಲ್ಲಿ ಹೂತು ಹಾಕಿದ್ದರು ಎಂದು ಅಧಿಕಾರಿ ವಿವರಿಸಿದರು.

“ಶವ ಕೊಳೆಯುವ ಪ್ರಕ್ರಿಯೆಯನ್ನು ತಡೆಯಲು ಉಪ್ಪನ್ನು ಬಳಸಲಾಗುತ್ತದೆ. ದೇಹವನ್ನು ವಾರಗಟ್ಟಲೆ ಉಪ್ಪಿನ ಹಳ್ಳದಲ್ಲಿ ಇರಿಸಿದ್ದರಿಂದ, ಮುಂಬೈನಲ್ಲಿ ಮತ್ತೊಮ್ಮೆ ಮರಣೋತ್ತರ ಪರೀಕ್ಷೆ ನಡೆಸಲು ಅಧಿಕಾರಿಗಳು ಒಪ್ಪಿಕೊಂಡರು. ಅದರಂತೆ ಗುರುವಾರ ಮಧ್ಯಾಹ್ನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜೆಜೆ ಆಸ್ಪತ್ರೆಗೆ ತರಲಾಗಿತ್ತುʼ' ಎಂದು ಅವರು ತಿಳಿಸಿದರು.

ನಿಮಗೆ ಏನು ಅನ್ನಿಸ್ತು?
3 ವೋಟ್