ತಮಿಳುನಾಡು | ಸ್ವಾತಂತ್ರ್ಯಾನಂತರ ಮೊದಲ ಬಾರಿಗೆ ಮೇ ತಿಂಗಳಲ್ಲೇ ಹರಿದ ಮೆಟ್ಟೂರು ಅಣೆಕಟ್ಟು ನೀರು

  • 1942- 43ರಿಂದ ನಾಲ್ಕು ವರ್ಷಗಳವರೆಗೆ ಮೇ ತಿಂಗಳಲ್ಲಿ ತೆರೆದಿದ್ದ ಅಣೆಕಟ್ಟು
  • ಈವರೆಗೆ ಮೆಟ್ಟೂರು ಅಣೆಕಟ್ಟಿನ ಸಂಗ್ರಹ ಮಟ್ಟವು 115.35 ಅಡಿಗಳಷ್ಟಿದೆ

ಸಾಂಪ್ರದಾಯಿಕವಾಗಿ ನೀರು ಬಿಡುವ ಮೂರು ವಾರದ ಮೊದಲೇ ಮೆಟ್ಟೂರು ಆಣೆಕಟ್ಟನ್ನು ತೆರೆಯುವಂತೆ ತಮಿಳುನಾಡಿನ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಆದೇಶಿಸಿದ್ದಾರೆ.

ಸ್ವಾತಂತ್ರ್ಯಾನಂತರ ಮೊದಲ ಬಾರಿಗೆ ಮೆಟ್ಟೂರು ಅಣೆಕಟ್ಟನ್ನು ನೀರಾವರಿಗಾಗಿ ಮೇ ತಿಂಗಳಲ್ಲಿ ತೆರೆಯಲಾಗುತ್ತಿದೆ. ಸಮಾಧಾನಕರ ಶೇಖರಣಾ ಮಟ್ಟ ಮತ್ತು ಅಣೆಕಟ್ಟಿಗೆ ನಿರಂತರ ಒಳಹರಿವು ಇದಕ್ಕೆ ಕಾರಣ. ಈವರೆಗೆ ಮೆಟ್ಟೂರು ಅಣೆಕಟ್ಟಿನ ಸಂಗ್ರಹಣೆ ಮಟ್ಟವು 115.35 ಅಡಿಗಳಷ್ಟಿದೆ ಮತ್ತು ಹೆಚ್ಚಿನ ಒಳಹರಿವು ಪರಿಗಣಿಸಿ, ಅಣೆಕಟ್ಟು ಶೀಘ್ರದಲ್ಲೇ ಪೂರ್ಣ ಸಾಮರ್ಥ್ಯ ತಲುಪಲಿದೆ.  

ಸ್ವಾತಂತ್ರ್ಯದ ಮೊದಲಿನ ಅಧಿಕೃತ ಮೂಲಗಳ ಪ್ರಕಾರ, ಅಣೆಕಟ್ಟನ್ನು 1942-43ರಿಂದ ನಾಲ್ಕು ವರ್ಷಗಳ ಕಾಲ ಮೇ ತಿಂಗಳಲ್ಲಿ ತೆರೆಯಲಾಗಿತ್ತು. ಸ್ವಾತಂತ್ರ್ಯದ ನಂತರ ಮೂರನೇ ಬಾರಿಗೆ ಮೆಟ್ಟೂರು ಅಣೆಕಟ್ಟನ್ನು ಸಾಂಪ್ರದಾಯಿಕ ದಿನಾಂಕ್ಕೆ (ಜೂನ್ 12) ಮೊದಲೇ ತೆರೆಯಲಾಗುತ್ತದೆ. ಹಿಂದಿನ ಎಐಎಡಿಎಂಕೆ ಮುಖ್ಯಮಂತ್ರಿ ಜೆ ಜಯಲಲಿತಾ ಅವರು ಜೂನ್ 6, 2011 ರಂದು ಮುಂಚಿತವಾಗಿ ಅಣೆಕಟ್ಟು ತೆರೆಯಲು ಆದೇಶ ನೀಡಿದ್ದನ್ನು ಸ್ಮರಿಸಬಹುದಾಗಿದೆ.

ಮೆಟ್ಟೂರು ಅಣೆಕಟ್ಟಿನ ನೀರು ಬಿಡುವುದರಿಂದ ಕಾವೇರಿ ನದಿ ತೀರದ ಜಿಲ್ಲೆಗಳಾದ ತಿರುಚ್ಚಿ, ತಂಜಾವೂರು, ತಿರುವರೂರು, ನಾಗಪಟ್ಟಣಂ, ಮೈಲಾಡುತುರೈ, ಕರೂರ್, ಅರಿಯಲೂರು, ಪೆರಂಬಲೂರು, ಪುದುಕೊಟ್ಟೈ ಹಾಗೂ ಕಡಲೂರು ಜಿಲ್ಲೆಗಳ ನಾಲ್ಕು ಲಕ್ಷ ಎಕರೆಗೂ ಹೆಚ್ಚು ಪ್ರದೇಶ ನೀರಾವರಿಗೆ ಒಳಪಡಲಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ. 

ಈ ಸುದ್ದಿಯನ್ನು ಓದಿದ್ದೀರಾ ? ತಮಿಳುನಾಡು | ಆರು ವರ್ಷದ ನಂತರ ಕಾಂಗ್ರೆಸ್‌ಗೆ ರಾಜ್ಯಸಭಾ ಸ್ಥಾನ 

ಪ್ರಸಕ್ತ ವರ್ಷದಲ್ಲಿ ‘ಡೆಲ್ಟಾ’ (ತ್ರಿಕೋನದ ಆಕಾರದಲ್ಲಿರುವ ತಗ್ಗು, ಸಮತಟ್ಟಾದ ಭೂಮಿಯ ಪ್ರದೇಶ, ನದಿಯು ಸಮುದ್ರವನ್ನು ಪ್ರವೇಶಿಸುವ ಮೊದಲು ವಿಭಜನೆಯಾಗುತ್ತದೆ ಮತ್ತು ಹಲವಾರು ಶಾಖೆಗಳಾಗಿ ಹರಡುತ್ತದೆ.) ಜಿಲ್ಲೆಗಳಲ್ಲಿ ಹೂಳು ತೆಗೆಯುವ ಕಾಮಗಾರಿಯನ್ನು ಏಪ್ರಿಲ್ 23ರಿಂದ ಮುಂಗಡವಾಗಿ ₹80 ಕೋಟಿ ವೆಚ್ಚದಲ್ಲಿ ಆರಂಭಿಸಲಾಗಿದೆ. ಕಾಲುವೆಗಳು, ಜಲಮಾರ್ಗಗಳಲ್ಲಿ ಯುದ್ಧದ ಆಧಾರದಲ್ಲಿ ಹೂಳು ತೆಗೆಯಲಾಗುತ್ತಿದ್ದು, ಮೇ 31ರೊಳಗೆ ಈ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಈ ಮುನ್ನೆಚ್ಚರಿಕೆ ಕ್ರಮಗಳಿಂದ ಮೆಟ್ಟೂರು ಅಣೆಕಟ್ಟಿನಿಂದ ಬಿಡುಗಡೆಯಾದ ನೀರು ಎಲ್ಲರಿಗೂ ತಲುಪಲಿದೆ. 

ಮೆಟ್ಟೂರು ಅಣೆಕಟ್ಟನ್ನು ಮುಂಚಿತವಾಗಿ ತೆರೆಯುವುದರಿಂದ ರೈತರು ಹಿಂದಿನ ವರ್ಷಗಳಿಗಿಂತ ಅಧಿಕ ಪ್ರದೇಶದಲ್ಲಿ ಕುರುವಾಯಿ ಬೆಳೆ ತೆಗೆದುಕೊಳ್ಳಲು ಸಹಾಯವಾಗಲಿದೆ ಮತ್ತು ಅವರು ಸಾಂಬಾ ಬೆಳೆಗೆ ಬೇಗನೇ ಕೆಲಸ ಪ್ರಾರಂಭಿಸಬಹುದು. ಮೊದಲೇ ನೀರು ಬಿಡುಗಡೆ ಮಾಡುವುದರಿಂದ ಮಳೆಗಾಲದಲ್ಲಿ ಸಾಂಬಾ ಬೆಳೆಗಳು ಪ್ರವಾಹದಲ್ಲಿ ಮುಳುಗುವುದರಿಂದ ತಡೆಯಬಹುದಾಗಿದೆ. ದೀರ್ಘಕಾಲದವರೆಗೆ ಭೂಮಿಯಲ್ಲಿ ನೀರು ಹರಿಯುವುದರಿಂದ ಡೆಲ್ಟಾ ಪ್ರದೇಶಗಳಲ್ಲಿ ಅಂತರ್ಜಲ ಮಟ್ಟ ಕೂಡ ಏರಲಿದೆ.

ರೈತರಿಗೆ ಎಲ್ಲಾ ಕೃಷಿ ಒಳಹರಿವು ಮತ್ತು ಕೃಷಿ ಸಾಲಗಳು ಲಭ್ಯವಾಗುವಂತೆ ಮುಖ್ಯಮಂತ್ರಿ ಸ್ಟಾಲಿನ್‌ ಸರ್ಕಾರಿ ಇಲಾಖೆಗಳು ಮತ್ತು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ. ಕುರುವಾಯಿ ಬೆಳೆ ವಿಸ್ತೀರ್ಣ ಹೆಚ್ಚಿಸಲು ರೈತರು ನೀರನ್ನು ನ್ಯಾಯಯುತವಾಗಿ ಬಳಸಿಕೊಂಡಲ್ಲಿ ಭತ್ತ ಉತ್ಪಾದನೆಯಲ್ಲಿ ಹೊಸ ದಾಖಲೆ ಬರೆಯಬಹುದು ಎಂದು ಮುಖ್ಯಮಂತ್ರಿ ಅಭಿಪ್ರಾಯಪಟ್ಟಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್