ಮಂಗಳೂರು | ಪ್ರಯಾಣಿಕರಿಬ್ಬರ ಚಾಟ್‌ ತಂದ ಸಂಕಷ್ಟ; ಆರು ಗಂಟೆಗಳ ಕಾಲ ತಡವಾದ ವಿಮಾನ ಹಾರಾಟ

mng flight
  • ವಿಮಾನ ನಿಲ್ದಾಣದ ಭದ್ರತೆ ವಿಚಾರವಾಗಿ ಸಂದೇಶ
  • ಪ್ರಯಾಣಿಕರ ವಿರುದ್ಧ ದೂರು ದಾಖಲಿಸಿದ ವ್ಯವಸ್ಥಾಪಕ

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರ ಮೊಬೈಲ್‌ಗೆ ಬಂದ ಸಂದೇಶದಿಂದ ಗೊಂದಲ ಉಂಟಾಗಿದ್ದು, ಅದರಿಂದ ಮಂಗಳೂರು-ಮುಂಬೈ ವಿಮಾನ ಹಾರಾಟವು ಆರು ಗಂಟೆಗಳ ಕಾಲ ತಡವಾಗಿದೆ. 

ವಿಮಾನ ನಿಲ್ದಾಣದ ಭದ್ರತೆ ವಿಚಾರವಾಗಿ ಪ್ರಯಾಣಿಕನೊಬ್ಬ ಮತ್ತೊಬ್ಬರ ಜತೆ ಚಾಟ್ ಮಾಡುತ್ತಿದ್ದಾಗ ಸಹ ಪ್ರಯಾಣಿಕ ಗಮನಿಸಿ, ಅಲ್ಲಿನ ಸಿಬ್ಬಂದಿ ಗಮನಕ್ಕೆ ತಂದಿದ್ದಾರೆ. ಕೂಡಲೇ ಈ ವಿಚಾರವನ್ನು ವಿಮಾನ ನಿಲ್ದಾಣದ ವ್ಯವಸ್ಥಾಪಕರ ಗಮನಕ್ಕೆ ತಂದು, ಎಲ್ಲ ಪ್ರಯಾಣಿಕರನ್ನು ಕೆಳಗಿಳಿಸಿ ಪರಿಶೀಲಿಸಲಾಗಿದೆ.  

ಈ ಸಂಬಂಧ ಇಂಡಿಗೊ ವಿಮಾನಯಾನ ಸಂಸ್ಥೆಯ ವ್ಯವಸ್ಥಾಪಕ ಕೆ ಪಿ ಬೋಪಣ್ಣ ಅವರು ಭಾನುವಾರ ಬಜ್ಪೆ ಠಾಣೆಗೆ ದೂರು ನೀಡಿದ್ದು, ಪೊಲೀಸರು ಐಪಿಸಿ ಸೆಕ್ಷನ್‌ಗಳಾದ 505 (1 ಸಿ) ಮತ್ತು  505 (1 ಬಿ) ಅಡಿ ಎಫ್ಐಆರ್ ದಾಖಲಿಸಿದ್ದಾರೆ.

ಬೋಪಣ್ಣ ಅವರು ದೂರಿನಲ್ಲಿ, “ನಮ್ಮ ವಿಮಾನಯಾನ ಸಂಸ್ಥೆಯ ಸಿಬ್ಬಂದಿ ಸಿನಾನ್‌ ಅವರು ಕರೆ ಮಾಡಿ, ಭಾನುವಾರ ಬೆಳಗ್ಗೆ 11ಕ್ಕೆ ಮುಂಬೈಗೆ ಹೋಗುವ ವಿಮಾನದಲ್ಲಿ ಅನುಮಾನಾಸ್ಪದ ವ್ಯಕ್ತಿ ಪ್ರಯಾಣಿಸುತ್ತಿರುವ ಬಗ್ಗೆ ಮಾಹಿತಿ ಬಂದಿದೆ” ಎಂದು ತಿಳಿಸಿದರು. ತಕ್ಷಣವೇ ನಾನು ಸ್ಥಳಕ್ಕೆ ಧಾವಿಸಿ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್‌) ಸಿಬ್ಬಂದಿ ಮತ್ತು ವಿಮಾನದಲ್ಲಿ ಅನುಮಾನಾಸ್ಪದ ವ್ಯಕ್ತಿ ಇರುವುದಾಗಿ ಮಾಹಿತಿ ನೀಡಿದ್ದ ಪ್ರಯಾಣಿಕ ಸಿಮ್ರಾನ್‌ ಶೆಟ್ಟಿ ಅವರನ್ನು ವಿಚಾರಿಸಿದೆ. ಸಿಮ್ರಾನ್‌ ಶೆಟ್ಟಿ ಅವರ ಎದುರಿನ ಸೀಟಿನಲ್ಲಿ ಕುಳಿತು ಪ್ರಯಾಣಿಸುತ್ತಿದ್ದ ದಿಪಿಯಾನ್‌ ಮಾಜಿ ಎಂಬುವರ ಮೊಬೈಲ್‌ಗೆ ಸಿಮ್ರಾನ್‌ ಟಾಮ್‌ ಎಂಬುವರು ವಾಟ್ಸಾಪ್‌ನಲ್ಲಿ ವಿಮಾನದ ಭದ್ರತೆ ಕುರಿತಾಗಿ ಸಂದೇಶ ರವಾನಿಸಿದ್ದ ವಿಚಾರ ತಿಳಿಯಿತು" ಎಂದು ಬೋಪಣ್ಣ ಹೇಳಿದ್ದಾರೆ.  

ಈ ಸುದ್ದಿ ಓದಿದ್ದೀರಾ?: ಪೊಲೀಸ್ ಕಣ್ಗಾವಲಿನೊಂದಿಗೆ ಚಾಮರಾಜಪೇಟೆ ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆ

ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ದಿಪಿಯಾನ್‌ ಹಾಗೂ ಅವರಿಗೆ ಮಾಹಿತಿ ಕಳುಹಿಸಿದ ಸಿಮ್ರಾನ್‌ ಟಾಮ್‌ ಅವರನ್ನು ವಿಚಾರಣೆಗೆ ಒಳಪಡಿಸುವಂತೆ ಬೋಪಣ್ಣ ದೂರಿನಲ್ಲಿ ಒತ್ತಾಯಿಸಿದ್ದಾರೆ. 

ಇಷ್ಟೆಲ್ಲ ಗೊಂದಲಗಳ ಮಧ್ಯೆ, ಭಾನುವಾರ ಬೆಳಗ್ಗೆ 11ಕ್ಕೆ ಮುಂಬೈಗೆ ಹೊರಡಬೇಕಿದ್ದ ವಿಮಾನವು ಸಂಜೆ 5ಕ್ಕೆ ಹೊರಟಿತ್ತು. ವಿಮಾನದಲ್ಲಿ 186 ಪ್ರಯಾಣಿಕರಿದ್ದರು. ಪ್ರಯಾಣವು 6 ಗಂಟೆ ವಿಳಂಬವಾಗಿದ್ದರಿಂದ ಪ್ರಯಾಣಿಕರು ಸಮಸ್ಯೆ ಎದುರಿಸಿದರು.        

ನಿಮಗೆ ಏನು ಅನ್ನಿಸ್ತು?
0 ವೋಟ್