ಸುದ್ದಿ ವಿವರ | ಆಹಾರ ಬಿಕ್ಕಟ್ಟು, ಹಣದುಬ್ಬರ ಎದುರಿಸಲು ಆಹಾರ ಉತ್ಪಾದನೆ ಹೆಚ್ಚಿಸುವ ಸವಾಲು

ದೇಶದಲ್ಲಿ ಆಹಾರ ಉತ್ಪಾದನೆ ದೊಡ್ಡ ಸವಾಲಾಗಿರುವಾಗ ರಫ್ತು ನಿಷೇಧದಂತಹ ತಾತ್ಕಾಲಿಕ ನಿರ್ಧಾರಗಳನ್ನು ಸರ್ಕಾರ ಕೈಗೊಂಡಿದೆ. ಆದರೆ ಭಾರತದ ಸರ್ಕಾರಗಳು ಆಹಾರ ಉತ್ಪಾದನೆ ಏರಿಸಲು ಯಾವುದೇ ಕಾರ್ಯೋದ್ದೇಶಗಳನ್ನು ಹೊಂದಿಲ್ಲ ಎಂದು ಐಎಫ್‌ಪಿಆರ್‌ಐ ವರದಿ ಹೇಳಿದೆ.
Food Crisis

ಭಾರತ ಸರ್ಕಾರ ಗೋಧಿ ರಫ್ತು ನಿಷೇಧಿಸಿದಾಗ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) ಮುಖ್ಯಸ್ಥರು, “ಭಾರತ ತನ್ನ ನಿರ್ಧಾರ ಮರುಪರಿಶೀಲಿಸಬೇಕು ಎಂದು ಬೇಡಿಕೊಳ್ಳುತ್ತೇವೆ” ಎಂದು ಮನವಿ ಮಾಡಿದ್ದರು.

ಭಾರತದಲ್ಲಿ ಆಹಾರ ಭದ್ರತೆ ಖಾತರಿಪಡಿಸಲು ಗೋಧಿ ರಫ್ತು ನಿಷೇಧಿಸುತ್ತಿರುವುದಾಗಿ ಸರ್ಕಾರ ಹೇಳಿದೆ. ಅದರ ಬೆನ್ನಿಗೇ ಸಕ್ಕರೆ ರಫ್ತು ಮೇಲೂ ನಿಯಂತ್ರಣ ಹೇರಿದೆ. ಇದೀಗ ಅಕ್ಕಿ ಮತ್ತು ಹತ್ತಿಯ ರಫ್ತಿನ ಮೇಲೂ ನಿಷೇಧ ಹೇರುತ್ತಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಹಾರ ಬಿಕ್ಕಟ್ಟು ತೀವ್ರಗೊಂಡಿರುವಾಗ ಭಾರತ ಸೇರಿದಂತೆ ಹಲವು ದೇಶಗಳು ಹೀಗೆ ರಕ್ಷಣಾತ್ಮಕ ಕ್ರಮಗಳನ್ನು ಕೈಗೊಳ್ಳುತ್ತಿರುವುದು ಭೀಕರ ಪರಿಣಾಮ ಬೀರಲಿದೆ ಎಂದು ಐಎಂಎಫ್‌ ಎಚ್ಚರಿಸಿದೆ.

ದಾವೋಸ್‌ನ ವಿಶ್ವ ಆರ್ಥಿಕ ವೇದಿಕೆಯಲ್ಲಿ ಅಂತಾರಾಷ್ಟ್ರೀಯ ಹಣಕಾಸು ನಿಧಿ ಅಧ್ಯಕ್ಷರಾದ ಕ್ರಿಸ್ಟಾಲಿನ ಜಿಯೋರ್ಜಿವಾ, “ಭಾರತ ತನ್ನ 135 ಕೋಟಿ ಮಂದಿಗೆ ಆಹಾರ ಒದಗಿಸುವ ಒತ್ತಡದಲ್ಲಿದೆ, ಹವಾಮಾನ ವೈಪರೀತ್ಯದಿಂದಾಗಿ ಅಲ್ಲಿ ಕೃಷಿ ಉತ್ಪಾದನೆ ಕಡಿಮೆಯಾಗಿದೆ ಎನ್ನುವುದು ಅರ್ಥವಾಗುತ್ತದೆ. ಆದರೆ ಭಾರತ ಗೋಧಿ ರಫ್ತು ನಿಷೇಧಿಸಿದರೆ ಇತರ ದೇಶಗಳೂ ಅಂತಹ ಕ್ರಮ ಕೈಗೊಳ್ಳಲು ಪ್ರಚೋದಿಸಿದಂತಾಗುತ್ತದೆ. ಅದರಿಂದ ಜಾಗತಿಕ ಸಮುದಾಯ ಒಟ್ಟಾಗಿ ಬಿಕ್ಕಟ್ಟು ಎದುರಿಸುವುದು ಸಾಧ್ಯವಾಗದು” ಎಂದು ಹೇಳಿದ್ದಾರೆ.

ಹಣದುಬ್ಬರದ ನಿಯಂತ್ರಣಕ್ಕೆ ನಿಷೇಧದ ನಿರ್ಣಯ

ಮೇ 5ರಂದು ಕೇಂದ್ರ ಸರ್ಕಾರ ಹಠಾತ್ ಆಗಿ ಪಂಜಾಬ್‌ನಿಂದ ಗೋಧಿ ದಾಸ್ತಾನು ಖರೀದಿ ಸ್ಥಗಿತಗೊಳಿಸಿತು. ಸರ್ಕಾರ ಒಟ್ಟು 4.40 ಕೋಟಿ ಟನ್‌ ಗೋಧಿಯಲ್ಲಿ ಕೇವಲ ಶೇ. 56ರಷ್ಟನ್ನು ಮಾತ್ರವೇ ಸಂಗ್ರಹಿಸಿತ್ತು. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ಸಾಂಕ್ರಾಮಿಕ ಪರಿಹಾರ ಕಾರ್ಯಕ್ರಮಕ್ಕೆ ಗೋಧಿ ದಾಸ್ತಾನು ಕೊರತೆ ಬಂದಾಗ ಸರ್ಕಾರ 55 ಲಕ್ಷ ಟನ್‌ಗಳಷ್ಟು ಅಕ್ಕಿಯನ್ನು ನೀಡುವ ಯೋಜನೆ ಹಾಕಿಕೊಂಡಿತು. 

ಜಾಗತಿಕ ಹಳ್ಳಿಯಲ್ಲಿ ನಿಷೇಧದ ಬಿಸಿ

ಯುದ್ಧದ ನಂತರ ರಷ್ಯಾ ಮತ್ತು ಉಕ್ರೇನ್‌ನಿಂದ ಆಹಾರ, ಇಂಧನ ಮತ್ತು ಗೊಬ್ಬರಗಳನ್ನು ಪಡೆಯುತ್ತಿದ್ದ ದೇಶಗಳ ಒಟ್ಟು ವೆಚ್ಚದಲ್ಲಿ ಏರಿಕೆಯಾಗಿ ಉತ್ಪಾದನಾ ವೆಚ್ಚವೂ ಹೆಚ್ಚಾಗಿದೆ. ಜಾಗತಿಕ ಹಳ್ಳಿಯಂತಿರುವ ವಿಶ್ವದಲ್ಲಿ ಇತ್ತೀಚೆಗಿನವರೆಗೂ ಲಾಭಕ್ಕೆ ಮಾರುತ್ತಿದ್ದ ಉತ್ಪನ್ನಗಳನ್ನು ದೇಶಗಳು ದಾಸ್ತಾನು ಮಾಡಿಕೊಳ್ಳಲಾರಂಭಿಸಿದವು. 

ರಷ್ಯಾ ಮತ್ತು ಉಕ್ರೇನ್ ಯುದ್ಧ ಆರಂಭವಾದ ಫೆಬ್ರವರಿ 24ರಿಂದ ರಫ್ತು ನಿಷೇಧ ಹೇರುತ್ತಿರುವ ದೇಶಗಳ ಸಂಖ್ಯೆ ಮೂರರಿಂದ 17ಕ್ಕೇರಿದೆ. ಅದರಲ್ಲಿ 16 ದೇಶಗಳ ರಫ್ತು ನಿಷೇಧ ಮತ್ತು ಏಳು ದೇಶಗಳು ರಫ್ತಿಗೆ ಪರವಾನಗಿ ಪಡೆಯುವ ನಿರ್ಧಾರಗಳನ್ನು ಹೇರಿವೆ ಎಂದು ಅಂತಾರಾಷ್ಟ್ರೀಯ ಆಹಾರ ನೀತಿ ಸಂಶೋಧನಾ ಸಂಸ್ಥೆಯ (ಐಎಫ್‌ಪಿಆರ್‌ಐ) ರಫ್ತು ನಿಷೇಧದ ಟ್ರ್ಯಾಕರ್ ವರದಿ ಮಾಡಿದೆ. 

ರಷ್ಯಾ ದೇಶವು ಗೊಬ್ಬರ, ಸಕ್ಕರೆ ಮತ್ತು ಧಾನ್ಯಗಳ ಮಾರಾಟ ನಿಷೇಧಿಸಿತು. ಇಂಡೋನೇಷ್ಯಾ ತಾಳೆ ಎಣ್ಣೆ ರಫ್ತು ನಿಷೇಧಿಸಿತು. ಟರ್ಕಿ ಬೆಣ್ಣೆ, ದನ, ಕುರಿ, ಆಡು ಮಾಂಸಗಳು, ಜೋಳ ಮತ್ತು ತರಕಾರಿ ಎಣ್ಣೆಗಳ ರಫ್ತಿಗೆ ನಿಷೇಧ ಹೇರಿತು. ಭಾರತವೂ ಜೊತೆಗೂಡಿ ಮೇ 14ರಂದು ಈಗಾಗಲೇ ಒಪ್ಪಂದವಾಗಿರುವ 12 ದೇಶಗಳ ಹೊರತಾಗಿ ಇತರ ದೇಶಗಳಿಗೆ ಗೋಧಿ ರಫ್ತು ನಿಷೇಧಿಸಿತು. 

ಪ್ರಸ್ತುತ ಶೇ. 36ರಷ್ಟು ಗೋಧಿ, ಶೇ. 55ರಷ್ಟು ತಾಳೆ ಎಣ್ಣೆ, ಶೇ. 17.2ರಷ್ಟು ಜೋಳ, ಶೇ. 78.2ರಷ್ಟು ಸೂರ್ಯ ಕಾಂತಿ ಎಣ್ಣೆ ಮತ್ತು ಶೇ. 5.8ರಷ್ಟು ಸೋಯಾಬಿನ್ ಎಣ್ಣೆ ಮೇಲೆ ಜಾಗತಿಕವಾಗಿ ರಫ್ತು ನಿಷೇಧವಿದೆ.

ನಿಷೇಧ ಬದಲಿಸುತ್ತಿದೆ ಕಂಪನಿಗಳ ಭವಿಷ್ಯ

ಅಮೆರಿಕದ ಷೇರುಪಟ್ಟಿಯಲ್ಲಿರುವ ಸರಕು ವ್ಯಾಪಾರಿಗಳಿಂದ ಆರಂಭವಾಗಿ ಥಾಯ್ ಕೋಳಿ ಉತ್ಪನ್ನಗಳನ್ನು ಉತ್ಪಾದಿಸುವವರು, ಷೇರು ವಿಶ್ಲೇಷಕರು ಜಾಗತಿಕವಾಗಿ ದೊಡ್ಡ ಸಮಸ್ಯೆಯಾಗಿರುವ ‘ಆಹಾರ ಭದ್ರತೆಗೆ ರಕ್ಷಣೆ’ ತಂದುಕೊಳ್ಳುವ ಪ್ರವೃತ್ತಿಯಿಂದ ಯಾವ ದೇಶ/ ಕಂಪನಿಗಳಲ್ಲಿ ಸುಧಾರಣೆಯಾಗಲಿದೆ ಅಥವಾ ಯಾರು ಬಿಕ್ಕಟ್ಟಿಗೆ ಬೀಳುತ್ತಾರೆ ಎನ್ನುವ ಮೇಲೆ ಗಮನ ಕೇಂದ್ರೀಕರಿಸಿವೆ.

ಭಾರತ ಸೇರಿದಂತೆ ಹಲವು ಏಷ್ಯಾದ ರಾಷ್ಟ್ರಗಳು ಇತ್ತೀಚೆಗಿನ ದಿನಗಳಲ್ಲಿ ಜಾಗತಿಕವಾಗಿ ಹೇರಿರುವ ರಫ್ತು ನಿಷೇಧಗಳ ಪರಿಣಾಮ ಊಹಿಸಿದ್ದಕ್ಕಿಂತಲೂ ಗಾಢವಾಗಿದೆ. ಭಾರತದ ಸ್ಥಳೀಯ ಸಕ್ಕರೆ ಉತ್ಪಾದಕರಾದ ಶ್ರೀ ರೇಣುಕಾ ಶುಗರ್ ಲಿಮಿಟೆಡ್‌ಗೆ ರಫ್ತು ನಿಷೇಧ ನಷ್ಟವನ್ನೇ ಉಂಟು ಮಾಡಲಿದೆ. ಬದಲಾಗಿ ಜಾಗತಿಕವಾಗಿ ರಫ್ತು ನಿಷೇಧವಿಲ್ಲದ ಕಾರಣ ಚೀನಾದ ಕೋಫ್ಕೋ ಶುಗರ್ ಹೋಲ್ಡಿಂಗ್ ಕೋ ಮತ್ತು ಬ್ರೆಜಿಲ್‌ನ ಜೆಬಿಎಸ್ ಎಸ್‌ಎ ಇದರ ಲಾಭ ಪಡೆಯಲಿದೆ ಎಂದು ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ.

ವರದಿಗಳ ಪ್ರಕಾರ, ಧಾನ್ಯ, ತಾಳೆ ಎಣ್ಣೆ ಮತ್ತು ಕೋಳಿ ಉತ್ಪನ್ನಗಳಲ್ಲಿ ಷೇರು ಹೂಡಿಕೆದಾರರು ತಮ್ಮ ನಿರ್ಧಾರಗಳನ್ನು ಬದಲಿಸುತ್ತಿದ್ದಾರೆ. ಸರಬರಾಜು ಶೈಲಿಯಲ್ಲಿ ಬದಲಾವಣೆಯಾದಂತೆ ತಮ್ಮ ಷೇರು ಹೂಡಿಕೆಗಳನ್ನು ಷೇರುದಾರರು ಬದಲಿಸುತ್ತಿರುವುದರಿಂದ ಕಂಪನಿಗಳ ಷೇರು ಭವಿಷ್ಯವೂ ಬದಲಾಗಲಿದೆ. ಸಿಂಗಾಪುರ ಮೂಲದ ವಿಲ್ಮರ್ ಇಂಟರ್‌ನ್ಯಾಷನಲ್ ಲಿಮಿಟೆಡ್ ಮತ್ತು ಹಾಂಗ್‌ ಕಾಂಗ್‌ನ ಡಬ್ಲ್ಯುಎಚ್‌ ಗ್ರೂಪ್ ಲಿಮಿಟೆಡ್ ಷೇರುಗಳ ಬೆಲೆ ಏರುತ್ತಿವೆ. ಆದರೆ ಜನಪ್ರಿಯ 'ಡೊನಟ್' ಸರಪಣಿಯಾಗಿರುವ ಕ್ರಿಸ್ಪಿ ಕ್ರೆಮ್ ಇಂಕ್‌ಗೆ ಗೋಧಿ ಬೆಲೆ ಏರಿಕೆಯಿಂದ ನಷ್ಟವಾಗುವ ಸಾಧ್ಯತೆಯಿದೆ. 

ದೇಶಗಳ ನಡುವಿನ ಆಹಾರ ಕೊಂಡಿಯಲ್ಲಿ ಬಿರುಕು

ಕಳೆದ 15 ವರ್ಷಗಳಲ್ಲಿ ಕಂಡುಬಂದಿರುವ ಮೂರನೇ (ಮೊದಲು 2007-08 ಮತ್ತು ಎರಡನೇ ಬಾರಿ 2010-11) ಆಹಾರ ಬಿಕ್ಕಟ್ಟು ಇದಾಗಿದೆ. ಈಗಿನ ಬಿಕ್ಕಟ್ಟು ದೈತ್ಯವಾಗಿ ಹರಡುವ ಭೀತಿಯನ್ನು ತಜ್ಞರು ವ್ಯಕ್ತಪಡಿಸಿದ್ದಾರೆ. ಎಲ್ಲಾ ಬಿಕ್ಕಟ್ಟಿನ ಸಂದರ್ಭದಲ್ಲೂ ಕೆಲವೇ ದೇಶಗಳು ಆಹಾರ ಉತ್ಪಾದನಾ ವ್ಯವಸ್ಥೆ ನಿಭಾಯಿಸುತ್ತಿರುವ ಬಗ್ಗೆ ಇತ್ತೀಚೆಗೆ ಹೆಚ್ಚು ಚರ್ಚೆಯಾಗುತ್ತಿದೆ.

ಕೆಲವೇ ದೇಶಗಳು ಆಹಾರದ ಬಹುಪಾಲನ್ನು ಜಗತ್ತಿಗೆ ನೀಡುತ್ತಿರುವುದರಿಂದ ಹೆಚ್ಚು ಆಹಾರ ಸರಬರಾಜರಾಗುವ ಲಾಭವೂ ಆಗಿದೆ. ಹಾಗೆಯೇ ಆಹಾರ ಬಿಕ್ಕಟ್ಟಿಗೂ ಕಾರಣವಾಗುತ್ತಿದೆ. ಮುಖ್ಯವಾಗಿ ಅಕ್ಕಿ, ಗೋಧಿ, ಜೋಳ ಮತ್ತು ಸೋಯಾ ಜಾಗತಿಕವಾಗಿ ಶೇ. 50ರಷ್ಟು ಬಳಸುವ ಆಹಾರವಾಗಿದೆ. ಕಳೆದ ಐದು ದಶಕಗಳಲ್ಲಿ ಚೀನಾ, ಭಾರತ, ರಷ್ಯಾ, ಬ್ರೆಜಿಲ್ ಮತ್ತು ಅಮೆರಿಕ ಈ ಉತ್ಪನ್ನಗಳ ಶೇ. 60ರಷ್ಟು ಉತ್ಪಾದನೆಯ ಮೇಲೆ ನಿಯಂತ್ರಣ ಹೊಂದಿವೆ ಎಂದು ‘ಡೌನ್‌ ಟು ಅರ್ತ್’ ವರದಿ ಹೇಳಿದೆ.

ಈ ದೇಶಗಳಲ್ಲೂ ಉತ್ಪಾದನೆ ಕೆಲವೇ ರಾಜ್ಯಗಳಿಗೆ ಸೀಮಿತವಾಗಿದೆ. ಉದಾಹರಣೆಗೆ ಭಾರತದಲ್ಲಿ ಗೋಧಿಯ ಬಹುತೇಕ ಉತ್ಪಾದನೆ ಉತ್ತರ ಭಾರತದ ಐದು ರಾಜ್ಯಗಳಿಗೆ ಸೀಮಿತವಾಗಿದೆ. 

ಭಾರತದಲ್ಲಿ ಹವಾಮಾನ ವೈಪರೀತ್ಯದ ಪರಿಣಾಮ

ಐಎಫ್‌ಪಿಆರ್‌ಐ ಇತ್ತೀಚೆಗೆ ಬಿಡುಗಡೆ ಮಾಡಿರುವ ಜಾಗತಿಕ ಆಹಾರ ನೀತಿ ವರದಿ 2022ರ ಪ್ರಕಾರ ಹವಾಮಾನ ವೈಪರೀತ್ಯ ಮತ್ತು ಆಹಾರ ವ್ಯವಸ್ಥೆಗಳು ಭಾರತದಲ್ಲಿ ಆಹಾರ ಲಭ್ಯತೆ, ಬಳಕೆ ಮತ್ತು ಉತ್ಪಾದನೆ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ಮುಖ್ಯವಾಗಿ ಸರ್ಕಾರ ಮತ್ತು ಇತರ ಮಟ್ಟಗಳಲ್ಲಿ ರೂಪಿಸಬಹುದಾದ ನೀತಿಗಳಿಗೆ ಈ ವರದಿಯಲ್ಲಿ ಮಾರ್ಗದರ್ಶಿ ಸೂತ್ರಗಳನ್ನು ನೀಡಲಾಗಿದೆ.

ವರದಿಯ ಪ್ರಕಾರ 2030ರಲ್ಲಿ ದೇಶದ ಆಹಾರ ಉತ್ಪಾದನೆ ಶೇ. 16ರಷ್ಟು ಕಡಿಮೆಯಾಗಲಿದೆ ಮತ್ತು ಹಸಿವೆಯಿಂದ ನರಳಲಿರುವ ಜನರ ಸಂಖ್ಯೆ ಶೇ. 23ರಷ್ಟು ಹೆಚ್ಚಾಗಲಿದೆ. ಭಾರತ ಮತ್ತು ದಕ್ಷಿಣ ಆಫ್ರಿಕಾದಂತಹ ದೇಶಗಳಲ್ಲಿ ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳ ಮೇಲೆ ಹವಾಮಾನ ವೈಪರೀತ್ಯದ ಪರಿಣಾಮ ತೀವ್ರವಾಗಲಿದೆ. 

ಈಗಾಗಲೇ ಸಮುದ್ರ ಮಟ್ಟದಲ್ಲಿ ಏರಿಕೆ, ಅಂತರ್ಜಲ ಕುಸಿತ, ಭೀಕರ ಹವಾಮಾನದಂತಹ ಸ್ಥಿತಿಗಳನ್ನು ಭಾರತ ನೋಡುತ್ತಿದೆ. ಮುಂದಿನ ವರ್ಷಗಳಲ್ಲಿ ಇವುಗಳ ಭೀಕರತೆ ಹೆಚ್ಚಾಗಲಿದೆ. ಭಾರತದಾದ್ಯಂತ ಸರಾಸರಿ ಉಷ್ಣತೆಯು 2100ರಲ್ಲಿ 2.4 ಡಿಗ್ರಿ ಸೆಲ್ಸಿಯಸ್‌ನಿಂದ 4.4 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಾಗಲಿದೆ. ಇದು ಆಹಾರ ವ್ಯವಸ್ಥೆಯಲ್ಲಿ ದೊಡ್ಡ ಪರಿಣಾಮ ಬೀರಲಿದೆ ಎಂದು ವರದಿ ಹೇಳಿದೆ.

ಈ ಸುದ್ದಿಯನ್ನು ಓದಿದ್ದೀರಾ? ಸುದ್ದಿ ವಿವರ | ಗೋಧಿ ರಫ್ತು ಮಾಡಲು ಹೊರಟ ಕೇಂದ್ರ ಸರ್ಕಾರ ತೆಪ್ಪಗಾಗಿದ್ದು ಏಕೆ?

ಹವಾಮಾನ ವೈಪರೀತ್ಯ ಎದುರಿಸುವ ಸವಾಲು

ದೇಶದೊಳಗೆ ಉನ್ನತ ಮತ್ತು ಸ್ಥಳೀಯ ಮಟ್ಟದಲ್ಲಿ ನೀತಿ ರೂಪಿಸಿ ಜಾರಿಯಾಗಬೇಕು, ಹವಾಮಾನ ಬುದ್ಧಿವಂತ ತಂತ್ರಜ್ಞಾನ, ಬೆಳೆ ವೈವಿಧ್ಯತೆ ಅಗತ್ಯವಿದೆ, ನೀರಿನ ಸುಸ್ಥಿರ ಬಳಕೆಯಾಗಬೇಕು, ನವೀಕರಿಸಲಾಗದ ಇಂಧನ, ರಾಸಾಯನಿಕ ಗೊಬ್ಬರ ಮತ್ತು ಭೂ ಸಂಪನ್ಮೂಲವನ್ನು ಹೆಚ್ಚು ಬಳಸುವ ಕೃಷಿ ಪದ್ಧತಿಗೆ ಉತ್ತೇಜನ ನೀಡದಿರುವುದು ಮೊದಲಾದ ಕ್ರಮಗಳನ್ನು ಕೈಗೊಳ್ಳಲು ವರದಿ ಶಿಫಾರಸು ಮಾಡಿದೆ. 

1967ರಿಂದ 2016ರ ನಡುವಿನ ಅಂಕಿ- ಅಂಶಗಳ ಪ್ರಕಾರ ಉಷ್ಣತೆಯಲ್ಲಿನ ಏರಿಕೆ ವ್ಯವಸಾಯ ಉತ್ಪಾದನೆಯಲ್ಲಿ ಕೊರತೆ ತಂದಿದೆ. ಮಳೆ ಹೆಚ್ಚಾಗಿರುವ ಪ್ರದೇಶಗಳಲ್ಲಿ ಹೆಚ್ಚು ಬೆಳೆ ನಷ್ಟವಾಗಿದೆ. ದಕ್ಷಿಣ ಏಷ್ಯಾದಲ್ಲಿ ಸವಾಲು ಎದುರಿಸಲು ಈಗಿನ ಆಹಾರ ದಾಸ್ತಾನು ಮೂರು ಪಟ್ಟು ಹೆಚ್ಚಾಗಬೇಕು. 2030ಕ್ಕೆ ಎಂಟು ವರ್ಷಗಳಷ್ಟೇ ಉಳಿದಿವೆ. ಅಷ್ಟರೊಳಗೆ ಪರಿಹಾರ ನೀತಿ ರೂಪಿಸದೆ ಇದ್ದಲ್ಲಿ ಪರಿಸ್ಥಿತಿ ಬರ್ಬರವಾಗಲಿದೆ ಎಂದು ವರದಿ ಎಚ್ಚರಿಸಿದೆ.

ಭಾರತದ ಭೂ ಹಿಡುವಳಿ ರೀತಿ ಮತ್ತು ಮಾರುಕಟ್ಟೆ ನೀತಿಗಳಲ್ಲಿ ಸುಧಾರಣೆಗೆ ಶಿಫಾರಸು ಮಾಡಲಾಗಿದೆ. ಬಳಕೆ ರೀತಿ ಮತ್ತು ಜೀವನ ಶೈಲಿಯ ಸುಧಾರಣೆಗಳನ್ನೂ ಸಲಹೆ ಮಾಡಲಾಗಿದೆ.

ಸಮಗ್ರ ಕೃಷಿ ಮತ್ತು ತೋಟಗಾರಿಕಾ ಕಾರ್ಯಯೋಜನೆಗಳಿಂದಲೇ ಹವಾಮಾನ ವೈಪರೀತ್ಯದಿಂದಾಗುವ ಆಹಾರ ಬಿಕ್ಕಟ್ಟನ್ನು ತಡೆಯಬಹುದು ಎಂದು ವರದಿ ಹೇಳಿದೆ. ಆದರೆ, ಸದ್ಯದ ಮಟ್ಟಿಗೆ ಭಾರತ ಸರ್ಕಾರದ ಯಾವುದೇ ರಾಜಕೀಯ ಪಕ್ಷಗಳು ಇಂತಹ ಕಾರ್ಯೋದ್ದೇಶಗಳನ್ನು ಇಟ್ಟುಕೊಂಡಿಲ್ಲ ಎಂದೂ ವರದಿಯಲ್ಲಿ ಅಭಿಪ್ರಾಯಪಡಲಾಗಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್