ಕತಾರ್ | ಫುಟ್‌ಬಾಲ್‌ ವಿಶ್ವಕಪ್ ಇತಿಹಾಸವನ್ನೇ ಬದಲಾಯಿಸಲಿದ್ದಾರೆ ಸಲೀಮಾ ಮುಕಾನ್‌ಸಂಗ!

92 ವರ್ಷಗಳ ಫುಟ್‌ಬಾಲ್‌ ವಿಶ್ವಕಪ್‌ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮಹಿಳಾ ರೆಫರಿಯೊಬ್ಬರು ಪುರುಷರ ಪಂದ್ಯಗಳಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಪುರುಷ ರೆಫರಿಗಳೇ ನಡೆಸುತ್ತಿದ್ದ ವಿಶ್ವಕಪ್‌ನಲ್ಲಿ ಮಹಿಳೆ ರೆಫರಿಯಾಗಿ ಕಾರ್ಯನಿರ್ವಹಿಸಲಿದ್ದು, ಈವರೆಗೂ ಈ ಸ್ಪರ್ಧೆಯಲ್ಲಿದ್ದ ಲಿಂಗ ತಾರತಮ್ಯವನ್ನು ನಿವಾರಿಸುವ ನಿಟ್ಟಿನಲ್ಲಿ ಇದು ಮೊದಲ ಹೆಜ್ಜೆಯಾಗಿದೆ.

ಫುಟ್‌ಬಾಲ್‌ ವಿಶ್ವಕಪ್‌ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಮಹಿಳಾ ರೆಫರಿ ಒಬ್ಬರು ಪುರುಷರ ಪಂದ್ಯಗಳನ್ನು ನಿಯಂತ್ರಿಸಲಿದ್ದಾರೆ. ಬಿಸಿಲನಾಡು ಆಫ್ರಿಕಾದ, ರುವಾಂಡಾ ದೇಶದವರಾದ ಸಲೀಮಾ ಮುಕಾನ್‌ಸಂಗ ಈ ಬಾರಿಯ ಕತರ್‌ ವಿಶ್ವಕಪ್‌ನಲ್ಲಿ ರೆಫರಿಯಾಗಿ ಕಾರ್ಯನಿರ್ವಹಿಸುವ ಮೂಲಕ ಇತಿಹಾಸ ರಚಿಸಿದ್ದಾರೆ.

34 ವರ್ಷದ ಸಲೀಮಾ ಅವರೊಂದಿಗೆ, ಸೈಡ್ ಲೈನ್‌ ರೆಫರಿಗಳಾಗಿ ಸ್ಟೆಫಲಿ ಫ್ರಾಪಾರ್ಟ್‌, ಯೋಶಿಮಿ ಯಮಾಶಿತಾ ಹಾಗೂ ಮೂವರು ಮಹಿಳಾ ಸಹಾಯಕ ರೆಫರಿಗಳು ಈ ಬಾರಿಯ ವಿಶ್ವಕಪ್‌ನಲ್ಲಿ ಕೆಲಸ ಮಾಡಲಿದ್ದಾರೆ. ಈ ಬಾರಿಯ ಫಿಫಾ ವಿಶ್ವಕಪ್‌ನಲ್ಲಿ ಒಟ್ಟು 64 ಪಂದ್ಯಗಳು ನಡೆಯಲಿದ್ದು, 36 ರೆಫರಿಗಳು ಪಂದ್ಯಗಳನ್ನು ನಿಯಂತ್ರಿಸಲಿದ್ದಾರೆ. ಇವರಲ್ಲಿ ಮೂವರು ಮಹಿಳೆಯರೆಂಬುದೇ ವಿಶೇಷ.

Eedina App

“ಕೇವಲ ನಾವು ಮಹಿಳೆಯರೆಂಬ ಕಾರಣಕ್ಕಾಗಿ ನಮ್ಮನ್ನು ಪರಿಗಣಿಸಿಲ್ಲ. ಬದಲಿಗೆ, ನಮ್ಮ ಸಾಮರ್ಥ್ಯವನ್ನು ಮನಗಂಡು ರೆಫರಿಯಾಗಿ ಕಾರ್ಯನಿರ್ವಹಿಸಲು ಆಯ್ಕೆ ಮಾಡಿದ್ದಾರೆ” ಎನ್ನುತ್ತಾರೆ ಸಲೀಮಾ.

ಪುರುಷರ ‘ಆಫ್ರಿಕಾ ಕಪ್ ಆಫ್ ನೇಷನ್ಸ್‌’ ಫುಟ್‌ಬಾಲ್‌ ಟೂರ್ನಿಯಲ್ಲಿ ರೆಫರಿಯಾಗಿ ಕಾರ್ಯನಿರ್ವಹಿಸದ ಮೊದಲ ಮಹಿಳೆ ಎಂಬ ಹೆಗ್ಗಳಿಕೆ ಇವರಿಗಿದೆ. ಈ ವರ್ಷದ ಆರಂಭದಲ್ಲಿ ಈ ಟೂರ್ನಿ ನಡೆದಿತ್ತು. ಕಳೆದ ವರ್ಷ ಟೋಕಿಯೊದಲ್ಲಿ ನಡೆದ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿಯೂ ಸಹ ಅವರು ಕರ್ತವ್ಯ ನಿರ್ವಹಿಸಿದ್ದರು.

AV Eye Hospital ad
ಸಹ ರೆಫರಿಗಳಾದ ಯೋಶಿಮಿ ಯಮಾಶಿತಾ ಮತ್ತು ಸ್ಟೆಫಲಿ ಫ್ರಾಪಾರ್ಟ್‌

ಯಾರಿವರು ಸಲೀಮಾ ಮುಕಾನ್‌ಸಂಗ?

1988ರಲ್ಲಿ ರವಾಂಡಾದಲ್ಲಿ ಜನಿಸಿದ್ದ ಸಲೀಮಾ, ಬಾಲ್ಯದಂದಲೇ ಕ್ರೀಡೆಯತ್ತ ಆಕರ್ಷಿತರಾಗಿದ್ದರು. ಪ್ರಾಥಮಿಕ ಶಾಲಾ ದಿನಗಳಿಂದಲೇ ಕ್ರೀಡೆಯಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು.

“ನಾನು ಶಾಲಾ ದಿನಗಳಲ್ಲಿ ಒಮ್ಮೆ ಫುಟ್‌ಬಾಲ್‌ ಪಂದ್ಯ ನೋಡಲು ಹೋಗಿದ್ದೆ. ಪಂದ್ಯ ನಡೆಯುತ್ತಿದ್ದ ಕೋರ್ಟ್‌ ಒಳಗಿದ್ದವರನ್ನು ರೆಫರಿ ಎಂದು ಕರೆಯುತ್ತಾರೆ ಎಂದು ನಂತರ ತಿಳಿಯಿತು. ಪಂದ್ಯಗಳಲ್ಲಿ ರೆಫರಿಗಳದ್ದು ಮುಖ್ಯ ಪಾತ್ರವಿರುತ್ತದೆ. ಆಟದ ಮೈದಾನದಲ್ಲಿ ಅವರು ಹಲವು ನಿರ್ಧಾರಗಳನ್ನು ತೆಗೆದುಕೊಳ್ಳಬಹುದು, ಇಡೀ ಆಟವನ್ನು ಬದಲಾಯಿಸಬಹುದು ಎಂಬುದನ್ನು ಅರಿತುಕೊಂಡೆ. ನಾನು ಕೂಡ ರೆಫರಿ ಆಗಬೇಕೆಂದು ಬಯಸಿದ್ದೆ” ಎಂದು ಬಾಲ್ಯದಿಂದಲೇ ರೆಫರಿಯಾಗುವ ಕನಸಿತ್ತು ಎಂಬುದನ್ನು ಸಲೀಮಾ, ಕಳೆದ ಜನವರಿಯಲ್ಲಿ ನೇಷನ್ಸ್‌ ಕಪ್‌ನಲ್ಲಿ ವಿವರಿಸಿದ್ದರು.

“ರೆಫರಿ ಆಗಬೇಕೆಂದು ಬಯಸಿದ್ದೆ. ಆದರೆ, ಅದರ ಬಗ್ಗೆ ಹೆಚ್ಚೇನು ತಿಳಿದಿರಲಿಲ್ಲ. ರೆಫರಿಗಳು ಅನುಸರಿಸಬೇಕಾದ ಕಾನೂನುಗಳು, ಅದನ್ನು ಪಾಲಿಸುವ ಮನಸ್ಥಿತಿ, ವೃತ್ತಿಪರತೆ...... ಇವೆಲ್ಲವನ್ನು ಹಂತ ಹಂತವಾಗಿ ಕಲಿಯಲು ಪ್ರಾರಂಭಿಸಿದೆ.

“ಈ ಪ್ರಯಾಣ ಅಂದುಕೊಂಡಷ್ಟು ಸರಳವಿರಲಿಲ್ಲ. ಆಟದ ನಿಯಮಗಳನ್ನು ಓದಿ ಅರ್ಥ ಮಾಡಿಕೊಳ್ಳುವುದು ಸುಲಭ. ಆದರೆ, ಪ್ರಾಯೋಗಿಕವಾಗಿ ಅದನ್ನು ಜಾರಿಗೆ ತರಲು ಹೆಚ್ಚು ಸಮಯ ಬೇಕಾಗುತ್ತದೆ” ಎಂದು ಅವರು ಹೇಳಿರುವುದಾಗಿ ಬಿಬಿಸಿ ವರದಿ ಮಾಡಿದೆ.

ರೆಫರಿಯಾಗುವ ಹಾದಿಯಲ್ಲಿ ಎದುರಾಗಿತ್ತು ನೂರೆಂಟು ವಿಘ್ನಗಳು

ಹವ್ಯಾಸಿ ಆಟಗಾರ್ತಿಯಾಗಿದ್ದ ಸಲೀಮಾ ಅವರನ್ನು ‘ರೆಫರಿ ತರಬೇತಿ’ ಜಾಹೀರಾತೊಂದು ತೀವ್ರವಾಗಿ ಸೆಳೆಯಿತು. ಮಾಧ್ಯಮಿಕ ಶಾಲೆಯಿಂದ ನೇರವಾಗಿ ‘ರೆಫರಿ ಕೋರ್ಸ್‌’ಗೆ ಸೇರುವ ಬಗ್ಗೆ ರುವಾಂಡನ್‌ ಎಫ್‌ಎಯನ್ನು ಸಂಪರ್ಕಿಸಿದ್ದರು. ಆದರೆ, ಆಕೆ ಪ್ರಾಯದ ಕಾರಣ ತರಬೇತಿಗೆ ಆಯ್ಕೆಯಾಗಲಿಲ್ಲ.

ಈ ತಿರಸ್ಕಾರದಿಂದ ಬೇಸರಗೊಳ್ಳದ ಅವರು, ಫಿಫಾ ಆಟದ ನಿಯಮಗಳನ್ನು ತಾನೇ ಸ್ವ ಆಸಕ್ತಿಯಿಂದ ಕಲಿಯಲು ಆರಂಭಿಸಿದರು. ಕಠಿಣ ಪರಿಶ್ರಮದ ಫಲವಾಗಿ, ಅಂತಿಮವಾಗಿ ಫೆರ್ವಾಫಾ ಮೂಲಕ ರೆಫರಿ ತರಬೇತಿಗೆ ಅವಕಾಶಗಿಟ್ಟಿಸಿಕೊಂಡರು. ಇದು ಅವರ ಕನಸು ಸಾಕಾರಗೊಳ್ಳುವತ್ತ ಮೊದಲ ಹೆಜ್ಜೆ ಎಂದರೆ ತಪ್ಪಾಗಲಾರದು.

ಈ ಸುದ್ದಿ ಓದಿದ್ದೀರಾ?: ಕ್ರಿಸ್ಟಿಯಾನೊ ರೊನಾಲ್ಡೊ ಜೊತೆಗಿನ ಒಪ್ಪಂದ ರದ್ದುಗೊಳಿಸಿದ ಮ್ಯಾಂಚೆಸ್ಟರ್‌ ಯುನೈಟೆಡ್‌

ಬದುಕು ಬದಲಿಸಿದ ಪಂದ್ಯಗಳು

ಸಲೀಮಾರ ಈ ಯಶಸ್ಸಿನ ಹಾದಿಯು ರುವಾಂಡಾದಲ್ಲಿ ನಡೆದಿದ್ದ ಪುರುಷರ ಲೀಗ್‌ ಪಂದ್ಯಗಳನ್ನು ನಿರ್ವಹಿಸುವುದರಿಂದ ಆರಂಭವಾಯಿತು. 2016ರಲ್ಲಿ ಮಹಿಳಾ ನೇಷನ್ಸ್‌ ಕಪ್‌, 2019ರ ಮಹಿಳಾ ವಿಶ್ವಕಪ್‌ ಹಾಗೂ ಟೋಕಿಯೊ ಒಲಿಂಪಿಕ್ಸ್‌ನಲ್ಲಿಯೂ ಅವರು ಕಾರ್ಯನಿರ್ವಹಿಸಿದ್ದಾರೆ.  

ಕಳೆದ ಜನವರಿ 18ರಂದು ಕ್ಯಾಮರೂನ್‌ನಲ್ಲಿ ನಡೆದ ಪುರುಷರ ನೇಷನ್ಸ್‌ ಕಪ್‌ನಲ್ಲಿ ಗಿನಿ-ಜಿಂಬಾಬ್ವೆ ನಡುವಿನ ಪಂದ್ಯ ಸಲೀಮಾ ಅವರ ವೃತ್ತಿ ಜೀವನದಲ್ಲಿ ದೊಡ್ಡ ಹೆಗ್ಗುರುತಾಗಿದೆ. ಆ ಪಂದ್ಯದಲ್ಲಿ ಸಲೀಮಾ, ಆರು ಹಳದಿ ಕಾರ್ಡ್‌ಗಳನ್ನು ತೋರಿಸುವ ಮೂಲಕ ಪಂದ್ಯವನ್ನು ಉತ್ತಮವಾಗಿ ನಿರ್ವಹಿಸಿದ್ದರು.

“ಪಂದ್ಯದ ಅಂತಿಮ ವಿಷಲ್ ಸದ್ದಿನ ನಂತರ, ನಾನು ನಿಜವಾಗಿಯೂ ಭಾವುಕಳಾಗಿದ್ದೆ. ಇಡೀ ಪಂದ್ಯ ನಿರ್ವಹಿಸಿದ್ದ ನಾನು ತುಂಬಾ ಸಂತೋಷಗೊಂಡಿದ್ದೆ” ಎಂದು ಅವರು ಪಂದ್ಯದ ನಂತರ ಮಾಧ್ಯಮಗಳಿಗೆ ತಿಳಿಸಿದ್ದರು.

ರೆಫರಿಯಾಗಿ ಎದುರಿಸಿದ ಸವಾಲುಗಳು

ನೆಷನ್ಸ್ ಕಪ್‌ ಬಳಕಿ ಸಲೀಮಾ ಅವರು, ಪೂರ್ಣಪ್ರಮಾಣದಲ್ಲಿ ರೆಫರಿಯಾಗಿ ತೊಡಿಗಿಸಿಕೊಂಡರು. ಈ ವೇಳೆ ದೈಹಿಕ ಸೇರಿದಂತೆ ಹಲವು ಸವಾಲುಗಳು ಎದುರಾದವು.

“ಮುಟ್ಟಿನ ಸಮಯದಲ್ಲಿ ಕೆಲವೊಮ್ಮೆ ವೇಗವಾಗಿ ಓಡಲು ಸಾಧ್ಯವಾಗುವುದಿಲ್ಲ. ಆ ದಿನಗಳಲ್ಲಿ ರೆಫರಿಯಾಗಿ ಕಾರ್ಯನಿರ್ವಹಿಸುವುದು ಅಷ್ಟೇನು ಸುಲಭವಲ್ಲ. ಗರ್ಭಿಣಿಯಾಗಿದ್ದ ವೇಳೆ ಇನ್ನೂ ಕಷ್ಟವಾಗಿತ್ತು. ಪ್ರಸವದ ನಂತರ ಚೇತರಿಸಿಕೊಳ್ಳಬೇಕಿರುತ್ತದೆ. ಆದ್ದರಿಂದ ಮತ್ತೆ ನಮ್ಮ ರೆಫರಿ ಪಯಣವನ್ನು ಪುನರಾರಂಭಿಸಲು ದೇಹವನ್ನು ಸಜ್ಜುಗೊಳಿಸಲು ಸಮಯ ಬೇಕಾಗುತ್ತದೆ” ಎನ್ನುತ್ತಾರೆ ಅವರು.

“ನಮಗೆ ಹೋಲಿಸಿದರೆ, ಪುರುಷರ ಓಟದ ವೇಗವಾಗಿ ಓಡುತ್ತಾರೆ. ನಾನು ಸಹ ಸಾಧ್ಯವಾದಷ್ಟು ವೇಗವಾಗಿ ಓಡಲು ಪ್ರಯತ್ನಿಸುತ್ತೇನೆ. ಮೈದಾನದಲ್ಲಿ ಆಟಗಾರರ ವೇಗಕ್ಕೆ ಸರಿ ಸಮಾನವಾಗಿದ್ದು, ಅವರು ಮಾಡುವ ತಪ್ಪುಗಳನ್ನು ಸೂಕ್ಷ್ಮವಾಗಿ ಗಮನಿಸಿ ತೀರ್ಪುಗಳನ್ನು ನೀಡುತ್ತೇನೆ ಎಂದು ಸಲೀಮಾ ವಿವರಿಸುತ್ತಾರೆ.

ನಿಮಗೆ ಏನು ಅನ್ನಿಸ್ತು?
6 ವೋಟ್
eedina app