ನಿರ್ದಿಷ್ಟ ಮಾರಾಟಗಾರದಿಂದ ಪುಸ್ತಕ ಖರೀದಿಸಲು ಪೋಷಕರಿಗೆ ಒತ್ತಾಯ; ಬೆಂಗಳೂರು ಶಾಲೆಗೆ ಸಿಬಿಎಸ್ಇ ನೋಟಿಸ್

  • ಹೆಚ್ಚಿನ ಹಣಕ್ಕಾಗಿ ಪುಸ್ತಕ ಮಾರಾಟದ ದಂಧೆಯಲ್ಲಿ ತೊಡಗಿರುವ ಶಾಲೆಗಳು
  • ಸಿಬಿಎಸ್ಇ ಸೂಚಿಸಿದ ಎನ್‌ಸಿಇಆರ್‌ಟಿ ಪಠ್ಯಪುಸ್ತಕಗಳನ್ನು ಬಳಸದ ಶಾಲೆಗಳು

ನಿರ್ದಿಷ್ಟ ಒಬ್ಬ ಮಾರಾಟಗಾರರಿಂದ ಪುಸ್ತಕಗಳನ್ನು ಖರೀದಿಸುವಂತೆ ಪೋಷಕರನ್ನು ಒತ್ತಾಯಿಸಿದ ಬೆಂಗಳೂರಿನ ಶಾಲೆಯೊಂದಕ್ಕೆ ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್ಇ) ನೋಟಿಸ್ ನೀಡಿದೆ.

ಸಿಬಿಎಸ್ಇ ಮಾರ್ಗಸೂಚಿಗಳನ್ನು ಅನುಸರಿಸದೆ, ನಿರ್ದಿಷ್ಟ ಮಾರಾಟಗಾರರಿಂದ ಶಾಲಾ ಪುಸ್ತಕಗಳು ಮತ್ತು ಸಮವಸ್ತ್ರಗಳನ್ನು ಖರೀದಿಸುವಂತೆ ಪೋಷಕರಿಗೆ ಒತ್ತಾಯಿಸುತ್ತಿದ್ದ ಬೆಂಗಳೂರಿನ ಚಿಮಣಿ ಹಿಲ್ಸ್‌ನಲ್ಲಿರುವ ‘ಯುರೋ ಸ್ಕೂಲ್’ಗೆ ನೋಟಿಸ್ ನೀಡಲಾಗಿದೆ. 

"ಅಧಿಕ ಸಂಪಾದನೆಗಾಗಿ ಇಂತಹ ದಂಧೆಯಲ್ಲಿ ತೊಡಗಿರುವ ಹಲವು ಶಾಲೆಗಳಲ್ಲಿ ಈ ಸಮಸ್ಯೆ ಇದೆ ಎಂದು ನಗರದ ಪಾಲಕರ ಸಂಘ ಆತಂಕ ವ್ಯಕ್ತಪಡಿಸಿದೆ. ಸಾಮಾನ್ಯವಾಗಿ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ಪುಸ್ತಕಗಳನ್ನು ಬೇರೆ ಬೆಲೆ ಮತ್ತು ಹೆಸರುಗಳೊಂದಿಗೆ ಮರುಮುದ್ರಣ ಮಾಡಲಾಗುತ್ತದೆ. ಪುಸ್ತಕಗಳನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದ್ದು, ಆ ಪುಸ್ತಕಗಳನ್ನೇ ಖರೀದಿಸಲು ಒತ್ತಾಯಿಸಲಾಗುತ್ತಿದೆ" ಎಂದು ಮಾಧ್ಯಮಗಳು ವರದಿ ಮಾಡಿದ್ದವು.

“ಹಲವು ಶಾಲೆಗಳು ಕಾನೂನನ್ನು ಉಲ್ಲಂಘಿಸಿ, ಪುಸ್ತಕಗಳನ್ನು ಮರುಮುದ್ರಣ ಮಾಡುತ್ತಿವೆ. ಪುಸ್ತಕಗಳನ್ನು ಎರಡು ಭಾಗಗಳಾಗಿ ವಿಂಗಡಿಸಿ, ಇರುವ ಬೆಲೆಗಿಂತ ಅಧಿಕ ಬೆಲೆಗೆ ನಿರ್ದಿಷ್ಟ ಮಾರಾಟಗಾರರ ಮೂಲಕ ಮಾರಾಟ ಮಾಡಿಸುತ್ತಿದ್ದಾರೆ” ಎಂದು 'ಕರ್ನಾಟಕ ವಾಯ್ಸ್ ಆಫ್ ಪೇರೆಂಟ್ಸ್ ಅಸೋಸಿಯೇಷನ್'ನ ಅಧ್ಯಕ್ಷ ಮೊಹಮ್ಮದ್ ಶಕೀಲ್ ಅವರು ಆರೋಪಿಸಿದ್ದರು. 

"ರಾಜ್ಯದ ಅಗತ್ಯಗಳಿಗೆ ಅನುಗುಣವಾಗಿ ಎನ್‌ಸಿಇಆರ್‌ಟಿ ಪುಸ್ತಕಗಳನ್ನು ಸ್ವಲ್ಪಮಟ್ಟಿಗೆ ಬದಲಾಯಿಸಲು ರಾಜ್ಯಗಳಿಗೆ ಸ್ವಾತಂತ್ರ್ಯವಿದೆ. ಆದರೆ, ಶಾಲೆಗಳು ಈ ಅವಕಾಶ ದುರುಪಯೋಗಪಡಿಸಿಕೊಳ್ಳುತ್ತಿವೆ. ಅದಕ್ಕಾಗಿ ಖಾಸಗಿ ಪ್ರಕಾಶಕರ ಬಳಿ ತಮ್ಮದೇ ಆದ ಪಠ್ಯ ಪುಸ್ತಕಗಳನ್ನು ಮುದ್ರಿಸಿ, ತಮ್ಮದೇ ಪಠ್ಯಕ್ರಮ ಎಂದು ಹೇಳುತ್ತಿದ್ದಾರೆ" ಎಂದು ಮೊಹಮ್ಮದ್ ಶಕೀಲ್ ಆರೋಪಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಶಾಲೆಗಳಲ್ಲಿ ವೇದಗಣಿತ | ಶಿಕ್ಷಣ ವ್ಯವಸ್ಥೆಯ ʼಬ್ರಾಹ್ಮಣೀಕರಣʼದ ಮುಂದುವರಿದ ಭಾಗ

‘ಯುರೋ ಸ್ಕೂಲ್ಸ್’ ಅಥವಾ ‘ಆರ್ಕಿಡ್ ಇಂಟರ್ನ್ಯಾಷನಲ್ ಸ್ಕೂಲ್’ ತಮ್ಮದೇ ಪಠ್ಯಪುಸ್ತಕಗಳನ್ನು ಅಭಿವೃದ್ಧಿಪಡಿಸಿದ್ದು, ಅದನ್ನು ‘ಸೆರೆಬ್ರಮ್’ ಅಥವಾ ‘ಎಜುವೇಟ್’ ಎಂದು ಕರೆಯಲಾಗುತ್ತಿದೆ.

ಡಿಸೆಂಬರ್ 2021ರಲ್ಲಿ ಅಜಯ್ ಮರ್ಚೆಂಟ್ ಎಂಬ ಪೋಷಕರು, "ಸಿಬಿಎಸ್ಇಗೆ ಪತ್ರ ಬರೆದು, ಶಾಲೆಯು ಸಿಬಿಎಸ್ಇ ಸೂಚಿಸಿದ ಎನ್‌ಸಿಇಆರ್‌ಟಿ ಪಠ್ಯಪುಸ್ತಕಗಳನ್ನು ಬಳಸುತ್ತಿಲ್ಲ. ಸ್ವಂತ ಪಠ್ಯಕ್ರಮಗಳನ್ನು ಮುದ್ರಿಸಿ, ಪ್ರಕಟಿಸುತ್ತಿದ್ದಾರೆ" ಎಂದು ದೂರು ನೀಡಿದ್ದರು.

"ಸಮವಸ್ತ್ರಗಳು, ಪಠ್ಯಪುಸ್ತಕಗಳು, ಶೂಗಳು ಹಾಗೂ ಇತರ ಅಗತ್ಯ ವಸ್ತುಗಳನ್ನು ನಿರ್ದಿಷ್ಟ ಬ್ರಾಂಡ್ ಮತ್ತು ಮಾರಾಟಗಾರರಿಂದ ಖರೀದಿಸಲು ಹೇಳಿ, ದುಬಾರಿ ಹಣ ಪಡೆಯುತ್ತಿದ್ದಾರೆ" ಎಂದು ಅಜಯ್ ಆರೋಪಿಸಿದ್ದರು.

ಶಾಲೆಗಳಿಗೆ ನೀಡಲಾಗುತ್ತಿದ್ದ, ಎನ್‌ಸಿಇಆರ್‌ಟಿ ಪುಸ್ತಕಗಳಿಗೆ ₹2,000- 3,000 ಬೆಲೆಯಿದೆ. ಆದರೆ, ಶಾಲೆಯಿಂದ ಪ್ರಕಟಿಸಲಾದ ಪಠ್ಯಪುಸ್ತಕಗಳಿಗೆ ವಾರ್ಷಿಕವಾಗಿ ₹7,000- 9,000 ವೆಚ್ಚವಾಗುತ್ತಿದೆ ಎಂದು ಪೋಷಕರು ದೂರಿದ್ದಾರೆ.

ಯುರೋ ಸ್ಕೂಲ್ ಸಿಬಿಎಸ್ಇ ಮಂಡಳಿಯ ನಿರ್ದೇಶನಗಳು ಮತ್ತು ಎಲ್ಲ ಮಾನದಂಡಗಳನ್ನು ಅನುಸರಿಸಿದಲ್ಲಿ ಮಾತ್ರ ನೊಟೀಸ್ ಹಿಂಪಡೆಯಲಾಗುವುದು ಎಂದು  ಸಿಬಿಎಸ್‌ಇ ಹೇಳಿದೆ. ಜೊತೆಗೆ ಪುಸ್ತಕಗಳಿಗೆ ಸಂಬಂಧಿಸಿದ ವರದಿ ನೀಡುವಂತೆ ಸೂಚಿಸಲಾಗಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್