- ಫೇಸ್ಬುಕ್ ಪರಿಚಯ ಪ್ರೀತಿಗೆ ತಿರುಗಿ 35 ಲಕ್ಷ ರೂ. ಹಸ್ತಾಂತರ
- ಭಾರೀ ಹಣ ಕೈಸೇರುತ್ತಿದ್ದಂತೆ ಎಫ್ಬಿ ಖಾತೆ ಡಿಲೀಟ್ ನಾಪತ್ತೆ
ಜಾಲತಾಣಗಳಲ್ಲಿ ಅಪರಿಚಿತ ಯುವಕ/ಯುವತಿಯರ ಸ್ನೇಹ ಮಾಡುವ ಮುನ್ನ ಎಚ್ಚರವಿರಲಿ. ಪ್ರೀತಿಯ ಹೆಸರಲ್ಲಿ ನಂಬಿಸಿ ಲಕ್ಷಾಂತರ ರೂಪಾಯಿ ವಂಚಿಸಿರುವ ಪ್ರಕರಣಗಳು ಪದೇ ಪದೆ ವರದಿಯಾಗುತ್ತಿವೆ. ಬೆಂಗಳೂರಿನ ವ್ಯಕ್ತಿಯೊಬ್ಬರು ಫೇಸ್ಬುಕ್ನಲ್ಲಿ ಆದ ಪ್ರೀತಿಗೆ 35 ಲಕ್ಷ ರೂಪಾಯಿ ಬೆಲೆ ತೆತ್ತಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ ಗುಳೇದ್, "ಖಾಸಗಿ ಫೈನಾನ್ಸ್ ಘಟಕದಲ್ಲಿ ಮ್ಯಾನೇಜರ್ ಆಗಿರುವ ಬೆಂಗಳೂರಿನ 48 ವರ್ಷದ ವ್ಯಕ್ತಿಯೊಬ್ಬರಿಗೆ ಫೇಸ್ಬುಕ್ ಮೂಲಕ ವಿದೇಶಿ ಮಹಿಳೆಯೊಬ್ಬಳು ಪರಿಚಯವಾಗಿದ್ದಾಳೆ. ಆಕೆ ತನ್ನ ಹೆಸರು ನ್ಯಾನ್ಸಿ ವಿಲಿಯಂ, ತಾನು ಇಂಗ್ಲೆಂಡಿನವಳು ಎಂದು ಹೇಳಿಕೊಂಡು ವ್ಯಕ್ತಿಯೊಂದಿಗೆ ಸ್ನೇಹ ಬೆಳೆಸಿದ್ದಾಳೆ" ಎಂದರು.
"ನಂತರ ಪರಸ್ಪರ ಇಬ್ಬರೂ ಫೋನ್ ನಂಬರ್ ಎಕ್ಸ್ಚೇಂಜ್ ಮಾಡಿಕೊಂಡು ವಾಟ್ಸಾಪ್ನಲ್ಲಿ ಚಾಟಿಂಗ್ ಮಾಡಿದ್ದಾರೆ. ಹೀಗೆ ಬೆಳೆದ ಸ್ನೇಹ ಮತ್ತಷ್ಟು ಗಾಢವಾಗಿ ಇಬ್ಬರು ಒಟ್ಟಿಗೆ ಸೇರಿ ಬ್ಯುಸಿನೆಸ್ ಆರಂಭಿಸೋಣ. ಇಂಗ್ಲೆಂಡ್ನಿಂದ ಭಾರತಕ್ಕೆ ಬಂದು ಜ್ಯುವೆಲ್ಲರಿ ಬ್ಯುಸಿನೆಸ್ನಲ್ಲಿ ತೊಡಗುತ್ತೇನೆ ಅಂತಾ ನ್ಯಾನ್ಸಿ ನಂಬಿಸಿದ್ದಾಳೆ. ಅದಕ್ಕಾಗಿ ಹಣ ಹೂಡಿಕೆ ಮಾಡುವಂತೆ ಕೇಳಿದ್ದಾಳೆ."
ಈ ಸುದ್ದಿ ಓದಿದ್ದೀರಾ?: ಬೆಂಗಳೂರು| ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ಮೇಲೆ ಆದಾಯ-ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ
"ನ್ಯಾನ್ಸಿ ಮಾತಿಗೆ ಮರುಳಾದ ಬೆಂಗಳೂರಿನ ವ್ಯಕ್ತಿ, ಹಂತ ಹಂತವಾಗಿ 35 ಲಕ್ಷ ರೂ. ಕೊಟ್ಟು ಕೈ ಸುಟ್ಟುಕೊಂಡಿದ್ದಾರೆ. ಅತ್ತ ಹಣ ಅಕೌಂಟ್ಗೆ ತಲುಪುತ್ತಿದ್ದಂತೆ ಫೇಸ್ ಬುಕ್ ಖಾತೆ ಡಿಲೀಟ್ ಮಾಡಿರುವ ನ್ಯಾನ್ಸಿ ವಿಲಿಯಂ ನಾಪತ್ತೆಯಾಗಿದ್ದಾಳೆ. ಈ ಬಗ್ಗೆ ಪೂರ್ವ ವಿಭಾಗದ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಾಗಿ ಶೋಧ ನಡೆಸುತ್ತಿದ್ದೇವೆ" ಎಂದು ಡಿಸಿಪಿ ಭೀಮಾಶಂಕರ ಗುಳೇದ್ ಹೇಳಿದರು.