ಮರಗಳ್ಳರೆಂದು ಶಂಕಿಸಿ ಬುಡಕಟ್ಟು ಯುವಕರ ಮೇಲೆ ಗುಂಡು ಹಾರಿಸಿದ ಅರಣ್ಯ ಸಿಬ್ಬಂದಿ; ಓರ್ವನ ಸಾವು, ಮೂವರಿಗೆ ಗಾಯ

  • ಅರಣ್ಯ ಇಲಾಖೆ ಸಿಬ್ಬಂದಿ ಗುಂಡಿಗೆ ಯುವಕ ಬಲಿ, ಮೂವರಿಗೆ ಗಾಯ
  • ಮಧ್ಯಪ್ರದೇಶದ ವಿದಿಶಾ ಜಿಲ್ಲೆಯ ಲೆಟೇರಿ ಅರಣ್ಯ ಪ್ರದೇಶದಲ್ಲಿ ಘಟನೆ

ಮಧ್ಯಪ್ರದೇಶದ ವಿದಿಶಾ ಜಿಲ್ಲೆಯ ಲೆಟೇರಿ ಅರಣ್ಯದಿಂದ ಮರಗಳನ್ನು ಕದಿಯಲು ಯತ್ನಿಸುತ್ತಿದ್ದರು ಎಂದು ಆರೋಪಿಸಿ ಅರಣ್ಯ ಇಲಾಖೆ ಸಿಬ್ಬಂದಿಯು ಬುಡಕಟ್ಟು ಸಮುದಾಯದ ನಾಲ್ವರು ಯುವಕರ ಮೇಲೆ ಗುಂಡು ಹಾರಿಸಿದ್ದು, ಈ ವೇಳೆ ಓರ್ವ ಮೃತಪಟ್ಟು ಮೂವರು ಗಾಯಗೊಂಡಿದ್ದಾರೆ.

ಭಿಲ್ ಬುಡಕಟ್ಟು ಸಮುದಾಯದ ಚೈನ್ ಸಿಂಗ್ (35) ಮೃತ ಯುವಕ. ಮಹೇಂದ್ರ ಭಿಲ್ (22), ಭಗವಾನ್ ಸಿಂಗ್ (30) ಮತ್ತು ರೋಡ್ಜಿ ಸಿಂಗ್ (30) ಗಾಯಗೊಂಡ ಯುವಕರು. ಗಾಯಾಳುಗಳನ್ನು ವಿದಿಶಾ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ವಿದಿಶಾ ಜಿಲ್ಲೆಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಎಸ್ಪಿ) ಸಮೀರ್ ಯಾದವ್ ಸುದ್ದಿಗಾರರೊಂದಿಗೆ ಮಾತನಾಡಿ, ”ಲಾಟೇರಿ ಪೊಲೀಸ್ ಠಾಣೆ ವ್ಯಾಪ್ತಿಯ ಖತ್ತಾಪುರ ಗ್ರಾಮದ ಬಳಿ ಈ ಘಟನೆ ನಡೆದಿದೆ. ಈ ಬಗ್ಗೆ ತನಿಖೆ ಪ್ರಗತಿಯಲ್ಲಿದೆ” ತಿಳಿಸಿದ್ದಾರೆ.

ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಭೋಪಾಲ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, "ಲೆಟೇರಿ ಘಟನೆಯು ತುಂಬಾ ದುಃಖಕರವಾಗಿದೆ. ಘಟನೆಯ ಕುರಿತು ನ್ಯಾಯಾಂಗ ತನಿಖೆಗೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಆದೇಶಿಸಿದ್ದಾರೆ. ಆರೋಪಿ ಅರಣ್ಯ ಇಲಾಖೆ ಸಿಬ್ಬಂದಿ ವಿರುದ್ಧ ಸೆಕ್ಷನ್ 302 ರ ಅಡಿಯಲ್ಲಿ ಪ್ರಕರಣ ದಾಖಲಿಸಿ ಅಮಾನತುಗೊಳಿಸಲಾಗಿದೆ” ಎಂದು ಮಾಹಿತಿ ನೀಡಿದರು.

“ಮೃತ ಯುವಕನ ಕುಟುಂಬಕ್ಕೆ 20 ಲಕ್ಷ ರೂ. ಹಾಗೂ ಗಾಯಗೊಂಡವರಿಗೆ ತಲಾ 5 ಲಕ್ಷ ರೂ. ಧನಸಹಾಯ ನೀಡಲಾಗುವುದು. ಗಾಯಾಳುಗಳ ಸಂಪೂರ್ಣ ಚಿಕಿತ್ಸೆಯ ವೆಚ್ಚವನ್ನು ಸರ್ಕಾರವೇ ಭರಿಸಲಿದೆ” ಎಂದು ಮಿಶ್ರಾ ತಿಳಿಸಿದ್ದಾರೆ.

ದೂರುದಾರ ಪ್ರೀತಮ್ ಸಿಂಗ್ ಹೇಳುವಂತೆ, “ಲೆಟೇರಿ ಪೊಲೀಸ್ ಠಾಣಾ ವ್ಯಾಪ್ತಿಯ ಖಾತಾಪುರ ಗ್ರಾಮದ ಬಳಿ ಕಟ್ಟಿಗೆಗಳೊಂದಿಗೆ ರಾಯಪುರ ಗ್ರಾಮದ ತನ್ನ ಮನೆಗೆ ಮರಳುತ್ತಿದ್ದಾಗ ಅರಣ್ಯ ಇಲಾಖೆ ಸಿಬ್ಬಂದಿ ಯುವಕರನ್ನು ತಡೆದರು ಎಂದು ಎಎಸ್ಪಿ ಹೇಳಿದ್ದಾರೆ. ಅರಣ್ಯ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆದಿದೆ. ಬಳಿಕ ಬುಡಕಟ್ಟು ಸಮುದಾಯದ ಯುವಕರ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿ ಬಂದೂಕಿನಿಂದ 12 ಸುತ್ತು ಗುಂಡು ಹಾರಿಸಿದ್ದು, ಚೈನ್ ಸಿಂಗ್ ಸ್ಥಳದಲ್ಲಿಯೇ ಜೀವ ಬಿಟ್ಟಿದ್ದಾನೆ, ಮೂವರು ಗಾಯಗೊಂಡಿದ್ದಾರೆ” ಎಂದು ಹೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ? ವಿಶ್ವ ಮೂಲನಿವಾಸಿಗಳ ದಿನ: ಭಾರತದಲ್ಲಿ ದ್ರೌಪದಿ ಮುರ್ಮು ವಿನಾ ಯಾವ ಆದಿವಾಸಿಗಳೂ ಸುಖವಾಗಿಲ್ಲ, ಸುರಕ್ಷಿತರೂ ಅಲ್ಲ

ಮೃತರ ಕುಟುಂಬಕ್ಕೆ ಸರ್ಕಾರಿ ಉದ್ಯೋಗ

ವಿದಿಶಾ ಜಿಲ್ಲಾಧಿಕಾರಿ ಉಮಾಶಂಕರ್ ಭಾರ್ಗವ ಮಾತನಾಡಿ, “ಮೃತರ ಕುಟುಂಬಕ್ಕೆ ಸರ್ಕಾರಿ ನೌಕರಿ ನೀಡಲಾಗುವುದು” ಎಂದು ಭರವಸೆ ನೀಡಿದ್ದಾರೆ.

ವಿದಿಶಾದ ವಿಭಾಗೀಯ ಅರಣ್ಯ ಅಧಿಕಾರಿ (ಡಿಎಫ್ಒ) ರಾಜ್ವೀರ್ ಸಿಂಗ್ ಸುದ್ದಿಗಾರರೊಂದಿಗೆ ಮಾತನಾಡಿ, “ಮರವನ್ನು ಕಡಿದು ಕಳ್ಳಸಾಗಣೆ ಮಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ಅರಣ್ಯ ಇಲಾಖೆ ತಂಡವು ಸ್ಥಳಕ್ಕೆ ತಲುಪಿದೆ. ದ್ವಿಚಕ್ರ ವಾಹನದಲ್ಲಿ ಬಂದ ಮರಗಳ್ಳರು ರಸ್ತೆ ತಡೆದು ಕಲ್ಲು ತೂರಾಟ ನಡೆಸಿದ್ದಾರೆ. ಅರಣ್ಯ ಸಿಬ್ಬಂದಿ ತಮಗೆ ಅಪಾಯ ಇದೆ ಎಂದು ಭಾವಿಸಿದಾಗ, ಅವರು ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದಾರೆ. ಇದರಲ್ಲಿ ಒಬ್ಬ ಸಾವನ್ನಪ್ಪಿದ್ದು, ಮೂವರು ಗಾಯಗೊಂಡರು” ಎಂದು ಸಮರ್ಥಿಸಿಕೊಂಡಿದ್ದಾರೆ.

ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಟ್ವೀಟ್ ಮಾಡಿ, “ವಿದಿಶಾ ಜಿಲ್ಲೆಯ ಲೆಟೇರಿ ಅರಣ್ಯದಲ್ಲಿ ಅರಣ್ಯ ಇಲಾಖೆ ನಡೆಸಿದ ಗುಂಡಿನ ದಾಳಿಯಲ್ಲಿ ಬುಡಕಟ್ಟು ಯುವಕನೊಬ್ಬ ಸಾವನ್ನಪ್ಪಿದ್ದು, ಮೂವರು ಬುಡಕಟ್ಟು ಯುವಕರಿಗೆ ಗಾಯವಾಗಿರುವ ಗಂಭೀರ ಘಟನೆ ಬೆಳಕಿಗೆ ಬಂದಿದೆ. ದೇಶವು ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುತ್ತಿರುವಾಗಲೂ ಶಿವರಾಜ್ ಸಿಂಗ್ ನೇತೃತ್ವದ ಸರ್ಕಾರ ಆದಿವಾಸಿಗಳ ಮೇಲಿನ ದಬ್ಬಾಳಿಕೆ ನಿಲ್ಲಿಸಿಲ್ಲ. ಮಧ್ಯಪ್ರದೇಶ ಸರ್ಕಾರ ಕೂಡಲೇ ಆದಿವಾಸಿ ಸಮುದಾಯದ ಕ್ಷಮೆ ಕೇಳಬೇಕು” ಎಂದು ಆಗ್ರಹಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್