ಭೂಸ್ವಾಧೀನ ವಿರೋಧಿ ಹೋರಾಟ | ಮುರುಗೇಶ್ ನಿರಾಣಿ ರಾಜೀನಾಮೆಗೆ ರೈತರ ಆಗ್ರಹ 

devanahalli protest crowd
  • ದೇವನಹಳ್ಳಿಯಲ್ಲಿ ಮುರುಗೇಶ್‌ ನಿರಾಣಿ ಪ್ರತಿಕೃತಿ ದಹಿಸಿ ಆಕ್ರೋಶ
  • ಕೆಐಎಡಿಬಿ ಭೂಸ್ವಾಧೀನ ಪ್ರಕ್ರಿಯೆ ಕೈ ಬಿಡುವಂತೆ ಒತ್ತಾಯ

ಪ್ರತಿಭಟನೆ ಮಾಡುತ್ತಿರುವವರು ರೈತರಲ್ಲವೆಂದು ಹೇಳಿಕೆ ನೀಡಿದ ಸಚಿವ ಮುರುಗೇಶ್ ನಿರಾಣಿ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ದೇವನಹಳ್ಳಿಯಲ್ಲಿ ರೈತರು ಶುಕ್ರವಾರ ಆಗ್ರಹಿಸಿದರು.

ಕೆಐಎಡಿಬಿ ಭೂಸ್ವಾಧೀನ ಪ್ರಕ್ರಿಯೆ ಕೈ ಬಿಡುವಂತೆ ಒತ್ತಾಯಿಸಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿಯ 75ನೇ ದಿನವಾದ ಶುಕ್ರವಾರ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಮತ್ತು ಜನಪರ ಸಂಘಟನೆಗಳು ಕರೆ ನೀಡಿದ್ದ ದೇವನಹಳ್ಳಿ ತಾಲ್ಲೂಕು ಬಂದ್ ಭಾಗಶಃ ಯಶಸ್ವಿಯಾಗಿದೆ.

ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ತಾಲ್ಲೂಕು ಕಚೇರಿ ಬಳಿ ಸೇರಿದ ಪ್ರತಿಭಟನಾಕಾರರು ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. 

Image
devanahalli protest 1 meravanige

ಸಚಿವ ಮುರುಗೇಶ್ ನಿರಾಣಿ ಅವರ ವಿರುದ್ಧ ಘೋಷಣೆ ಕೂಗಿ, ಪ್ರತಿಭಟನೆ ಮಾಡುತ್ತಿರುವವರನ್ನು ರೈತರಲ್ಲವೆಂದು ಹೇಳಿಕೆ ನೀಡಿರುವ ಅವರು ತಮ್ಮ ಸ್ಥಾನಕ್ಕೆ ಕೂಡಲೇ ರಾಜೀನಾಮೆ ನೀಡಬೇಕು. ಸಾರ್ವಜನಿಕವಾಗಿ ರೈತರ ಕ್ಷಮೆಯಾಚಿಸಬೇಕೆಂದು ಪ್ರತಿಭಟನಾನಿರತರು ಆಗ್ರಹಿಸಿದರು. ಹೊಸ ಬಸ್‌ನಿಲ್ದಾಣದ ಸರ್ಕಲ್‌ನಲ್ಲಿ ಮುರುಗೇಶ್ ನಿರಾಣಿ ಅವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆ ಮಾಡುತ್ತಿರುವವರು ರೈತರಲ್ಲವೆಂದ ಸಚಿವ ಮುರುಗೇಶ್ ನಿರಾಣಿ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ದೇವನಹಳ್ಳಿಯಲ್ಲಿ ರೈತರು ಶುಕ್ರವಾರ ಆಗ್ರಹಿಸಿದರು.

Image
devanahalli protest 1 one

ನಿರಾಣಿ ಪ್ರತಿಕೃತಿ ಅಪಹರಣ ಪ್ರಹಸನ
ಪ್ರತಿಭಟನಾಕಾರರು ದಹಿಸಲು ತಂದಿದ್ದ ಸಚಿವ ನಿರಾಣಿ ಅವರ ಪ್ರತಿಕೃತಿಯನ್ನು ಪೊಲೀಸರು ಅಪಹರಿಸಿದ್ದಾರೆಂದು ಆರೋಪಿಸಿ ರಸ್ತೆಗಿಳಿದ ಪ್ರತಿಭಟನಾಕಾರರು ಪೊಲೀಸರ ವಿರುದ್ಧ ಧಿಕ್ಕಾರ ಕೂಗಿದರು. ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು. ಎಸಿಪಿ ಬಾಲಕೃಷ್ಣ ಅವರ ಮಧಪ್ರವೇಶದಿಂದ ಪ್ರತಿಕೃತಿ ಹಿಂದಿರುಗಿಸಿದ ಪ್ರಸಂಗ ನಡೆಯಿತು.

ಇದಕ್ಕೂ ಮುನ್ನ 11 ಗಂಟೆ ವೇಳೆಗೆ ನಗರದಲ್ಲಿ ಮೆರವಣಿಗೆ ನಡೆಸಿದ ರೈತರು, ತೆರೆದಿದ್ದ ಕೆಲ ಅಂಗಡಿ-ಮುಂಗಟ್ಟುಗಳನ್ನು ಮುಚ್ಚಿಸಿದರು. ಬಂದ್ಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. 2000ಕ್ಕೂ ಅಧಿಕ ರೈತರು ತಾಲೂಕು ಕಚೇರಿ ಮುಂದೆ ಧರಣಿ ಕುಳಿತಿದ್ದಾರೆ. 

Image
devanahalli protest 1 edit

ಹೋರಾಟ ಸಮಿತಿಯ ಕಾರಹಳ್ಳಿ ಶ್ರೀನಿವಾಸ್, ನಂಜಪ್ಪ, ಮಾರೇಗೌಡ, ಅಶ್ವತ್ಥಪ್ಪ ಎಂ ಮುನಿರಾಜು, ಸಿಬಿ ಮೋಹನ್ ವೆಂಕಟರಮಣಪ್ಪ, ಚಂದ್ರ ತೇಜಸ್ವಿ, ಎಎಪಿ ಮುಖಂಡರು, ಬಿಎಸ್ಪಿ, ಡಿಎಸ್ಎಸ್ , ಜೆಡಿಎಸ್, ಕಾಂಗ್ರೆಸ್, ಒಕ್ಕಲಿಗರ ಸಂಘ, ರಾಜ್ಯ ರೈತ ಸಂಘ, ಪ್ರಾಂತ ರೈತ ಸಂಘ ಮತ್ತು ಕನ್ನಡ ಪರ ಸಂಘಟನೆಗಳ ಎರಡು ಸಾವಿರಕ್ಕೂ ಅಧಿಕ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. 

ಈ ಸುದ್ದಿ ಓದಿದ್ದೀರಾ:? ಭೂಸ್ವಾಧೀನ ವಿರೋಧಿ ಹೋರಾಟ | ಅನ್ನದಾತನ ಕಣ್ಣೀರಿಗೆ ಮರುಗಿದ ಪೊಲೀಸರು; ಅಳಲು ಕೇಳದ ಸರ್ಕಾರ 

ರಾಜ್ಯದಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧ ಸಂಸ್ಥೆ ಸ್ವಾಧೀನಪಡಿಸಿಕೊಂಡಿರುವ ಭೂಮಿಯಲ್ಲಿ ಶೇ. 75ರಷ್ಟನ್ನು ಉತ್ತರ ಭಾರತೀಯರಿಗೆ ಕೊಟ್ಟಿದಾರೆ. ಪ್ರತೀ ಉತ್ತರ ಭಾರತೀಯರ ಹೆಸರಲ್ಲಿ ರಾಜ್ಯದ 300 ರಿಂದ 400 ಎಕರೆ ಭೂಮಿ ಇದೆ. ರಾಜ್ಯದ ಜನರ ಬಳಿ ಶೇ.1ರಷ್ಟೂ ಭೂಮಿ ಇಲ್ಲ. ಇದರಲ್ಲಿ ಕನ್ನಡಿಗರ ಭೂಮಿ ಮತ್ತು ಸಂಪತ್ತನ್ನು ಉತ್ತರ ಭಾರತೀಯರಿಗೆ ಕೊಡುವ ಹುನ್ನಾರ ಅಡಗಿದೆ ಎಂದು ಪ್ರತಿಭಟನಾಕಾರು ಆಕ್ರೋಶ ವ್ಯಕ್ತಪಡಿಸಿದರು.

ಬೆಳಗ್ಗೆ ಮೆರವಣಿಗೆ ನಡೆಸುವಾಗ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣ ಠಾಣೆಯ ಇನ್ಸ್‌ಪೆಕ್ಟರ್‌ ಮುತ್ತುರಾಜು ಅವರು ರೈತರನ್ನು ಅಮಾನವೀಯವಾಗಿ ಎಳೆದಾಡಿ ಹಲ್ಲೆ ಮಾಡಿ ಅವಮಾನಿಸಿದ್ದಾರೆ ಎಂದು ಪ್ರತಿಭಟನಾನಿರತ ರೈತರು ಆರೋಪಿಸಿದ್ದಾರೆ.
 

ಸ್ಥಳಕ್ಕೆ ಸಚಿವರನ್ನು ಕರೆಸಲು ಆಗ್ರಹ; ಮನವಿ ಸಲ್ಲಿಕೆಗೆ ನಿರಾಕರಣೆ

ಮನವಿ ಸ್ವೀಕರಿಸಲು ಮುಂದಾದ ಉಪ ವಿಭಾಗಾಧಿಕಾರಿ ತೇಜಸ್ಕುಮಾರ್ ಮತ್ತು ತಹಸೀಲ್ದಾರ್ ಶಿವರಾಜ್ ಅವರಿಗೆ ಮನವಿ ಸಲ್ಲಿಸಲು ರೈತರು ನಿರಾಕರಿಸಿದರು. ಸ್ಥಳಕ್ಕೆ ಉಸ್ತುವಾರಿ ಸಚಿವರನ್ನು ಕರೆಸುವಂತೆ ಪಟ್ಟು ಹಿಡಿದು ಕುಳಿತಿದ್ದಾರೆ. 

ಶುಕ್ರವಾರ ಮುಂಜಾನೆ ಪಂಜಿನ ಮೆರವಣಿಗೆ ನಡೆಸಿದರು. ರೈತರ ಹೋರಾಟಕ್ಕೆ ಬೆಂಬಲ ನೀಡುವಂತೆ ಬಂದ್‌ ನಡೆಸಲು ಸ್ಥಳೀಯರಲ್ಲಿ ಮನವಿ ಮಾಡಿದರು.

ಕೆಐಎಡಿಬಿ ಮೂರನೇ ಹಂತದ ಭೂಸ್ವಾಧೀನಕ್ಕೆ ಹೊರಡಿಸಿದ ನೊಟೀಸ್ ವಿರೋಧಿಸಿ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ನಾಡಕಚೇರಿ ಮುಂದೆ ಏಪ್ರಿಲ್ 4ರಿಂದ ಅನಿರ್ಧಿಷ್ಟಾವಧಿ ಧರಣಿ ನಡೆಸುತ್ತಿದೆ.

13 ಗ್ರಾಮಗಳ ನೂರಾರು ರೈತರಿಗೆ ನೋಟಿಸ್
ಕರ್ನಾಟಕ ಸರ್ಕಾರ ರಾಜ್ಯಪತ್ರ ಸಂಖ್ಯೆ, ಸಿಐ 121 ಎಸ್ಪಿಕ್ಯೂ (ಇ) 2021 ರಂತೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆ 1966ರ ಕಲಂ 3(1) ರನ್ವಯ ಅಧಿಸೂಚನೆ ಪ್ರಕಾರ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಗೆ ಸೇರಿದ ಪಾಳ್ಯ, ಹರಳೂರು, ಪೋಲನಹಳ್ಳಿ, ಗೋಕರೆ ಬಚ್ಚೇನಹಳ್ಳಿ, ನಲ್ಲೂರು, ಮಲ್ಲೇಪುರ, ನಲ್ಲಪ್ಪನಹಳ್ಳಿ, ಚೀಮಾಚನಹಳ್ಳಿ, ಮಟ್ಟುಬಾರ್ಲು, ಮುದ್ದೇನಹಳ್ಳಿ, ಚನ್ನರಾಯಪಟ್ಟಣ, ಶ್ರೋತ್ರಿಯ ತೆಲ್ಲೋಹಳ್ಳಿ ಮತ್ತು ಹಾಡ್ಯಾಳ ಈ 13 ಗ್ರಾಮಗಳ 1777-02 ಎಕರೆ ಕೃಷಿ ಭೂಮಿಯನ್ನು ಕೆಐಎಡಿಬಿ ಕೈಗಾರಿಕೆಗಳ ಅಭಿವೃದ್ಧಿಯ ಹೆಸರಲ್ಲಿ ಸ್ವಾಧೀನಪಡಿಸಿಕೊಳ್ಳಲು ಮುಂದಾಗಿದೆ. ಈ ಕುರಿತು ಖಾತೆದಾರರಿಗೆ ವಿಧಿ 28(1) ರನ್ವಯ ಪ್ರಾರಂಭಿಕ ನೊಟೀಸ್ ನೀಡಲಾಗಿದೆ.

ಕೆಐಎಡಿಬಿ ಭೂಸ್ವಾಧೀನ ಕೈ ಬಿಡುವಂತೆ ಹಕ್ಕೊತ್ತಾಯ ಪತ್ರದ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ , ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ , ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಕೆಐಎಡಿಬಿ ವಿಶೇಷಾಧಿಕಾರಿ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಡಾ ಕೆ ಸುಧಾಕರ್ ಅವರಿಗೆ ಪತ್ರ ಬರೆದಿದ್ದಾರೆ. ಅನಿರ್ಧಿಷ್ಟಾವಧಿ ಧರಣಿ 75ನೇ ದಿನಕ್ಕೆ ಕಾಲಿಟ್ಟ ಹಿನ್ನೆಲೆಯಲ್ಲಿ ಶುಕ್ರವಾರ ದೇವನಹಳ್ಳಿ ಬಂದ್‌ಗೆ ಕರೆ ನೀಡಲಾಗಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್