- ನವೆಂಬರ್ 21ರಂದು ಪ್ರಾರಂಭ ಸಮರಾಭ್ಯಾಸ
- ಸಮಗ್ರ 13 ದಿನದ ತರಬೇತಿ ಕಾರ್ಯಕ್ರಮ
ಭಾರತೀಯ ವಿಶೇಷ ಪಡೆಗಳ ತುಕಡಿಯು ಪ್ರಸ್ತುತ ಇಂಡೋನೇಷ್ಯಾ ವಿಶೇಷ ಪಡೆಗಳೊಂದಿಗೆ ದ್ವಿಪಕ್ಷೀಯ ಜಂಟಿ ತರಬೇತಿ ಸಮರಾಭ್ಯಾಸದಲ್ಲಿ ತೊಡಗಿದೆ. ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ ಸಮರಾಭ್ಯಾಸದಿಂದ ಎರಡು ದೇಶಗಳ ನಡುವೆ ಮಿಲಿಟರಿ ಸಹಕಾರ ಮತ್ತು ಪರಸ್ಪರ ಕಾರ್ಯಸಾಧ್ಯತೆ ಹೆಚ್ಚಿಸುವ ಗುರಿ ಹೊಂದಿದೆ.
"ಗರುಡ ಶಕ್ತಿ 'ಬ್ಯಾನರ್' ಅಡಿ ದ್ವಿಪಕ್ಷೀಯ ವ್ಯಾಯಾಮಗಳ ಸರಣಿಯ ಎಂಟನೇ ಆವೃತ್ತಿಯನ್ನು ಕರವಾಂಗ್ನ ಸಂಗ ಬುವಾನಾ ತರಬೇತಿ ಪ್ರದೇಶದಲ್ಲಿ ಆಯೋಜಿಸಲಾಗಿದೆ" ಎಂದು ರಕ್ಷಣಾ ಸಚಿವಾಲಯ ಬುಧವಾರ ತಿಳಿಸಿದೆ.
"ಮಿಲಿಟರಿಯಿಂದ ಮಿಲಿಟರಿ ವಿನಿಮಯ ಕಾರ್ಯಕ್ರಮಗಳ ಭಾಗವಾಗಿ, ಭಾರತೀಯ ವಿಶೇಷ ಪಡೆಗಳ ತುಕಡಿಯು ಪ್ರಸ್ತುತ ಇಂಡೋನೇಷ್ಯಾದ ವಿಶೇಷ ಪಡೆಗಳೊಂದಿಗೆ ದ್ವಿಪಕ್ಷೀಯ ಜಂಟಿ ತರಬೇತಿ ವ್ಯಾಯಾಮ ಗರುಡ ಶಕ್ತಿಯಲ್ಲಿ ತೊಡಗಿಸಿಕೊಂಡಿದೆ" ಎಂದು ಹೇಳಿದೆ.
Indian Army Special Forces commence joint training Exercise GARUDA SHAKTI with Indonesian Special Forces in Indonesia.
— PIB India (@PIB_India) November 23, 2022
The joint exercise will facilitate both armies to know each other better and share their wide experiences and combat experience
Read:https://t.co/3Bc9oTNNVI pic.twitter.com/1KBpNwUHUs
"ನವೆಂಬರ್ 21ರಂದು ಪ್ರಾರಂಭವಾದ ಈ ಸಮರಾಭ್ಯಾಸವು ಎರಡೂ ಸೇನೆಗಳ ವಿಶೇಷ ಪಡೆಗಳ ನಡುವೆ ತಿಳಿವಳಿಕೆ, ಸಹಕಾರ ಹಾಗೂ ಪರಸ್ಪರ ಕಾರ್ಯಸಾಧ್ಯತೆ ಹೆಚ್ಚಿಸುವ ಗುರಿ ಹೊಂದಿದೆ" ಎಂದು ಸಚಿವಾಲಯ ತಿಳಿಸಿದೆ.
"ಜಂಟಿ ತರಬೇತಿಯು ಉನ್ನತ ಮಟ್ಟದ ದೈಹಿಕ ಸಾಮರ್ಥ್ಯ, ಯುದ್ಧತಂತ್ರಗಳು ಹಾಗೂ ಕಾರ್ಯವಿಧಾನಗಳ ಮೇಲೆ ಕೇಂದ್ರೀಕರಿಸುತ್ತದೆ. ಇದಕ್ಕಾಗಿ ಸಮಗ್ರ 13 ದಿನದ ತರಬೇತಿ ಕಾರ್ಯಕ್ರಮ ರೂಪಿಸಲಾಗಿದೆ. ಈ ವ್ಯಾಯಾಮವು 48 ಗಂಟೆಗಳ ಸುದೀರ್ಘ ಮೌಲ್ಯಾಂಕನದ ವ್ಯಾಯಾಮದೊಂದಿಗೆ ಮುಕ್ತಾಯಗೊಳ್ಳಲಿದೆ" ಎಂದು ಸಚಿವಾಲಯ ಹೇಳಿದೆ.
"ಜಂಟಿ ಸಮರಾಭ್ಯಾಸವು ಎರಡೂ ಸೇನೆಗಳು ಪರಸ್ಪರರನ್ನು ಚೆನ್ನಾಗಿ ತಿಳಿದುಕೊಳ್ಳಲು ಅನುಕೂಲವಾಗುತ್ತದೆ ಮತ್ತು ಭಯೋತ್ಪಾದಕ ಕಾರ್ಯಾಚರಣೆಗಳು, ಪ್ರಾದೇಶಿಕ ಭದ್ರತಾ ಕಾರ್ಯಾಚರಣೆಗಳು ಹಾಗೂ ಅಂತಾರಾಷ್ಟ್ರೀಯ ವಾತಾವರಣದಲ್ಲಿ ಶಾಂತಿಪಾಲನಾ ಕಾರ್ಯಾಚರಣೆಗಳನ್ನು ಎದುರಿಸುವಲ್ಲಿ ಯುದ್ಧ ಅನುಭವ ಹಂಚಿಕೊಳ್ಳುತ್ತದೆ" ಎಂದು ಹೇಳಿದೆ.
"ಈ ವ್ಯಾಯಾಮವು ಉಭಯ ದೇಶಗಳ ನಡುವಿನ ಸೌಹಾರ್ದ ಸಂಬಂಧ ಖಾತ್ರಿಪಡಿಸುವಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲು ಮತ್ತು ಪ್ರಾದೇಶಿಕ ಭದ್ರತೆ ಖಾತ್ರಿಪಡಿಸುವ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆ” ಎಂದು ಸಚಿವಾಲಯ ಹೇಳಿದೆ.