ಗೌರಿ ಹತ್ಯೆ ಪ್ರಕರಣ | ಕೃತ್ಯವೆಸಗಿದವರ ಬೈಕ್‌ ಗುರುತಿಸಿದ ಗೌರಿ ನೆರೆಮನೆಯ ಯುವಕ

gowri lankesh
  • ಡಿವಿಆರ್‌ ಮತ್ತು ಇತರೆ ವಸ್ತುಗಳನ್ನು ಗುರುತಿಸಿದ ಫೊರೆನ್ಸಿಕ್‌ ತಜ್ಞೆ ಸ್ನೇಹ
  • ರವಿಕುಮಾರ್ ಹೊರತುಪಡಿಸಿ ಮಿಕ್ಕೆಲ್ಲ ಸಾಕ್ಷಿಗಳಿಗೆ ಪಾಟೀ ಸವಾಲು

ಬೆಂಗಳೂರಿನ ಪ್ರಧಾನ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯದಲ್ಲಿ ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣದ ವಿಚಾರಣೆ ನಡೆಯಿತು.

"2017ರ ಸೆಪ್ಟೆಂಬರ್‌ 5ರಂದು ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ಪತ್ರಕರ್ತೆ ಗೌರಿ ಲಂಕೇಶ್‌ ಅವರ ಮನೆ ಬಳಿ ಜೋರಾಗಿ ಗುಂಡಿನ ಸದ್ದು ಕೇಳಿ ಬಂತು. ಹೊರಬಂದಾಗ ಪ್ಯಾಷನ್‌ ಪ್ರೊ ಬೈಕ್‌ನಲ್ಲಿ ಇಬ್ಬರು ಸವಾರರು, ತಾವಿದ್ದ ಕಾಂಪೌಂಡ್‌ ದಾಟಿ ಸುಭಾಷ್‌ ಪಾರ್ಕ್‌ನ ಕಡೆ ಹೋಗುತ್ತಿದ್ದರು" ಎಂದು ನೆರೆಮನೆಯ ಯುವಕ ಹೇಳಿದ್ದಾರೆ. 

"ಅಲ್ಲದೆ, ಅವರು ಹೋದ ಐದಾರು ಸೆಕೆಂಡುಗಳಲ್ಲಿಯೇ ಮತ್ತೊಂದು ಬೈಕ್‌ನಲ್ಲಿ ಇಬ್ಬರು ಸವಾರರು ಗೌರಿ ಮನೆಯ ಮುಂದೆ ಬಂದು ನಿಂತರು. ತನಗೆ ಭಯವಾಗಿ ಶೆಡ್‌ ಒಳಗೆ ಹೋದೆ" ಎಂದು ಅವರು ಹೇಳಿದರು. ಆ ಬೈಕ್‌ ಅನ್ನು ಕೋರ್ಟ್‌ಗೆ ತರಲಾಗಿದ್ದು, ಅವರು ಆ ಬೈಕ್‌ ಅನ್ನು ಗುರುತಿಸಿದರು.

ಮಾಸ್‌ ಕಮ್ಯುನಿಕೇಶನ್‌ ಪದವೀಧರರಾದ ಅವರು, ಶಿಕ್ಷಣ ಮುಗಿಸಿ ಕೆಲಸ ಹುಡುಕುತ್ತಿದ್ದರು. ಅವರು ಗೌರಿ ಲಂಕೇಶ್‌ ಅವರ ನಿವಾಸದ ಎದುರಿನ ಎಡಭಾಗದ ಖಾಲಿ ನಿವೇಶನದಲ್ಲಿ ಶೆಡ್‌ ನಿರ್ಮಿಸಿಕೊಂಡು ಸ್ನೇಹಿತರ ಜತೆ ವಾಸವಿದ್ದರು.

"ಸೆಪ್ಟೆಂಬರ್‌ 6ರಂದು ಪೊಲೀಸರು ಸೀಲ್‌ ಆದ ಕವರ್‌ನಲ್ಲಿ ಡಿವಿಆರ್‌ಗಳನ್ನ ಸೈಬರ್‌ ವಿಶ್ಲೇಷಣೆಗೆ ಎಂದು ತಂದುಕೊಟ್ಟರು. ನಾನು ಅದನ್ನು ಪಡೆದು ಸಹಿ ಹಾಕಿದೆ" ಎಂದು ʼಇಂಕೋಗ್ನಿಟೋ ವಿಧಿವಿಜ್ಞಾನ ಫೌಂಡೇಶನ್ʼ (Incognito Forensic Foundation)ನಲ್ಲಿ ಕೆಲಸ ಮಾಡುತ್ತಿರುವ ಸೈಬರ್‌ ಫೋರೆನ್ಸಿಕ್‌ ತಜ್ಞೆ ಸ್ನೇಹ ಎಂಬುವರು ಹೇಳಿದ್ದಾರೆ. ಅಲ್ಲದೆ, ಆ ಡಿವಿಆರ್‌ ಮತ್ತು ಇತರೆ ವಸ್ತಗಳನ್ನು ನ್ಯಾಯಾಲಯದಲ್ಲಿ ಅವರು ಗುರುತಿಸಿದರು.

"ಸೆಪ್ಟೆಂಬರ್‌ 6ರ ಮುಂಜಾನೆ ಮಂಡ್ಯದಿಂದ ಬೆಂಗಳೂರಿಗೆ ವಾಪಸ್‌ ಬರುತ್ತಿದ್ದೆ. 2.30ರ ಸುಮಾರಿಗೆ ಆರ್‌ ಆರ್‌ ನಗರ ಕಮಾನು ಬಳಿ ಟೀ ಕುಡಿಯುತ್ತಿದ್ದಾಗ, ಪೊಲೀಸರು ನನ್ನ ಬಳಿ ಬಂದು ಗೌರಿ ಹತ್ಯೆ ಪ್ರಕರಣದ ವಿಚಾರಣೆಯಲ್ಲಿ ಪಂಚನಾಮೆ ಸಾಕ್ಷಿಯಾಗಿ ಕರೆದರು" ಎಂದು ರವಿಕುಮಾರ್‌ ಎಂಬುವವರು ಹೇಳಿದ್ದಾರೆ.

"ಅಲ್ಲದೆ, ಸೀಲ್‌ ಆದ ಡಿವಿಆರ್‌ ಅನ್ನು ಹೊರ ತೆಗೆದು ತಮ್ಮ ಸಮ್ಮುಖದಲ್ಲೇ ಪ್ಲೇ ಮಾಡಿದರು. ಅದರಲ್ಲಿ ಗೌರಿಯವರು ಕಾರಿನ ಬಾಗಿಲು ತೆರೆದು ಹೊರಬರುತ್ತಿದ್ದಂತೆಯೇ ಹೆಲ್ಮೆಟ್‌ ಧರಿಸಿದ್ದ ವ್ಯಕ್ತಿಯೊಬ್ಬ ಶೂಟ್‌ ಮಾಡಿದ್ದು, ಗೌರಿಯವರು ಹಿಂದೆ ಸರಿಯುತ್ತಾ ಮನೆ ಬಾಗಿಲ ಕಡೆ ಹೋಗಿ ಕುಸಿದು ಬಿದ್ದದ್ದು ಕಂಡಿತು" ಎಂದೂ ಅವರು ತಿಳಿಸಿದರು.

ಆದರೆ, ಈ ದೃಶ್ಯಾವಳಿಗಳನ್ನು ಆರೋಪಿ ಪರ ವಕೀಲರಿಗೆ ಕೊಟ್ಟಿರಲಿಲ್ಲ. ಹೀಗಾಗಿ ಪಾಟಿ ಸವಾಲು ಸಾಧ್ಯವಿರಲಿಲ್ಲ. ಆದ್ದರಿಂದ ಆ ಸಾಕ್ಷಿ ಹೇಳಿಕೆಯನ್ನು ಅಷ್ಟಕ್ಕೇ ನಿಲ್ಲಿಸಲಾಯಿತು. 

"ಡಿವಿಆರ್ ಮತ್ತು ಅದರೊಳಗಿನ ಹಾರ್ಡ್ ಡಿಸ್ಕ್‌ಗಳನ್ನೂ ಅಪರಾಧ ಸಾಕ್ಷಿಯಾಗಿ ವಶಪಡಿಸಿಕೊಳ್ಳುವಾಗ ತನಿಖಾಧಿಕಾರಿಗಳು ಸರಿಯಾದ ವಿಧಾನ ಅನುಸರಿಸಿಲ್ಲ ಎಂದು ನ್ಯಾಯಾಧೀಶರು ಸರ್ಕಾರಿ ವಕೀಲರನ್ನು ಪ್ರಶ್ನಿಸಿದರು. ತನ್ನನ್ನು ತನಿಖೆ ಎಲ್ಲ ಪೂರ್ತಿಯಾದ ನಂತರವೇ ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಆಗಿ ನೇಮಿಸಿರುವುದರಿಂದ ತನಿಖೆಯ ಸಂದರ್ಭದಲ್ಲಿ ಆಗಿರಬಹುದಾದ ತಪ್ಪುಗಳ ಪ್ರಶ್ನೆಗಳಿಗೆ ವಿವರಣೆಯನ್ನು ತನಿಖಾಧಿಕಾರಿಗಳೇ ಕೊಡುತ್ತಾರೆ" ಎಂದು ಹಿರಿಯ ವಕೀಲ ಬಾಲನ್‌ ಅವರು ಉತ್ತರಿಸಿದರು.

ಜೊತೆಗೆ ಸಿಆರ್‌ಪಿಸಿಯ ಸೂಕ್ತ ಕಲಂಗಳ ಅಡಿ ಈ ವಿಷಯದ ಕುರಿತು ಅರ್ಜಿ ಹಾಕುವುದಾಗಿ, ಆರೋಪಿ ಪರ ವಕೀಲರಿಗೆ ಅದನ್ನು ನೀಡುವುದಾಗಿ, ಆ ಬಳಿಕವೇ ಈ ಸಾಕ್ಷಿಯನ್ನು ವಿಚಾರಣೆ ನಡೆಸುವುದಾಗಿ ಸರ್ಕಾರಿ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಬಾಲನ್‌ ಅವರು ಹೇಳಿದರು. ಎಸ್‌ಎಸ್‌ಪಿಯವರ ಈ ಹೇಳಿಕೆಗೆ ನ್ಯಾಯಾಲಯ ಸಮ್ಮತಿ ಸೂಚಿಸಿತು. 

ರವಿಕುಮಾರ್ ಅವರನ್ನು ಹೊರತುಪಡಿಸಿ ಮಿಕ್ಕೆಲ್ಲ ಸಾಕ್ಷಿಗಳನ್ನು ಆರೋಪಿ ಪರ ವಕೀಲರು ಪಾಟಿ ಸವಾಲು ನಡೆಸಿದರು.

ಈ ಸುದ್ದಿ ಓದಿದ್ದೀರಾ?: ಎಸಿಬಿ ರದ್ದು, ಲೋಕಾಯುಕ್ತಕ್ಕೆ ಬಲ: ರಾಜಕೀಯ ಪಕ್ಷಗಳ ಮೇಲಾಟಕ್ಕೆ ವಿರಾಮ ಹಾಕಿದ ಹೈಕೋರ್ಟ್‌ ತೀರ್ಪು

ವಿಚಾರಣೆಗಳೆಲ್ಲ ಮುಗಿದ ನಂತರ ಗಣೇಶ್‌ ಮಿಸ್ಕಿನ್‌ ಎಂಬ ಆರೋಪಿ ಪರ ವಕೀಲರು, ಅವರಿಗೆ ವೆರಿಕೋಸ್‌ ವೆಯ್ನ್‌ (ಕಾಲು ಸಂಬಂಧಿ ರೋಗ) ಇರುವುದರಿಂದ ಸೂಕ್ತ ವೈದ್ಯಕೀಯ ಆರೈಕೆಗೆ ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಜೈಲು ಆಸ್ಪತ್ರೆಯ ವೈದ್ಯರ ಸಲಹೆಯ ಮೇರೆಗೆ ವಿಕ್ಟೋರಿಯಾ ಆಸ್ಪತ್ರೆಗೆ ತೋರಿಸಬಹುದೆಂದೂ, ಅಲ್ಲಿ ಆಗಲಿಲ್ಲ ಎಂದರೆ ತಮ್ಮ ಸ್ವಂತ ಖರ್ಚಿನಲ್ಲಿ ಖಾಸಗಿ ವೈದ್ಯರ ಸೇವೆ ಬಳಸಿಕೊಳ್ಳಬಹುದು ಎಂದು ನಿರ್ದೇಶಿಸಿತು.

ಬೆಂಗಳೂರಿನ ಪ್ರಧಾನ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯದಲ್ಲಿ ಪ್ರತಿ ತಿಂಗಳ ಮೊದಲ ವಾರದಲ್ಲಿ ಗೌರಿ ಲಂಕೇಶ್‌ ಹತ್ಯೆ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಮುಂದಿನ ವಿಚಾರಣೆ ಸೆಪ್ಟೆಂಬರ್ 5 ರಿಂದ 9ರವರೆಗೆ ನಡೆಯಲಿದೆ.

ನಿಮಗೆ ಏನು ಅನ್ನಿಸ್ತು?
2 ವೋಟ್