ಮಾಧ್ಯಮ ಕ್ಷೇತ್ರದಲ್ಲಿ ದಿಗ್ಗಜರ ಪೈಪೋಟಿ; ವಿದೇಶಿ ಸಂಸ್ಥೆಗಳಿಗೆ ಅದಾನಿ- ಅಂಬಾನಿ ಸ್ಪರ್ಧೆ

Adani Ambani
  • ನೆಟ್‌ಫ್ಲಿಕ್ಸ್‌ , ಅಮೆಜಾನ್ ವಿರುದ್ಧ ಅದಾನಿ- ಅಂಬಾನಿ ನೇರ ಸ್ಪರ್ಧೆ
  • ಎಎಂಜಿ ಮೀಡಿಯಾ ನೆಟ್ವರ್ಕ್ಸ್ ಲಿಮಿಟೆಡ್ ಸ್ಥಾಪಿಸಿದ ಅದಾನಿ ಸಮೂಹ

ಏಷ್ಯಾದ ಶ್ರೀಮಂತ ವ್ಯಕ್ತಿಗಳಾದ ಗೌತಮ್ ಅದಾನಿ ಮತ್ತು ಮುಕೇಶ್ ಅಂಬಾನಿ ಭಾರತದಲ್ಲಿ ಮಾಧ್ಯಮ ಹಾಗೂ ಮನರಂಜನೆ ಕ್ಷೇತ್ರದಲ್ಲಿ ಭರ್ಜರಿ ಹೂಡಿಕೆಗೆ ಮುಂದಾಗಿದ್ದಾರೆ. ಕೋಟ್ಯಂತರ ಚಂದಾದಾರರನ್ನು ಹೊಂದಿರುವ ಒಟಿಟಿ ದೈತ್ಯ ಕಂಪನಿಗಳಾದ ನೆಟ್‌ಫ್ಲಿಕ್ಸ್‌  ಮತ್ತು ಅಮೆಜಾನ್ ವಿರುದ್ಧ ನೇರ ಸ್ಪರ್ಧೆಗೆ ಅಂಬಾನಿ- ಅದಾನಿ ಮುಂದಾಗಿದ್ದಾರೆ. 

ಪ್ಯಾರಮೌಂಟ್ ಗ್ಲೋಬಲ್ ಸಂಸ್ಥೆಯ ಜತೆಗೂಡಿ ಕಾರ್ಯ ನಿರ್ವಹಿಸುವ ಅಂಬಾನಿ ಒಡೆತನದ ವಿಯಾಕಾಂ 18 ಮೀಡಿಯಾ ಪ್ರೈವೇಟ್ ಲಿಮಿಟೆಡ್‌ನಲ್ಲಿ ₹135 ಶತಕೋಟಿ ಹೂಡಿಕೆ ಮಾಡಲು ಮಾಧ್ಯಮ ದೈತ್ಯ ಜೇಮ್ಸ್ ಮುರ್ಡೋಕ್ ಅವರ ʻಭೋದಿ ಟ್ರೀ ಸಿಸ್ಟಮ್ಸ್ʼ ಸಂಸ್ಥೆ ಮುಂದಾಗಿದೆ. 

ಮತ್ತೊಂದೆಡೆ ಉದ್ಯಮಿ ಗೌತಮ್ ಅದಾನಿ ಅವರ ಒಡೆತನದ ಅದಾನಿ ಉದ್ಯಮ ಸಮೂಹವು ಎಪ್ರಿಲ್ 26ರಂದು ಎಎಂಜಿ ಮೀಡಿಯಾ ನೆಟ್ವರ್ಕ್ಸ್ ಲಿಮಿಟೆಡ್ ಸ್ಥಾಪಿಸಿರುವುದಾಗಿ ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ (ಬಿಎಸ್‌ಇ) ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್‌ಗೆ (ಎನ್‌ಎಸ್‌ಇ) ಮಾಹಿತಿ ನೀಡಿದೆ. ಎಎಂಜಿ ಮೀಡಿಯಾ ನೆಟ್ವರ್ಕ್ಸ್ ಲಿಮಿಟೆಡ್ ಕಂಪೆನಿಯು ಮುದ್ರಣ, ಜಾಹಿರಾತು, ಪ್ರಸಾರ, ಪ್ರಸರಣ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಲಿದೆ.

ಮುಖೇಶ್ ಅಂಬಾನಿ ಮಾಲೀಕತ್ವದ ರಿಲಯನ್ಸ್ ಇಂಡಸ್ಟ್ರೀಸ್ ಸಮೂಹ ಈಗಾಗಲೇ ಟಿವಿ 18 ಮತ್ತು ರಾಮೋಜಿ ರಾವ್ ಮಾಲೀಕತ್ವದ ಈನಾಡು ಸಮೂಹ ವಾಹಿನಿ ಸಂಸ್ಥೆಗಳ ಮೇಲೆ ₹3,500 ಕೋಟಿ ಹೂಡಿಕೆ ಮಾಡಿದೆ. ಆದರೆ ಅದಾನಿ ಸಮೂಹ ಇದೇ ಮೊದಲ ಬಾರಿಗೆ ಮಾಧ್ಯಮ ಕ್ಷೇತ್ರಕ್ಕೆ ಕಾಲಿಡುತ್ತಿದೆ. ಕಳೆದ ತಿಂಗಳು, ಅದಾನಿ ಮೀಡಿಯಾ ವೆಂಚರ್ಸ್ ಲಿಮಿಟೆಡ್ ಸಂಸ್ಥೆಯು, ಸುದ್ದಿಸಂಸ್ಥೆ ಬ್ಲೂಮ್‌ಬರ್ಗ್‌ನ ಭಾರತೀಯ ಪಾಲುದಾರ  ಕ್ವಿಂಟಿಲಿಯನ್ ಬಿಸಿನೆಸ್ ಮೀಡಿಯಾ ಪ್ರೈವೇಟ್‌ ಲಿಮಿಟೆಡ್‌ನಲ್ಲಿ ಪಾಲುದಾರನಾಗಲು ಮಾತುಕತೆ ನಡೆಸಿದೆ.

ʻಭೋದಿ ಟ್ರೀ ಸಿಸ್ಟಮ್ಸ್ʼ ಸಂಸ್ಥೆ (₹13,500) ಮತ್ತು ರಿಲಯನ್ಸ್ ಇಂಡಸ್ಟ್ರೀಸ್ (₹1,600) ಮೂಲದಿಂದ ಭಾರಿ ಮೊತ್ತವನ್ನು ಬಂಡವಾಳವಾಗಿ ಸಂಗ್ರಹಿಸಿರುವ ವಿಯಾಕಾಂ18, ಸದ್ಯದಲ್ಲೇ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಮಾಧ್ಯಮ ಪ್ರಸಾರ ಹಕ್ಕಿಗಾಗಿ ದೈತ್ಯ ಸಂಸ್ಥೆಗಳಾದ ಡಿಸ್ನಿ, ಅಮೆಜಾನ್ ಹಾಗೂ ಸೋನಿ ಸಮೂಹ ಸಂಸ್ಥೆಗಳ ಜೊತೆ ತೀವ್ರ ಪೈಪೋಟಿ ನಡೆಸಲು ಸಜ್ಜಾಗಿದೆ ಎಂದು ಮೂಲಗಳು ತಿಳಿಸಿದೆ. ಡಿಸ್ನಿ ಸಂಸ್ಥೆಯು ಸ್ಟಾರ್ ಸಮೂಹದಿಂದ ಜನಪ್ರಿಯ ಒಟಿಟಿ ತಾಣ ಹಾಟ್‌ಸ್ಟಾರ್‌ ಅನ್ನು ತನ್ನದಾಗಿಸಿಕೊಂಡಿದೆ. ಕಳೆದ ಐಪಿಎಲ್ ಪಂದ್ಯಾವಳಿಯನ್ನು 380 ದಶಕೋಟಿ ಮಂದಿ ವೀಕ್ಷಿಸಿದ್ದರು.

ಡಿಸ್ನಿ ಏಷ್ಯಾ ಮತ್ತು ಸ್ಟಾರ್ ಇಂಡಿಯಾದ ಮಾಜಿ ಮುಖ್ಯಸ್ಥ ಉದಯ್ ಶಂಕರ್, ಮುರ್ಡೋಕ್ ಅವರ ಜೊತೆ ಸೇರಿ ʻಭೋದಿ ಟ್ರೀ ಸಿಸ್ಟಮ್ಸ್ʼ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ಕತಾರ್ ದೇಶದ ಸರ್ಕಾರಿ ಅಧೀನದಲ್ಲಿರುವ ʼಕತಾರ್ ಇನ್‌ವೆಸ್ಟ್‌ಮೆಂಟ್‌ ಅಥಾರಿಟಿʼ ಸಂಸ್ಥೆ ಭೋದಿ ಸಮೂಹದ ಮುಖ್ಯ ಹೂಡಿಕೆದಾರರಾಗಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app