
- ಗೃಹಬಂಧನಕ್ಕೆ ಕಮ್ಯುನಿಸ್ಟ್ ಪಕ್ಷದ ಗ್ರಂಥಾಲಯ ಸೂಚಿಸಿರುವ ಆರೋಪ
- ಗ್ರಂಥಾಲಯ ಎಂದು ಮಾತ್ರ ಹೆಸರಿಸಿದ್ದೇವೆ ಎಂದ ನವ್ಲಾಖಾ ಪರ ವಕೀಲೆ
"ತನ್ನನ್ನು ಗೃಹ ಬಂಧನದಲ್ಲಿ ಇರಿಸುವಂತೆ ಸರ್ವೋಚ್ಚ ನ್ಯಾಯಾಲಯ ಹೊರಡಿಸಿದ್ದ ಆದೇಶವನ್ನು ಎನ್ಐಎ ಅಧಿಕಾರಿಗಳು ಪಾಲಿಸುತ್ತಿಲ್ಲ" ಎಂದು ಭೀಮಾ ಕೋರೆಗಾಂವ್ ಪ್ರಕರಣದ ಆರೋಪಿ ಗೌತಮ್ ನವ್ಲಾಖಾ ಅವರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ.
ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ಅವರ ಪೀಠದ ಮುಂದೆ ಹಿರಿಯ ವಕೀಲೆ ನಿತ್ಯಾ ರಾಮಕೃಷ್ಣನ್ ಅವರು ಈ ವಿಚಾರವನ್ನು ಪ್ರಸ್ತಾಪಿಸಿದರು.
ನವ್ಲಾಖಾ ಪರ ವಕೀಲರ ಆರೋಪವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ)ಯ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ತಳ್ಳಿ ಹಾಕಿದರು. "ನವ್ಲಾಖಾ ಅವರನ್ನು ಗೃಹ ಬಂಧನದಲ್ಲಿ ಇರಿಸಲು ನಿವಾಸದ ವಿವರ ನೀಡುವಂತೆ ಕೋರಿದ್ದೆವು. ಆದರೆ, ಅವರು ಕಮ್ಯುನಿಸ್ಟ್ ಪಕ್ಷದ ಗ್ರಂಥಾಲಯವಿರುವ ಕಟ್ಟಡದ ವಿಳಾಸ ನೀಡಿದ್ದಾರೆ" ಎಂದು ಆರೋಪಿಸಿದರು.
"ನವ್ಲಾಖಾ ಅವರು ಮಾವೋವಾದಿಗಳೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಅವರ ಗೃಹ ಬಂಧನದಲ್ಲಿ ಇರಿಸಲು ವಿರೋಧಿಸಿದ್ದೆವು. ಆದರೆ, ಅವರು ಈಗ ಮನೆಯ ಬದಲಿಗೆ ಕಮ್ಯುನಿಸ್ಟ್ ಪಕ್ಷದ ಕಚೇರಿಯ ಗ್ರಂಥಾಲಯವನ್ನು ತಮ್ಮ ವಾಸಸ್ಥಳದ ಗುರುತಾಗಿ ನೀಡಿದ್ದಾರೆ" ಎಂದು ಮೆಹ್ತಾ ಹೇಳಿದರು.
ಈ ಸುದ್ದಿ ಓದಿದ್ದೀರಾ?: ಅಕ್ರಮ ಹಣ ವರ್ಗಾವಣೆ | ಎಎಪಿ ನಾಯಕ ಸತ್ಯೇಂದ್ರ ಜೈನ್ಗೆ ಜಾಮೀನು ತಿರಸ್ಕೃತ
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ನವ್ಲಾಖಾ ಪರ ವಕೀಲೆ ನಿತ್ಯಾ, "ಗ್ರಂಥಾಲಯ ಎಂದೇ ವಿಳಾಸ ನೀಡಲಾಗಿದೆ" ಎಂದರು. ವಾದ-ಪ್ರತಿವಾದ ಆಲಿಸಿದ ಸುಪ್ರೀಂ ಕೋರ್ಟ್, ವಿಚಾರಣೆಯನ್ನು ನಾಳೆಗೆ (ನ.18) ಮುಂದೂಡಿ ಆದೇಶಿಸಿತು.
ನವೆಂಬರ್ 10ರಂದು ನವ್ಲಾಖಾ ಅವರನ್ನು ಗೃಹ ಬಂಧನದಲ್ಲಿ ಇರಿಸಲು ಹಲವಾರು ಷರತ್ತುಗಳೊಂದಿಗೆ ಸುಪ್ರೀಂ ಕೋರ್ಟ್ ಅನುಮತಿ ನೀಡಿತ್ತು. ಜತೆಗೆ, ಈ ಸಂಬಂಧ 48 ಗಂಟೆಗಳ ಒಳಗೆ ಕ್ರಮ ಕೈಗೊಳ್ಳುವಂತೆಯೂ ಅಧಿಕಾರಿಗಳಿಗೆ ಸೂಚಿಸಿತ್ತು.