ವಿಶೇಷ ವರದಿ | ಸಂಕಷ್ಟದಲ್ಲಿ ನಾಸಿಕ್‌ ಆದಿವಾಸಿಗಳ ಬದುಕು; ಮಕ್ಕಳನ್ನು ಕುರಿ ಕಾಯಲು ಕಳುಹಿಸುತ್ತಿರುವ ಪೋಷಕರು

ಇಡೀ ವಿಶ್ವವನ್ನೇ ಭಯಭೀತರನ್ನಾಗಿಸಿದ ಕೋವಿಡ್‌ 19, ಭಾರತದಲ್ಲಿ ಆರ್ಥಿಕವಾಗಿ, ಸಾಮಾಜಿಕವಾಗಿ ಜನರು ಸಂಕಷ್ಟಕ್ಕೀಡಾಗುವಂತೆ ಮಾಡಿದೆ. ಸಾಂಕ್ರಾಮಿಕ ರೋಗದಿಂದಾಗಿ ಜೀವನೋಪಾಯದ ಬಿಕ್ಕಟ್ಟನ್ನು ಎದುರಿಸುತ್ತಿರುವ ಮಹಾರಾಷ್ಟ್ರದ ನಾಸಿಕ್‌ ಪ್ರದೇಶದ ಬುಡಕಟ್ಟು ಸಮುದಾಯದ ಸದಸ್ಯರು ವರ್ಷಕ್ಕೆ 10 ಸಾವಿರ ಸಂಬಳದಂತೆ ತಮ್ಮ ಮಕ್ಕಳನ್ನು ಕುರಿ ಕಾಯುವ ಕೆಲಸಕ್ಕಾಗಿ ಕುರಿಗಾಹಿಗಳಿಗೆ ಹಸ್ತಾಂತರಿಸಿದ್ದಾರೆ ಎಂದು ಪೊಲೀಸರು ಭಾನುವಾರ (ಸೆ. 11) ತಿಳಿಸಿದ್ದಾರೆ. 

ಹೀಗೆ ಕೂಲಿ ಕೆಲಸ ಮಾಡುತ್ತಿದ್ದ, 11 ವರ್ಷದ ಬಾಲಕಿಗೆ ಸಂಬಂಧಿಸಿ ಕೊಲೆ ಪ್ರಕರಣ ದಾಖಲಾದ ನಂತರ ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ ಒಟ್ಟಾರೆ ಜಾಲದ ಅರಿವಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಮಹಾರಾಷ್ಟ್ರದ ಅಹಮದ್‌ನಗರದಿಂದ ಈವರೆಗೆ ಎಂಟು ಮಕ್ಕಳನ್ನು ನಾಸಿಕ್‌ ಗ್ರಾಮಾಂತರ ಪೊಲೀಸರು ರಕ್ಷಿಸಿದ್ದಾರೆ. ಬಾಲಕಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಬಂಧಿಸಲಾಗಿದೆ. ಹಾಗೆಯೇ, ಇತರ ಮೂವರನ್ನು ಬಾಲಕಾರ್ಮಿಕ ಪದ್ದತಿ ನಿರ್ಮೂಲನಾ ಕಾಯ್ದೆ- 1976 ಅಡಿಯಲ್ಲಿ ಬಂಧಿಸಲಾಗಿದೆ.

ಪೋಷಕರಿಂದಲೇ ಕುರಿಗಾಹಿಗಳ ವಶಕ್ಕೆ ಹೋದ ಮಕ್ಕಳು

ಆಗಸ್ಟ್ 27ರಂದು, ಬಾಲಕಿಯು ತಾತ್ಕಾಲಿಕ ಶೆಡ್‌ಗಳಲ್ಲಿ ವಾಸಿಸುತ್ತಿದ್ದ ಬುಡಕಟ್ಟು ಸಮುದಾಯದ ಗುಡಿಸಲುಗಳ ಹೊರಗೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದಳು. ನಂತರ ಪೊಲೀಸರು ಮತ್ತು ಬಾಲಕಿಯ ಸಂಬಂಧಿಕರು ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದರು. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸೆಪ್ಟೆಂಬರ್ 3ರಂದು ಸಾವನ್ನಪ್ಪಿದ್ದಳು. ಬಾಲಕಿಯ ಸಾವಿಗೆ ಸಂಬಂಧಿಸಿದ ಪ್ರಕರಣ ವಿಚಾರಣೆಯ ಸಮಯದಲ್ಲಿ, ಬಾಲಕಿ ಮತ್ತು ಆಕೆಯ 10 ವರ್ಷದ ಸಹೋದರನನ್ನು ಅಹ್ಮದ್‌ನಗರದ ಕುರಿಗಾಹಿಗಳಿಗೆ ಹಸ್ತಾಂತರಿಸಿರುವುದು ಪೊಲೀಸರ ಗಮನಕ್ಕೆ ಬಂದಿದೆ. ಬಾಲಕಿಯು ವರ್ಷಕ್ಕೊಮ್ಮೆ ಅಥವಾ ಎರಡು ಬಾರಿ ತನ್ನ ಹೆತ್ತವರನ್ನು ಭೇಟಿಯಾಗಲು ಬರುತ್ತಿದ್ದಳು.

ಈ ಸುದ್ದಿ ಓದಿದ್ದೀರಾ?: ಇತರೆ ರಾಷ್ಟ್ರಗಳಿಗೆ ಹೋಲಿಸಿದರೆ ಕೋವಿಡ್‌ ದುಃಖ ಇಂಡಿಯಾದಲ್ಲೇ ಹೆಚ್ಚು | 10 ಮುಖ್ಯ ಅಂಶ

ಹಾವು ಕಡಿತದಿಂದ ಆಗಸ್ಟ್ 21ರಿಂದಲೇ ಪ್ರಜಾಹೀನಳಾಗಿದ್ದ ಬಾಲಕಿಯನ್ನು ಅಹ್ಮದ್‌ನಗರ ಮತ್ತು ಪುಣೆಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೆ, ಬಾಲಕಿ ಎಚ್ಚರಗೊಂಡಿರಲಿಲ್ಲ. ಆದ್ದರಿಂದ, ಕುರಿಗಾಹಿಗಳು ಆಕೆಯನ್ನು ಪೋಷಕರಿದ್ದ ತಾತ್ಕಾಲಿಕ ಶೆಡ್‌ ಬಳಿ ಬಿಟ್ಟು ಹೋಗಿದ್ದಾರೆ ಎಂದು ತನಿಖೆಯ ಸಂದರ್ಭದಲ್ಲಿ ತಿಳಿದುಬಂದಿದೆ.

ಜೀತಪದ್ಧತಿಯ ಒಟ್ಟು ಜಾಲದ ತನಿಖೆಗೆ ವಿಶೇಷ ತಂಡ

ಜೀತಪದ್ಧತಿಗೆ ಮಕ್ಕಳನ್ನು ತಳ್ಳುತ್ತಿರುವ ಈ ಪ್ರಕರಣದ ಬಗ್ಗೆ ವಿವರವಾದ ತನಿಖೆ ನಡೆಸಲು ಪೊಲೀಸರ ತಂಡವನ್ನು ರಚಿಸಲಾಗಿತ್ತು. ಮಕ್ಕಳನ್ನು ಕೂಲಿ ಕೆಲಸಕ್ಕೆ ಕಳುಹಿಸುವ ನೆಪದಲ್ಲಿ, ಬುಡಕಟ್ಟು ಸಮುದಾಯದ ಕುಟುಂಬಗಳು 6ರಿಂದ 15 ವರ್ಷ ವಯಸ್ಸಿನ ಕನಿಷ್ಠ 11 ಮಕ್ಕಳನ್ನು ಕುರಿಗಾಹಿಗಳಿಗೆ ಹಸ್ತಾಂತರಿಸಿದ್ದಾರೆ ಎಂಬುದು ತನಿಖೆಯಲ್ಲಿ ಪೊಲೀಸರಿಗೆ ತಿಳಿದು ಬಂದಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆʼʼ ಎಂದು ನಾಸಿಕ್ ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ ಸಚಿನ್ ಪಾಟೀಲ್ ತಿಳಿಸಿದ್ದಾರೆ.

ʻʻಬಾಲಕಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾದ ನಂತರ, ಘೋಟಿ ಠಾಣೆಯ ಪೊಲೀಸರು ಆರಂಭದಲ್ಲಿ ಭಾರತೀಯ ದಂಡ ಸಂಹಿತೆ ಸೆಕ್ಷನ್ 307 (ಕೊಲೆ ಯತ್ನ) ಅಡಿಯಲ್ಲಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ನಂತರ ಅದನ್ನು ಕೊಲೆ ಪ್ರಕರಣವಾಗಿ ಪರಿವರ್ತಿಸಲಾಗಿದ್ದು, ಇಬ್ಬರನ್ನು ಬಂಧಿಸಲಾಗಿದೆ. ಬಾಲಕಿಯ ಸಾವಿಗೆ ಕಾರಣವೇನು ಎಂಬುದು ಮರಣೋತ್ತರ ಪರೀಕ್ಷೆಯಿಂದ ತಿಳಿಯಲಿದೆʼʼ ಎಂದು ಪೊಲೀಸರು ತಿಳಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

ಬಡತನದಿಂದಾಗಿ ಮಕ್ಕಳನ್ನು ಬಾಡಿಗೆ ನೀಡಿದ ಪೋಷಕರು

ಈ ಮಕ್ಕಳ ಪೋಷಕರು ವರ್ಷಕ್ಕೆ 10 ಸಾವಿರ ಹಣ ಮತ್ತು  ಮೇಕೆ/ ಕುರಿಗಳನ್ನು ಏಜೆಂಟರ ಮೂಲಕ ಪಡೆದು, ಮಕ್ಕಳನ್ನು ಕುರಿಗಾಹಿಗಳಿಗೆ ನೀಡಿದ್ದಾರೆ. ಮಕ್ಕಳನ್ನು ಕುರಿ ಮತ್ತು ಮೇಕೆಗಳ ಕಾವಲು ಕಾಯಲು ನಿಯೋಜಿಸಲಾಗುತ್ತಿತ್ತು ಎಂದು ತನಿಖೆಯಿಂದ ತಿಳಿದುಬಂದಿದೆ.

ಸಾಂಕ್ರಾಮಿಕ ರೋಗದ ಮೊದಲು, ಈ ಬುಡಕಟ್ಟು ಸಮುದಾಯದ ಕುಟುಂಬಗಳು ಇಟ್ಟಿಗೆ ಗೂಡುಗಳಲ್ಲಿ ಹಾಗೂ ಕಬ್ಬಿನ ತೋಟಗಳಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಆದರೆ, ಸಾಂಕ್ರಾಮಿಕ ಸಮಯದಲ್ಲಿ ಕೂಲಿ ಕೆಲಸ ಇಲ್ಲದೇ ಇದ್ದಾಗ, ಜೀವನೋಪಾಯಕ್ಕಾಗಿ ಬೇರೆ ದಾರಿಯಿಲ್ಲದೇ ತಮ್ಮ ಮಕ್ಕಳನ್ನು ಕುರಿಗಾಹಿಗಳಿಗೆ ಒಪ್ಪಿಸಿದ್ದಾರೆ.

ಇಂತಹ ಚಟುವಟಿಕೆಗಳಲ್ಲಿ ತೊಡಗಿರುವ ಏಜೆಂಟರು ಹಾಗೂ ಮಕ್ಕಳನ್ನು ಕೂಲಿ ಕೆಲಸಕ್ಕೆ ಬಳಸಿಕೊಂಡ ಕುರಿಗಾಹಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಈ ರೀತಿ ಕೂಲಿ ಕೆಲಸದಲ್ಲಿ ತೊಡಗಿಸಿಕೊಂಡಿರುವ ಮಕ್ಕಳನ್ನು ರಕ್ಷಿಸುವ ನಿಟ್ಟಿನಲ್ಲಿ ಪೊಲೀಸರು ಕಾರ್ಯಪ್ರವೃತ್ತರಾಗಿದ್ದಾರೆ. ಎನ್‌ಜಿಒಗಳ ಸಹಾಯದಿಂದ ಅವರನ್ನು ರಕ್ಷಿಸಲು ಅಪ್ರಾಪ್ತ ಮಕ್ಕಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ನಿಮಗೆ ಏನು ಅನ್ನಿಸ್ತು?
2 ವೋಟ್