ವಿಶ್ವ ಮಕ್ಕಳ ದಿನಾಚರಣೆ | ಭಾರತದ ಐತಿಹಾಸಿಕ ಕಟ್ಟಡಗಳಿಗೆ ನೀಲಿ ಮೆರುಗು; ಕಾರಣ ಬಿಚ್ಚಿಟ್ಟ ಯುನಿಸೆಫ್‌

World Children's Day Symbol
  • ವಿಶ್ವ ಮಕ್ಕಳ ದಿನಾಚರಣೆಗೆ ದೇಶಾದ್ಯಂತ ಬಣ್ಣ ಬದಲಿಸಲಿರುವ 230 ಕಟ್ಟಡಗಳು
  • 1989ರ ನವೆಂಬರ್‌ 20ರಿಂದ ಯುನಿಸೆಫ್‌ನಿಂದ ಜಾಗತಿಕ ಮಕ್ಕಳ ದಿನ ಆಚರಣೆ

ಭಾರತದ ಮೊದಲ ಪ್ರಧಾನಿ ಜವಹರಲಾಲ್‌ ನೆಹರು ಅವರ ಜನ್ಮದಿನವನ್ನು ಸೋಮವಾರ (ನ. 14) ಮಕ್ಕಳ ದಿನಾಚರಣೆಯಾಗಿ ದೇಶದೆಲ್ಲೆಡೆ ಸಂಭ್ರಮಿಸಲಾಗುತ್ತಿದೆ. ಇನ್ನೊಂದೆಡೆ ಭಾನುವಾರ (ನ. 20) ಇಡೀ ವಿಶ್ವಾದ್ಯಂತ ಮಕ್ಕಳ ದಿನ ಆಚರಿಸಲಾಗುತ್ತದೆ. ಆ ದಿನವನ್ನು ಭಾರತದಲ್ಲೂ ದೊಡ್ಡ ಮಟ್ಟದಲ್ಲಿ ಸಂಭ್ರಮಿಸಲಾಗುತ್ತದೆ. ಆ ದಿನ ಭಾರತದ ಐತಿಹಾಸಿಕ ಕಟ್ಟಡಗಳು ನೀಲಿ ಬಣ್ಣಕ್ಕೆ ತಿರುಗಲಿವೆ. 

ಭಾರತದಲ್ಲಿ ವಿಶ್ವಸಂಸ್ಥೆಯ ಮಕ್ಕಳ ನಿಧಿಯ (ಯುನಿಸೆಫ್‌) ಘಟಕವು ವಿಶ್ವ ಮಕ್ಕಳ ದಿನಾಚರಣೆಯ ಮೇಲುಸ್ತುವಾರಿ ವಹಿಸುತ್ತದೆ. ಈ ದಿನ ಐತಿಹಾಸಿಕ ಸ್ಮಾರಕಗಳು ಸೇರಿದಂತೆ ಹಲವು ಕಟ್ಟಡಗಳು ನೀಲಿ ಬಣ್ಣ ಲೇಪಿಸಿಕೊಂಡು ಕಂಗೊಳಿಸುವುದನ್ನು ವೀಕ್ಷಿಸಬಹುದು. 

Eedina App

1989ರ ನವೆಂಬರ್‌ 20ರಿಂದ ವಿಶ್ವ ಮಕ್ಕಳ ದಿನ ಆಚರಿಸಲಾಗುತ್ತಿದೆ ಎಂದು ಯುನಿಸೆಫ್‌ ಪ್ರಕಟಣೆಯಲ್ಲಿ ತಿಳಿಸಿದೆ. ಮಕ್ಕಳಿಗಾಗಿ ಹೆಚ್ಚು ಸುರಕ್ಷಿತ ಮತ್ತು ಆರೋಗ್ಯಕರ ವಾತಾವರಣ ಸೃಷ್ಟಿಸಲು ತಡೆರಹಿತ ಬೆಂಬಲದ ಸಾಂಕೇತಿಕ ಚಿಹ್ನೆಯಾಗಿ ಈ ವಾರ ಕಟ್ಟಡಗಳು ನೀಲಿ ಬಣ್ಣಕ್ಕೆ ತಿರುಗುತ್ತವೆ ಎಂದು ಯುನಿಸೆಫ್‌ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಸೋಮವಾರ (ನ. 14) ಬರೆದುಕೊಂಡಿದೆ.  

“ಭಾರತದಾದ್ಯಂತ ಕಟ್ಟಡಗಳು ಏಕೆ ನೀಲಿ ಬಣ್ಣಕ್ಕೆ ತಿರುಗುತ್ತಿವೆ ಎಂದು ಆಶ್ಚರ್ಯಪಡುತ್ತಿದ್ದೀರಾ? ಇದು ಮಕ್ಕಳಿಗಾಗಿ! ನಿಮ್ಮ ನಗರ, ಪ್ರದೇಶದಲ್ಲಿ ಮಕ್ಕಳ ಸುರಕ್ಷತೆ ಬಗ್ಗೆ ಜಾಗರೂಕರಾಗಿರಿ. ಮಕ್ಕಳಿಗೆ ಸದಾ ನಿಮ್ಮ ಬೆಂಬಲವನ್ನು ನೀಡಿ” ಎಂದು ಯುನಿಸೆಫ್‌ ಟ್ವೀಟ್ ಮಾಡಿದೆ.

“ಇಂದು ಮಕ್ಕಳಿಂದ ಮಕ್ಕಳಿಗಾಗಿ ಕೆಲಸ ಮಾಡುವ ದಿನ. ಮಕ್ಕಳ ದಿನಾಚರಣೆಯ ಶುಭಾಶಯಗಳು” ಎಂದು ಯುನಿಸೆಫ್‌ ಘಟಕ ಮತ್ತೊಂದು ಟ್ವೀಟ್‌ನಲ್ಲಿ ಹೇಳಿದೆ. 

ವಿಶ್ವಸಂಸ್ಥೆ ನವೆಂಬರ್ 14ರಿಂದ 20ರವರೆಗೆ ಮಕ್ಕಳ ಹಕ್ಕುಗಳ ವಾರ ಎಂದು ಆಚರಿಸಲಾಗುತ್ತದೆ. ಮಕ್ಕಳು ತಮ್ಮ ಹಕ್ಕುಗಳು ಮತ್ತು ಅವುಗಳನ್ನು ಅರಿಯುವ ಬಗೆ ವಿವರಿಸುವ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಈ ಸುದ್ದಿ ಓದಿದ್ದೀರಾ? ಪಶ್ಚಿಮ ಬಂಗಾಳ | ಕೇಂದ್ರದಿಂದ ಹಣಕಾಸು ನೆರವು ಸಿಗದೆ ನೆಲ ಕಚ್ಚಿದ ಮನರೇಗಾ

ಕಳೆದ ವರ್ಷ ದೇಶಾದ್ಯಂತ ಸುಮಾರು 230 ಕಟ್ಟಡಗಳು ವಿಶ್ವ ಮಕ್ಕಳ ದಿನಾಚರಣೆಗೆ ಬೆಂಬಲ ಸೂಚಿಸಲು ಬಣ್ಣ ಬದಲಿಸುವುದಾಗಿ ಘೋಷಿಸಿ ತಮ್ಮ ಹೆಸರು ನೋಂದಾಯಿಸಿವೆ ಎಂದು ಯುನಿಸೆಫ್ ವರದಿ ಮಾಡಿದೆ. 

ಐತಿಹಾಸಿಕ ಕಟ್ಟಡಗಳಾದ ರಾಷ್ಟ್ರಪತಿ ಭವನ, ಪ್ರಧಾನ ಮಂತ್ರಿ ಕಚೇರಿ, ಸಂಸತ್ ಭವನ, ಕುತುಬ್ ಮಿನಾರ್, ಕೋಲ್ಕತ್ತದ ಹೌರಾ ಸೇತುವೆ ಮತ್ತು ಹೈದರಾಬಾದ್‌ನ ಚಾರ್ಮಿನಾರ್ ಮಕ್ಕಳ ಹಕ್ಕುಗಳಿಗಾಗಿ ಏಕತೆಯ ಸಂಕೇತವಾಗಿ ನೀಲಿ ಬಣ್ಣದಲ್ಲಿ ಕಂಗೊಳಿಸಲಿವೆ ಎಂದು ಯುನಿಸೆಫ್‌ ಹೇಳಿದೆ. 

ನಿಮಗೆ ಏನು ಅನ್ನಿಸ್ತು?
0 ವೋಟ್
eedina app