
- ಆರ್ಎಸ್ಎಸ್, ದೇಶಿ ಜಾಗರಣ ಮಂಚ್, ಬಿಕೆಎಸ್ ಸಂಘಟನೆಗಳ ವಿರೋಧ
- ʼಕುಲಾಂತರಿ ಸಾಸಿವೆ ಸ್ವದೇಶಿ ಅಲ್ಲ; ಎಂದಿಗೂ ಅದನ್ನು ಈ ನೆಲದಲ್ಲಿ ನೆಡಲು ಬಿಡಲ್ಲʼ
ಭಾರತೀಯ ಜನತಾ ಪಕ್ಷ (ಬಿಜೆಪಿ) ನೇತೃತ್ವದ ಕೇಂದ್ರ ಸರ್ಕಾರ ಕುಲಾಂತರಿ ಸಾಸಿವೆಗೆ ಅನುಮತಿ ನೀಡಿರುವುದಕ್ಕೆ ಆರ್ಎಸ್ಎಸ್ ಸೇರಿದಂತೆ ಬಿಜೆಪಿಯ ಅಂಗಸಂಸ್ಥೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ.
ವಾಣಿಜ್ಯ ಉದ್ದೇಶಕ್ಕಾಗಿ ಸ್ಥಳೀಯವಾಗಿ ಅಭಿವೃದ್ಧಿಪಡಿಸಿ ಮಾರ್ಪಡಿಸಿದ ಕುಲಾಂತರಿ ಸಾಸಿವೆ ಬೆಳೆಸುವುದು, ಎಣ್ಣೆಕಾಳುಗಳ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವುದು ತನ್ನ ಉದ್ದೇಶ ಎಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಹೇಳಿತ್ತು. ಆದರೆ, ಇದಕ್ಕೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ಎಸ್ಎಸ್) ಸೇರಿದಂತೆ ಹಲವು ಸಂಘಟನೆಗಳಿಂದ ತೀವ್ರ ವಿರೋಧ ಎದುರಾಗಿದೆ.
ಆರ್ಎಸ್ಎಸ್ ಮತ್ತು ಅದರ ಅಂಗಸಂಸ್ಥೆಗಳ ಕೆಲ ನಾಯಕರು ಕುಲಾಂತರಿ ಸಾಸಿವೆ ಬೆಳೆಯುವುದನ್ನು ವಿರೋಧಿಸಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.
ಅಲ್ಲದೆ, ಭಾರತೀಯ ಕಿಸಾನ್ ಸಂಘ (ಬಿಕೆಎಸ್) ಮತ್ತು ಸ್ವದೇಶಿ ಜಾಗರಣ ಮಂಚ್ (ಎಸ್ಜೆಎಂ) ಸಂಘಟನೆಗಳು ಕೂಡ ಪ್ರಧಾನಿಗೆ ಪತ್ರ ಬರೆದು, ಈ ಕ್ರಮವನ್ನು ನಿಲ್ಲಿಸಲು ಮಧ್ಯಪ್ರವೇಶಿಸುವಂತೆ ಕೋರಿವೆ. "ಈ ಮಾರ್ಪಡಿಸಿದ ಸಾಸಿವೆ ಅಪಾಯಕಾರಿ ಮತ್ತು ಸ್ವದೇಶಿ ಅಲ್ಲ" ಎಂದು ಸ್ವದೇಶಿ ಜಾಗರಣ ಮಂಚ್ನ ರಾಷ್ಟ್ರೀಯ ಸಂಚಾಲಕ ಅಶ್ವನಿ ಮಹಾಜನ್ ಹೇಳಿದ್ದಾರೆ.
ಈ ಕುರಿತು ಶುಕ್ರವಾರ (ನ.11) ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಭೂಪೇಂದರ್ ಯಾದವ್ ಅವರಿಗೆ ಪತ್ರ ಬರೆಯಲಾಗಿದ್ದು, "ಕುಲಾಂತರಿ ಸಾಸಿವೆಯನ್ನು ಈಗಷ್ಟೇ ಅಲ್ಲ, ಮುಂದೆಯೂ ಎಂದೆಂದಿಗೂ ನಮ್ಮ ನೆಲದಲ್ಲಿ ನೆಡಲು ಅನುಮತಿಸುವುದಿಲ್ಲ" ಎಂದು ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಫೇಸ್ಬುಕ್ನಿಂದ | ಕುಲಾಂತರಿ ಸಾಸಿವೆ ಕುರಿತು ಪ್ರೀತಿ ಬೆಳೆಸಿಕೊಳ್ಳುವ ಮುನ್ನ ಈ ವಿಷಯಗಳು ನಿಮಗೆ ಗೊತ್ತಿರಲಿ
ಪರಿಸರ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಜೆನೆಟಿಕ್ ಇಂಜಿನಿಯರಿಂಗ್ ಅಪ್ರೈಸಲ್ ಕಮಿಟಿ (ಜಿಇಎಸಿ) ಮೂಲಕ ಕುಲಾಂತರಿ ಸಾಸಿವೆ ಬೆಳೆಯಲು ಕೇಂದ್ರ ಅನುಮತಿ ನೀಡಿದ ನಂತರ ಪ್ರಾತ್ಯಕ್ಷಿಕೆಗೆ ಕ್ಷೇತ್ರ ಆಯ್ಕೆಯಾಗಿ ನ.3ರಂದು ಮೊದಲ ಹಂತದ ಬಿತ್ತನೆಯೂ ನಡೆದಿದೆ.
ಈ ಹಿಂದೆ ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಕೂಡ ಕುಲಾಂತರಿ ಸಾಸಿವೆಯನ್ನು ತೀವ್ರವಾಗಿ ವಿರೋಧಿಸಿತ್ತು.
ಈ ಕುರಿತು ರಾಕೇಶ್ ಟಿಕಾಯತ್ ತೀವ್ರ ವಿರೋಧವನ್ನು ವ್ಯಕ್ತಪಡಿಸಿ, "ಕೇಂದ್ರ ಸರ್ಕಾರದ ಈ ನಿರ್ಧಾರವನ್ನು ಒಪ್ಪುವುದಿಲ್ಲ. ದೇಶದಲ್ಲಿ ಕುಲಾಂತರಿ ಸಾಸಿವೆ ಬೆಳೆಯಲು ಅವಕಾಶ ನೀಡುವುದಿಲ್ಲ" ಎಂದು ಎಚ್ಚರಿಕೆ ನೀಡಿದ್ದರು. ಇದೀಗ ಬಿಜೆಪಿಯ ಅಂಗಸಂಸ್ಥೆಗಳೂ ಕೂಡ ಕುಲಾಂತರಿ ಸಾಸಿವೆ ವಿರುದ್ಧ ಧ್ವನಿಯೆತ್ತಿವೆ.