
- ಮಠದ ಸ್ವತ್ತು ಮತ್ತು ಹಣ ದುರುಪಯೋಗವಾಗುವ ಸಾಧ್ಯತೆ
- ವೀರಶೈವ-ಲಿಂಗಾಯತ ಮುಖಂಡರ ಸಭೆ ಕರೆದ ಏಕಾಂತಯ್ಯ
ಮುರುಘಾ ಮಠಕ್ಕೆ ಆಡಳಿತಾಧಿಕಾರಿ ನೇಮಕ ವಿಚಾರವಾಗಿ ಮಾಜಿ ಸಚಿವ ಎಚ್ ಏಕಾಂತಯ್ಯನವರು ಡಿ.3ರಂದು ವೀರಶೈವ-ಲಿಂಗಾಯತ ಸಮಾಜದ ಮುಖಂಡರ ಸಭೆ ಕರೆದಿದ್ದಾರೆ.
ಚಿತ್ರದುರ್ಗದಲ್ಲಿರುವ ಎಸ್ ನಿಜಲಿಂಗಪ್ಪನವರ ಸ್ಮಾರಕದ ಆವರಣದಲ್ಲಿ ಸಭೆ ನಡೆಯಲಿದ್ದು, ಸಮಾಜದ ಮುಖಂಡರೆಲ್ಲರೂ ಭಾಗವಹಿಸುವಂತೆ ಮಾಜಿ ಸಚಿವ ಎಚ್ ಏಕಾಂತಯ್ಯ ಮನವಿ ಮಾಡಿದ್ದಾರೆ.
ಅಪ್ರಾಪ್ತ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ 2022ರ ಸೆ.1ರಂದು ಚಿತ್ರದುರ್ಗದ ಮುರುಘ ರಾಜೇಂದ್ರ ಬೃಹನ್ಮಠದ ಪೀಠಾಧಿಪತಿ ಶಿವಮೂರ್ತಿ ಸ್ವಾಮಿಯನ್ನು ಪೊಲೀಸರು ಬಂಧಿಸಿದ್ದರು. ಸದ್ಯ, ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ.
ಈ ಹಿನ್ನೆಲೆಯಲ್ಲಿ, ಸೆ.29ರಂದು ವೀರಶೈವ ಲಿಂಗಾಯತ ಸಮಾಜದ ಸಭೆ ನಡೆಸಿದ್ದ ಏಕಾಂತಯ್ಯ ಅವರು, ಸಭೆಯ ತೀರ್ಮಾನದಂತೆ ಅ.10ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿದ್ದರು.
ಈ ವೇಳೆ, ಮುರುಘಾ ಮಠದ ಪೀಠಾಧಿಪತಿಗಳ ಅನುಪಸ್ಥಿತಿಯಲ್ಲಿ ಎಸ್ಜೆಎಂ ವಿದ್ಯಾಪೀಠದ ಆಡಳಿತ ವ್ಯವಸ್ಥೆಯಲ್ಲಿ ಉಂಟಾಗಿರುವ ವಿಷಮ ಪರಿಸ್ಥಿತಿಯನ್ನು ಅವರ ಗಮನಕ್ಕೆ ತಂದಿದ್ದರು. ಶಿವಮೂರ್ತಿ ಸ್ವಾಮಿ ತಮ್ಮ ಅನುಪಸ್ಥಿತಿಯಲ್ಲಿ ಮಠದ ನ್ಯಾಸ ಪತ್ರ (ಟ್ರಸ್ಟ್ ಡೀಡ್) ಪ್ರಕಾರ, ಗದ್ದುಗೆಯ ದೈನಂದಿನ ಪೂಜಾ ಕಾರ್ಯ ಚಟುವಟಿಕೆ ನಡೆಸಿಕೊಂಡು ಹೋಗಲು ದಾವಣಗೆರೆ ವಿರಕ್ತ ಮಠದ ಬಸವಪ್ರಭು ಅವರಿಗೆ ಜವಾಬ್ದಾರಿ ವಹಿಸಿದ್ದಾರೆ. ವಿದ್ಯಾಪೀಠದ ಬೈಲಾ ಪ್ರಕಾರ, ತಮಗಿದ್ದ ಪರಮಾಧಿಕಾರವನ್ನು ಎಸ್ಜೆಎಂ ವಿದ್ಯಾಪೀಠದ ತಾತ್ಕಾಲಿಕ ಕಾರ್ಯದರ್ಶಿಯಾಗಿ ನೇಮಿಸಿರುವ ಎಸ್ ಬಿ ವಸ್ತ್ರಮಠದ ಅವರಿಗೆ ಹಸ್ತಾಂತರಿಸಿದ್ದಾರೆ. ಹೀಗೆ ಆಡಳಿತ ಮತ್ತು ಹಣಕಾಸು ನಿರ್ವಹಣೆಯನ್ನು ಬೇರೆಯವರಿಗೆ ವರ್ಗಾಯಿಸಿರುವುದನ್ನು ವಿಷಮ ಪರಿಸ್ಥಿತಿ ಎಂದು ಪರಿಗಣಿಸಬೇಕು. ಜತೆಗೆ, ಎಸ್ಜೆಎಂ ವಿದ್ಯಾಪೀಠದ ದೈನಂದಿನ ಹಣಕಾಸು - ಆಡಳಿತಾತ್ಮಕ ಚಟುವಟಿಕೆಗಳನ್ನು ನಿರ್ವಹಿಸಲು ಸರ್ಕಾರ ಸೂಕ್ತ ಆಡಳಿತಾಧಿಕಾರಿ ನೇಮಿಸಲು ಮನವಿ ಮಾಡಿದ್ದರು.
"ಶಿವಮೂರ್ತಿ ಸ್ವಾಮೀಜಿ ವಿರುದ್ಧ ಪೋಕ್ಸೊ ಪ್ರಕರಣ ದಾಖಲಾಗಿದ್ದು, ಈಗಾಗಲೇ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದೆ. ಹೀಗಿರುವಾಗ ಪೀಠಾಧಿಪತಿಯಾಗಿ ತಮಗಿರುವ ಅಧಿಕಾರವನ್ನು ಚಲಾಯಿಸದಂತೆ ನ್ಯಾಯಾಲಯದಿಂದ ಸೂಕ್ತ ಆದೇಶ ತರದೆ ಇರುವುದು ದುರದೃಷ್ಟಕರ" ಎಂದು ಏಕಾಂತಯ್ಯ ಅವರು ಪ್ರಕಟಣೆಯಲ್ಲಿ ವಿಷಾದ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ?: ವಿಚಾರಣೆಗೆ ಹಾಜರಾಗಲು ಸಾಧ್ಯವಿಲ್ಲ; ಚಿತ್ರದುರ್ಗ ಪೊಲೀಸರಿಗೆ ʻಒಡನಾಡಿʼ ಪರಶುರಾಮ್ ಪತ್ರ
ಅಲ್ಲದೆ, "ಸರ್ಕಾರ ಈ ಸಂಬಂಧ ಯಾವುದೇ ಸೂಕ್ತ ಕ್ರಮ ಕೈಗೊಳ್ಳದೆ ಇರುವುದು ದುರದೃಷ್ಟಕರ. ರಾಜ್ಯ ಸರ್ಕಾರ ಮಧ್ಯಪ್ರವೇಶಿಸಿ ಸೂಕ್ತ ವ್ಯವಸ್ಥೆ ಮಾಡದಿರುವುದರಿಂದ ಶ್ರೀ ಮಠದ ಸ್ವತ್ತು ಮತ್ತು ಹಣ ದುರುಪಯೋಗವಾಗುವ ಸಾಧ್ಯತೆ ಹೆಚ್ಚಿರುತ್ತದೆ. ಆದ್ದರಿಂದ ಈ ಬಗ್ಗೆ ಚರ್ಚಿಸಲು ಡಿ.3ರ ಬೆಳಗ್ಗೆ 11.30ಕ್ಕೆ ವೀರಶೈವ ಲಿಂಗಾಯತ ಮುಖಂಡರು ಸಭೆಯಲ್ಲಿ ಭಾಗಿಯಾಗಬೇಕು" ಎಂದು ಅವರು ವಿನಂತಿಸಿದ್ದಾರೆ.