ಒಂದು ನಿಮಿಷದ ಓದು | ಗ್ರಾಮ ಪಂಚಾಯ್ತಿ ಮಹಿಳಾ ಸದಸ್ಯರ ಬದಲಿಗೆ ಅವರ ಕುಟುಂಬದ ಪುರುಷರಿಂದ ಪ್ರಮಾಣ ವಚನ!

ಗ್ರಾಮ ಪಂಚಾಯ್ತಿ ಸದಸ್ಯರಾಗಿ ಆಯ್ಕೆಯಾದ ಮಹಿಳೆಯರ ಬದಲಿಗೆ ಅವರ ಕುಟುಂಬದ ಪುರುಷರು ಪ್ರಮಾಣ ವಚನ ಸ್ವೀಕರಿಸಿದ ಘಟನೆ ಮಧ್ಯಪ್ರದೇಶದ ಸಾಗರ್‌ ಜಿಲ್ಲೆಯ ಜೈಸಿನಗರದಲ್ಲಿ ನಡೆದಿದೆ.

ಚುನಾಯಿತ ಏಳು ಮಂದಿ ಮಹಿಳಾ ಸದಸ್ಯರ ಬದಲಿಗೆ ಅವರ ಪತಿ, ಸೋದರ ಮಾವ ಅಥವಾ ತಂದೆ ಗ್ರಾಮ ಪಂಚಾಯ್ತಿ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಜೈಸಿನಗರ ಗ್ರಾಮ ಪಂಚಾಯತಿಯ ಕಾರ್ಯದರ್ಶಿ ಆಶಾರಾಮ್‌ ಸಾಹು ಪ್ರಮಾಣ ವಚನ ಬೋಧಿಸಿದ್ದರು. ಅವರನ್ನು ತಕ್ಷಣವೇ ಜಾರಿಗೆ ಬರುವಂತೆ ಅಮಾನತುಗೊಳಿಸಿರುವುದಾಗಿ ಸಾಗರ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಶುಕ್ರವಾರ ತಿಳಿಸಿದ್ದಾರೆ.

ಜೈಸಿನಗರ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಆಶಾರಾಮ್ ಸಾಹು ಪ್ರಮಾಣ ವಚನ ಸಮಾರಂಭವನ್ನು ಸಮರ್ಥಿಸಿಕೊಂಡಿದ್ದರು. ಮಹಿಳೆಯರ ಬದಲಿಗೆ ಪುರುಷರು ಪ್ರಮಾಣ ವಚನ ಸ್ವೀಕರಿಸುತ್ತಿರುವ ಸಮಾರಂಭದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದವು.

ವಿಡಿಯೋದಲ್ಲಿ ಪುರುಷರು ಪ್ರಮಾಣ ವಚನ ಸ್ವೀಕರಿಸುತ್ತಿರುವುದನ್ನು ಕಾಣಬಹುದಾಗಿದೆ. ಜೈಸಿಗರದಲ್ಲಿ ಪಂಚಾಯ್ತಿ ಸರಪಂಚ್‌ ಸೇರಿದಂತೆ ಒಟ್ಟು 21 ಸದಸ್ಯರು ಆಯ್ಕೆಯಾಗಿದ್ದರು. ಈ ಪೈಕಿ ಹತ್ತು ಮಂದಿ ಮಹಿಳೆಯರಾಗಿದ್ದರು. ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಬರೀ ಮೂವರು ಮಹಿಳೆಯರು ಮಾತ್ರ ಹಾಜರಿದ್ದರು. ಉಳಿದ ಏಳು ಮಂದಿ ಮಹಿಳೆಯರ ಬದಲಿಗೆ ಅವರ ಕುಟುಂಬದ ಪುರುಷ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದರು.

ದಾಮೋಹ್ ಜಿಲ್ಲೆಯ ಗೈಸಾಬಾದ್ ಪಂಚಾಯ್ತಿಯಲ್ಲಿಯೂ ಹೊಸದಾಗಿ ಆಯ್ಕೆಯಾದ ಮಹಿಳಾ ಸರಪಂಚ್ ಮತ್ತು 10 ಸದಸ್ಯರ ಬದಲಿಗೆ ಅವರ ಪತಿಯಂದಿರು ಪ್ರಮಾಣ ವಚನ ಸ್ವೀಕರಿಸಿದ್ದರು. ಪಂಚಾಯತ್ ರಾಜ್ ಅಧಿಕಾರಿಗಳೇ ನೂತನವಾಗಿ ಆಯ್ಕೆಯಾದ ಸರಪಂಚ್‌ಗಳ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಸಿದ್ದರು.

ನಿಮಗೆ ಏನು ಅನ್ನಿಸ್ತು?
1 ವೋಟ್