ಗುಜರಾತ್‌ ಗಲಭೆ ಪ್ರಕರಣ: ಝಾಕಿಯಾ ಜಾಫ್ರಿ ಅರ್ಜಿ ವಜಾ; ಪ್ರಧಾನಿ ಮೋದಿಗೆ ನಿರಾಳ

Zakia Jafri
  • ಎಹ್ಸಾನ್‌ ಜಾಫ್ರಿ ಸೇರಿ 69 ಮಂದಿ ಬಲಿ ಪಡೆದಿದ್ದ ʼಗುಲ್ಬರ್ಗ್‌ ಸೊಸೈಟಿʼ ಗಲಭೆ ಪ್ರಕರಣ
  • ಗುಜರಾತ್‌ ವಿಶೇಷ ತನಿಖಾ ತಂಡ‌ ನೀಡಿದ್ದ ಕ್ಲೀನ್‌ ಚಿಟ್‌ ಎತ್ತಿ ಹಿಡಿದ ಸುಪ್ರೀಂಕೋರ್ಟ್

ಗುಜರಾತ್‌ ಗಲಭೆಗೆ ಸಂಬಂಧಿಸಿದಂತೆ ಅಂದು ಮುಖ್ಯಮಂತ್ರಿ ಆಗಿದ್ದ ನರೇಂದ್ರ ಮೋದಿ ಅವರಿಗೆ ವಿಶೇಷ ತನಿಖಾ ತಂಡ(ಎಸ್‌ಐಟಿ) ನೀಡಿದ್ದ ಕ್ಲೀನ್‌ ಚಿಟ್‌ ಅನ್ನು ಸುಪ್ರೀಂಕೋರ್ಟ್‌ ಎತ್ತಿ ಹಿಡಿದಿದೆ.

ಕಾಂಗ್ರೆಸ್ ಮಾಜಿ ಸಂಸದ ಎಹ್ಸಾನ್ ಜಾಫ್ರಿ ಪತ್ನಿ ಝಾಕಿಯಾ ಜಾಫ್ರಿ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಾಲಯವು ಶುಕ್ರವಾರ ವಜಾಗೊಳಿಸಿದೆ. 

2002ರಲ್ಲಿ ನಡೆದ ಗುಜರಾತ್‌ ಗಲಭೆಗೆ ಸಂಬಂಧಿಸಿದಂತೆ ಅಂದು ಆ ರಾಜ್ಯದ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಸೇರಿ 63 ಜನರಿಗೆ ಎಸ್‌ಐಟಿ ಕ್ಲೀನ್​ಚಿಟ್​ ನೀಡಿತ್ತು. ಇದನ್ನು ಪ್ರಶ್ನಿಸಿ ಗಲಭೆಯಲ್ಲಿ ಹತ್ಯೆಗೀಡಾಗಿದ್ದ ಸಂಸದ ಎಹ್ಸಾನ್ ಜಾಫ್ರಿ ಅವರ ಪತ್ನಿ ಝಾಕಿಯಾ ಜಾಫ್ರಿ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ನ್ಯಾಯಮೂರ್ತಿಗಳಾದ ಎ ಎಂ ಖಾನ್ವಿಲ್ಕರ್, ದಿನೇಶ್ ಮಹೇಶ್ವರಿ, ಸಿ ಟಿ ರವಿಕುಮಾರ್‌ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ಈ ಪ್ರಕರಣದ ವಿಚಾರಣೆ ನಡೆಸಿದ್ದು, ಅರ್ಜಿಯನ್ನು ವಜಾಗೊಳಿಸಿದೆ.

ಕಾಂಗ್ರೆಸ್‌ನ ಮಾಜಿ ಸಂಸದ ಎಹ್ಸಾನ್‌ ಜಾಫ್ರಿ ಸೇರಿ 69 ಮಂದಿಯನ್ನು ಬಲಿ ಪಡೆದಿದ್ದ ʼಗುಲ್ಬರ್ಗ್‌ ಸೊಸೈಟಿʼ ಗಲಭೆ ಕುರಿತಂತೆ ಮೋದಿ ಅವರಿಗೆ ಎಸ್‌ಐಟಿ ಈ ಹಿಂದೆ ಕ್ಲೀನ್‌ಚಿಟ್‌ ನೀಡಿತ್ತು.

"ಗುಜರಾತ್‌ ಮುಖ್ಯಮಂತ್ರಿಯಾಗಿದ್ದಾಗ ಮೋದಿ ಅವರು ಗಲಭೆ ತಡೆಯಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನೂ ಮಾಡಿದ್ದರು" ಎಂದು 2012ರಲ್ಲಿ ವಿಶೇಷ ತನಿಖಾ ತಂಡ ವರದಿ ನೀಡಿತ್ತು. ಹೀಗಾಗಿ ಮೋದಿ ವಿರುದ್ಧ ಝಾಕಿಯಾ ಜಾಫ್ರಿ ಸಲ್ಲಿಸಿದ್ದ ಅರ್ಜಿಯನ್ನು ಅದೇ ವರ್ಷ ಗುಜರಾತಿನ ಮೆಟ್ರೋಪಾಲಿಟನ್‌ ಮ್ಯಾಜಿಸ್ಪ್ರೇಟ್‌ ನ್ಯಾಯಾಲಯ ವಜಾಗೊಳಿಸಿತ್ತು.

ಈ ಸುದ್ದಿ ಓದಿದ್ದೀರಾ?:  ಮೂಲಸೌಕರ್ಯ ಅಭಿವೃದ್ಧಿಗೆ ಆಗಾಗ ಪ್ರಧಾನಿಯೇ ಬೆಂಗಳೂರಿಗೆ ಬರಬೇಕೆ? ಬಿಡಿಎಗೆ ಹೈಕೋರ್ಟ್‌ ಚಾಟಿ

ಇದರ ವಿರುದ್ಧ ಝಾಕಿಯಾ, ಗುಜರಾತ್‌ ಹೈಕೋರ್ಟ್‌ ಮೊರೆ ಹೋಗಿದ್ದರು. ಮೋದಿ ಮತ್ತು ಇತರೆ ರಾಜಕಾರಣಿಗಳು ಹಾಗೂ ಹಿರಿಯ ಅಧಿಕಾರಿಗಳು ಸೇರಿ 58 ಆರೋಪಿಗಳ ವಿರುದ್ಧ ಸೂಕ್ತ ಸಾಕ್ಷ್ಯಾಧಾರಗಳ ಕೊರತೆ ಇದೆ ಎಂದು ಹೇಳಿ ಹೈಕೋರ್ಟ್ ಅರ್ಜಿ ವಜಾಗೊಳಿಸಿತ್ತು. ‌ಹೈಕೋರ್ಟ್‌ನ ಆ ತೀರ್ಮಾನವನ್ನು ಪ್ರಶ್ನಿಸಿ ಝಾಕಿಯಾ ಸುಪ್ರೀಂಕೋ‌ರ್ಟ್‌ ಮೆಟ್ಟಿಲೇರಿದ್ದರು.

ತೀವ್ರ ಕುತೂಹಲ ಕೆರಳಿಸಿದ್ದ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ ಶುಕ್ರವಾರ ಬೆಳಗ್ಗೆ ತೀರ್ಪು ಪ್ರಕಟಿಸಿದ್ದು, ಹೈಕೋರ್ಟ್‌ ತೀರ್ಪನ್ನು ಎತ್ತಿ ಹಿಡಿದಿದೆ. ಆ ಮೂಲಕ ಗುಲ್ಬರ್ಗ್‌ ಸೊಸೈಟಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನಿನ ತೂಗುಗತ್ತಿಯಿಂದ ಪ್ರಧಾನಿ ಮೋದಿ ಸದ್ಯ ಪಾರಾದಂತಾಗಿದೆ.

ನಿಮಗೆ ಏನು ಅನ್ನಿಸ್ತು?
2 ವೋಟ್