
- ಜೂನ್ 23 ರಂದು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದ್ದ 'ಇಡಿ'
- ಸುಮಾರು 50 ಗಂಟೆಗಳ ಕಾಲ ವಿಚಾರಣೆ ಎದುರಿಸಿದ್ದ ರಾಹುಲ್ ಗಾಂಧಿ
ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಮತ್ತೆ ನೋಟಿಸ್ ನೀಡಿದ್ದು, ಜುಲೈ ಎರಡನೇ ವಾರದೊಳಗೆ ವಿಚಾರಣೆಗೆ ಹಾಜರಾಗುವಂತೆ ತಿಳಿಸಿದೆ.
ಸೋನಿಯಾ ಗಾಂಧಿ ಅವರು ತಮ್ಮ ಅನಾರೋಗ್ಯದ ಸಮಸ್ಯೆಯ ಕಾರಣಕ್ಕೆ ವಿಚಾರಣೆ ಮುಂದೂಡುವಂತೆ ಮನವಿ ಮಾಡಿ, ಇಡಿಗೆ ಪತ್ರ ಬರೆದಿದ್ದರು. ತನಿಖಾ ತಂಡವು ಮನವಿಯನ್ನು ಒಪ್ಪಿಕೊಂಡಿತ್ತು.
ದೆಹಲಿಯ ಸರ್ ಗಂಗಾರಾಮ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸೋನಿಯಾ ಗಾಂಧಿ ಸೋಮವಾರ ‘ಡಿಸ್ಚಾರ್ಜ್’ ಆಗಿದ್ದಾರೆ. ಜೂನ್ 2ರಂದು ಅವರಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿತ್ತು. ಜೂನ್ 12ರಂದು ಮೂಗಿನ ರಕ್ತಸ್ರಾವದ ಕಾರಣ ಆಸ್ಪತ್ರೆಗೆ ದಾಖಲಿಸಲಾಸಲಾಗಿತ್ತು.
ಈ ಸುದ್ದಿ ಓದಿದ್ದೀರಾ ? ನ್ಯಾಷನಲ್ ಹೆರಾಲ್ಡ್ ಪ್ರಕರಣ | ಸತತ ವಿಚಾರಣೆ - ದೊರೆಯದ ಸಾಕ್ಷ್ಯ; ಕಾಂಗ್ರೆಸ್ ಪ್ರತಿಭಟನೆ
ಸೋನಿಯಾ ಗಾಂಧಿ ಅವರು ಈ ಹಿಂದೆ ಜೂನ್ 8ರಂದು ಜಾರಿ ನಿರ್ದೇಶನಾಲಯದ ಮುಂದೆ ವಿಚಾರಣೆಗೆ ಹಾಜರಾಗಬೇಕಿತ್ತು. ಆದರೆ ಕೋವಿಡ್ ಸೋಂಕಿನ ಕಾರಣಕ್ಕೆ ತನಿಖಾ ಸಂಸ್ಥೆಯಿಂದ ಹೆಚ್ಚಿನ ಸಮಯ ಕೋರಿದ್ದರು. ಜೂನ್ 23ರಂದು ವಿಚಾರಣೆಗೆ ಹಾಜರಾಗುವಂತೆ ‘ಇಡಿ’ ಸಮನ್ಸ್ ಜಾರಿ ಮಾಡಿತ್ತು.
ಐದು ದಿನಗಳ ಸುದೀರ್ಘ ವಿಚಾರಣೆಯಲ್ಲಿ ರಾಹುಲ್ ಗಾಂಧಿ ಅವರನ್ನು ಸುಮಾರು 50 ಗಂಟೆಗಳ ಕಾಲ ಪ್ರಶ್ನಿಸಲಾಗಿದೆ. ಕೋಲ್ಕತ್ತಾ ಮೂಲದ ಡೋಟೆಕ್ಸ್ ಮರ್ಚಂಡೈಸ್ ಪ್ರೈವೇಟ್ ಲಿಮಿಟೆಡ್ ಜೊತೆಗೆ ನಡೆಸಿದ ಕೆಲವು ವಹಿವಾಟಿನ ಬಗ್ಗೆ ಪ್ರಶ್ನಿಸಲಾಗಿದೆ ಎಂದು ವರದಿಯಾಗಿದೆ.