ಹಾಸನ | ಬದುಕು ಕಟ್ಟಿಕೊಳ್ಳಲು ಹೊರಟ ನಿರಾಶ್ರಿತ ಆದಿ ದ್ರಾವಿಡ ಕುಟುಂಬಗಳಿಗೆ ಬೇಕಿದೆ ನೆರವಿನಾಸರೆ

Sakaleshpura
  • ಕಾಫಿ ಎಸ್ಟೇಟ್ ತೊರೆದು ಸರ್ಕಾರಿ ಜಾಗದಲ್ಲಿ ಗುಡಿಸಲು ಹಾಕಿಕೊಂಡ 22 ಕುಟುಂಬಗಳು
  • ಹಕ್ಕು ಪತ್ರ, ಮೂಲ ಸೌಕರ್ಯ ನೀಡದಿದ್ದರೆ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಕೆ 

“ನಾವು ಕಾಫಿ ಎಸ್ಟೇಟ್‌ಗಳಲ್ಲಿ ಕೂಲಿ ಕೆಲಸ ಮಾಡೋರು, ಯಾರು ಓದು ಬರಹ ಕಲಿತವರಲ್ಲ. ಸ್ವಂತ ಮನೆ ಹೊಂದುವ ಆಸೆಯಿಂದ ಸರ್ಕಾರಿ ಜಾಗದಲ್ಲಿ ಗುಡಿಸಲು ಹಾಕಿಕೊಂಡು ಎರಡು ವರ್ಷದಿಂದ ವಾಸ ಮಾಡುತ್ತಿದ್ದೇವೆ. ಈವರೆಗೂ ಯಾವುದೇ ಕನಿಷ್ಟ ಸೌಕರ್ಯವೂ ನಮಗಿಲ್ಲ” ಹೀಗೆಂದು ತಮ್ಮ ಅಳಲು ತೋಡಿಕೊಂಡವರು ಆದಿ ದ್ರಾವಿಡ ಸಮುದಾಯದ ಉಮೇಶ್.

ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಹೆಬ್ಬಸಾಲೆ ಗ್ರಾಮದಲ್ಲಿ ಹಾದು ಹೋಗಿರುವ ಬೆಂಗಳೂರು -  ಮಂಗಳೂರು ನಡುವಿನ ರೈಲ್ವೆ ಹಳಿಯ ಸಮೀಪ ಪರಿಶಿಷ್ಟ ಜಾತಿ (ಆದಿ ದ್ರಾವಿಡ) ಸಮುದಾಯದ 22 ಕುಟುಂಬಗಳು ಪ್ಲಾಸ್ಟಿಕ್ ಹೊದಿಕೆಯ ಸಣ್ಣ ಗುಡಿಸಲುಗಳನ್ನು ನಿರ್ಮಿಸಿಕೊಂಡು ಕಳೆದ ಎರಡು ವರ್ಷಗಳಿಂದ ವಾಸವಿದ್ದಾರೆ.

22 ಕುಟುಂಬಗಳು ಚುನಾವಣೆ ಗುರುತಿನ ಚೀಟಿ, ಆಧಾರ್, ಪಡಿತರ ಚೀಟಿ ಹೊಂದಿದ್ದಾರೆ. ಹೆಬ್ಬಸಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗುಡಿಸಲುಗಳನ್ನು ನಿರ್ಮಿಸಿಕೊಂಡಿರುವ ಇವರಿಗೆ, ಕುಡಿಯುವ ನೀರು, ವಿದ್ಯುತ್ ಸಂಪರ್ಕ ಈವರಗೂ ನೀಡಿಲ್ಲ.

Image
Sakaleshpura

ಈ ಕುರಿತು ಆದಿ ದ್ರಾವಿಡ ಸಮುದಾಯದ ಉಮೇಶ್ ಈ ದಿನ.ಕಾಮ್ ಜೊತೆಗೆ ಮಾತನಾಡಿ, “ಗುಡಿಸಲು ನಿರ್ಮಿಸಿಕೊಂಡಿರುವ 22 ಕುಟುಂಬಗಳು ನಿರಾಶ್ರಿತರು. ಯಾರಿಗೂ ಸ್ವಂತ ಜಮೀನು ಇಲ್ಲ. ಕಾಫಿ ಎಸ್ಟೇಟ್‌ಗಳಲ್ಲಿ ಕೂಲಿ ಕೆಲಸ ಮಾಡಿಕೊಂಡು ಬದುಕು ಸಾಗಿಸುತ್ತಿದ್ದೇವೆ. ನಮ್ಮ ಪೂರ್ವಿಕರು ಕರಾವಳಿ ಭಾಗದಿಂದ ವಲಸೆ ಬಂದು ಇಲ್ಲಿನ ಕಾಫಿ ಎಸ್ಟೇಟ್‌ಗಳ ಲೈನ್‌ ಮನೆಗಳಲ್ಲಿ ಆಶ್ರಯ ಪಡೆದಿದ್ದರು” ಎಂದು ಹೇಳಿದರು.

“ಟಾರ್ಪಲ್ ಗುಡಿಸಲುಗಳಲ್ಲಿ ವಾಸ ಮಾಡುವುದು ತುಂಬಾ ಸಮಸ್ಯೆ ಆಗುತ್ತಿದೆ. ಕನಿಷ್ಟ ಕುಡಿಯುವ ನೀರಿನ ಸೌಲಭ್ಯ ನೀಡುವಂತೆ ಗ್ರಾಮ ಪಂಚಾಯಿತಿ ಅಧಿಕಾರಿಗಳನ್ನು ಕೇಳಿದರೆ ಏನೇನೋ ಕಾರಣ ಹೇಳುತ್ತಾರೆ. ವಿದ್ಯುತ್ ಸಂಪರ್ಕ ಕೂಡ ಇಲ್ಲ. ಒಂದೇ ಕೋಣೆಯ ಗುಡಿಸಲಿನಲ್ಲಿ ಇಡೀ ಕುಟುಂಬ ವಾಸಮಾಡುವುದು ಬಹಳ ಕಷ್ಟ. ಸಮೀಪವೇ ಕಾಡು ಇರುವುದರಿಂದ ಅಪಾಯಕಾರಿ ಜಂತುಗಳು ಗುಡಿಸಲು ಪ್ರವೇಶಿಸುವ ಸಾಧ್ಯತೆ ಹೆಚ್ಚು” ಎಂದರು.

Image
Sakaleshpura

“ತಹಶೀಲ್ದಾರ್ ಒಂದು ದಿನ ಬಂದು ಸ್ಥಳ ಪರಿಶೀಲನೆ ಮಾಡಿಕೊಂಡು ಹೋಗಿದ್ದಾರೆ. ನಾವು ರೈಲ್ವೆ ಗುರುತಿನ ಕಲ್ಲಿಗಿಂತ 260 ಅಡಿ ದೂರದಲ್ಲಿ ಗುಡಿಸಲು ನಿರ್ಮಿಸಿಕೊಂಡಿದ್ದೇವೆ. ಆದರೂ ಹಕ್ಕು ಪತ್ರ ನೀಡಲು ನಾನಾ ಕಾರಣ ಹೇಳುತ್ತಿದ್ದಾರೆ. ಇಲ್ಲಿಯೇ ಹುಟ್ಟಿ ಬೆಳೆದಿರುವ ನಮಗೆ ಮುಂದೆ ಎಲ್ಲಿಗೆ ಹೋಗಬೇಕು ಎಂಬುದು ಗೊತ್ತಿಲ್ಲ. ಹಾಗಾಗಿ, ತಾಲೂಕು ಆಡಳಿತ ನಮ್ಮ  22 ಕಟುಂಬಗಳಿಗೂ ಹಕ್ಕುಪತ್ರ ನೀಡಬೇಕು" ಎಂದು ಆಗ್ರಹಿಸಿದರು.

‘ಅಂಬೇಡ್ಕರ್ ಪ್ರತಿಮೆ ಎದುರು ಉಪವಾಸ ಸತ್ಯಾಗ್ರಹ' : ಎಚ್ಚರಿಕೆ

ಆದಿ ದ್ರಾವಿಡ ತುಳು ಸಂಘದ ಜಿಲ್ಲಾಧ್ಯಕ್ಷ ಶಂಕರ್, ಈ ದಿನ.ಕಾಮ್ ಜೊತೆಗೆ ಮಾನಾಡಿ, “ಹೆಬ್ಬಸಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೆಲೆ ಕಂಡುಕೊಂಡಿರುವ 22 ಕುಟುಂಬಗಳು ರೈಲ್ವೆ ವ್ಯಾಪ್ತಿಯಿಂದ ಬಹಳಷ್ಟು ಹೊರಕ್ಕಿದ್ದಾರೆ. ಆದರೂ ಹಕ್ಕು ಪತ್ರ ನೀಡುವ ವಿಚಾರದಲ್ಲಿ ವಿಳಂಬ ಮಾಡಲಾಗುತ್ತಿದೆ” ಎಂದು ಬೇಸರ ವ್ಯಕ್ತಪಡಿಸಿದರು.

Image
Sakaleshpura

“ಹೆಬ್ಬಸಾಲೆಯ ಸರ್ಕಾರಿ ಜಾಗದಲ್ಲಿ ಪ್ಲಾಸ್ಟಿಕ್ ಗುಡಿಸಲು ಹಾಕಿಕೊಂಡಿರುವ ಈ ಕುಟುಂಬಗಳಿಗೆ ಕುಡಿಯುವ ನೀರು, ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ಯಾವುದೇ ಸರ್ವೆ ನಡೆಸದೆ ರೈಲ್ವೆ ಇಲಾಖೆ ವ್ಯಾಪ್ತಿಯ ಜಾಗ ಎಂದು ತಹಶೀಲ್ದಾರ್ ಹೇಳುತ್ತಾರೆ. ಆದರೆ, ಮನೆ ಕಟ್ಟಿಕೊಂಡ ಸ್ಥಳ ರೈಲ್ವೆ ಇಲಾಖೆಯ ಗಡಿ ಗುರುತಿಗಿಂತ 260 ಅಡಿ ದೂರ ಇದೆ” ಎಂದರು.

ಈ ಸುದ್ದಿ ಓದಿದ್ದೀರಾ? ವಿಜಯನಗರ | ಎಸ್‌ಟಿ ಮೀಸಲಾತಿಗೆ ಆಗ್ರಹಿಸಿ ನ.21ಕ್ಕೆ ಕುರುಬ ಸಮಾಜದಿಂದ 'ಬೆಂಗಳೂರು ಚಲೋ'

“ಹೆಬ್ಬಸಾಲೆ ಗ್ರಾಮದ ನಿರಾಶ್ರಿತ ಆದಿ ದ್ರಾವಿಡ ಸಮುದಾಯದವರಿಗೆ ಹಕ್ಕುಪತ್ರ ಮತ್ತು ಮೂಲ ಸೌಕರ್ಯ ನೀಡದಿದ್ದರೆ ಮುಂದಿನ ದಿನಗಳಲ್ಲಿ ಸಮುದಾಯದ ಮುಖಂಡರ ನೇತೃತ್ವದಲ್ಲಿ ಸಕಲೇಶಪುರ ಪಟ್ಟಣದ ಮಿನಿ ವಿಧಾನಸೌಧದ ಬಳಿ ಇರುವ ಅಂಬೇಡ್ಕರ್ ಪ್ರತಿಮೆ ಎದುರು ಉಪವಾಸ ಸತ್ಯಾಗ್ರಹ ನಡೆಸಲಾಗುವುದು” ಎಂದು ಶಂಕರ್ ಎಚ್ಚರಿಕೆ ನೀಡಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180