ವ್ಯಾಪಕ ಮಳೆಯಿಂದ ಬೇಸಗೆ ಭತ್ತ ಕುರುವಾಯಿ ಕೃಷಿಗೆ ಲಾಭ

  • ಬೂದಲೂರಿನಲ್ಲಿ ಅತಿ ಹೆಚ್ಚು 36 ಮಿ.ಮೀ ಮಳೆ ದಾಖಲು
  • ನೀರು ಹಾಯಿಸದ ಭತ್ತ ಬೆಳೆಯುತ್ತಿದ್ದ ಕೃಷಿಕರಿಗೆ ಖುಷಿ

ತಮಿಳುನಾಡಿನ ತಂಜಾವೂರು ಜಿಲ್ಲೆಯಾದ್ಯಂತ ಮಂಗಳವಾರ ವ್ಯಾಪಕ ಮಳೆಯಾಗಿದೆ. ಬೇಸಗೆ ಭತ್ತದ ಕೃಷಿ ಮಾಡಿದ ಮತ್ತು ಕುರುವಾಯಿ ಭತ್ತದ ಕೃಷಿಕರಿಗೆ ಈ ಮಳೆ ನೆರವಾಗಿದೆ. 

ತಿರುಕ್ಕಟ್ಟುಪಲ್ಲಿ ಮತ್ತು ಬೂದಲೂರ್‌ ಸೇರಿ ಇತರೆ ಪ್ರದೇಶಗಳಲ್ಲಿ ಭಾರಿ ಮಳೆಯಾಗಿದೆ. ಈ ಕುರಿತು ತಿರುವೈಯಾರು ಭಾಗದ ರೈತ ಎಸ್‌ ಶಿವಕುಮಾರ್‌ ಮಾಧ್ಯಮಗಳಿಗೆ ತಮ್ಮ ಸಂತೋಷ ವ್ಯಕ್ತಪಡಿಸಿದ್ದಾರೆ. “ನಮ್ಮ ಪ್ರದೇಶದಲ್ಲಿ ಈಗಾಗಲೇ ನಾಟಿ ಮಾಡಿರುವ ಬೇಸಗೆ ಭತ್ತ, ಕುರುವಾಯಿ ಬೆಳೆಗಳಿಗೆ (ಕಾವೇರಿ ನದಿ ಪ್ರಾಂತ್ಯದಲ್ಲಿ ಬೆಳೆಯಲಾಗುವ ಬೆಳೆ) ಈ ಮಳೆ ಸಹಕಾರಿ. ಭಾರೀ ಮಳೆಯಿಂದಾಗಿ ಕೆಲ ನರ್ಸರಿಗಳು ಮುಳುಗಿದ್ದವು. ಇದೀಗ ನಿಂತ ನೀರು ಕಡಿಮೆಯಾಗುತ್ತಿದೆ”  ಎಂದರು.

ಮಳೆಯನ್ನು ಸ್ವಾಗತಿಸಿದ ಅಮ್ಮಯ್ಯನಗರದ ನಿವಾಸಿ ಎ ಕೆ ಆರ್ ರವಿಚಂದರ್, “ಕೃಷಿ ಸಂಪರ್ಕದ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಹಾಗಾಗಿ ಎಳೆಯ ಭತ್ತದ ಬೆಳೆಗಳಿಗೆ ನೀರು ಹಾಯಿಸಲು ಸಾಧ್ಯವಾಗಿರಲಿಲ್ಲ. ಮಳೆ ಬಂದು ನೆಮ್ಮದಿಯಾಗಿದೆ" ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

ಇದನ್ನು ಓದಿದ್ದೀರಾ ? ತಮಿಳುನಾಡು | ಧರ್ಮಪುರಿಯಲ್ಲಿ ಕೀಟಗಳ ಕಾಟ ; ಮಾವಿನ ಬೆಲೆ ದುಬಾರಿಯಾಗುವ ಸಾಧ್ಯತೆ

ಈ ಭಾಗದಲ್ಲಿ ಬೆಳೆಯಲಾಗಿದ್ದ ಎಳ್ಳು, ಹತ್ತಿ, ತೊಗರಿ ಬೆಳೆಗೆ ತುಂತುರು ಮಳೆ ನೆರವಾಗಿದೆ. ಮೆಟ್ಟೂರು ಅಣೆಕಟ್ಟಿನಿಂದ ಬರುವ ಕಾಲುವೆ ನೀರನ್ನು ಕೆಲವು ಪ್ರದೇಶಗಳು ಅವಲಂಬಿಸಿವೆ. ಕುರುವಾಯಿ ಭತ್ತದ ತಯಾರಿಗಾಗಿ ಗದ್ದೆಗಳನ್ನು ಉಳುಮೆ ಮಾಡಲೂ ಮಳೆಯಿಂದ ಸಾಧ್ಯವಾಗಿದೆ. ತುಂತುರು ಮಳೆಯು ಬೇಸಿಗೆಯ ಶಾಖದಿಂದ ಸಮಾಧಾನ ನೀಡಿದೆ.

"ಸುಮಾರು 13,000 ಹೆಕ್ಟೇರ್‌ನಲ್ಲಿ ಬೇಸಗೆ ಭತ್ತ ಬೆಳೆಯಲಾಗಿದ್ದು, ಈವರೆಗೆ 10,000 ಹೆಕ್ಟೇರ್‌ನಲ್ಲಿ ಆರಂಭಿಕ ಕುರುವಾಯಿ ಭತ್ತ ಬೆಳೆಯಲಾಗಿದೆ" ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ತಿರುವರೂರು ಜಿಲ್ಲೆಯಲ್ಲೂ ಅಲ್ಲಲ್ಲಿ ಮಳೆಯಾಗಿದೆ. ಮಂಗಳವಾರ ಬೆಳಗ್ಗೆ 8.30ಕ್ಕೆ ಶುರುವಾದ ಮಳೆ, ಸತತ 24 ಗಂಟೆಗಳ ಕಾಲ ನಿರಂತರವಾಗಿ ಸುರಿದಿದೆ. ತಂಜಾವೂರು ಜಿಲ್ಲೆಯ ಬೂದಲೂರಿನಲ್ಲಿ ಅತಿ ಹೆಚ್ಚು ಅಂದರೆ 36 ಮಿಮೀ ಮಳೆ ದಾಖಲಾಗಿದೆ. ತಿರುಕ್ಕಟ್ಟುಪಲ್ಲಿಯಲ್ಲಿ 21 ಮಿಮೀ ಸೇರಿದಂತೆ ವೆಟ್ಟಿಕ್ಕಾಡು 21 ಮಿಮೀ, ಕುರುಂಗುಲಂ 20 ಮಿಮೀ, ತಿರುವೈಯಾರು 19 ಮಿಮೀ, ಅಯ್ಯಂಪೇಟ್ಟೈ 16 ಮಿಮೀ, ನನ್ನಿಲಂ 12 ಮಿಮೀ, ವಲಂಗೈಮನ್ 11 ಮಿಮೀ, ತಿರುವಾರೂರ್ 9 ಮಿಮೀ, ಕುಡವಾಸಲ್ 6 ಮಿಮೀ, ಕುಂಭಕೋಣಂ 5 ಮಿಮೀ, ತಂಜಾವೂರು 4 ಮಿಮೀ ಮಳೆ ಸುರಿದಿದೆ.  

ನಿಮಗೆ ಏನು ಅನ್ನಿಸ್ತು?
0 ವೋಟ್