
- ದೆಹಲಿ ಸುತ್ತಮುತ್ತ ಮುಂದುವರಿದ ಭಾರೀ ಮಳೆ
- ಗುರುಗ್ರಾಮ, ಅಲಿಘರ್ ಶಾಲೆಗಳಿಗೆ ರಜೆ ಘೋಷಣೆ
ನೋಯ್ಡಾ, ಗುರುಗ್ರಾಮ ಸುತ್ತಮುತ್ತ ಗುರುವಾರ ಸುರಿದ ಭಾರೀ ಮಳೆ ಸುರಿದಿದ್ದು, ರಸ್ತೆಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಆ ಹಿನ್ನೆಲೆಯಲ್ಲಿ ಶುಕ್ರವಾರ ಆ ಭಾಗದ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಗುರುಗ್ರಾಮ ಆಡಳಿತವು ಖಾಸಗಿ ಕಂಪನಿಗಳ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಿ ಎಂದು ಸೂಚಿಸಿದೆ.
ನೋಯ್ಡಾ ಮತ್ತು ಗ್ರೇಟರ್ ನೋಯ್ಡಾದಲ್ಲಿ ಗುರುವಾರ ರಾತ್ರಿ ಮಳೆ ಭಾರೀ ಮಳೆ ಸುರಿದಿದೆ ಮತ್ತು ಮುಂದಿನ ಎರಡು ದಿನಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಒಂದರಿಂದ ಎಂಟನೇ ತರಗತಿಯ ಸರ್ಕಾರಿ ಮತ್ತು ಖಾಸಗಿ ಶಾಲೆಗಳನ್ನು ಮುಚ್ಚುವಂತೆ ಗೌತಮ್ ಬುದ್ಧ ನಗರ ಜಿಲ್ಲೆಯ ಜಿಲ್ಲಾಡಳಿತ ಗುರುವಾರ ಆದೇಶ ಹೊರಡಿಸಿದೆ.
ಜಿಲ್ಲೆಯಲ್ಲಿ ಮಳೆ ಹೆಚ್ಚಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ಈ ಸೂಚನೆ ನೀಡಲಾಗಿದೆ.
ಮನೆಯಿಂದ ಕೆಲಸ ಮಾಡಿ ಎಂದ ಕಂಪನಿಗಳು
"ಧಾರಾಕಾರ ಮಳೆಯ ಹಿನ್ನಲೆಯಲ್ಲಿ ಸಂಚಾರ ದಟ್ಟಣೆಯನ್ನು ತಪ್ಪಿಸಲು ಎಲ್ಲಾ ಕಾರ್ಪೊರೇಟ್ ಕಚೇರಿಗಳು ಮತ್ತು ಖಾಸಗಿ ಸಂಸ್ಥೆಗಳು ಮನೆಯಿಂದಲೇ ಕೆಲಸ ಮಾಡಲು ಉದ್ಯೋಗಿಗಳಿಗೆ ಮಾರ್ಗದರ್ಶನ ನೀಡಲು ಸೂಚಿಸಲಾಗಿದೆ" ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ. ಎಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳು ಶಾಲಾ-ಕಾಲೇಜುಗಳನ್ನು ಮುಚ್ಚುವಂತೆ ಸೂಚಿಸಲಾಗಿದೆ.
ಗುರುವಾರ ಬೆಳಿಗ್ಗೆ 5 ಗಂಟೆ ಸುಮಾರಿಗೆ ಆರಂಭವಾದ ಧಾರಾಕಾರ ಮಳೆ ಮಧ್ಯಾಹ್ನ 2 ಗಂಟೆಯವರೆಗೂ ಮುಂದುವರಿಯಿತು. ಬಳಿಕ ಗುರುವಾರ ಸಂಜೆ ಕೂಡ ಮಳೆ ಸುರಿದ ಪರಿಣಾಮ ದಿನವಿಡೀ ಸಂಚಾರ ಅಸ್ತವ್ಯಸ್ತಗೊಂಡಿದೆ.
“ಸೆಪ್ಟೆಂಬರ್ 23ರಂದು ಗುರುಗ್ರಾಮ ಜಿಲ್ಲೆಯಲ್ಲಿ ಭಾರೀ ಮಳೆಯ ಮುನ್ಸೂಚನೆ ಇದೆ. ಆ ಹಿನ್ನೆಲೆಯಲ್ಲಿ ರಸ್ತೆಗಳು ಜಲಾವೃತಗೊಂಡು ಸಂಚಾರ ದಟ್ಟಣೆಯ ಸಾಧ್ಯತೆಗಳಿವೆ. ಹೀಗಾಗಿ, ಜಿಲ್ಲೆಯ ಎಲ್ಲಾ ಕಾರ್ಪೊರೇಟ್ ಕಚೇರಿಗಳು ಮತ್ತು ಖಾಸಗಿ ಸಂಸ್ಥೆಗಳು ಶುಕ್ರವಾರ ತಮ್ಮ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಮಾರ್ಗದರ್ಶನ ನೀಡುವಂತೆ ಸೂಚಿಸಲಾಗಿದೆ. ಇದರಿಂದ ಸಂಚಾರ ದಟ್ಟಣೆ ಮತ್ತು ಅನಾಹುತ ತಪ್ಪಿಸಬಹುದು. ರಸ್ತೆಗಳು ಮತ್ತು ಚರಂಡಿಗಳ ದುರಸ್ತಿ ಕಾರ್ಯವನ್ನು ನಾಗರಿಕ ಸಂಸ್ಥೆಗಳು ಸುಗಮವಾಗಿ ನಿರ್ವಹಿಸಬಹುದು” ಎಂದು ಪ್ರಾಧಿಕಾರ ಹೇಳಿದೆ.
ಈ ಸುದ್ದಿ ಓದಿದ್ದೀರಾ? ವಿಶೇಷ ಅಧಿವೇಶನ ರದ್ದು | ಆಪರೇಷನ್ ಕಮಲ ಆರೋಪಕ್ಕೆ ಸಾಕ್ಷಿ ನೀಡಿ ಎಂದು ಬಿಜೆಪಿ ಪ್ರತಿಭಟನೆ
ನಗರದಾದ್ಯಂತ 1,000ಕ್ಕೂ ಹೆಚ್ಚು ಟ್ರಾಫಿಕ್ ಪೊಲೀಸ್ ಸಿಬ್ಬಂದಿಯನ್ನು ಸಂಚಾರ ದಟ್ಟಣೆ ನಿವಾರಿಸಲು ನಿಯೋಜಿಸಲಾಗಿದೆ.
ದೆಹಲಿ ಸುತ್ತಮುತ್ತ ಮುಂದುವರಿದ ಮಳೆ
ದೆಹಲಿ-ಎನ್ಸಿಆರ್ನ ಕೆಲವು ಭಾಗಗಳಲ್ಲಿ ಶುಕ್ರವಾರವೂ ಮಳೆ ಮುಂದುವರಿದಿದೆ. ಇದರಿಂದ ರಸ್ತೆಗಳು ಜಲಾವೃತವಾಗಿ ಸಂಚಾರ ದಟ್ಟಣೆ ಉಂಟಾಗಿದೆ.
ಜಿಲ್ಲಾಡಳಿತ ಪ್ರಕಾರ, ಗುರುಗ್ರಾಮದಲ್ಲಿ 54 ಮಿಮೀ ಮಳೆ ವರದಿಯಾದರೆ, ವಜೀರಾಬಾದ್ನಲ್ಲಿ 60 ಮಿಮೀ ಮಳೆ ದಾಖಲಾಗಿದೆ. ಈ ಪ್ರದೇಶಗಳಲ್ಲಿ ಭಾರತೀಯ ಹವಾಮಾನ ಇಲಾಖೆ ಹಳದಿ ಅಲರ್ಟ್ ಘೋಷಿಸಿದೆ. ಸೆಪ್ಟೆಂಬರ್ 23-24ರವರೆಗೆ ಮಳೆಯ ಮುನ್ಸೂಚನೆ ಗಮನದಲ್ಲಿಟ್ಟುಕೊಂಡು, ಅಲಿಘರ್ನಲ್ಲಿ ಎರಡು ದಿನಗಳ ಕಾಲ ಶಾಲೆಗಳನ್ನು ಮುಚ್ಚುವಂತೆ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ಹವಾಮಾನ ಇಲಾಖೆಯು ಉತ್ತರಾಖಂಡ ಮತ್ತು ಪಶ್ಚಿಮ ಉತ್ತರಪ್ರದೇಶದಲ್ಲಿ ಸೆಪ್ಟೆಂಬರ್ 25ರವರೆಗೆ ಭಾರೀ ಮಳೆ ಮಳೆಯ ಮುನ್ಸೂಚನೆ ನೀಡಿದೆ. ಪೂರ್ವ ಉತ್ತರಪ್ರದೇಶವು ಸೆಪ್ಟೆಂಬರ್ 23, 25 ಹಾಗೂ 26ರಂದು ಭಾರೀ ಮಳೆಯಾಗುವ ನಿರೀಕ್ಷೆಯಿದೆ.