- ಧಾರ್ಮಿಕ ಸ್ವಾತಂತ್ರ್ಯ ಕಾಯಿದೆ ಉಲ್ಲೇಖಿಸಿ ಹೈಕೋರ್ಟ್ನಿಂದ ತಡೆ
- ಎಂಪಿಎಫ್ಆರ್ಎ ನಿಬಂಧನೆ ಪ್ರಶ್ನಿಸಿ ಏಳು ಅರ್ಜಿ ಸಲ್ಲಿಕೆ ಬಳಿಕ ಆದೇಶ
ಜಿಲ್ಲಾ ಮ್ಯಾಜಿಸ್ಟ್ರೇಟ್ಗೆ ಮಾಹಿತಿ ನೀಡದೆ ಬೇರೆ ಬೇರೆ ಕೋಮಿನ ಜೋಡಿಗಳು ಮದುವೆಯಾದರೆ, ಅಂತಹ ಜೋಡಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಮಧ್ಯಪ್ರದೇಶ ಸರ್ಕಾರ ಹೇಳಿತ್ತು. ಸರ್ಕಾರದ ಈ ನಿರ್ಧಾರಕ್ಕೆ ಮಧ್ಯಂತರ ಆದೇಶ ಹೊರಡಿಸಿರುವ ಹೈಕೋರ್ಟ್, ಅನ್ಯ ಕೋಮಿನ ಜೋಡಿಗಳ ವಿರುದ್ಧ ಕ್ರಮ ಜರುಗಿಸದಂತೆ ತಡೆ ಹಿಡಿದಿತ್ತು. ಮಧ್ಯಪ್ರದೇಶ ಹೈಕೋರ್ಟ್ನ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ಗೆ ಮೊರೆ ಹೋಗಲಿದೆ.
ಸರ್ಕಾರದ ನಿರ್ಧಾರಕ್ಕೆ ಮಧ್ಯಂತರ ಆದೇಶ ಹೊರಡಿಸಿದ್ದ ಹೈಕೋರ್ಟ್, ವಿವಾಹವು ಇಬ್ಬರು ವ್ಯಕ್ತಿಗಳ ಸ್ವಂತ ಇಚ್ಛೆಯಿಂದ ನಡೆಯುತ್ತದೆ. ಹಾಗಾಗಿ ವಯಸ್ಕರ ಧಾರ್ಮಿಕ ಸ್ವಾತಂತ್ರ್ಯ ಕಾಯಿದೆಯ ಸೆಕ್ಷನ್ 10ರ ಅಡಿ ಕಾನೂನು ಕ್ರಮ ಜರುಗಿಸದಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ನ್ಯಾಯಮೂರ್ತಿಗಳಾದ ಸುಜೋಯ್ ಪಾಲ್ ಮತ್ತು ಪಿ ಸಿ ಗುಪ್ತಾ ಅವರ ದ್ವೀಸದಸ್ಯ ಪೀಠವು ಆದೇಶ ಹೊರಡಿಸಿದ್ದು, "ಸೆಕ್ಷನ್ 10ರ ಪ್ರಕಾರ ಧಾರ್ಮಿಕ ಮತಾಂತರ ಬಯಸುವ ನಾಗರಿಕ ತನ್ನ ಪೂರ್ವ ಘೋಷಣೆಯನ್ನು ಜಿಲ್ಲಾ ಮ್ಯಾಜಿಸ್ಟ್ರೇಟ್ಗೆ ತಿಳಿಸುವುದು ಕಡ್ಡಾಯವಾಗಿದೆ ಎಂದು ಆದೇಶಿಸುವುದು ಅಸಂವಿಧಾನಿಕ ನಡೆ" ಎಂದು ಹೇಳಿತ್ತು.
ಈ ಸುದ್ದಿ ಓದಿದ್ದೀರಾ?: ಶ್ರೀರಾಮ ಎಲ್ಲಾ ಧರ್ಮಗಳಿಗೂ ಸೇರಿದ್ದಾರೆ, ಕೋಮು ವಿಭಜನೆ ಪ್ರಯತ್ನ ಬೇಡ ಎಂದ ಫಾರೂಕ್ ಅಬ್ದುಲ್ಲಾ
ಮಧ್ಯಪ್ರದೇಶ ಹೈಕೋರ್ಟ್ನ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ಗೆ ತೆರಳಲಿದೆ ಎಂದು ಅಡ್ವೊಕೇಟ್ ಜನರಲ್ ಪ್ರಶಾಂತ್ ಸಿಂಗ್ ತಿಳಿಸಿದ್ದಾರೆ.
"ನಾವು ಶೀಘ್ರದಲ್ಲೇ ಗೌರವಾನ್ವಿತ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲಿದ್ದೇವೆ" ಎಂದು ಪ್ರಶಾಂತ್ ಸಿಂಗ್ ಹೇಳಿದ್ದಾರೆ.
ಮಧ್ಯಪ್ರದೇಶ ಧಾರ್ಮಿಕ ಸ್ವಾತಂತ್ರ್ಯ ಕಾಯಿದೆಯ, 2021ರ ನಿಬಂಧನೆಗಳನ್ನು ಪ್ರಶ್ನಿಸಿ ಏಳು ಅರ್ಜಿಗಳ ಗುಂಪಿನ ಮೇಲೆ ಹೈಕೋರ್ಟ್ನ ಮಧ್ಯಂತರ ನಿರ್ದೇಶನ ಬಂದಿದೆ. ಈ ಕಾಯ್ದೆಯಡಿ ಯಾರನ್ನೂ ವಿಚಾರಣೆಗೆ ಒಳಪಡಿಸದಂತೆ ರಾಜ್ಯವನ್ನು ನಿರ್ಬಂಧಿಸಲು ಮಧ್ಯಂತರ ಪರಿಹಾರವನ್ನು ಅರ್ಜಿದಾರರು ಕೋರಿದ್ದರು.
ಅರ್ಜಿಗಳಿಗೆ ಉತ್ತರವನ್ನು ಸಲ್ಲಿಸಲು ನ್ಯಾಯಾಲಯವು ರಾಜ್ಯ ಸರ್ಕಾರಕ್ಕೆ ಮೂರು ವಾರಗಳ ಕಾಲಾವಕಾಶವನ್ನು ನೀಡಿತ್ತು. ಅರ್ಜಿದಾರರು ನಂತರ 21 ದಿನಗಳಲ್ಲಿ ಮರುಪರಿಶೀಲನೆ ಸಲ್ಲಿಸಬಹುದು ಎಂದು ಸೂಚಿಸಲಾಗಿದೆ.