ಹಿಂದಿಯೇ ಇಂಗ್ಲಿಷ್‌ಗೆ ಪರ್ಯಾಯ: ಗೃಹ ಸಚಿವ ಅಮಿತ್ ಶಾ

Amit Shah
  • ಮತ್ತೊಮ್ಮೆ ಹಿಂದಿ ಹೇರಿಕೆ ಹೇಳಿಕೆ ನೀಡಿದ ಸಚಿವ ಅಮಿತ್ ಶಾ
  • ಭಾರತದ ಭಾಷೆಯಲ್ಲಿ ಸಂವಹನ ನಡೆಸಬೇಕು ಎಂದ ಗೃಹ ಸಚಿವ

ಸ್ಥಳೀಯ ಭಾಷೆಗಳು ಇಂಗ್ಲಿಷ್‌ಗೆ ಪರ್ಯಾಯವಲ್ಲ ಹೀಗಾಗಿ ದೇಶದ ವಿವಿಧ ರಾಜ್ಯಗಳ ಜನರು ಪರಸ್ಪರ ಹಿಂದಿಯಲ್ಲಿ ಸಂವಹನ ನಡೆಸಬೇಕು ಎಂದು ಗೃಹ ಸಚಿವ ಅಮಿತ್ ಶಾ ಮತ್ತೊಮ್ಮೆ ಹಿಂದಿ ಹೇರಿಕೆಯ ಮಾತುಗಳನ್ನಾಡಿದ್ದಾರೆ.

ʼಸಂಸದೀಯ ಅಧಿಕೃತ ಭಾಷಾ ಸಮಿತಿʼಯ 37ನೇ ಸಭೆಯಲ್ಲಿ ಮಾತನಾಡಿದ ಶಾ, ರಾಜ್ಯಗಳಲ್ಲಿ ಜನರು ʼಭಾರತದ ಭಾಷೆʼಯಲ್ಲಿ ಸಂವಹನ ನಡೆಸಬೇಕು ಎಂದು ಹಿಂದಿಯನ್ನು ಪರೋಕ್ಷವಾಗಿ ʼರಾಷ್ಟ್ರಭಾಷೆʼಯನ್ನಾಗಿ ಹೇರಲು ಪ್ರಯತ್ನಿಸಿದ್ದಾರೆ. ಭಾರತದ ಸಂಸ್ಕೃತಿ ಮತ್ತು ಮೌಲ್ಯ ವ್ಯವಸ್ಥೆಗಳು ಹಿಂದಿ ಭಾಷೆಯ ಕಾರಣದಿಂದ ರಕ್ಷಿಸಲ್ಪಟ್ಟಿವೆ ಎಂದು ಶಾ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

"ಕೇಂದ್ರ ಸರ್ಕಾರದಲ್ಲಿ ಅಧಿಕೃತ ಭಾಷೆಯನ್ನಾಗಿ ಹಿಂದಿಯನ್ನು ಅಂಗೀಕರಿಸಲು ಪ್ರಧಾನಿ ನರೇಂದ್ರ ಮೋದಿ ನಿರ್ಧರಿಸಿದ್ದಾರೆ ಇದರಿಂದಾಗಿ ಖಂಡಿತವಾಗಿಯೂ ಹಿಂದಿಯ ಪ್ರಾಮುಖ್ಯತೆ ಹೆಚ್ಚಲಿದೆ. ಕೇಂದ್ರ ಸಚಿವ ಸಂಪುಟದ ಶೇ. 70ರಷ್ಟು ಕಾರ್ಯಸೂಚಿಗಳನ್ನು ಈಗ ಹಿಂದಿಯಲ್ಲಿ ಸಿದ್ಧಪಡಿಸಲಾಗುತ್ತಿದೆ. ಸರ್ಕಾರದ ʼಅಧಿಕೃತ ಭಾಷೆʼಯನ್ನು ದೇಶದ ಸಂವಹನದ ಭಾಗವಾಗಿಸಬೇಕು" ಎಂದು ʼಅಧಿಕೃತ ಭಾಷಾ ಸಮಿತಿʼಯ ಅಧ್ಯಕ್ಷರಾಗಿರುವ ಶಾ ಹೇಳಿದ್ದಾರೆ.

ದೇಶದೆಲ್ಲೆಡೆ ಒಂಬತ್ತನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಹಿಂದಿ ಭಾಷೆಯ ಪ್ರಾಥಮಿಕ ಜ್ಞಾನ ನೀಡುವ ಮತ್ತು ಹಿಂದಿ ಪರೀಕ್ಷೆಗಳಿಗೆ ಹೆಚ್ಚಿನ ಗಮನ ನೀಡುವಂತೆ ಗೃಹ ಸಚಿವರು ಸೂಚನೆ ನೀಡಿದ್ದಾರೆ.

10ನೇ ತರಗತಿಯವರೆಗೆ ಹಿಂದಿಯನ್ನು ಕಡ್ಡಾಯಗೊಳಿಸಲು ಒಪ್ಪಿಕೊಂಡಿರುವ ಈಶಾನ್ಯದ ಎಂಟು ರಾಜ್ಯಗಳಲ್ಲಿ  22,000 ಹಿಂದಿ ಶಿಕ್ಷಕರನ್ನು ನೇಮಿಸಿಕೊಳ್ಳಲಾಗಿದೆ ಎಂದು ಶಾ ಮಾಹಿತಿ ನೀಡಿದ್ದಾರೆ.

ಇದೇ ವೇಳೆ ಗೃಹ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಮಿತಿಯ 11ನೇ ಸಭೆಯ ವರದಿಯನ್ನು ಭಾರತದ ರಾಷ್ಟ್ರಪತಿಗಳಿಗೆ ಕಳುಹಿಸಿಕೊಡಲು ಸರ್ವಾನುಮತದಿಂದ ನಿರ್ಣಯಿಸಲಾಗಿದೆ.

"ಒಂದು ರಾಷ್ಟ್ರ, ಒಂದು ಭಾಷೆ" ಎಂದಿದ್ದ ಅಮಿತ್ ಶಾ 
2019ರ ಹಿಂದಿ ದಿವಸ್ ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ "ಒಂದು ರಾಷ್ಟ್ರ, ಒಂದು ಭಾಷೆ" ಎಂಬ ವಾದವನ್ನು ಅಮಿತ್ ಶಾ ಮುಂದಿಟ್ಟಿದ್ದರು. ಭಾರತ ವಿವಿಧ ಭಾಷೆಗಳ ದೇಶವಾಗಿದ್ದರೂ ಸಹ, ವಿಶ್ವದೆಲ್ಲೆಡೆ ದೇಶವನ್ನು ಗುರುತಿಸುವ  ಒಂದು ಭಾಷೆಯನ್ನು ಹೊಂದುವುದು ಅವಶ್ಯಕವಾಗಿದೆ. ಹಿಂದಿ ಭಾಷೆಯು ಇಡೀ ದೇಶವನ್ನು ಒಂದೇ ದಾರದಲ್ಲಿ ಕಟ್ಟಿಕೊಡುವ ಭಾಷೆಯಾಗಿದೆ ಎಂದು ಹೇಳಿಕೆ ನೀಡಿದ್ದರು. 

ಶಾ ಹೇಳಿಕೆಗೆ ವಿರೋಧ ಪಕ್ಷಗಳು ಸೇರಿದಂತೆ ದಕ್ಷಿಣ ರಾಜ್ಯಗಳಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಇದು ಭಾರತದ ವೈವಿಧ್ಯತೆಯ ಮೂಲ ತತ್ವಗಳ ಮೇಲಿನ ದಾಳಿ ಎಂದು ಸಿಪಿಐ(ಎಂ) ವಾಗ್ದಾಳಿ ನಡೆಸಿತ್ತು. 

ನಿಮಗೆ ಏನು ಅನ್ನಿಸ್ತು?
1 ವೋಟ್