ಉತ್ತರಾಖಂಡ | ಅಂತರ್ಜಾತಿ ವಿವಾಹ: ಮರ್ಯಾದೆಗೇಡು ಹತ್ಯೆಗೆ ದಲಿತ ಬಲಿ

  • ಬಲಿಷ್ಠ ಜಾತಿಯ ಯುವತಿಯೊಂದಿಗೆ ಮದುವೆ; ದಲಿತ ಯುವಕನ ಮರ್ಯಾದಾಗೇಡು ಹತ್ಯೆ
  • ಯುವತಿಯ ಕುಟುಂಬದವರಿಂದಲೇ ನಡೆದಿರುವ ಕೃತ್ಯ

ಬಲಿಷ್ಠ ಜಾತಿಯ ಯುವತಿಯನ್ನು ಮದುವೆಯಾಗಿದ್ದಕ್ಕಾಗಿ ದಲಿತ ಯುವಕನನ್ನು ಯುವತಿಯ ಮನೆಯವರು ಕೊಲೆ ಮಾಡಿರುವ ಮರ್ಯಾದೆಗೇಡು ಹತ್ಯೆ ಘಟನೆ ಉತ್ತರಾಖಂಡದ ಅಲ್ಮೋರಾದಲ್ಲಿ ನಡೆದಿದೆ.

ದಲಿತ ರಾಜಕೀಯ ಕಾರ್ಯಕರ್ತ ಜಗದೀಶ್‌ ಚಂದ್ರ ಹತ್ಯೆಯಾದವರು. ಇವರ ಶವವು, ಶುಕ್ರವಾರ ಭಿಕಿಯಾಸೇನ್‌ ಪಟ್ಟಣದ ಸಮೀಪ ಕಾರೊಂದರಲ್ಲಿ ಪತ್ತೆಯಾಗಿದೆ ಎಂದು ತಹಶೀಲ್ದಾರ್‌ ನಿಶಾ ರಾಣಿ ತಿಳಿಸಿದರು.

ಜಗದೀಶ್‌ ದಂಪತಿಗಳು ಆಗಸ್ಟ್‌ 21ರಂದು ವಿವಾಹವಾಗಿದ್ದರು. ಗುರುವಾರ ಆತನ ಅತ್ತೆಯ ಮನೆಯವರು ಚಂದ್ರ ಅವರನ್ನು ಅಪಹರಿಸಿದ್ದಾರೆ ಎಂದು ರಾಣಿ ಹೇಳಿದ್ದಾರೆ. 

ಯುವತಿಯ ತಾಯಿ, ಆಕೆಯ ಮಲತಂದೆ ಹಾಗೂ ಸಹೋದರ ಚಂದ್ರ ಅವರನ್ನು ಕೊಲೆ ಮಾಡಿದ ಆರೋಪಿಗಳಾಗಿದ್ದಾರೆ. ಚಂದ್ರ ಅವರ ಮೃತದೇಹವನ್ನು ವಿಲೇವಾರಿ ಮಾಡಲು ಕಾರಿನಲ್ಲಿ ತೆಗೆದುಕೊಂಡು ಹೋಗುತ್ತಿದ್ದ ಸಮಯದಲ್ಲಿ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.

ಈ ಸುದ್ದಿ ಓದಿದ್ದೀರಾ?: ತುಮಕೂರು | ದಲಿತ ಮಗುವಿನ ಗುಪ್ತಾಂಗ ಸುಟ್ಟಿದ್ದ ಪ್ರಕರಣ; ಅಂಗನವಾಡಿ ಶಿಕ್ಷಕಿ ವಜಾ

ಆಗಸ್ಟ್ 27 ರಂದು, ದಂಪತಿಗಳು ತಮ್ಮ ಜೀವಕ್ಕೆ ಬೆದರಿಕೆಯಿದೆ ಎಂದು ಉಲ್ಲೇಖಿಸಿ, ಭದ್ರತೆ ಕೋರಿ ಸರ್ಕಾರಕ್ಕೆ ಪತ್ರ ಬರೆದಿದ್ದರು. ದಂಪತಿಯ ದೂರಿನ ಮೇರೆಗೆ ಸರ್ಕಾರ ಕ್ರಮ ಕೈಗೊಂಡಿದ್ದರೆ ಚಂದ್ರ ಅವರನ್ನು ರಕ್ಷಿಸಬಹುದಿತ್ತು ಎಂದು ಉತ್ತರಾಖಂಡ್ ಪರಿವರ್ತನ್ ಪಕ್ಷದ ನಾಯಕ ಪಿ ಸಿ ತಿವಾರಿ ಬೇಸರ ವ್ಯಕ್ತಪಡಿಸಿದರು.

ಮರ್ಯಾದೆಗೇಡು ಹತ್ಯೆಯು ಇಡೀ ಉತ್ತರಾಖಂಡಕ್ಕೆ ತಲೆತಗ್ಗಿಸುವಂತಹ ನಾಚಿಕೆಗೇಡಿನ ಸಂಗತಿ. ಸಂತ್ರಸ್ತೆಯ ಪತ್ನಿಗೆ ಒಂದು ಕೋಟಿ ಪರಿಹಾರ ನೀಡಬೇಕು ಎಂದು ಅವರು ಒತ್ತಾಯಿಸಿದರು.

ಮೃತವ್ಯಕ್ತಿಯು ಸಾಂಲ್ಟ್ ವಿಧಾನಸಭಾ ಕ್ಷೇತ್ರದಿಂದ ಎರಡು ಬಾರಿ ಉತ್ತರಾಖಂಡ್ ಪರಿವರ್ತನ್ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸಿ, ಪರಾಭವಗೊಂಡಿದ್ದರು.

ಕರ್ನಾಟಕದಲ್ಲಿ ಹೆಚ್ಚುತ್ತಿರುವ ಮರ್ಯಾದೆಗೇಡು ಹತ್ಯೆ ಪ್ರಕರಣಗಳು

ದಲಿತ ಸಮುದಾಯದ ಹುಡುಗನನ್ನು ಪ್ರೀತಿಸಿದ್ದಕ್ಕಾಗಿ 17 ವರ್ಷದ ಮಗಳನ್ನು ಆಕೆಯ ತಂದೆಯೇ ಕತ್ತು ಹಿಸುಕಿ ಕೊಂದಿರುವ ಹೃದಯ ವಿದ್ರಾವಕ ಘಟನೆ ಮೈಸೂರಿನ ಪಿರಿಯಾಪಟ್ಟಣ ತಾಲೂಕಿನ ಕಗ್ಗುಂಡಿ ಗ್ರಾಮದಲ್ಲಿ ಸಂಭವಿಸಿದೆ. ಮಗಳನ್ನು ಕೊಂದ ಬಳಿಕ ಆರೋಪಿ ತಂದೆ ಸ್ಥಳೀಯ ಠಾಣೆಗೆ ತೆರಳಿ ಪೊಲೀಸರ ಮುಂದೆ ಶರಣಾಗಿದ್ದ ಘಟನೆ ಜೂನ್‌ ತಿಂಗಳಲ್ಲಿ ನಡೆದಿತ್ತು.

ಅನ್ಯ ಧರ್ಮದ ಯುವಕನನ್ನು ಪೇಮಿಸಿದ್ದ ಕಾರಣಕ್ಕೆ ಪ್ರೇಮಿಗಳಿಬ್ಬರನ್ನು ಯುವತಿಯ ಅಣ್ಣಂದಿರೇ ಕೊಂದ ಘಟನೆ ಮೂರ್ನಾಲ್ಕು ದಿನಗಳ ಹಿಂದೆ ಉತ್ತರ ಪ್ರದೇಶದಲ್ಲಿ ವರದಿಯಾಗಿದೆ.

ಹೆತ್ತಮಕ್ಕಳು ಎಂದೂ ನೋಡದೇ, ಬೇರೆ ಜಾತಿಯ ಅಥವಾ ಧರ್ಮದ ವ್ಯಕ್ತಿಯನ್ನು ಪ್ರೀತಿಸಿದರೆ ಅವರನ್ನು ಕೊಲ್ಲುವಂತಹ ಪ್ರಕರಣಗಳು ಕಳೆದ ನಾಲ್ಕೈದು ವರ್ಷಗಳಲ್ಲಿ ಇಡೀ ದೇಶದಲ್ಲಿ ಹೆಚ್ಚಳವಾಗಿವೆ.

ಇಂತಹ ಪ್ರಕರಣಗಳು ನಡೆಯದಂತೆ ಇಡೀ ಸಮಾಜದಲ್ಲಿ ಸಮಾನತೆಯ ಬಗ್ಗೆ ಅರಿವು ಮೂಡಿಸುವ ಜವಾಬ್ದಾರಿ ಸರ್ಕಾರ ಮತ್ತು ನಾಗರಿಕರಾದ ನಮ್ಮೆಲ್ಲರ ಮೇಲೂ ಇದೆ. ಮರ್ಯಾದೆಗೇಡು ಹತ್ಯೆಗಳು ನಡೆದಾಗ ಆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಗಳಿಗೆ ಕಠಿಣ ಶಿಕ್ಷೆ ಆಗುವಂತೆ ಮಾಡಲು ʻಫಾಸ್ಟ್‌ ಟ್ರ್ಯಾಕ್‌ ಕೋರ್ಟ್‌ʼಗಳ ಅಗತ್ಯವಿದೆ. ಈ ಬಗ್ಗೆ ಸರ್ಕಾರ ನಿರ್ಧಾರ ತೆಗೆದುಕೊಳ್ಳಬೇಕು ಎಂಬುದು ಸಾಮಾಜಿಕ ಜಾಲತಾಣಿಗರ ಆಗ್ರಹ.

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180