ಮಧ್ಯಪ್ರದೇಶ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವೆ ಉಷಾ ಠಾಕೂರ್ ಅವರು ಅತ್ಯಾಚಾರಿಗಳನ್ನು ನಡುರಸ್ತೆಯಲ್ಲಿ ಗಲ್ಲಿಗೇರಿಸಬೇಕು ಎಂದು ಹೇಳಿದ್ದರು. ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿರುವ ರಾಜ್ಯ ಮಾನವ ಹಕ್ಕುಗಳ ಆಯೋಗವು ಉತ್ತರ ಕೇಳಿ ಸಮನ್ಸ್ ಕಳುಹಿಸಿದೆ.
ಮಧ್ಯಪ್ರದೇಶದ ಮುಖ್ಯ ಕಾರ್ಯದರ್ಶಿ 15 ದಿನಗಳಲ್ಲಿ ಆಯೋಗಕ್ಕೆ ಉತ್ತರಿಸಬೇಕೆಂದು ಕೇಳಿದೆ. ಈ ಕುರಿತು ಎಂಪಿಎಚ್ಆರ್ಸಿ ಸದಸ್ಯ ಮನೋಹರ್ ಮಮತಾನಿ ಮಾತನಾಡಿ, "ರಾಜ್ಯ ಸರ್ಕಾರದ ಜವಾಬ್ದಾರಿಯುತ ಅಧಿಕಾರಿಯ ಮೂಲಕವೇ ಉತ್ತರ ನೀಡಬೇಕು, ಹೀಗಾಗಿ ಆಡಳಿತದ ಗಂಭೀರತೆಯನ್ನೂ ಪರಿಗಣಿಸಬಹುದು" ಎಂದು ಹೇಳಿದ್ದಾರೆ.
ನವೆಂಬರ್ 13ರಂದು ಇಂದೋರ್ನ ಮೌವ್ನ ಅಂಬೇಡ್ಕರ್ ನಗರದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ್ದ ಉಷಾ ಠಾಕೂರ್, "ಅತ್ಯಾಚಾರಿಗಳನ್ನು ನಡುರಸ್ತೆಯಲ್ಲಿ ಗಲ್ಲಿಗೇರಿಸಬೇಕು. ಅವರ ಶವ ಕೂಡ ಸಿಗದಂತೆ ಮಾಡಬೇಕು. ಮೃತ ದೇಹಗಳನ್ನು ಹದ್ದುಗಳು ಮತ್ತು ಕಾಗೆಗಳು ತಿನ್ನಬೇಕು. ಅತ್ಯಾಚಾರಿಗಳಿಗೆ ಮಾನವ ಹಕ್ಕುಗಳಿಲ್ಲ. ಮಾನವ ಹಕ್ಕುಗಳ ಆಯೋಗ ಮಧ್ಯಪ್ರವೇಶಿಸಿದರೆ ಅದರ ಬಗ್ಗೆ ಚಿಂತಿಸುವ ಅಗತ್ಯವಿಲ್ಲ" ಎಂದು ಹೇಳಿದ್ದರು.
ಸಚಿವೆಯ ಹೇಳಿಕೆಗೆ ಪ್ರತಿಕ್ರಿಯಿಸಿರುವ ಮನೋಹರ್ ಮಮತಾನಿ, "ಸರ್ಕಾರದ ಗೌರವಯುತವಾದ ಸಚಿವ ಸ್ಥಾನದಲ್ಲಿರುವ ಉಷಾ ಠಾಕೂರ್ ನೀಡಿರುವ ಹೇಳಿಕೆ ಸಂವಿಧಾನದ ಮೂಲ ಆಶಯಕ್ಕೆ ವಿರುದ್ಧವಾಗಿದೆ. ಮಾನವ ಹಕ್ಕುಗಳ ಆಯೋಗಕ್ಕೆ ವಿರುದ್ಧವಾಗಿದೆ. ಸಚಿವರ ಹೇಳಿಕೆ ಆಕ್ಷೇಪಾರ್ಹ" ಎಂದು ಹೇಳಿದ್ದಾರೆ.
ಸುಪ್ರೀಂ ಕೋರ್ಟ್ನ ಕಾನೂನು ಪೂರ್ವನಿದರ್ಶನಗಳು ಮತ್ತು ಭಾರತೀಯ ಸಂವಿಧಾನದ 21ನೇ ವಿಧಿಯ ನಿಬಂಧನೆಗಳನ್ನು ಉಲ್ಲೇಖಿಸಿದ ಆಯೋಗವು, "ಪ್ರತಿಯೊಬ್ಬರಿಗೂ ಮೂಲಭೂತ ಹಕ್ಕುಗಳಿವೆ. ಪ್ರತಿ ಕೈದಿಗಳಿಗೂ ಮೂಲಭೂತ ಹಕ್ಕುಗಳಿವೆ" ಎಂದು ಹೇಳಿದೆ.