ಪತ್ನಿಯನ್ನು ಇತರೆ ಮಹಿಳೆಯರೊಂದಿಗೆ ಹೋಲಿಸಿ, ನಿಂದಿಸುವುದು ಮಾನಸಿಕ ಕ್ರೌರ್ಯ: ಕೇರಳ ಹೈಕೋರ್ಟ್

Kerala Highcourt
  • ಇತರೆ ಮಹಿಳೆಯರೊಂದಿಗೆ ಹೋಲಿಸಿ ನಿಂದಿಸುವುದು ಸರಿಯಲ್ಲ
  • ಮಹಿಳೆಯರು ಅಂಥ ನಡವಳಿಕೆ ಸಹಿಸಿಕೊಳ್ಳುವ ಅವಶ್ಯಕತೆ ಇಲ್ಲ

"ಪತ್ನಿಯನ್ನು ಇತರೆ ಮಹಿಳೆಯರೊಂದಿಗೆ ಹೋಲಿಸಿ, ಪದೇಪದೆ ನಿಂದಿಸುವುದು ಮಾನಸಿಕ ಕ್ರೌರ್ಯ. ಮಹಿಳೆಯರು ಅಂಥ ನಡವಳಿಕೆಯನ್ನು ಸಹಿಸಿಕೊಳ್ಳುವ ಅವಶ್ಯಕತೆಯಿಲ್ಲ" ಎಂದು ಕೇರಳ ಹೈಕೋರ್ಟ್‌ ಹೇಳಿದೆ.  

ಹೆಂಡತಿಯಿಂದ 13 ವರ್ಷಗಳ ಕಾಲ ದೂರವಿದ್ದ ವ್ಯಕ್ತಿಯು, ತಮ್ಮ ಮದುವೆಯನ್ನು ರದ್ದು ಮಾಡಿದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ಕೇರಳ ಹೈಕೋರ್ಟ್‌ನ ವಿಭಾಗೀಯ ಪೀಠ ವಿಚಾರಣೆ ನಡೆಸಿತು. 

"ಪತ್ನಿ ತನ್ನ ನಿರೀಕ್ಷೆಗೆ ತಕ್ಕಂತೆ ಇಲ್ಲ ಎಂದು ಪತಿಯು ಪದೇಪದೆ ನಿಂದಿಸಿರುವುದು, ಆಕೆಯನ್ನು ನಿರ್ಲಕ್ಷ್ಯಿಸಿರುವುದು ವಿಚಾರಣೆ ಸಂದರ್ಭದಲ್ಲಿ ಸಾಬೀತಾಗಿದೆ. ಹೆಂಡತಿ ಮತ್ತು ಆಕೆಯ ತಾಯಿಯ ಹೇಳಿಕೆ ಹಾಗೂ ಆಕೆಗೆ ಗಂಡ ಕಳುಹಿಸಿರುವ ಇಮೇಲ್‌ಗಳಲ್ಲಿ ಸಂಗಾತಿ ಬಗ್ಗೆ ಅವರ ನಿರೀಕ್ಷೆಗಳನ್ನು ವ್ಯಕ್ತಪಡಿಸಿರುವುದು ಸ್ಪಷ್ಟವಾಗಿದೆ" ಎಂದು ನ್ಯಾಯಾಲಯ ಹೇಳಿದೆ. 

"ಪತ್ನಿ ದೈಹಿಕವಾಗಿ ಆಕರ್ಷಣೀಯವಾಗಿ ಇಲ್ಲ ಎಂಬ ಕಾರಣಕ್ಕೆ ಆಕೆಯೊಂದಿಗೆ ಪತಿ ಸಂಸಾರ ನಡೆಸಿಲ್ಲ ಎಂಬುದು ವಿಚಾರಣೆ ವೇಳೆ ತಿಳಿದುಬಂದಿದೆ. ಈ ದಂಪತಿ ಅಲ್ಪಾವಧಿಗೆ ಮಾತ್ರ ಸಂಸಾರ ನಡೆಸಿದ್ದು, ಅವರ ಮದುವೆಯ ಉದ್ದೇಶ ಪೂರ್ಣಗೊಂಡಿಲ್ಲ" ಎಂದು ಕೋರ್ಟ್ ಹೇಳಿದೆ.

ಈ ಸುದ್ದಿ ಓದಿದ್ದೀರಾ?: ಬೆಂಗಳೂರು | ದೈಹಿಕ ಸಂಪರ್ಕಕ್ಕೆ ಸಹಕರಿಸದ ಆರೋಪ; ಪತ್ನಿ ಹತ್ಯೆಗೈದು ಶಿರಾಡಿ ಘಾಟ್‌ಗೆ ಎಸೆದ ಪತಿ

ಜನವರಿ 2009 ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ದಂಪತಿ, ಅದೇ ವರ್ಷದ ನವೆಂಬರ್‌ನಲ್ಲಿ ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು.

ಅಲ್ಲದೆ, ದಾಖಲೆಗಳ ಪ್ರಕಾರ ದಂಪತಿ ಕೇವಲ ಒಂದು ತಿಂಗಳು ಮಾತ್ರ ಒಟ್ಟಿಗೆ ಇದ್ದು, ನಂತರ ಅವರು ದೂರವಾಗಿದ್ದಾರೆ. ಮದುವೆಯ ಸಮಯದಲ್ಲಿ ಪತ್ನಿಗೆ 26 ವರ್ಷ ಮತ್ತು ಪತಿಗೆ 29 ವರ್ಷ ವಯಸ್ಸಾಗಿತ್ತು. ಮದುವೆ ಬಳಿಕ ಅವರ ನಡುವೆ ಯಾವುದೇ ರೀತಿಯ ʼಸಂಬಂಧʼ ಏರ್ಪಟ್ಟಂತೆ ಕಾಣುತ್ತಿಲ್ಲ ಎಂದು ನ್ಯಾಯಾಲಯ ಹೇಳಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್