ತೆಲಂಗಾಣ | ಎಲೆಕ್ಟ್ರಿಕ್‌ ಸ್ಕೂಟರ್‌ ಶೋರೂಮ್‌ನಲ್ಲಿ ಬೆಂಕಿ ಅವಘಡ; ಎಂಟು ಮಂದಿ ಸಾವು

  • ಎಲೆಕ್ಟ್ರಿಕ್‌ ಸ್ಕೂಟರ್‌ ಶೋರೂಮ್‌ನಲ್ಲಿ ಬೆಂಕಿ ಅವಘಡ
  • ಶೋರೂಮ್‌ ಮಾಲೀಕನ ವಿರುದ್ಧ ದೂರು ದಾಖಲು

ಬಹುಮಹಡಿ ಕಟ್ಟಡದಲ್ಲಿದ್ದ ಎಲೆಕ್ಟ್ರಿಕ್‌ ಸ್ಕೂಟರ್‌ ಶೋರೂಮ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಈ ಅವಘಡದಲ್ಲಿ ಒಬ್ಬರು ಮಹಿಳೆ ಸೇರಿದಂತೆ ಎಂಟು ಮಂದಿ ಮೃತಪಟ್ಟಿರುವ ಘಟನೆ ತೆಲಂಗಾಣದ ಸಿಕಂದರಾಬಾದ್‌ನಲ್ಲಿ ನಡೆದಿದೆ.

ಸೋಮವಾರ ತಡರಾತ್ರಿ ಈ ಅವಘಡ ಸಂಭವಿಸಿದ್ದು, ಈ ಕಟ್ಟಡದ ಹೋಟೆಲ್‌ನಲ್ಲಿ ಕನಿಷ್ಠ 22 ಮಂದಿ ತಂಗಿದ್ದರು ಎನ್ನಲಾಗಿದೆ. ಈ ಘಟನೆಯಲ್ಲಿ ಎಂಟು ಮಂದಿ ಮೃತಪಟ್ಟಿದ್ದರೆ, ಹಲವು ಗಾಯಗೊಂಡಿದ್ದಾರೆ.

Eedina App

ಶೋರೂಂ ಮಾಲೀಕರು ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಸಂಗ್ರಹಿಸಲು ಕಟ್ಟಡದ ನೆಲಮಾಳಿಗೆಯನ್ನು ಬಳಸುತ್ತಿದ್ದರು. ಅಲ್ಲಿ ಶಾರ್ಟ್ ಸರ್ಕ್ಯೂಟ್ ನಡೆದಿರುವುದು ಬೆಂಕಿ ಅವಘಡಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

AV Eye Hospital ad

ಬ್ಯಾಟರಿಗಳನ್ನು ಚಾರ್ಜ್ ಮಾಡುವಾಗ ಶಾರ್ಟ್ ಸರ್ಕ್ಯೂಟ್ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ. ಘಟನೆ ಸಂಭವಿಸಿದಾಗ ನೆಲಮಾಳಿಗೆಯಲ್ಲಿ ವಿದ್ಯುತ್ ಸ್ಕೂಟರ್‌ಗಳ ಬಳಿ ವಿದ್ಯುತ್ ಜನರೇಟರ್ ಮತ್ತು ಐದು ಗೃಹಬಳಕೆಯ ಗ್ಯಾಸ್ ಸಿಲಿಂಡರ್‌ಗಳನ್ನು ಇರಿಸಲಾಗಿತ್ತು ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದರು.

"ನಾಲ್ಕು ಮಹಡಿಗಳ ಹೋಟೆಲ್‌ನಲ್ಲಿ 23 ಕೊಠಡಿಗಳಿವೆ. ಬೆಂಕಿ ಆವರಿಸುತ್ತಿದ್ದಂತೆ ಎಲ್ಲ ಮಹಡಿಗಳಲ್ಲೂ ದಟ್ಟ ಹೊಗೆ ಆವರಿಸಿದೆ. ಒಂದು ಮತ್ತು ಎರಡನೇ ಮಹಡಿಯಲ್ಲಿ ಮಲಗಿದ್ದ ಕೆಲವರು ಅಲ್ಲಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿ, ಕಾರಿಡಾರ್‌ಗೆ ಬಂದು ಸಾವನ್ನಪ್ಪಿದ್ದಾರೆ’’ ಎಂದು ಹೈದರಾಬಾದ್‌ನ ಪೊಲೀಸ್ ಆಯುಕ್ತ ಸಿ ವಿ ಆನಂದ್ ಹೇಳಿದರು.

ಈ ಸುದ್ದಿ ಓದಿದ್ದೀರಾ?: ಕಲಬುರಗಿ| ವಸತಿ ಶಾಲೆ ಬಾಲಕಿಯರಿಗೆ ಲೈಂಗಿಕ ಕಿರುಕುಳ: ಪ್ರಾಚಾರ್ಯ ಚೇತನ್‌ ರೆಡ್ಡಿ ಸೇರಿ ಇಬ್ಬರ ಬಂಧನ

ʻʻದಟ್ಟ ಹೊಗೆ ಎಲ್ಲ ಮಹಡಿಗಳಿಗೂ ಆವರಿಸಿದ್ದು, ಉಸಿರುಕಟ್ಟಿ ಎಂಟು ಮಂದಿ ಸಾವನ್ನಪ್ಪಿದ್ದಾರೆ. ಅಗ್ನಿಶಾಮಕ ದಳವು ಕ್ರೇನ್ ಬಳಸಿ ಹಲವರನ್ನು ರಕ್ಷಿಸಿತು. ಕೆಲವು ಸ್ಥಳೀಯರು ಸಹ ರಕ್ಷಣಾ ಕಾರ್ಯಾಚರಣೆಯಲ್ಲಿ ಸಹಾಯ ಮಾಡಿದರುʼʼ ಎಂದು ಅವರು ವಿವರಿಸಿದರು.

ʻʻಗಾಯಾಳುಗಳನ್ನು ಚಿಕಿತ್ಸೆಗಾಗಿ ನಗರದ ವಿವಿಧ ಆಸ್ಪತ್ರೆಗಳಿಗೆ ರವಾನಿಸಲಾಗಿದ್ದು, ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ. ಬೆಂಕಿ ಹೊತ್ತಿಕೊಂಡಾಗ ಕಟ್ಟಡದಲ್ಲಿದ್ದ ವಾಟರ್ ಸ್ಪ್ರಿಂಕ್ಲರ್ ವ್ಯವಸ್ಥೆ ಕೆಲಸ ಮಾಡಿಲ್ಲ. ಈ ಬಗ್ಗೆ ತನಿಖೆ ನಡೆಯುತ್ತಿದೆ. ಎಲೆಕ್ಟ್ರಿಕ್ ಸ್ಕೂಟರ್ ಶೋರೂಂ ಮಾಲೀಕರ ವಿರುದ್ಧ ಪ್ರಕರಣ ದಾಖಲಾಗಿದ್ದು, ಅವರೇ ಹೋಟೆಲ್ ಮಾಲೀಕರೂ ಆಗಿದ್ದಾರೆ. ನೆಲಮಾಳಿಗೆಯನ್ನು ವಾಹನ ನಿಲ್ಲಿಸುವ ಗೋಡೋನ್ ಆಗಿ ಬಳಸಲು ಅನುಮತಿ ಪಡೆದಿದ್ದರೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆʼʼ ಎಂದು ಅವರು ವಿವಿರಿಸಿದರು.

ಈ ಘಟನೆಯ ಬಗ್ಗೆ ತೆಲಂಗಾಣ ಗೃಹ ಸಚಿವ ಮೊಹಮ್ಮದ್ ಮೆಹಮೂದ್ ಅಲಿ ಸಂತಾಪ ವ್ಯಕ್ತಪಡಿಸಿದ್ದು, ಪ್ರಕರಣದ ತನಿಖೆಗೆ ಆದೇಶಿಸಲಾಗಿದೆ. ಅಗ್ನಿಶಾಮಕ ದಳದ ತಂಡಗಳು ಲಾಡ್ಜ್‌ನಿಂದ ಜನರನ್ನು ರಕ್ಷಿಸಲು ಪ್ರಯತ್ನಿಸಿದವು. ಆದರೆ, ಭಾರೀ ಹೊಗೆಯಿಂದಾಗಿ ಕೆಲವರು ಸಾವನ್ನಪ್ಪಿದ್ದಾರೆ" ಎಂದು ಅವರು ಹೇಳಿದರು.

ಅವಘಡದ ಬಗ್ಗೆ ಸಂತಾಪ ವ್ಯಕ್ತಪಡಿಸಿದ ಪ್ರಧಾನಿ ನರೇಂದ್ರ ಮೋದಿ, ದುರಂತದಲ್ಲಿ ಮೃತಪಟ್ಟವರ ಕುಟುಂಬ ಸದಸ್ಯರಿಗೆ ತಲಾ ₹2 ಲಕ್ಷ ಮತ್ತು ಗಾಯಗೊಂಡವರಿಗೆ ₹50,000 ಪರಿಹಾರ ಘೋಷಿಸಿ ಟ್ವೀಟ್‌ ಮಾಡಿದ್ದಾರೆ. ರಾಜ್ಯ ಸರ್ಕಾರ ಕೂಡ ಸಂತ್ರಸ್ತರ ಕುಟುಂಬಗಳಿಗೆ ತಲಾ ₹3 ಲಕ್ಷ ಪರಿಹಾರ ಘೋಷಿಸಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app