ರಾಜಕೀಯ ಸೇಡು, ಕಿರುಕುಳಕ್ಕೆ ಹೆದರುವವನು ನಾನಲ್ಲ : ಡಿ ಕೆ ಶಿವಕುಮಾರ್

d k shivakumar
  • ಒಂದಲ್ಲ ಒಂದು ದಿನ ನಾನು ನಿರಪರಾಧಿ ಎಂದು ಸಾಬೀತಾಗುತ್ತದೆ
  • ಇಡಿ ನೋಟಿಸ್‌ಗೆ ಉತ್ತರ ಕೊಡುವ ಶಕ್ತಿ ಡಿಕೆಶಿಗೆ ಇದೆ ಎಂದ ಎಚ್‌ಡಿಕೆ

"ಜಾರಿ ನಿರ್ದೇಶನಾಲಯ(ಇ.ಡಿ)ದ ಅಧಿಕಾರಿಗಳು ಕೇಳಿರುವ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ" ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್‌ ಹೇಳಿದ್ದಾರೆ.

ಸತತ ಐದು ಗಂಟೆಗಳ ಇ.ಡಿ ವಿಚಾರಣೆ ಬಳಿಕ ಹೊರಬಂದ ಡಿಕೆಶಿ, ಅಧಿಕಾರಿಗಳು ಕೇಳಿದ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ. ಅವರು ಕೆಲ ದಾಖಲೆಗಳನ್ನು ಕೇಳಿದ್ದಾರೆ. ದಾಖಲೆ ನೀಡಲು ನಾನು ಸಮಯಾವಕಾಶ ಕೋರಿದ್ದೇನೆ ಎಂದರು. ಅಲ್ಲದೆ, ನಾಳೆ ವಿಚಾರಣೆಗೆ ಹಾಜರಾಗಲು ಅಧಿಕಾರಿಗಳು ಸೂಚಿಸಿಲ್ಲ ಎಂದೂ ಅವರು ತಿಳಿಸಿದರು. 

"ಸೇಡು, ಕಿರುಕುಳಕ್ಕೆ ನಾನು ಹೆದರಲ್ಲ"

“ಒಂದಲ್ಲ ಒಂದು ದಿನ ನಾನು ನಿರಪರಾಧಿ ಎಂಬುದು ಸಾಬೀತಾಗುತ್ತದೆ” ಎಂದು ಡಿಕೆಶಿ ವಿಶ್ವಾಸದ ಮಾತುಗಳನ್ನಾಡಿದ್ದಾರೆ.

ಟ್ವೀಟ್‌ ಮಾಡಿರುವ ಅವರು, “ನನಗೆ ಭಾರತೀಯ ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಸಂಪೂರ್ಣ ನಂಬಿಕೆ ಇದೆ. ಒಂದಲ್ಲ ಒಂದು ದಿನ ನಾನು ನಿರಪರಾಧಿ ಎಂದು ಸಾಬೀತಾಗುತ್ತದೆ. ರಾಜಕೀಯ ಸೇಡು, ಕಿರುಕುಳಕ್ಕೆ ಹೆದರುವವನು ನಾನಲ್ಲ. ಕರ್ನಾಟಕದ ಜನರ ಪರವಾಗಿ ಮಾತನಾಡಿದ್ದಕ್ಕೆ, ನಿರುದ್ಯೋಗ, ಬೆಲೆ ಏರಿಕೆಯಂತಹ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿದ್ದಕ್ಕಾಗಿ ಈ ಬೆಲೆ ತೆರಬೇಕಾಗಿದೆ” ಎಂದು ಬರೆದುಕೊಂಡಿದ್ದಾರೆ. 

"ಇಡಿ ನೋಟಿಸ್‌ಗೆ ಉತ್ತರ ಕೊಡುವ ಶಕ್ತಿ ಡಿಕೆಶಿಗೆ ಇದೆ"

ಕಾಂಗ್ರೆಸ್ ನಾಯಕ ಡಿ ಕೆ ಶಿವಕುಮಾರ್ ಪರ ಮಾತನಾಡಿರುವ ಜೆಡಿಎಸ್ ಮುಖಂಡ, ಮಾಜಿ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ, "ಡಿ ಕೆ ಶಿವಕುಮಾರ್ ಅವರಿಗೆ ತಾವೊಬ್ಬ ರಾಜಕಾರಣಿ, ರೈತ, ಉದ್ಯಮಿ, ತನ್ನದೇ ಆದಂತಹ ವೃತ್ತಿಗಳಿವೆ. ನಾನು ಭ್ರಷ್ಟಾಚಾರ ಮಾಡಿಲ್ಲ ಎಂದು ಸ್ವತಃ ಹೇಳಿಕೊಂಡಿದ್ದಾರೆ. ಅವರು ಭ್ರಷ್ಟಾಚಾರ ಮಾಡದೆ ಇದ್ದಲ್ಲಿ ಇಡಿ ನೋಟಿಸ್ ಕೊಟ್ಟಿದ್ದರೂ, ಅದಕ್ಕೆ ಉತ್ತರ ಕೊಡುವ ಸಾಮರ್ಥ್ಯ ಅವರು ಹೊಂದಿದ್ದಾರೆ. ಅದರಿಂದ ಹೊರಗೆ ಬರುವ ವಿಶ್ವಾಸ ಅವರಿಗೆ ಇದ್ದಾಗ ನಾನು ಆ ಬಗ್ಗೆ ಟೀಕೆ ಮಾಡಲ್ಲ" ಎಂದು ಹೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ?: ಡಿಕೆಶಿಗೆ ಮತ್ತೊಂದು ಸಂಕಷ್ಟ | ಐಟಿ ದಾಖಲಿಸಿದ್ದ ಪ್ರಕರಣಕ್ಕೆ ಸುಪ್ರೀಂ ಕೋರ್ಟ್‌ 'ಮರುಜೀವ'

ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದ ಎರಡನೇ ಪ್ರಕರಣದಲ್ಲಿ ಡಿ ಕೆ ಶಿವಕುಮಾರ್ ಸೋಮವಾರ ಜಾರಿ ನಿರ್ದೇಶನಾಲಯ(ಇ.ಡಿ)ದ ಮುಂದೆ ವಿಚಾರಣೆಗೆ ಹಾಜರಾಗಿದ್ದರು.

ಡಿ ಕೆ ಶಿವಕುಮಾರ್ ಮಧ್ಯಾಹ್ನ 12ರ ಸುಮಾರಿಗೆ ದೆಹಲಿಯ ಎಪಿಜೆ ಅಬ್ದುಲ್ ಕಲಾಂ ರಸ್ತೆಯಲ್ಲಿರುವ ಇ.ಡಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾದರು. ಆದಾಯಕ್ಕೂ ಮೀರಿ ಆಸ್ತಿ ಗಳಿಕೆ ಮಾಡಿರುವ ಆರೋಪವನ್ನು ಅವರು ಎದುರಿಸುತ್ತಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್