ಮಹಿಳೆ ಪ್ರಚೋದನಕಾರಿ ಉಡುಗೆ ಧರಿಸಿದ್ದರಿಂದ ಲೈಂಗಿಕ ಕಿರುಕುಳ ಪ್ರಕರಣ ನಿಲ್ಲುವುದಿಲ್ಲ: ಕೇರಳ ಕೋರ್ಟ್

civic chandran
  • ಘಟನೆ ನಡೆದು ಎರಡು ವರ್ಷವಾದರೂ ಯಾಕೆ ದೂರು ದಾಖಲಿಸಿಲ್ಲ?
  • 74 ವರ್ಷದ ವ್ಯಕ್ತಿ ಕಿರುಕುಳ ನೀಡಿದ್ದಾನೆ ಎಂಬುದು ನಂಬಲಸಾಧ್ಯ

ಮಹಿಳೆಯು ಪ್ರಚೋದನಕಾರಿ ಉಡುಗೆ ಧರಿಸಿದ್ದರಿಂದ ಐಪಿಸಿ ಸೆಕ್ಷನ್ 354ಎ ಅಡಿಯಲ್ಲಿ ಲೈಂಗಿಕ ಕಿರುಕುಳ ಪ್ರಕರಣ ನಿಲ್ಲುವುದಿಲ್ಲ ಎಂದು ಬರಹಗಾರ ಮತ್ತು ಹೋರಾಟಗಾರ ಸಿವಿಕ್ ಚಂದ್ರನ್‌​ಗೆ ಜಾಮೀನು ನೀಡುವ ಸಂದರ್ಭದಲ್ಲಿ ಕೇರಳದ ಕೋಯಿಕ್ಕೋಡ್ ಸೆಷನ್ಸ್ ನ್ಯಾಯಾಲಯ ಅಭಿಪ್ರಾಯಪಟ್ಟಿದೆ. 

ಮಹಿಳೆಯೊಂದಿಗೆ ದುರ್ನಡತೆ ಮತ್ತು ಲೈಂಗಿಕ ಕಿರುಕುಳ ಆರೋಪ ಪ್ರಕರಣ ಎದುರಿಸುತ್ತಿರುವ ಸಿವಿಕ್ ಚಂದ್ರನ್​ಗೆ ನ್ಯಾಯಾಲಯ​​ ಜಾಮೀನು ಮಂಜೂರು ಮಾಡಿದೆ.

ಸಿವಿಕ್ ಚಂದ್ರನ್ ಅವರು ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಮೂರ್ತಿ ಎಸ್ ಕೃಷ್ಣಕುಮಾರ್ ಅವರಿದ್ದ ಪೀಠ, "ಮಹಿಳೆಯು ಪ್ರಚೋದನಕಾರಿ ಉಡುಗೆ ಧರಿಸಿರುವುದರಿಂದ ಆರೋಪಿಯ ವಿರುದ್ಧ ಐಪಿಸಿಯ ಸೆಕ್ಷನ್ 354ಎ ಅಡಿಯಲ್ಲಿ ದೂರು ದಾಖಲಿಸಿದರೂ ನಿಲ್ಲುವುದಿಲ್ಲ. ಅಲ್ಲದೆ, 74 ವರ್ಷ ವಯಸ್ಸಿನ ಮತ್ತು ದೈಹಿಕವಾಗಿ ಅಶಕ್ತರಾಗಿರುವ ವ್ಯಕ್ತಿಯೊಬ್ಬರು ಯುವತಿಯನ್ನು ಬಲವಂತವಾಗಿ ತಮ್ಮ ತೊಡೆಯ ಮೇಲೆ ಕೂರಿಸಿಕೊಂಡು ಯುವತಿಗೆ ಲೈಂಗಿಕ ಕಿರುಕುಳ ನೀಡಬಹುದು ಎಂದು ನಂಬುವುದು ಅಸಾಧ್ಯ" ಎಂದಿದೆ.

"ಆರೋಪಿ ಸಿವಿಕ್ ಚಂದ್ರನ್ ಅವರು ಜಾಮೀನು ಅರ್ಜಿಯೊಂದಿಗೆ ಸಲ್ಲಿಸಿದ ಛಾಯಾಚಿತ್ರಗಳನ್ನು ಗಮನಿಸಿದರೆ, ದೂರು ನೀಡಿರುವ ಯುವತಿ ಸ್ವತಃ ಲೈಂಗಿಕವಾಗಿ ಪ್ರಚೋದಿಸುವ ಬಟ್ಟೆಗಳನ್ನು ಧರಿಸಿದ್ದರು ಎಂದು ತೋರುತ್ತದೆ" ಎಂದು ನ್ಯಾಯಾಲಯ ಉಲ್ಲೇಖಿಸಿದೆ.

"ಚಂದ್ರನ್‌ ಅವರು 2020ರ ಫೆಬ್ರವರಿ 8ರಂದು ನಂದಿ ಬೀಚ್‌ನಲ್ಲಿ ಶಿಬಿರ ಆಯೋಜಿಸಿದ್ದರು. ಆ ಸಂದರ್ಭದಲ್ಲಿ ಅವರು ತನ್ನನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ಅನುಚಿತವಾಗಿ ವರ್ತಿಸಿದರು" ಎಂದು ಆರೋಪಿಸಿ 2022ರ ಜುಲೈ 29ರಂದು ಕೊಯಿಲಾಂಡಿ ಠಾಣೆಯಲ್ಲಿ ಯುವತಿ ದೂರು ದಾಖಲಿಸಿದ್ದರು. ಐಪಿಸಿ ಸೆಕ್ಷನ್‌ಗಳಾದ 354ಎ, 341 ಹಾಗೂ 354ರ ಅಡಿಯಲ್ಲಿ ಚಂದ್ರನ್‌ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. 

ಈ ಸುದ್ದಿ ಓದಿದ್ದೀರಾ?:ಬೆಂಗಳೂರು | ದೈಹಿಕ ಸಂಪರ್ಕಕ್ಕೆ ಸಹಕರಿಸದ ಆರೋಪ; ಪತ್ನಿ ಹತ್ಯೆಗೈದು ಶಿರಾಡಿ ಘಾಟ್‌ಗೆ ಎಸೆದ ಪತಿ

ಈ ಹಿನ್ನೆಲೆಯಲ್ಲಿ ಪ್ರತಿವಾದಿ ಪರ ವಕೀಲರು ಘಟನೆ ನಡೆದು ಎರಡು ವರ್ಷಗಳಾದ ಮೇಲೆ ದೂರು ದಾಖಲಿಸಲಾಗಿದೆ. 2020ರಲ್ಲಿಯೇ ದೂರು ದಾಖಲಿಸಬಹುದಿತ್ತಲ್ಲ ಎಂದು ದೂರುದಾರರನ್ನು ಪ್ರಶ್ನಿಸಿದರು. ಇದೆಲ್ಲವನ್ನು ಗಮನಿಸಿದ ನ್ಯಾಯಾಲಯ ಚಂದ್ರನ್‌ ಅವರಿಗೆ ಜಾಮೀನು ನೀಡಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್