ಐಐಟಿ ಬಾಂಬೆ | ಮಹಿಳಾ ಹಾಸ್ಟೆಲ್‌ನ ಸ್ನಾನ ಗೃಹವನ್ನು ಇಣುಕಿದ ಕ್ಯಾಂಟೀನ್‌ ನೌಕರನ ಬಂಧನ

  • ಬಾಂಬೆ ಐಐಟಿಯ ಮಹಿಳಾ ಹಾಸ್ಟೆಲ್‌ನ ಸ್ನಾನ ಗೃಹ ಇಣುಕಿ ನೋಡಿದ ಕ್ಯಾಂಟೀನ್‌ ಉದ್ಯೋಗಿ
  • ಆರೋಪಿ ಬಂಧನ ನಂತರ ಕ್ಯಾಂಪಸ್‌ನಲ್ಲಿ ಸುರಕ್ಷತೆ ಹೆಚ್ಚಿಸುವ ಕ್ರಮಕ್ಕೆ ಮುಂದಾದ ಸಂಸ್ಥೆ

ಮುಂಬೈನ ಭಾರತೀಯ ತಂತ್ರಜ್ಞಾನ ಸಂಸ್ಥೆಯ (ಐಐಟಿ) ಹಾಸ್ಟೆಲ್‌ ಕ್ಯಾಂಟೀನ್‌ನ ಉದ್ಯೋಗಿಯೊಬ್ಬರು ಸ್ನಾನದ ಗೃಹ ಇಣುಕಿ ನೋಡುವಾಗ ಸಿಕ್ಕಿಬಿದ್ದಿದ್ದು, ಆತನನ್ನ ಭಾನುವಾರ (ಸೆಪ್ಟೆಂಬರ್‌ 18) ರಾತ್ರಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯು ಆಕ್ಷೇಪಾರ್ಹ ವಿಡಿಯೋಗಳನ್ನು ಸಹ ಚಿತ್ರೀಕರಿಸಿದ್ದಾರೆ ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದು, ಅದನ್ನು ಪೊಲೀಸರು ಖಚಿತಪಡಿಸಿಕೊಳ್ಳುತ್ತಿದ್ದಾರೆ.

ʻʻಕಿಟಕಿಯ ಸಣ್ಣ ಕಿಂಡಿಯ ಮೂಲಕ ಕ್ಯಾಂಟೀನ್‌ ನೌಕರನೊಬ್ಬ ಸ್ನಾನಗೃಹ ಇಣುಕಿ ನೋಡುತ್ತಿರುವುದನ್ನು ಗಮನಿಸಿದ ವಿದ್ಯಾರ್ಥಿನಿಯೊಬ್ಬರು ಕಿರುಚಿದ್ದಾಳೆ. ಕೀಟನಾಶಕ ಸಿಂಪಡಣೆಗಾಗಿ ಭಾನುವಾರ ಕ್ಯಾಂಟೀನನ್ನು ಮುಚ್ಚಲಾಗಿತ್ತು. ಆದರೆ, ಕ್ಯಾಂಟೀನ್‌ ನೌಕರರು ಹಾಸ್ಟೆಲ್ ಆವರಣದಲ್ಲಿಯೇ ಇದ್ದರು. ಹಾಸ್ಟೆಲ್‌ ಕಟ್ಟಡದಲ್ಲಿರುವ ಸ್ನಾನದ ಗೃಹಗಳ ಕಿಟಕಿಗಳು ನೆಲಮಹಡಿಯಿಂದ ಬಂದಿರುವ ಪೈಪ್‌ಗಳ ಕಡೆ ಮುಖ ಮಾಡಿವೆʼʼ ಎಂದು ಐಐಟಿ ಬಾಂಬೆ ವಿದ್ಯಾರ್ಥಿಗಳು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ʻʻಹಾಸ್ಟೆಲ್‌ ವಿದ್ಯಾರ್ಥಿನಿಯರ ಜಾಗರೂಕತೆಯು ನೌಕರನ ಬಂಧನಕ್ಕೆ ಕಾರಣವಾಯಿತು. ಆರೋಪಿಗಳಿಂದ ಮುಟ್ಟುಗೋಲು ಹಾಕಿಕೊಂಡ ಫೋನ್‌ಗಳಲ್ಲಿ ಯಾವುದೇ ವಿಡಿಯೋ ತುಣುಕು ಕಂಡುಬಂದಿಲ್ಲʼʼ ಎಂದು ಐಐಟಿ ವಕ್ತಾರರು ತಿಳಿಸಿದ್ದಾರೆ.

ʻʻಆರೋಪಿಯು ವಿಡಿಯೋ ರೆಕಾರ್ಡಿಂಗ್‌ ಮಾಡಿಲ್ಲ ಎಂಬುದು ಆರಂಭಿಕ ತನಿಖೆಯಲ್ಲಿ ಕಂಡು ಬಂದಿದೆ. ಪ್ರಸ್ತುತ ಆರೋಪಿಯನ್ನು ಬಂಧಿಸಲಾಗಿದ್ದು, ಆತನ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಯುತ್ತಿದೆʼʼ ಎಂದು  ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ?: ಅಮಿತ್ ಶಾ- ಪಳನಿಸ್ವಾಮಿ ಭೇಟಿ | ಎಐಎಡಿಎಂಕೆ ಮತ್ತು ಬಿಜೆಪಿ ನಡುವಿನ ಮೈತ್ರಿಯ ಭವಿಷ್ಯದ ಬಗ್ಗೆ ಚರ್ಚೆ ಸಾಧ್ಯತೆ

ಸಂಸ್ಥೆಯು ಕ್ಯಾಂಟೀನನ್ನು ಮುಚ್ಚಿದ್ದರೂ, ಇಂತಹ ಘಟನೆಗಳು ಪುನರಾವರ್ತನೆಯಾಗದಂತೆ ನೋಡಿಕೊಳ್ಳಬೇಕು. ಕ್ಯಾಂಪಸ್‌ನಲ್ಲಿ ಹೆಚ್ಚಿನ ಭದ್ರತಾ ಕ್ರಮ ಕೈಗೊಳ್ಳಬೇಕು. ಹಾಗೆಯೇ, ವಿಶೇಷವಾಗಿ ಸ್ನಾನಗೃಹಗಳ ವಿನ್ಯಾಸದಲ್ಲಿ ಬದಲಾವಣೆ ಮಾಡಬೇಕು ಎಂದು ವಿದ್ಯಾರ್ಥಿನಿಯರು ಒತ್ತಾಯಿಸಿದ್ದಾರೆ.

ʻʻನಿರ್ದಿಷ್ಟವಾಗಿ ಮಹಿಳಾ ಸಿಬ್ಬಂದಿಗಳು ಇದ್ದರೆ ಮಾತ್ರ ಕ್ಯಾಂಟೀನ್‌ ಮುಂದಿನ ದಿನಗಳಲ್ಲಿ ತೆರೆಯುತ್ತದೆ. ಪ್ರಸ್ತುತ ಈ ಬಗ್ಗೆ ಸಮಸ್ಯೆ ಉಂಟು ಮಾಡುವಂತಹ ಕಿಂಡಿಗಳನ್ನು ಮುಚ್ಚಲಾಗಿದೆ. ಕ್ಯಾಂಪಸ್‌ನಲ್ಲಿ ಸುರಕ್ಷತೆ ಹೆಚ್ಚಿಸಲು ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬ ಬಗ್ಗೆ ವಿದ್ಯಾರ್ಥಿಗಳೊಂದಿಗೆ ಚರ್ಚಿಸುತ್ತಿದ್ದೇವೆ ”ಎಂದು ವಕ್ತಾರರು ಹೇಳಿದ್ದಾರೆ.

ಚಂಡೀಗಢದಲ್ಲಿ ಪ್ರತಿಭಟಿಸಿದ್ದ ವಿದ್ಯಾರ್ಥಿನಿಯರು

ಚಂಡೀಗಢ ವಿಶ್ವವಿದ್ಯಾಲಯದ ಹಾಸ್ಟೆಲ್ ವಿದ್ಯಾರ್ಥಿನಿಯರ ಆಕ್ಷೇಪಾರ್ಹ ವಿಡಿಯೋಗಳನ್ನು ಚಿತ್ರೀಕರಿಸಿ, ಪ್ರಸಾರ ಮಾಡಿದ್ದಾರೆ ಎಂದು ಆರೋಪಿಸಿ ಕಳೆದ ಮೂರು ದಿನಗಳಿಂದ ವಿದ್ಯಾರ್ಥಿನಿಯರು ಕ್ಯಾಂಪಸ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಹಾಸ್ಟೆಲ್‌ ವಿದ್ಯಾರ್ಥಿನಿ, ಆಕೆಯ ಸ್ನೇಹಿತ ಹಾಗೂ ಶಿಮ್ಲಾದ ವ್ಯಕ್ತಿ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ. ಈ ಘಟನೆಗೆ ಸಂಬಂಧಿಸಿ ವಿದ್ಯಾರ್ಥಿನಿಯರೊಂದಿಗೆ ಅನುಚಿತವಾಗಿ ವರ್ತಿಸಿದ ಹಾಸ್ಟೆಲ್‌ ವಾರ್ಡನ್‌ ಅನ್ನು ಬಂಧಿಸಲಾಗಿದೆ. ಪ್ರಸ್ತುತ ಕ್ಯಾಂಪಸ್‌ನಲ್ಲಿ ಪ್ರತಿಭಟನೆ ಮುಂದುವರೆದಿದ್ದು, ಮುಂದಿನ ಶನಿವಾರದವರೆಗೆ ವಿಶ್ವವಿದ್ಯಾಲಯವನ್ನು ಮುಚ್ಚಿರುವುದಾಗಿ ವಿಶ್ವವಿದ್ಯಾಲಯ ಆಡಳಿತವು ತಿಳಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವರವಾದ ತನಿಖೆ ನಡೆಸಲು ಮೂವರು ಮಹಿಳಾ ಅಧಿಕಾರಿಗಳ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ.

ಮದ್ರಾಸ್ ಐಐಟಿಯ ಹಾಸ್ಟೆಲ್‌ನಲ್ಲಿ ಕ್ಯಾಂಟೀನ್ ಉದ್ಯೋಗಿಯೊಬ್ಬರು ಮಹಿಳಾ ವಿದ್ಯಾರ್ಥಿನಿಯ ಮೇಲೆ ಹಲ್ಲೆ ನಡೆಸಿದ್ದಕ್ಕಾಗಿ ಬಂಧಿಸಿದ್ದ ಘಟನೆ ಸೆಪ್ಟೆಂಬರ್ ಮೊದಲ ವಾರದಲ್ಲಿ ನಡೆದಿತ್ತು.

ನಿಮಗೆ ಏನು ಅನ್ನಿಸ್ತು?
0 ವೋಟ್