ಬೆಂಗಳೂರು | ಪ್ರತಿಭಟನೆ, ಮೆರವಣಿಗೆಗಳಿಗೆ ಹೇರಿರುವ ನಿರ್ಬಂಧವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿ: ಹೈಕೋರ್ಟ್

bng protest
  • ನಿಯಮ ಉಲ್ಲಂಘಿಸಿದವರ ವಿರುದ್ಧ‌ ಈವರೆಗೆ 27 ಎಫ್‌ಐಆರ್‌
  • ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಸುವಂತೆ ನಿರ್ದೇಶನ

ಬೆಂಗಳೂರಿನಲ್ಲಿ ಧರಣಿ, ಪ್ರತಿಭಟನೆ,‌ ಮೆರವಣಿಗೆಗಳಿಗೆ ಸಂಬಂಧಿಸಿದಂತೆ 2021ರಲ್ಲಿ ಹೇರಲಾಗಿರುವ ನಿರ್ಬಂಧವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.

ಈ ಕುರಿತಂತೆ ಹೈಕೋರ್ಟ್ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್)ಯನ್ನು ಸೋಮವಾರ ಹಂಗಾಮಿ ನ್ಯಾಯಮೂರ್ತಿ ಅಲೋಕ್ ಅರಾಧೆ ಮತ್ತು ನ್ಯಾಯಮೂರ್ತಿ ಎಸ್ ವಿಶ್ವಜಿತ್ ಶೆಟ್ಟಿ ಅವರನ್ನೊಳಗೊಂಡ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

"ಹೈಕೋರ್ಟ್‌ ಆದೇಶದಂತೆ ಕ್ರಮ ಕೈಗೊಂಡು ಸರ್ಕಾರವು ಕರ್ನಾಟಕ ಪೊಲೀಸ್‌ ಕಾಯ್ದೆಯಡಿ ನಿಯಮ ರೂಪಿಸಿದೆ. ನಿಯಮ ಉಲ್ಲಂಘಿಸಿದವರ ವಿರುದ್ಧ 27 ಎಫ್‌ಐಆರ್‌ ದಾಖಲಿಸಲಾಗಿದೆ" ಎಂದು ಸರ್ಕಾರದ ಪರ ಹೆಚ್ಚುವರಿ ವಕೀಲ ವಿಜಯಕುಮಾರ್ ಎ ಪಾಟೀಲ್ ಪೀಠಕ್ಕೆ ವಿವರಿಸಿದರು.

ಈ ಸುದ್ದಿ ಓದಿದ್ದೀರಾ?: ಕೈದಿಯ ವೈವಾಹಿಕ ಹಕ್ಕು ನಿರಾಕರಣೆ ಆತನ ಪತ್ನಿಯ ಹಕ್ಕುಗಳ ಮೇಲೆ ಪ್ರತಿಕೂಲ ಪರಿಣಾಮ: ಸುಪ್ರೀಂಕೋರ್ಟ್‌

ಇದನ್ನು ಮಾನ್ಯ ಮಾಡಿದ ನ್ಯಾಯಪೀಠ, "2021ರಲ್ಲಿ ಅನುಷ್ಠಾನಗೊಳಿಸಿರುವ ಪ್ರತಿಭಟನೆಗಳು, ಪ್ರದರ್ಶನಗಳು ಮತ್ತು ಪ್ರತಿಭಟನಾ ಮೆರವಣಿಗೆಗಳ ಪರವಾನಗಿ ಮತ್ತು ನಿಯಂತ್ರಣ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು" ಎಂದು ಸರ್ಕಾರಕ್ಕೆ ನಿರ್ದೇಶಿಸಿತು. ಅಲ್ಲದೆ, ಈಗಾಗಲೇ ನಿಗದಿಪಡಿಸಿದಂತೆ ಫ್ರೀಡಂ ಪಾರ್ಕ್‌ನಲ್ಲಿ ಮಾತ್ರ ಪ್ರತಿಭಟನೆಗೆ ಅವಕಾಶ ನೀಡಬೇಕು ಎಂದೂ ಸೂಚಿಸಿತು. 

ಏನಿದು ಪ್ರಕರಣ?

ನಗರದಲ್ಲಿ ಮೆರವಣಿಗೆ ಮತ್ತು ಪ್ರತಿಭಟನೆಯಿಂದ ಸಂಚಾರ ದಟ್ಟಣೆ ಉಂಟಾಗಿ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿದೆ ಎಂದು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಯಾಗಿದ್ದ, ಹಾಲಿ ಗುಜರಾತ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರು 2019ರ ಮಾರ್ಚ್‌ನಲ್ಲಿ ಹೈಕೋರ್ಟ್‌ನ ಅಂದಿನ ಮುಖ್ಯ ನ್ಯಾಯಮೂರ್ತಿಯವರಿಗೆ ಪತ್ರ ಬರೆದಿದ್ದರು. ಹೈಕೋರ್ಟ್ ಅದನ್ನು ಪರಿಗಣಿಸಿ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿತ್ತು.      

ನಿಮಗೆ ಏನು ಅನ್ನಿಸ್ತು?
2 ವೋಟ್