ನಗರ ಭಾಗದಲ್ಲಿ ಹೆಚ್ಚುತ್ತಿದೆಯೇ ಬಡತನ |ಆರ್‌ಟಿಇ ಅಡಿಯಲ್ಲಿ ಮಕ್ಕಳ ಶಿಕ್ಷಣಕ್ಕಾಗಿ ಈ ವರ್ಷ ಸಲ್ಲಿಕೆಯಾಗಿವೆ ದಾಖಲೆಯ ಅರ್ಜಿ

RTE

ಕಳೆದ ಎರಡು ವರ್ಷಗಳಿಂದ ಕೊರೋನಾ ಸೋಂಕು ಜನ ಸಾಮಾನ್ಯರನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಈ ಅವಧಿಯಲ್ಲಿ ಮಧ್ಯಮ ವರ್ಗದ ಜನ ಕೆಲಸ ಮತ್ತು ಆದಾಯ ಇಲ್ಲದೆ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಆರ್‌ಟಿಇ ಅಡಿಯಲ್ಲಿ ಮಕ್ಕಳ ಶಿಕ್ಷಣಕ್ಕಾಗಿ ಈ ವರ್ಷ ಅರ್ಜಿಗಳ ಸಂಖ್ಯೆ ಹೆಚ್ಚಲು ಕೊರೋನಾ ಕಾರಣದಿಂದಾಗಿ ನಗರ ಪ್ರದೇಶದಲ್ಲಿ ಹೆಚ್ಚುತ್ತಿರುವ ಬಡತನವೇ ಕಾರಣ ಎನ್ನಲಾಗಿದೆ.

ಮಾರಣಾಂತಿಕ ಕೊರೋನಾ ಸೋಂಕು ಮತ್ತು ಕೊರೋನಾ ಪ್ರೇರಿತ ಆರ್ಥಿಕ ಸಂಕಷ್ಟದಿಂದಾಗಿ ಕಳೆದ ಎರಡು ವರ್ಷಗಳಿಂದ ನಗರ ಪ್ರದೇಶದ ಮಧ್ಯಮ ವರ್ಗದ ಜನ ತತ್ತರಿಸಿಹೋಗಿದ್ದಾರೆ. ಈಗಾಗಲೇ ನಿರುದ್ಯೋಗ ದರ ದಿನದಿಂದ ದಿನಕ್ಕೆ ಏರುತ್ತಿದ್ದು, ಮಧ್ಯಮ ವರ್ಗದ ಜನ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದು ಸಹ ದುಸ್ತರವಾಗಿದೆ. ಹೀಗಾಗಿ 2022-23ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಆರ್‌ಟಿಇ (ಶಿಕ್ಷಣ ಹಕ್ಕು) ಅಡಿಯಲ್ಲಿ  ಖಾಸಗಿ ಶಾಲೆಗಳಿಗೆ ಅರ್ಜಿ ಸಲ್ಲಿಸಿರುವವರ ಸಂಖ್ಯೆ ಈ ವರ್ಷ ಶೇ. 40ರಷ್ಟು ಏರಿಕೆಯಾಗಿದೆ ಎಂದು ಶಿಕ್ಷಣ ಇಲಾಖೆ ಮಾಹಿತಿ ನೀಡಿದೆ.

Eedina App

ಅರ್ಜಿ ಸಂಖ್ಯೆಯಲ್ಲಿ ಏರಿಕೆ

4 ರಿಂದ 16 ವರ್ಷದ ಒಳಗಿನ ಎಲ್ಲಾ ಬಡ ಮಕ್ಕಳಿಗೂ ಸಹ ಉಚಿತ ಮತ್ತು ಗುಣಮಟ್ಟದ ಶಿಕ್ಷಣ ನೀಡಬೇಕು ಎಂಬ ಸಲುವಾಗಿ 2012 ಏಪ್ರಿಲ್ 1ರಂದು ಶಿಕ್ಷಣ ಹಕ್ಕು ಕಾಯ್ದೆಯನ್ನು ಜಾರಿಗೆ ತರಲಾಗಿತ್ತು. ಆದಾಗ್ಯೂ ಖಾಸಗಿ ಶಾಲೆಗಳ ಸೀಟಿಗಾಗಿ ಆರ್‌ಟಿಇನಡಿ ಅರ್ಜಿ ಸಲ್ಲಿಸುವವರ ಸಂಖ್ಯೆ ಕ್ರಮೇಣ ಇಳಿಮುಖವಾಗಿತ್ತು. ಆದರೆ, ಈ ವರ್ಷ ಅರ್ಜಿ ಸಲ್ಲಿಸುವವರ ಸಂಖ್ಯೆ ಗಣನೀಯವಾಗಿ ಏರಿಕೆ ಕಂಡಿದೆ.

AV Eye Hospital ad

ಪ್ರಸಕ್ತ ಸಾಲಿನಲ್ಲಿ ಬೆಂಗಳೂರಿನ ನಾಲ್ಕೂ ವಲಯದ ಖಾಸಗಿ ಶಾಲೆಗಳಲ್ಲಿ ಒಟ್ಟಾರೆಯಾಗಿ 18,555 ಸೀಟುಗಳು ಲಭ್ಯವಿದೆ. ಆದರೆ, 20,414 ಜನ ತಮ್ಮ ಮಕ್ಕಳಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಹೀಗಾಗಿ ಯಾವ ಶಾಲೆಯಲ್ಲಿ ಯಾವ ಮಕ್ಕಳಿಗೆ ಸೀಟು ನೀಡುವುದು? ಎಂಬುದೇ ಶಿಕ್ಷಣ ಇಲಾಖೆಗೆ ತಲೆನೋವಾಗಿದೆ.

ಈ ಹಿಂದಿನ ಲೆಕ್ಕಾಚಾರಗಳೇನು?

ಆರ್‌ಟಿಇ ಕಾಯ್ದೆ ಅಡಿಯಲ್ಲಿ 2021-22 ರ ಸಾಲಿನಲ್ಲಿ ರಾಜ್ಯದಲ್ಲಿ 14,036 ಸೀಟುಗಳು ಲಭ್ಯವಿತ್ತು. ಆದರೆ, ಪೋಷಕರಿಂದ ಸಲ್ಲಿಕೆಯಾದ ಅರ್ಜಿಗಳ ಸಂಖ್ಯೆ ಕೇವಲ 11,531 ಮಾತ್ರ. ಆದರೆ, ಶಾಲೆಗೆ ಸೇರಿದ ಮಕ್ಕಳ ಸಂಖ್ಯೆ ಕೇವಲ 3,070. 2020-21ನೇ ಸಾಲಿನಲ್ಲಿ 17,453 ಸೀಟುಗಳು ಲಭ್ಯವಿದ್ದು, 11,026 ಅರ್ಜಿಗಳು ಸಲ್ಲಿಕೆಯಾಗಿದ್ದವು, ಈ ಪೈಕಿ 3,700 ಮಕ್ಕಳು ಮಾತ್ರ ಶಾಲೆಗೆ ಹಾಜರಾಗಿದ್ದರು. ಆದರೆ, ಈ ವರ್ಷ ಅರ್ಜಿ ಸಲ್ಲಿಸಿದವರ ಸಂಖ್ಯೆ ಗಣನೀಯವಾಗಿ ಏರಿಕೆ ಕಂಡಿದೆ. ಇದಕ್ಕೆ ಕೊರೋನಾ ಪ್ರೇರಿತ ಆರ್ಥಿಕ ಮುಗ್ಗಟ್ಟೇ ಕಾರಣ ಎನ್ನಲಾಗುತ್ತಿದೆ.

ಅರ್ಜಿ ಸಂಖ್ಯೆ ಹೆಚ್ಚಲು ಕಾರಣ ಆರ್ಥಿಕ ಮಗ್ಗಟ್ಟೇ?

ಕಳೆದ ಎರಡು ವರ್ಷಗಳಿಂದ ಕೊರೋನಾ ಸೋಂಕು ಜನಸಾಮಾನ್ಯರನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಈ ಅವಧಿಯಲ್ಲಿ ಮಧ್ಯಮ ವರ್ಗದ ಜನ ಕೆಲಸ ಮತ್ತು ಆದಾಯ ಇಲ್ಲದೆ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಆರ್‌ಟಿಇ ಅಡಿಯಲ್ಲಿ ಮಕ್ಕಳ ಶಿಕ್ಷಣಕ್ಕಾಗಿ ಈ ವರ್ಷ ಅರ್ಜಿಗಳ ಸಂಖ್ಯೆ ಹೆಚ್ಚಲು ಕೊರೋನಾ ಕಾರಣದಿಂದಾಗಿ ನಗರ ಪ್ರದೇಶದಲ್ಲಿ ಹೆಚ್ಚುತ್ತಿರುವ ಬಡತನವೇ ಕಾರಣ ಎಂದು ಶಿಕ್ಷಣ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಆರ್‌ಟಿಇ ಅಡಿಯಲ್ಲಿ ಅರ್ಜಿಗಳು ಹೆಚ್ಚಾಗಿರುವುದಕ್ಕೂ-ನಗರ ಪ್ರದೇಶದಲ್ಲಿ ಹೆಚ್ಚುತ್ತಿರುವ ಬಡತನಕ್ಕೂ ಸಂಬಂಧ ಇದೆಯೇ? ಎಂಬುದನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ’ಈ ದಿನ ಡಾಟ್‌ ಕಾಮ್’ ಶಿಕ್ಷಣ ತಜ್ಞ ಡಾ| ನಿರಂಜನಾರಾಧ್ಯ ಅವರನ್ನು ಸಂಪರ್ಕಿಸಿತ್ತು. ಈ ಬಗ್ಗೆ ಮಾತನಾಡಿರುವ ಅವರು, "ಕೊರೋನಾ ಅಧಿಕವಾಗಿದ್ದ ಸಂದರ್ಭದಲ್ಲಿ ನಗರ ಭಾಗದ ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದ ಜನ ಉದ್ಯೋಗ ಮತ್ತು ಆದಾಯ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂಬ ಕುರಿತು ಹಲವಾರು ಸಂಶೋಧನೆಗಳೇ ನಡೆದಿವೆ.

"ಈ ಹಿಂದೆ ಬಡ ಪೋಷಕರು ತಾವು ದುಡಿದ ಹಣದಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಕನಸನ್ನು ಹೊತ್ತಿದ್ದರು. ಆದರೆ, ಈಗ ಉದ್ಯೋಗ ಮತ್ತು ಆದಾಯ ಎರಡನ್ನೂ ಕಳೆದುಕೊಂಡಿರುವ ಪೋಷಕರಿಗೆ ಬೆಲೆ ಏರಿಕೆ ಬಿಸಿಯೂ ತಟ್ಟಿದೆ. ಹೀಗಾಗಿ ಅವರ ಬದುಕೇ ದುಸ್ತರವಾಗಿದ್ದು, ಮಕ್ಕಳಿಗೆ ಆರ್‌ಟಿಇ ಕಾಯ್ದೆಯ ಅಡಿಯಲ್ಲಾದರೂ ಉತ್ತಮ ಶಿಕ್ಷಣ ನೀಡಬೇಕು ಎಂದು ಎಡತಾಕುತ್ತಿದ್ದಾರೆ. ಹಾಗಾಗಿ ಸಹಜವಾಗಿಯೇ ಆರ್‌ಟಿಇ ಸೀಟುಗಳಿಗೆ ಬೇಡಿಕೆ ಹೆಚ್ಚಾಗಿದೆ" ಎಂದು ವಿವರಿಸಿದರು.

ಇದೇ ಸಂದರ್ಭದಲ್ಲಿ ಸರ್ಕಾರಕ್ಕೂ ಚಾಟಿ ಬೀಸಿರುವ ಡಾ| ನಿರಂಜನಾರಾಧ್ಯ, "ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಬೇಕಾದ ಜವಾಬ್ಧಾರಿ ಸರ್ಕಾರದ ಮೇಲಿದೆ. ಜನರಿಂದಲೂ ಆ ನಿರೀಕ್ಷೆ ಇದೆ. ಸರ್ಕಾರಿ ಶಾಲೆಗಳು ಗುಣಮಟ್ಟದಿಂದ ಕೂಡಿದ್ದರೆ ಯಾವ ಪೋಷಕರೂ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಕಳುಹಿಸುವುದಿಲ್ಲ. ಆದರೆ, ಸರ್ಕಾರ ತನ್ನ ಜವಾಬ್ದಾರಿಯಿಂದ ನುಣುಚಿಕೊಂಡ ಪರಿಣಾಮ ಮಧ್ಯಮ ಮತ್ತು ಬಡ ವರ್ಗದ ಪೋಷಕರು ಖಾಸಗಿ ಶಾಲೆಗಳ ದುಬಾರಿ ಶುಲ್ಕದಿಂದ ಬಸವಳಿದಿದ್ದಾರೆ" ಎಂದು ವಿಷಾದಿಸಿದರು.

ನಿಮಗೆ ಏನು ಅನ್ನಿಸ್ತು?
4 ವೋಟ್
eedina app