ಕಾಂಡ್ಲಾ ಬಂದರಿನಲ್ಲಿ ಸಾಲು ನಿಂತ ಗೋಧಿ ಲಾರಿಗಳು; ರಫ್ತು ನಿಷೇಧದ ನಿಯಮ ಸಡಿಲಿಕೆಗೆ ಕೇಂದ್ರದ ನಿರ್ಧಾರ

  • ಗೋಧಿ ರಫ್ತು ನಿಷೇಧ ಸಡಿಲಗೊಳಿಸಿದ ಕೇಂದ್ರ ಸರ್ಕಾರ
  • ಈಜಿಪ್ಟ್‌ಗೆ ಗೋಧಿ ರಫ್ತು ಮಾಡಲು ಅನುಮತಿ

ಗೋಧಿ ರಫ್ತು ನಿಷೇಧ ಆದೇಶ ಜಾರಿಗೆ ಬರುವ ಮೊದಲು ಮಾಡಿಕೊಳ್ಳಲಾದ ರಫ್ತು ಒಪ್ಪಂದಗಳಿಗೆ ಸಂಬಂಧಿಸಿ ಕೇಂದ್ರ ಸರ್ಕಾರ ಕೆಲವು ನಿಯಮಗಳನ್ನು ಮಂಗಳವಾರ ಸಡಿಲಿಸಿದೆ. 

ಈಗಾಗಲೇ ಗುಜರಾತ್‌ನ ಕಾಂಡ್ಲಾ ಬಂದರಿನಲ್ಲಿ ಈಜಿಪ್ಟ್‌ಗೆ ರವಾನೆ ಮಾಡಲು ಹಡಗಿಗೆ ಏರಿಸಲಾಗಿರುತ್ತಿರುವ ಸರಕಿಗೆ ಸಂಬಂಧಿಸಿ ನಿಷೇಧವನ್ನು ಸಡಿಲಿಸಲಾಗಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಪ್ರಕಟಣೆಯಲ್ಲಿ ಹೇಳಿದೆ.

ಗೋಧಿ ರಫ್ತು ಮಾಡಲು ಅವಕಾಶ ನೀಡುವಂತೆ ಈಜಿಪ್ಟ್‌ ಸರ್ಕಾರವು ಭಾರತಕ್ಕೆ ಮನವಿ ಮಾಡಿತ್ತು. ಈ ಸಂಬಂಧ ಸೀಮಾ ಸುಂಕ ಪ್ರಾಧಿಕಾರದಲ್ಲಿ ನೋಂದಾಯಿಸಲಾದ ಸರಕಿನ ಮೇಲಿನ ರಫ್ತು ನಿಷೇಧ ಸಡಿಸಲು ಕೇಂದ್ರ ಸರ್ಕಾರವು ನಿರ್ಧರಿಸಿದೆ.

ಉತ್ಪಾದನೆ ಇಳಿಕೆ ಮತ್ತು ದೇಶದಲ್ಲಿ ಹೆಚ್ಚುತ್ತಿರುವ ಹಣದುಬ್ಬರದ ಹಿನ್ನೆಲೆಯಲ್ಲಿ ಭಾರತವು ಮೇ 1 ರಂದು ಗೋಧಿ ರಫ್ತಿನ ಮೇಲೆ ನಿಷೇಧ ಹೇರಿತ್ತು.

ಹಠಾತ್‌ ನಿರ್ಬಂಧದಿಂದಾಗಿ ಬಂದರುಗಳಲ್ಲಿ ಅವ್ಯವಸ್ಥೆ ಉಂಟಾಗಿದ್ದು, ರಫ್ತುದಾರರು ಸರಕುಗಳನ್ನು ಏನು ಮಾಡಬೇಕೆಂದು ತಿಳಿಯದೆ ವಿಚಲಿತರಾಗಿದ್ದರು. ಗೋಧಿ ತುಂಬಿದ್ದ ಸುಮಾರು 4 ಸಾವಿರಕ್ಕೂ ಹೆಚ್ಚು ಟ್ರಕ್‌ಗಳು ಕಾಂಡ್ಲಾ ಬಂದರಿನಲ್ಲಿಯೇ ನಿಂತಿವೆ. ನಾಲ್ಕು ಹಡಗುಗಳಲ್ಲಿ ಅರ್ಧದಷ್ಟು ಸರಕು ಲೋಡ್ ಆಗಿದೆ ಎಂದು ವರದಿಯಾಗಿದೆ.

ಕಾಂಡ್ಲಾ ಬಂದರಿನಲ್ಲಿ ನಿಂತಿರುವ ಲಾರಿಗಳು

ಮಧ್ಯಪ್ರಾಚ್ಯ ಮತ್ತು ಯುರೋಪಿಯನ್ ದೇಶಗಳಿಗೆ ರಫ್ತಿಗಾಗಿ ಪಂಜಾಬ್, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದಿಂದ ಗೋಧಿ ಬಂದರಿಗೆ ಬರುತ್ತದೆ. ಬಂದರಿನಾದ್ಯಂತ 32 ದೈತ್ಯ ಗೋದಾಮುಗಳಿವೆ. ನಿಷೇಧಕ್ಕೆ ಮೊದಲು 3.75 ಲಕ್ಷ ಮೆಟ್ರಿಕ್ ಟನ್ ಗೋಧಿ ಹೊತ್ತ ಸುಮಾರು 4,000 ಲಾರಿಗಳು ಕಾಂಡ್ಲಾಕ್ಕೆ ಹೊರಟಿದ್ದವು. ಕಳೆದ ಏಳೆಂಟು ದಿನಗಳಿಂದ ಇಳಿಸಲು ಸಾಧ್ಯವಾಗದೆ ಕಾಂಡ್ಲಾದಲ್ಲಿ ಸಿಲುಕಿಕೊಂಡಿವೆ. 

ಗೋಧಿ ರಫ್ತು ನಿಷೇಧದ ಪರಿಣಾಮವಾಗಿ ಗೋಧಿ ತುಂಬಿದ 4,000 ಲಾರಿಗಳು ಮತ್ತು ನಾಲ್ಕು ಹಡಗುಗಳು ಬಂದರಿನಲ್ಲಿ ನಿಂತಿವೆ. ಗೋಧಿ ರಫ್ತು ನಿಷೇಧದ ಕ್ಷಿಪ್ರ ಘೋಷಣೆಯು ಗುಜರಾತ್‌ನ ಕಛ್‌ ಜಿಲ್ಲೆಯ ದೀನದಯಾಳ್ ಬಂದರಿನಲ್ಲಿ ಗೊಂದಲಕ್ಕೆ ಕಾರಣವಾಗಿದೆ. ರಫ್ತುದಾರರು ಮತ್ತು ವ್ಯಾಪಾರಿಗಳು ಸರಕುಗಳ ಭವಿಷ್ಯದ ಬಗ್ಗೆ ಗೊಂದಲದಲ್ಲಿದ್ದಾರೆ. 

ಅಧಿಕಾರಿಗಳ ಪ್ರಕಾರ ಮಧ್ಯಪ್ರದೇಶದ ಚಿಲ್ಲರೆ ವ್ಯಾಪಾರಿಗಳಿಗೆ ಸೇರಿದ ಸುಮಾರು 4 ಲಕ್ಷ ಮೆಟ್ರಿಕ್ ಟನ್ ಗೋಧಿಯು ಲಾರಿಗಳಲ್ಲಿ ಮತ್ತು ಗೋದಾಮುಗಳಲ್ಲಿ ದಾಸ್ತಾನಾಗಿದೆ. ಈಜಿಪ್ಟ್‌ಗೆ 60,000 ಮೆಟ್ರಿಕ್‌ ಟನ್‌ ಗೋಧಿ ಸಾಗಬೇಕಿದೆ. ಉಕ್ರೇನ್- ರಷ್ಯಾ ಯುದ್ಧ ಪ್ರಾರಂಭವಾದ ಬಳಿಕ ಬಂದರಿನಿಂದ ದೂರ ಹೋಗಬೇಕಾಗಿದ್ದ ಪ್ರಾಥಮಿಕ ಸರಕುಗಳು ರವಾನೆಯಾಗಿದ್ದವು.

ದೀನದಯಾಳ್ ಪೋರ್ಟ್ ಅಥಾರಿಟಿ (ಡಿಪಿಎ) ಅಧಿಕಾರಿಗಳಿಗೆ ಪ್ರಕಾರ, ಮೇ 16 ರಂದು ಈಜಿಪ್ಟ್‌ಗೆ ಪ್ರಯಾಣಿಸಲು ಹೊರಟಿದ್ದ ಲೈಬೀರಿಯನ್ ಧ್ವಜದ ಹಡಗಿನಲ್ಲಿ 44,340 ಮೆಟ್ರಿಕ್ ಟನ್ ಗೋಧಿಯನ್ನು ಈಗಾಗಲೇ ಹೇರಲಾಗಿದೆ. ಮಧ್ಯಪ್ರದೇಶದಿಂದ ಗೋಧಿ ತರಿಸಲಾಗಿದ್ದು, ವೆಸಲ್ ಮನಾಗೆ ರಫ್ತು ಮಾಡಬೇಕಿತ್ತು. “ಈಗಾಗಲೇ ಬಂದರಿನಲ್ಲಿ ವಿವಿಧ ರೀತಿಯ ಗೋಧಿ ಇತ್ತು. ನಿಷೇಧ ಹೇರಿದ ನಂತರ, ಗೋಧಿ ಸಾಗಿಸುವ ಲಾರಿಗಳು ಹೊರಭಾಗದಲ್ಲಿ ಸಾಲು ನಿಂತಿವೆ. ಬಂದರಿನ ಒಳಗೆ 1 ಲಕ್ಷ ಮೆಟ್ರಿಕ್‌ ಟನ್ ಗೋಧಿ ಇದೆ" ಎಂದು ದೀನದಯಾಳ್ ಪೋರ್ಟ್ ಬಿಲೀಫ್‌ನ ಅಧ್ಯಕ್ಷ ಸಂಜಯ್ ಮೆಹ್ತಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ನಿಯಮ ಸಡಿಲಿಕೆಗೆ ಕೇಂದ್ರದ ನಿರ್ಧಾರ

ʻʻದೇಶದ ಒಟ್ಟಾರೆ ಆಹಾರ ಭದ್ರತೆಯನ್ನು ನಿರ್ವಹಿಸಲು ಮತ್ತು ನೆರೆಯ ದುರ್ಬಲ ರಾಷ್ಟ್ರಗಳ ಅಗತ್ಯಗಳನ್ನು ಪೂರೈಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ರಫ್ತು ನಿಷೇಧ ನಿಯಮಗಳನ್ನು ಸಡಿಲಿಸಲು ನಿರ್ಧಾರ ಕೈಗೊಂಡಿದೆʼʼ ಎಂದು ವಿದೇಶಿ ವ್ಯಾಪಾರದ ಮಹಾನಿರ್ದೇಶನಾಲಯ (ಡಿಜಿಎಫ್‌ಟಿ) ತಿಳಿಸಿದೆ.

ಶೇ. 13.53ರಷ್ಟು ಗೋಧಿ ಉತ್ಪಾದನೆಯಾಗುವ ಭಾರತವು ವಿಶ್ವದಲ್ಲೇ ಎರಡನೇ ಅತಿ ಹೆಚ್ಚು ಗೋಧಿ ಉತ್ಪಾದಿಸುವ ದೇಶ. ರಷ್ಯಾದ ಪಡೆಗಳು ಉಕ್ರೇನ್‌ ಅನ್ನು ಆಕ್ರಮಿಸುವ ಮೊದಲು ಜಾಗತಿಕ ರಫ್ತಿನಲ್ಲಿ ಭಾರತವು ಶೇ. 1ರಷ್ಟಿತ್ತು. ಯುದ್ಧ ಬಿಕ್ಕಟ್ಟಿನ ನಂತರ 2022- 23ರಲ್ಲಿ ಭಾರತವು ಒಂದು ಕೋಟಿ ಟನ್‌ ಗೋಧಿಯನ್ನು ರಫ್ತು ಮಾಡಲು ಯೋಜಿಸಿತ್ತು. ಆದರೆ ಮಾರ್ಚ್‌ನ ಬಿರು ಬೇಸಗೆಯಿಂದ ದೇಶದಲ್ಲಿ ಗೋಧಿ ಉತ್ಪಾದನೆ ಕುಂಠಿತಗೊಂಡಿದೆ.

ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ ಯೋಜನೆಯಡಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹಂಚಿಕೆ ಮಾಡಲಾಗಿದ್ದ ಗೋಧಿಯ ಪ್ರಮಾಣವನ್ನು ಮೇ 4 ರಂದು ಕಡಿತಗೊಳಿಸಿತ್ತು. ಇದಕ್ಕೆ ಪರಿಹಾರವಾಗಿ ಅಕ್ಕಿ ನೀಡಲಾಗುವುದು ಎಂದು ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ನಾಗರಿಕ ಸರಬರಾಜು ಸಚಿವಾಲಯ ತಿಳಿಸಿತ್ತು.

ನಿಮಗೆ ಏನು ಅನ್ನಿಸ್ತು?
0 ವೋಟ್