ತಾಳೆಎಣ್ಣೆ ಆಮದು ಪ್ರಮಾಣದಲ್ಲಿ ಶೇ.10ರಷ್ಟು ಕುಸಿತ; ವಾಣಿಜ್ಯ ಮಂಡಳಿ ವರದಿ 

PALM Oil
  • ರಫ್ತು ಮೇಲೆ ನಿರ್ಬಂಧ ವಿಧಿಸಿದ ಇಂಡೋನೇಷ್ಯಾ 
  • ಭಾರತ ದೇಶದ ಆಮದು ಪ್ರಮಾಣದಲ್ಲಿ ಇಳಿಕೆ 

ಭಾರತದ ಒಟ್ಟು ತಾಳೆ ಎಣ್ಣೆ ಆಮದು ಮೇನಲ್ಲಿ ಶೇ 33.20ರಷ್ಟು ಕುಸಿದಿದೆ ಎಂದು ಸಾಲ್ವೆಂಟ್ ಎಕ್ಸ್‌ಟ್ರಾಕ್ಟ್ ಅಸೋಸಿಯೇಶನ್‌ (ಎಸ್ಇಎ) ಕೈಗಾರಿಕಾ ಮಂಡಳಿ ಹೇಳಿದೆ. 

ವಿಶ್ವದಲ್ಲೇ ಅತಿಹೆಚ್ಚು ಸಸ್ಯಜನ್ಯ ತೈಲಗಳನ್ನು ಖರೀದಿಸುವ ಭಾರತ 2021 ಮೇನಲ್ಲಿ ಸುಮಾರು 7.7 ಲಕ್ಷ ಟನ್‌ಗಳಷ್ಟು ತಾಳೆ ಎಣ್ಣೆಯನ್ನು ಆಮದು ಮಾಡಿಕೊಂಡಿತ್ತು. ಭಾರತ ಮುಖ್ಯವಾಗಿ ಇಂಡೋನೇಷ್ಯಾ ಮತ್ತು ಮಲೇಷ್ಯಾದಿಂದ ತಾಳೆ ಎಣ್ಣೆಯನ್ನು ಆಮದು ಮಾಡಿಕೊಳ್ಳುತ್ತದೆ.

ಕಳೆದ ವರ್ಷ ಮೇನಲ್ಲಿ ಭಾರತ 12.1 ಲಕ್ಷ ಟನ್‌ಗಳಷ್ಟು ಸಸ್ಯ ಜನ್ಯ ತೈಲಗಳನ್ನು ಆಮದು ಮಾಡಿಕೊಂಡಿತ್ತು. ಈ ವರ್ಷ ಪ್ರಮಾಣ ಹತ್ತು ಲಕ್ಷ ಟನ್‌ಗಳಿಗೆ ಇಳಿದಿದೆ. ರಾಷ್ಟ್ರದ ಒಟ್ಟು ಸಸ್ಯಜನ್ಯ ತೈಲ ಆಮದಿನಲ್ಲಿ ತಾಳೆ ಎಣ್ಣೆಯ ಪ್ರಮಾಣ ಶೇ 50ರಷ್ಟಿದೆ. ಇಂಡೋನೇಷ್ಯಾ ಹಣದುಬ್ಬರ ನಿಯಂತ್ರಿಸಲು ಖಾದ್ಯ ತೈಲದ ರಫ್ತು ನಿಷೇಧಿಸಿರುವ ಬೆನ್ನಲ್ಲೇ ತಿಂಗಳೊಳಗೆ ಭಾರತದ ತಾಳೆ ಎಣ್ಣೆ ಆಮದು ಪ್ರಮಾಣ ಶೇ. 10ರಷ್ಟು ಕುಸಿದಿದೆ. 

ಅಪಾಯದ ಸಂಕೇತ ಎಂದ ತಜ್ಞರು

ವಿಶ್ವದ ಅತಿ ಹೆಚ್ಚು ತಾಳೆ ಎಣ್ಣೆ ಉತ್ಪಾದಿಸುವ ಮತ್ತು ರಫ್ತು ಮಾಡುವ ದೇಶ ಇಂಡೋನೇಷ್ಯಾ. ಕಳೆದ ಏಪ್ರಿಲ್ 28ರಂದು ಖಾದ್ಯ ತೈಲದ ರಫ್ತುಗಳ ಮೇಲೆ ನಿರ್ಬಂಧ ವಿಧಿಸಿದೆ. ಇದರಿಂದಾಗಿ ಕಳೆದ ಮೇನಲ್ಲಿ ಭಾರತದ ತಾಳೆ ಎಣ್ಣೆ ಆಮದು ಪ್ರಮಾಣ ಶೇ. 10ರಷ್ಟು ಕುಸಿದಿದೆ ಎಂದು ವಾಣಿಜ್ಯ ಮಂಡಳಿ ಮಂಗಳವಾರ ತಿಳಿಸಿದೆ. ಸಸ್ಯಜನ್ಯ ಎಣ್ಣೆ ಆಮದು ಮಾಡಿಕೊಳ್ಳುವ ಮತ್ತು ಖರೀದಿಸುವ ದಕ್ಷಿಣ ಏಷ್ಯಾದ ಅತಿದೊಡ್ಡ ದೇಶ ಭಾರತ. ಹೀಗಿರುವಾಗ ತಾಳೆ ಎಣ್ಣೆ ಖರೀದಿ ಪ್ರಮಾಣ ಕುಸಿದಿರುವುದು ಭವಿಷ್ಯದ ಅಪಾಯದ ತೂಗುಗತ್ತಿ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಈ ಸುದ್ದಿ ಓದಿದ್ದೀರಾ:? ಭತ್ತಕ್ಕೆ ರಾಜ್ಯಗಳು ಶಿಫಾರಸು ಮಾಡಿರುವುದಕ್ಕಿಂತ ಕಡಿಮೆ ಎಂಎಸ್‌ಪಿ ಘೋಷಿಸಿದ ಕೇಂದ್ರ ಸರ್ಕಾರ 

ಎಸ್ಇಎ ಪ್ರಕಾರ, ಭಾರತ ಮೇ ತಿಂಗಳಲ್ಲಿ 514,022 ಟನ್ ತಾಳೆಎಣ್ಣೆ ಆಮದು ಮಾಡಿಕೊಂಡಿದ್ದು, ಕಳೆದ ಏಪ್ರಿಲ್‌ನಲ್ಲಿ 572,508 ಟನ್ ಖರೀದಿಸಲಾಗಿತ್ತು. ಕಳೆದ ತಿಂಗಳಿಗೆ ಹೋಲಿಸಿದರೆ ಮೇನಲ್ಲಿ ಮಾಡಿಕೊಂಡ ಆಮದು ಪ್ರಮಾಣ ಕಡಿಮೆ.

ಕಳೆದ ಮೇ ತಿಂಗಳಲ್ಲಿ ಮಲೇಷ್ಯಾ, ಥೈಲ್ಯಾಂಡ್ ಮತ್ತು ಪಪುವಾ ನ್ಯೂಗಿನಿಯಾದಿಂದ ಭಾರತೀಯ ಸಂಸ್ಕರಣಾಗಾರಗಳಿಗೆ ಹೆಚ್ಚು ತಾಳೆ ಎಣ್ಣೆ ಬಂದಿದೆ. ಆದರೆ ಒಟ್ಟಾರೆ ಆಮದು ಇನ್ನೂ ಕಡಿಮೆ ಎಂದು ಎಸ್ಇಎ ಹೇಳಿದೆ.

ಜೂನ್‌ನಲ್ಲಿ ಪರಿಸ್ಥಿತಿ ಸುಧಾರಿಸುವ ನಿರೀಕ್ಷೆ

"ಇಂಡೋನೇಷ್ಯಾ ಜೂನ್‌ನಲ್ಲಿ ರಫ್ತು ಪರವಾನಗಿ ನೀಡಲು ಪ್ರಾರಂಭಿಸಿರುವುದರಿಂದ ತಾಳೆ ಎಣ್ಣೆ ಆಮದು 600,000 ಟನ್‌ಗಳಿಗಿಂತ ಹೆಚ್ಚಾಗಬಹುದು" ಎಂದು ಮುಂಬೈ ಮೂಲದ ಜಾಗತಿಕ ವ್ಯಾಪಾರ ಸಂಸ್ಥೆಯೊಂದರ ಡೀಲರ್ ಹೇಳಿದ್ದಾರೆ.

ತಾಳೆಎಣ್ಣೆ ಉತ್ಪನ್ನಗಳಿಗೆ ಇಂಡೋನೇಷ್ಯಾದ ರಫ್ತು ಹಂಚಿಕೆಯನ್ನು ಸುಮಾರು 1 ಮಿಲಿಯನ್‌ನಿಂದ 2.25 ಮಿಲಿಯನ್ ಟನ್‌ಗಳಿಗೆ ಹೆಚ್ಚಿಸಲಾಗಿದೆ ಎಂದು ಹಿರಿಯ ವ್ಯಾಪಾರ ಸಚಿವಾಲಯದ ಅಧಿಕಾರಿ ಸೋಮವಾರ ತಿಳಿಸಿದ್ದಾರೆ.

ಏರಿದ ಸೋಯಾ ಎಣ್ಣೆ ಆಮದು

ಭಾರತದ ಸೋಯಾ ಎಣ್ಣೆ ಆಮದು ಒಂದು ತಿಂಗಳ ಹಿಂದಿನ 373,043 ಟನ್‌ಗಳಿಂದ ಮೇ ತಿಂಗಳಲ್ಲಿ ಶೇ. 37ಕ್ಕೆ ಜಿಗಿದಿದೆ. ಸೂರ್ಯಕಾಂತಿ ಎಣ್ಣೆ ಆಮದು 118,482 ಟನ್‌ಗಳಿಗೆ ದ್ವಿಗುಣಗೊಂಡಿದೆ ಎಂದು ವ್ಯಾಪಾರ ಸಂಸ್ಥೆ ತಿಳಿಸಿದೆ.

ಅರ್ಜೆಂಟಿನಾ ಮತ್ತು ಬ್ರೆಜಿಲ್‌ನಿಂದ ಸೋಯಾ ಎಣ್ಣೆ ಮತ್ತು ಉಕ್ರೇನ್ ಮತ್ತು ರಷ್ಯಾದಿಂದ ಸೂರ್ಯಕಾಂತಿ ಎಣ್ಣೆ ಖರೀದಿಸುತ್ತದೆ. ನವದೆಹಲಿಯು 2 ಮಿಲಿಯನ್ ಟನ್ ಸರಕುಗಳ ಸುಂಕ ರಹಿತ ಆಮದು ಮಾಡಿಕೊಳ್ಳಲು ಅವಕಾಶ ನೀಡಿರುವುದರಿಂದ ಮುಂಬರುವ ತಿಂಗಳುಗಳಲ್ಲಿ ದೇಶದ ಸೋಯಾ ಎಣ್ಣೆ ಆಮದು ತೀವ್ರವಾಗಿ ಏರಿಕೆಯಾಗಬಹುದು ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
2 ವೋಟ್