ಟೆಂಡರ್‌ನಲ್ಲಿ ಎಸ್‌ಸಿ - ಎಸ್‌ಟಿ ಗುತ್ತಿಗೆದಾರರಿಗೆ ಅನ್ಯಾಯ ಆರೋಪ: ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ

  • ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿರುವ ಎಸ್‌ಸಿ, ಎಸ್‌ಟಿ ಗುತ್ತಿಗೆದಾರರ ಸಂಘ
  • ವಿಚಾರಣೆಯನ್ನು ಡಿಸೆಂಬರ್ 13ಕ್ಕೆ ಮುಂದೂಡಿದ ಕರ್ನಾಟಕ ಹೈ ಕೋರ್ಟ್

ಮುಖ್ಯಮಂತ್ರಿ ಅಮೃತ ನಗರೋತ್ಥಾನ ಯೋಜನೆಯ ಕಾಮಗಾರಿಗಳ ಟೆಂಡರ್‌ನಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸೇರಿ ರಾಜ್ಯದ ಉಳಿದ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಟೆಂಡರ್ ಪ್ಯಾಕೇಜ್ ಮೊತ್ತಕ್ಕೆ ಮಿತಿ ಹೇರಿದ್ದರಿಂದ ಎಸ್‌ಸಿ - ಎಸ್‌ಟಿ ಗುತ್ತಿಗೆದಾರರಿಗೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿ ಸಲ್ಲಿಸಲಾಗಿರುವ ಅರ್ಜಿ ಸಂಬಂಧ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಮಾಡಿದೆ.

ಕರ್ನಾಟಕ ರಾಜ್ಯ ಎಸ್‌ಸಿ - ಎಸ್‌ಟಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಎನ್ ಮಹದೇವಸ್ವಾಮಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾಯಮೂರ್ತಿ ಪಿ ಬಿ ವರಾಳೆ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠದ ಮುಂದೆ ಮಂಗಳವಾರ ವಿಚಾರಣೆಗೆ ಬಂದಿತ್ತು.

ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ನ್ಯಾಯಪೀಠ, ಪ್ರತಿವಾದಿಗಳಾದ ನಗರಾಭಿವೃದ್ಧಿ ಇಲಾಖೆ, ಆರ್ಥಿಕ ಇಲಾಖೆ ಮತ್ತು ಬಿಬಿಎಂಪಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಡಿ. 13ಕ್ಕೆ ಮುಂದೂಡಿತು.

ಅರ್ಜಿದಾರರ ಪರ ಹಿರಿಯ ವಕೀಲೆ ಜಯಾ ಕೊಠಾರಿ ವಾದ ಮಂಡಿಸಿದರು. ಸರ್ಕಾರದ ಟೆಂಡರ್‌ಗಳಲ್ಲಿ 50 ಲಕ್ಷ ರೂ. ವರೆಗಿನ ಕಾಮಗಾರಿಗಳಲ್ಲಿ ಎಸ್‌ಸಿ - ಎಸ್‌ಟಿ ಗುತ್ತಿಗೆದಾರರಿಗೆ ಶೇ. 24ರಷ್ಟು ಮೀಸಲಾತಿ ನೀಡಿ 2017ರಲ್ಲಿ ಕರ್ನಾಟಕ ಪಾರದರ್ಶಕ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಆದರೆ, ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆಯಡಿ ಬಿಬಿಎಂಪಿಗೆ 6 ಸಾವಿರ ಕೋಟಿ ರೂ. ಅನುದಾನ ನೀಡಿ ಕಾಮಗಾರಿಗಳಿಗೆ ಟೆಂಡರ್ ಕರೆಯಲು ಪ್ಯಾಕೇಜ್ ಮೊತ್ತ 10 ಕೋಟಿ ರೂ. ನಿಗದಿಪಡಿಸಲಾಗಿದೆ.

ಈ ಸುದ್ದಿ ಓದಿದ್ದೀರಾ? ಆರೋಗ್ಯ ಇಲಾಖೆ | ಎಸ್‌ಸಿ, ಎಸ್‌ಟಿ ಗುತ್ತಿಗೆದಾರರು ಭಾಗವಹಿಸುವುದನ್ನು ತಪ್ಪಿಸಲು ಪ್ಯಾಕೇಜ್ ಟೆಂಡರ್: ಆರೋಪ

ಅದೇ ರೀತಿ ರಾಜ್ಯದ ಉಳಿದ ನಗರ ಸ್ಥಳೀಯ ಸಂಸ್ಥೆಗಳಿಗೆ 3,885 ಕೋಟಿ ರೂ. ಅನುದಾನ ನೀಡಿ ನಗರಸಭೆ ವ್ಯಾಪ್ತಿಯಲ್ಲಿ 1 ಕೋಟಿ ರೂ., ಪುರಸಭೆ ವ್ಯಾಪ್ತಿಯಲ್ಲಿ 50 ಲಕ್ಷ ರೂ. ಹಾಗೂ ಪಟ್ಟಣ ಪಂಚಾಯಿತಿಗಳಿಗೆ 25 ಲಕ್ಷ ರೂ. ತಾಲೂಕು ಮಟ್ಟದ ಕಾಮಗಾರಿಗಳಿಗೆ 1 ಕೋಟಿ ರೂ. ಪ್ಯಾಕೇಜ್ ಮೊತ್ತ ನಿಗದಿಪಡಿಸಲಾಗಿದೆ. ಇದರಿಂದಾಗಿ ಎಸ್‌ಸಿ - ಎಸ್‌ಟಿ ಗುತ್ತಿಗೆದಾರರು ಕಾಮಗಾರಿಗಳಿಂದ ವಂಚಿತರಾಗುತ್ತಿದ್ದಾರೆ ಎಂದು ಅರ್ಜಿಯಲ್ಲಿ ದೂರಲಾಗಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app